ಮಂಗಳೂರು: ಕರ್ಫ್ಯೂನಿಂದಾಗಿ ಮಂಗಳೂರು ಮತ್ತು ಉಳ್ಳಾಲ ಪರಿಸರ ವ್ಯಾಪ್ತಿಯಲ್ಲಿ ದಿನವೊಂದಕ್ಕೆ 60 ರಿಂದ 70 ಸಾವಿರ ಲೀ. ಹಾಲು, 10ರಿಂದ 12 ಸಾವಿರ ಲೀ. ಮೊಸರು ಮಾರಾಟ ಕಡಿಮೆಯಾಗಿದೆ. ಹಿಂದೆ ಕರ್ಫ್ಯೂ ಹೇರಿದ್ದಾಗ ಹಾಲಿನ ವಾಹನಗಳಿಗೆ ವಿನಾಯಿತಿ ನೀಡಲಾಗಿತ್ತು.
ಈ ಬಾರಿ ಪೊಲೀಸರಿಗೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಶನಿವಾರ ಜಿಲ್ಲಾಧಿಕಾರಿಯವರಿಗೂ ಮನವಿ ಮಾಡಿ ಹಾಲಿನ ವಾಹನಗಳಿಗೆ ವಿನಾಯಿತಿ ಪಾಸ್ ನೀಡಲು ಮನವಿ ಮಾಡಿದ್ದೇವೆ ಎಂದು ದ.ಕ. ಹಾಲು ಒಕ್ಕೂಟದ ಅಧ್ಯಕ್ಷ ರವಿರಾಜ್ ಹೆಗ್ಡೆ
“ಉದಯವಾಣಿ’ಗೆ ಪ್ರತಿಕ್ರಿಯಿಸಿದ್ದಾರೆ.
ಹೈನುಗಾರರಿಂದ ನಾವು ದಿನನಿತ್ಯ ನಾವು 4.55 ಲಕ್ಷ ಲೀ.ಹಾಲು ಸಂಗ್ರಹಿಸುತ್ತೇವೆ. ಅದನ್ನು ಸಾರ್ವಜನಿಕರಿಗೆ ಸಮರ್ಪಕವಾಗಿ ವಿತರಿಸಲು ಅಡ್ಡಿಯಾಗಿದೆ. ಉಳಿದಿರುವ ಹಾಲನ್ನು ಧಾರವಾಡ ಮತ್ತು ಹಾಸನದಲ್ಲಿರುವ ಹಾಲಿನ ಪುಡಿ ಘಟಕಗಳಿಗೆ ಅನಿವಾರ್ಯವಾಗಿ ರವಾನಿಸಬೇಕಾಗುತ್ತದೆ ಎಂದರು.
ಪೇಪರ್ ವಿತರಣೆಗೂ ಅಡ್ಡಿ: ಬಿಗಿ ಪೊಲೀಸ್ ಬಂದೋಬಸ್ತ್, ಕರ್ಫ್ಯೂ ವಿಧಿಸಿದ್ದರೂ ಅವಶ್ಯಕವಾದ ಹಾಲು, ದಿನಪತ್ರಿಕೆ ಮತ್ತು ಔಷಧ ಪೂರೈಕೆ-ಮಾರಾಟಕ್ಕೆ ವಿನಾಯಿತಿ ನೀಡಲಾಗುತ್ತದೆ. ಆದರೆ ಎರಡು ದಿನಗಳಲ್ಲಿ ಕರ್ಫ್ಯೂ ಸಂದರ್ಭ ದಿನಪತ್ರಿಕೆ ವಿತರಣೆ, ಮಾರಾಟವೂ ಬಹಳಷ್ಟು ಕಡೆ ಸಾಧ್ಯವಾಗಿಲ್ಲ.
ಕುದ್ರೋಳಿ, ಕಂಕನಾಡಿ, ಮಂಗಳಾದೇವಿ, ಅಳಪೆ, ಸ್ಟೇಟ್‌ಬ್ಯಾಂಕ್ ಮುಂತಾದ ಕಡೆ ಪೇಪರ್ ವಿತರಣೆಗೆ ಪೊಲೀಸರು ಅವಕಾಶ ನೀಡಿರಲಿಲ್ಲ. ಮಂಗಳೂರು ಗ್ರಾಮಾಂತರ ವ್ಯಾಪ್ತಿಯಲ್ಲಿಯೂ ಪೇಪರ್ ಮಾರಾಟ ಮಾಡುವುದಕ್ಕೆ ಅವಕಾಶ ನೀಡದೆ ಪೊಲೀಸರು ಬಲವಂತವಾಗಿ ಅಂಗಡಿ ಬಾಗಿಲು ಹಾಕಿಸಿದ್ದಾರೆ ಎಂದು ಕೆಲವು ಪತ್ರಿಕಾ ಏಜೆಂಟರು ದೂರಿದ್ದಾರೆ.