ಬೆಂಗಳೂರು: ಹಣ್ಣು ಮತ್ತು ತರಕಾರಿ ಮಾರಾಟಕ್ಕೆ ಸೀಮಿತವಾಗಿದ್ದ ಹಾಪ್‌ಕಾಮ್ಸ್ ಮಳಿಗೆಗಳಲ್ಲಿ ಇನ್ನು ಮುಂದೆ ಗ್ರಾಹಕರಿಗೆ “ನಂದಿನಿ ಉತ್ಪನ್ನಗಳ ಭಾಗ್ಯ” ಲಭಿಸಲಿದೆ. ಕೆಎಂಎಫ್ ಮತ್ತು ಹಾಪ್‌ಕಾಮ್ಸ್ ನಡುವೆ ಈ ಕುರಿತು ಒಪ್ಪಂದವಾಗಿದ್ದು ಮುಂದಿನ ವಾರದಿಂದ ರಾಜಧಾನಿಯ ಹಾಪ್‌ಕಾಮ್ಸ್ ಮಳಿಗೆಗಳಲ್ಲಿ ನಂದಿನಿ ಉತ್ಪನ್ನಗಳಾದ ಹಾಲು, ಮೊಸರು, ತುಪ್ಪ, ಲಸ್ಸಿ, ನಂದಿನಿ ಪೇಡಾ, ಬೇಸಿನ್ ಲಡ್ಡು, ಮೈಸೂರ್ ಪಾಕ್, ಐಸ್‌ಕ್ರೀಂ ದೊರೆಯಲಿದೆ.
ಹಾಪ್‌ಕಾಮ್ಸ್ ಮಳಿಗೆಗಳಿಗೆ ನಂದಿನಿ ಉತ್ಪನ್ನಗಳ ಪೂರೈಕೆ ಸಂಬಂಧ ಈಗಾಗಲೇ ನಿಯೋಜಿತ ಸರಬರಾಜುದಾರ(ಎಕ್ಸ್‌ಕ್ಲೂಸಿವ್ ಡಿಸ್ಟ್ರಿಬ್ಯೂಟರ್)ರನ್ನು ನೇಮಕ ಮಾಡಲಾಗಿದೆ. ಮೊದಲ ಹಂತವಾಗಿ ಏ.15ರ ವೇಳೆಗೆ 50 ಹಾಪ್‌ಕಾಮ್ಸ್ ಮಳಿಗೆಗಳಲ್ಲಿ ನಂದಿನಿ ಉತ್ಪನ್ನಗಳ ಮಾರಾಟಕ್ಕೆ ವ್ಯವಸ್ಥೆ ಮಾಡಿಕೊಳ್ಳಲಾಗುತ್ತಿದೆ. ಬಳಿಕ ಅದನ್ನು 100 ಮಳಿಗೆಗಳಿಗೆ ವಿಸ್ತರಿಸುವ ಗುರಿ ಹೊಂದಲಾಗಿದೆ. ಕಸ್ತೂರಿನಗರ ಮತ್ತು ಸದಾಶಿವ ನಗರದ ಹಾರ್ಟಿ ಬಜಾರ್‌ಗಳು, ಎಲೆಕ್ಟ್ರಾನಿಕ್‌ಸಿಟಿ, ವಿಪ್ರೋ ಕಂಪನಿ ಹಾಗೂ ಇನ್ಫೋಸಿಸ್ ಆವರಣ ಸೇರಿದಂತೆ ವಿವಿಧ ಆಯ್ದ ಮಳಿಗೆಗಳು 50 ರಲ್ಲಿ ಸೇರಿವೆ.
ಕೆಎಂಎಫ್ನಿಂದಲೇ ಫ್ರಿಡ್ಜ್ ಸೌಲಭ್ಯ: ಹಾಪ್‌ಕಾಮ್ಸ್ ಮಳಿಗೆಗಳಲ್ಲಿ ಹಾಲು ಮೊಸರು ಲಸ್ಸಿ ಸೇರಿದಂತೆ ಪ್ರಮುಖ ಉತ್ಪನ್ನಗಳನ್ನು ಸಂರಕ್ಷಿಸಿಡಲು ಕೆಎಂಎಫ್ ವತಿಯಿಂದಲೇ ಫ್ರಿಡ್ಜ್ಗಳನ್ನು ಪೂರೈಸಲಾಗುತ್ತದೆ. ಜತೆಗೆ ಉತ್ಪನ್ನಗಳ ಪ್ರದರ್ಶನಕ್ಕೆ ಸಹಕಾರಿಯಾಗುವಂತೆ ಸ್ಟಾಂಡ್, ಟ್ರೇಗಳು ಉಚಿತ ಹಾಗೂ ರಿಯಾಯಿತಿ ದರದಲ್ಲಿ ನೀಡಲಾಗುತ್ತದೆ ಎಂದು ಹಾಪ್‌ಕಾಮ್ಸ್ ಪ್ರಧಾನ ವ್ಯವಸ್ಥಾಪಕ ಪ್ರಶಾಂತ್ ತಿಳಿಸಿದ್ದಾರೆ.
