ವಿಧಾನಪರಿಷತ್ತು: ನಂದಿನಿ ಹಾಲಿನ ಗುಣಮಟ್ಟ ಕಳಪೆಯಾಗಿದೆ ಎಂದು ಕೇರಳ ರಾಜ್ಯದ ಪಶುಸಂಗೋಪನಾ ಸಚಿವೆ ಜೆ. ಚಿಂಚುರಾಣಿ ನೀಡಿರುವ ಹೇಳಿಕೆಗೆ ಸ್ಪಷ್ಟೀಕರಣ ನೀಡಲು ರಾಜ್ಯದಿಂದ ಅಧಿಕಾರಿಗಳ ನಿಯೋಗ ಕಳಿಸಲಾಗುವುದು ಎಂದು ಪಶುಸಂಗೋಪನೆ ಸಚಿವ ಕೆ. ವೆಂಕಟೇಶ್ ಹೇಳಿದ್ದಾರೆ.
ಪ್ರಶ್ನೋತ್ತರ ಕಲಾಪದ ವೇಳೆ ಬಿಜೆಪಿಯ ಎನ್. ರವಿಕುಮಾರ್ ಈ ವಿಷಯ ಪ್ರಸ್ತಾಪಿಸಿ, ಕೇರಳದ ಪಶುಸಂಗೋಪನಾ ಸಚಿವೆ ಜೆ. ಚಿಂಚುರಾಣಿ ಕರ್ನಾಟಕದ ನಂದಿನ ಹಾಲಿನ ಗುಣಮಟ್ಟ ಕಳಪೆಯಾಗಿದೆ ಎಂದು ಹೇಳಿದ್ದಾರೆ. ಇದರಿಂದ ಕೇರಳದಲ್ಲಿ ನಂದಿನಿ ಹಾಲು ತೆಗೆದುಕೊಳ್ಳುತ್ತಿಲ್ಲ ಎಂದರು.
ಇದಕ್ಕೆ ಉತ್ತರಿಸಿದ ಸಚಿವರು, ಕೇರಳ ಸಚಿವರು ಮಾಧ್ಯಮಗಳಲ್ಲಿ ಹೇಳಿಕೆ ನೀಡಿದ್ದಾರೆ. ಅದು ಯಾವುದೇ ಪ್ರಯೋಗಾಲಯದ ವರದಿ ಅಲ್ಲ. ಅಲ್ಲದೇ ಕೇರಳದಿಂದ ಈವರೆಗೆ ಯಾವುದೇ ದೂರು ಸಹ ಬಂದಿಲ್ಲ ಎಂದು ಸಮಜಾಯಿಷಿ ನೀಡಿದರು. ಅದಕ್ಕೆ, ನಮ್ಮ ನಂದಿನಿ ಹಾಲಿನ ಗುಣಮಟ್ಟ ಉತ್ತಮವಾಗಿದೆ ಎಂದು ನೀವು ಮಾಧ್ಯಮ ಹೇಳಿಕೆ ನೀಡಿ ಜೊತೆಗೆ ವಿವರಣೆ ನೀಡಲು ಕೇರಳ ರಾಜ್ಯಕ್ಕೆ ಅಧಿಕಾರಿಗಳ ನಿಯೋಗ ಕಳಿಸಿಕೊಡಿ ಎಂದು ರವಿಕುಮಾರ್ ಆಗ್ರಹಿಸಿದರು. ಅದಕ್ಕೆ ಆಗಲಿ ಎಂದು ಸಚಿವ ಕೆ. ವೆಂಕಟೇಶ್ ಭರವಸೆ ನೀಡಿದರು.
ಕರ್ನಾಟಕ ಹಾಲು ಮಹಾಮಂಡಳ ಕಳೆದ 10-12 ವರ್ಷಗಳಿಂದ ಕೇರಳ ಸಹಕಾರ ಸಂಸ್ಥೆ “ಮಿಲ್ಮಾ’ರವರಿಗೆ ದಿನವಹಿ ಸರಾಸರಿ 2 ಲಕ್ಷ ಲೀಟರ್ ಹಾಲನ್ನು ಸರಬರಾಜು ಮಾಡುತ್ತಾ ಬಂದಿದೆ. ಇತ್ತೀಚಿನ ದಿನಗಳಲ್ಲಿ ಕರ್ನಾಟಕ ಹಾಲು ಮಹಾಮಂಡಳದಿಂದ ಹಾಲಿನ ಜೊತೆಗೆ ಕೇರಳ ರಾಜ್ಯದಲ್ಲಿ ಪ್ರಥಮವಾಗಿ ನಂದಿನ ಉತ್ಪನ್ನಗಳ ಮಾರಾಟ ಆರಂಭಿಸಿದ್ದರಿಂದ ಕೇರಳ ಸಚಿವರು ಈ ರೀತಿ ಮಾಧ್ಯಮಗಳಲ್ಲಿ ಹೇಳಿಕೆ ನೀಡಿರುವುದು ಗಮನಕ್ಕೆ ಬಂದಿದೆ. ಗುಣಮಟ್ಟ ಕಳಪೆಯಾಗಿ ತಿರಸ್ಕೃತಗೊಂಡ ಬಗ್ಗೆ ಈವರೆಗೆ ವರದಿ ಅಥವಾ ದೂರುಗಳು ಬಂದಿಲ್ಲ ಎಂದು ಸಚಿವ ಕೆ. ವೆಂಕಟೇಶ್ ವಿವರಣೆ ನೀಡಿದರು.