ಬೆಂಗಳೂರು: ನಂದಿನಿ ಹಾಲಿನ ದರ ಹೆಚ್ಚಿಸಲು ಹಾಲು ಒಕ್ಕೂಟಗಳು ಸರಕಾರದ ಮುಂದೆ ಪ್ರಸ್ತಾವ ಸಲ್ಲಿಸಿದ್ದು, ಹೊಸ ವರ್ಷದ ಆರಂಭದಲ್ಲಿ ಹಾಲು-ಮೊಸರಿನ ಬೆಲೆ ಹೆಚ್ಚಳವಾಗುವ ಸಾಧ್ಯತೆ ಇದೆ. ಹಾಲು ಒಕ್ಕೂಟಗಳು ತಮಗೆ ನಷ್ಟವಾಗುತ್ತಿರುವ ಕಾರಣ ದರ ಪರಿಷ್ಕರಿಸಬೇಕು ಎಂದು ಪ್ರಸ್ತಾವ ಸಲ್ಲಿಸಿವೆ. ಆದರೆ ಸದ್ಯ ದರ ಏರಿಸುವ ಪ್ರಸ್ತಾವ ಸರಕಾರದ ಮುಂದಿಲ್ಲ ಎಂದು ಪಶುಸಂಗೋಪನೆ ಸಚಿವ ವೆಂಕಟೇಶ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಅನ್ಯ ರಾಜ್ಯದ ಹಾಲಿನ ದರ ಹಾಗೂ ಕರ್ನಾಟಕದ ಹಾಲಿನ ದರಗಳ ನಡುವಿನ ವ್ಯತ್ಯಾಸದ ಅಂಕಿ ಅಂಶವನ್ನು ಸುದ್ದಿಗಾರರ ಮುಂದೆ ಪ್ರದರ್ಶಿಸಿದ ಅವರು, ಹಾಲಿನ ದರ ಏರಿಸುವಂತೆ ರೈತರ ಒತ್ತಡವೂ ಇದೆ ಎನ್ನುವ ಮೂಲಕ ಪರೋಕ್ಷವಾಗಿ ಮುಂದಿನ ದಿನಗಳಲ್ಲಿ ದರ ಏರಿಸುವ ಸುಳಿವು ನೀಡಿದರು.
ಈ ಹಿಂದೆ ಪ್ರತಿ ಲೀಟರ್ ಮೇಲೆ 5 ರೂ. ಏರಿಸುವಂತೆ ಆಗ್ರಹ ಇದ್ದಾಗ 3ರೂ. ಏರಿಸಲಾಗಿತ್ತು. ಅಮೂಲ್ 2022ರ ಮಾರ್ಚ್‌ನಿಂದ ಈ ವರೆಗೆ ಐದು ಬಾರಿ ಒಟ್ಟಾರೆ 12 ರೂ. ಹೆಚ್ಚಿಸಿದೆ. ಬೇರೆ ರಾಜ್ಯಗಳಿಗೆ ಹೋಲಿಸಿದರೆ ನಮ್ಮಲ್ಲೇ ಕಡಿಮೆ ಬೆಲೆ ಹಾಲು ಮಾರಾಟವಾಗುತ್ತಿದೆ ಎಂದು ಹೇಳಿದರು.
ಮೂರು ಬೇಡಿಕೆ
ಪ್ರಸ್ತುತ ಕ್ಷೀರ ಭಾಗ್ಯ ಯೋಜನೆಯಡಿ ಪೂರೈಕೆಯಾಗುತ್ತಿರುವ ಕೆನೆ ಭರಿತ ಹಾಲಿನ ಪುಡಿಯ ಉತ್ಪಾದನೆ ವೆಚ್ಚ ಪ್ರತಿ ಕೆಜಿಗೆ 348.32 ರೂ. ಇದೆ. ಜತೆಗೆ ಜಿಎಸ್‌ಟಿ ಪಾವತಿಸಬೇಕು. ಸರಕಾರ ನೀಡುತ್ತಿರುವ ದರ 300 ರೂ. ಮಾತ್ರ. ಹೀಗಾಗಿ ಪ್ರತಿ ಕೆಜಿಗೆ 48.32 ರೂ.ನಷ್ಟು ನಷ್ಟವಾಗುತ್ತಿದೆ. ಆದ್ದರಿಂದ ಕ್ಷೀರ ಭಾಗ್ಯ ಯೋಜನೆಯಡಿ ನೀಡುತ್ತಿರುವ ಹಾಲಿನ ಪುಡಿ ದರವನ್ನು 400 ರೂ.ಗೆ ಹೆಚ್ಚಿಸುವಂತೆ ಮಹಾ ಮಂಡಲ ಸರಕಾರವನ್ನು ಆಗ್ರಹಿಸಿದೆ.
ಒಕ್ಕೂಟಗಳ ಮುಂದಿನ ಆರ್ಥಿಕ ಬೆಳವಣಿಗೆ ಮತ್ತು ಹಿತದೃಷ್ಟಿಯಿಂದ ಕನಿಷ್ಠ 6 ತಿಂಗಳಿಗೊಮ್ಮೆ ಗರಿಷ್ಠ 5ರಷ್ಟು ಮಿತಿಗೊಳಪಟ್ಟು ಮಾರಾಟ ದರ ಹೆಚ್ಚಿಸುವುದು ಸೂಕ್ತ, ಹಾಗೆಯೇ ದರ ಪರಿಷ್ಕರಣೆಯನ್ನು ಕರ್ನಾಟಕ ಹಾಲು ಮಹಾಮಂಡಲದ ಹಂತದಲ್ಲೇ ಕೈಗೊಳ್ಳಲು ಅನುಮತಿ ನೀಡುವಂತೆ ಕೋರಲಾಗಿದೆ. ಮಹಾಮಂಡಲವು ವಿತರಿಸುವ ಪ್ರತಿ ಕೆಜಿ ಪಶು ಆಹಾರಕ್ಕೆ 2 ರೂ.ಯಂತೆ ಒಟ್ಟಾರೆ 3 ತಿಂಗಳ ಅವಧಿಗೆ 45 ಕೋಟಿ ರೂ. ಅನುದಾನವನ್ನು ವಿಪತ್ತು ನಿರ್ವಹಣೆ ನಿಧಿಯಿಂದ ಕೊಡಬೇಕೆಂದೂ ಕೋರಿಕೆ ಮಂಡಿಸಿದೆ.