ಅಕ್ಕ- ಪಕ್ಕ ಇಲ್ಲ: ಹಾಪ್‌ಕಾಮ್ಸ್ ಮಳಿಗೆ ಪಕ್ಕ ಅಥವಾ ಆಸುಪಾಸಿನಲ್ಲಿ ನಂದಿನಿ ಪಾರ್ಲರ್‌ಗಳು ಇದ್ದರೆ ಅಲ್ಲಿ ಕೆಎಂಎಫ್ನ ಯಾವುದೇ ಉತ್ಪನ್ನಗಳನ್ನು ಮಾರಾಟ ಮಾಡಬಾರದು ಎಂಬ ಒಪ್ಪಂದ ಮಾಡಿಕೊಳ್ಳಲಾಗಿದೆ. ಈ ಹಿನ್ನೆಲೆಯಲ್ಲಿ ನಗರದಲ್ಲಿರುವ ಸುಮಾರು 250 ಮಳಿಗೆಗಳಲ್ಲೂ ನಂದಿನಿ ಉತ್ಪನ್ನ ಲಭ್ಯವಾಗುವುದಿಲ್ಲ. ಏಕೆಂದರೆ ನಂದಿನಿ ಪಾರ್ಲರ್‌ಗಳ ವಹಿವಾಟಿನಲ್ಲಿ ವ್ಯತಿರಿಕ್ತ ಪರಿಣಾಮ ಆಗಬಾರದು ಎಂಬ ಉದ್ದೇಶದಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ. ಉಳಿದಂತೆ ನಂದಿನಿ ಪಾರ್ಲರ್‌ಗಳು ಇಲ್ಲದ ಪ್ರದೇಶದ ಹಾಪ್‌ಕಾಮ್ಸ್ ಮಳಿಗೆಗಳಲ್ಲಿ ನಂದಿನಿ ಉತ್ಪನ್ನಗಳು ಲಭ್ಯವಾಗಲಿವೆ ಎಂದು ಹೇಳುತ್ತಾರೆ.
ಪರಸ್ಪರ ಒಪ್ಪಂದ: ಹಾಪ್‌ಕಾಮ್ಸ್ ಮಳಿಗೆಯಲ್ಲಿ ಮಾರಾಟ ಮಾಡಲಾಗುವ ಕೆಎಂಎಫ್ನ ನಂದಿನಿ ಉತ್ಪನ್ನಗಳ ಒಟ್ಟಾರೆ ವಹಿವಾಟಿನಲ್ಲಿ ಶೇ.3ರಿಂದ 12ರಷ್ಟು ಲಾಭಾಂಶವನ್ನು ಹಾಪ್‌ಕಾಮ್ಸ್ ಪಡೆಯಲಿದೆ. ಜತೆಗೆ ಕೆಎಂಎಫ್ ಹಾಗೂ ಅಂಗ ಸಂಸ್ಥೆಗಳ ಕ್ಯಾಂಟೀನ್‌ಗಳಿಗೆ ಹಣ್ಣು, ತರಕಾರಿಗಳನ್ನು ಹಾಪ್‌ಕಾಮ್ಸ್‌ನಿಂದ ಖರೀದಿಸುವ ಭರವಸೆ ನೀಡಿದೆ. ಇದರಿಂದ ತಿಂಗಳಿಗೆ ಅಂದಾಜು 3ರಿಂದ 5 ಲಕ್ಷ ರೂ.ಗಳ ವಹಿವಾಟು ಹಾಪ್‌ಕಾಮ್ಸ್‌ಗೆ ಆಗಲಿದೆ. ಅದೇ ರೀತಿ ಹಾಪ್‌ಕಾಮ್ಸ್ ಮಳಿಗೆಗಳಲ್ಲೂ ನಂದಿನಿ ಉತ್ಪನ್ನಗಳಿಗೆ ಬೇಡಿಕೆ ಇದ್ದು, ತಿಂಗಳಿಗೆ ಸುಮಾರು 2ರಿಂದ 4 ಲಕ್ಷದವರೆಗೆ ವಹಿವಾಟು ನಡೆಯುವ ಅಂದಾಜು ಮಾಡಲಾಗಿದೆ ಎಂದು ತಿಳಿಸುತ್ತಾರೆ.
ಹಾಪ್‌ಕಾಮ್ಸ್‌ಗೆ ಬರುವ ಗ್ರಾಹಕರು ಹಾಲು ಅಥವಾ ನಂದಿನಿ ಸಿಹಿ ತಿಂಡಿಗಳಿಗೆ ಬೇರೆಡೆ ಹೋಗುವಂತಿಲ್ಲ. ನಮ್ಮಲ್ಲೇ ಹಣ್ಣು, ತರಕಾರಿ ಖರೀದಿಸುವ ಜತೆಗೆ ನಂದಿನಿ ಉತ್ಪನ್ನಗಳನ್ನೂ ಖರೀದಿಸಬಹುದು. ಗುಣಮಟ್ಟಕ್ಕೆ ನಾವು ಹೆಚ್ಚು ಒತ್ತುನೀಡುತ್ತೇವೆ. ಇದರಿಂದಾಗಿ ಗ್ರಾಹಕರಿಗೆ ಉತ್ತಮ ಸೇವೆ ನೀಡಿದ ತೃಪ್ತಿ ಸಿಗಲಿದ್ದು, ಸಂಸ್ಥೆ ಅಭಿವೃದ್ಧಿಗೂ ಕೂಡ ಇದು ನೆರವಾಗಲಿದೆ.
-ಡಾ.ಬೆಳ್ಳೂರು ಕೃಷ್ಣ, ವ್ಯವಸ್ಥಾಪಕ ನಿರ್ದೇಶಕ, ಹಾಪ್‌ಕಾಮ್ಸ್
* ಸಂಪತ್ ತರೀಕೆರೆ