ಕರ್ನಾಟಕ ಮಾತ್ರವಲ್ಲದೆ ದಕ್ಷಿಣ ಭಾರತದ ರಾಜ್ಯಗಳಲ್ಲಿ ಕ್ಷೀರ ಮಾರುಕಟ್ಟೆಯಲ್ಲಿ ಹಿಡಿತ ಸಾಧಿಸುವ ಮೂಲಕ ಪ್ರಾಬಲ್ಯ ಮೆರೆದಿರುವ ಕರ್ನಾಟಕ ಹಾಲು ಒಕ್ಕೂಟ(ಕೆಎಂಎಫ್) ಈಗ ದೇಶದ ರಾಜಧಾನಿ ಹೊಸದಿಲ್ಲಿ ಮತ್ತು ರಾಷ್ಟ್ರ ರಾಜಧಾನಿ ವ್ಯಾಪ್ತಿಯ ಪ್ರದೇಶದ ಹಾಲು ಮಾರುಕಟ್ಟೆಗೆ ಲಗ್ಗೆ ಇರಿಸಿದೆ.
ರಾಜ್ಯದಲ್ಲಿರುವ 15, 737 ಹಾಲು ಉತ್ಪಾದಕ ಸಂಘಗಳು, 15 ಜಿಲ್ಲಾ ಹಾಲು ಒಕ್ಕೂಟಗಳ ಮೂಲಕ 26.76 ಲಕ್ಷ ಹಾಲು ಉತ್ಪಾದಕರು ಪ್ರತಿನಿತ್ಯ ಒಂದು ಕೋಟಿ ಲೀಟರ್‌ಗೂ ಅಧಿಕ ಹಾಲನ್ನು ಕೆಎಂಎಫ್ ಗೆ ಪೂರೈಕೆ ಮಾಡುತ್ತಿದ್ದಾರೆ. ಈ ಪೈಕಿ ಕೆಎಂಎಫ್ 60 ಲಕ್ಷ ಲೀಟರ್‌ಗಳಿಗೂ ಅಧಿಕ ಪ್ರಮಾಣ ಹಾಲನ್ನು ಮಾರಾಟ ಮಾಡುತ್ತಿದೆ. ಇನ್ನು ಮಿಗತೆಯಾಗುತ್ತಿರುವ 40 ಲಕ್ಷ ಲೀ.ಗಳಷ್ಟು ಹಾಲಿಗೆ ಪರ್ಯಾಯ ಮಾರುಕಟ್ಟೆಯನ್ನು ಕಂಡುಕೊಳ್ಳುವ ಉದ್ದೇಶದಿಂದ ಕೆಎಂಎಫ್ ಮಾರುಕಟ್ಟೆ ವಿಸ್ತರಣೆ ಯೋಜನೆಯನ್ನು ಕೈಗೆತ್ತಿಕೊಂಡಿದೆ.
ಅದರಂತೆ ರಾಷ್ಟ್ರ ರಾಜಧಾನಿಗೆ ಹಾಲು ಪೂರೈಕೆ ಮಾಡಲಾರಂಭಿಸಿದೆ. ಮೊದಲ ಹಂತದಲ್ಲಿ ದಿಲ್ಲಿ ಮತ್ತು ಎನ್‌ಸಿಆರ್ ಭಾಗದಲ್ಲಿ ನಂದಿನಿ ಬ್ರ್ಯಾಂಡ್‌ನ ವಿವಿಧ ಮಾದರಿಯ ಹಾಲು ಅಲ್ಲಿನ ಗ್ರಾಹಕರಿಗೆ ಲಭಿಸಲಿದ್ದರೆ ಸದ್ಯೋಭವಿಷ್ಯದಲ್ಲಿ ಉತ್ತರ ಭಾರತದ ಇನ್ನಷ್ಟು ಪ್ರದೇಶಗಳಿಗೆ ತನ್ನ ಮಾರುಕಟ್ಟೆಯನ್ನು ವಿಸ್ತರಿಸುವ ಗುರಿಯನ್ನು ಕೆಎಂಎಫ್ ಹಾಕಿಕೊಂಡಿದೆ.
ಕೆಎಂಎಫ್ ನ ನಂದಿನಿ ಬ್ರ್ಯಾಂಡ್‌ನ ಹಾಲು ಉತ್ಪನ್ನಗಳು ಕೇವಲ ದೇಶ ಮಾತ್ರವಲ್ಲದೆ ವಿದೇಶಗಳಲ್ಲೂ ಲಭ್ಯವಾಗುತ್ತಿದ್ದು, ಅಂತಾರಾಷ್ಟ್ರೀಯ ಮನ್ನಣೆ ಗಳಿಸಿಕೊಂಡಿದೆ. ನಂದಿನಿ ಬ್ರ್ಯಾಂಡ್‌ಗೆ ಹೆಚ್ಚಿನ ಪ್ರಚಾರ ನೀಡುವ ಉದ್ದೇಶದಿಂದ ಕೆಎಂಎಫ್ ವಿವಿಧ ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಕೂಟಗಳು ಮತ್ತು ಕಾರ್ಯಕ್ರಮಗಳ ಪ್ರಾಯೋಜಕತ್ವವನ್ನು ವಹಿಸಿಕೊಳ್ಳುವ ಮೂಲಕ ತನ್ನ ಉತ್ಪನ್ನಗಳನ್ನು ವಿದೇಶಿಗರಿಗೂ ಪರಿಚಯಿಸುವ ಕಾರ್ಯವನ್ನು ಮಾಡುತ್ತ ಬಂದಿದೆ.
ಈಗಾಗಲೇ ದೇಶ-ವಿದೇಶಗಳಲ್ಲಿ ವಿಖ್ಯಾತವಾಗಿರುವ ಅಮೂಲ್ ಮತ್ತು ಮದರ್ ಡೇರಿ ಬ್ರ್ಯಾಂಡ್‌ಗೆ ಸಡ್ಡು ಹೊಡೆಯಲು ಮುಂದಾಗಿರುವ ಕೆಎಂಎಫ್ ಈಗ ದಿಲ್ಲಿ ಮಾರುಕಟ್ಟೆಯಲ್ಲಿ ಲಭ್ಯವಿರುವ ಹಾಲಿನ ಎಲ್ಲ ಬ್ರ್ಯಾಂಡ್‌ಗಳಿಗಿಂತ ಕಡಿಮೆ ಬೆಲೆಯಲ್ಲಿ ತನ್ನ ಬ್ರ್ಯಾಂಡ್‌ನ ಹಾಲನ್ನು ಮಾರಾಟ ಮಾಡುತ್ತಿದೆ. ಹೀಗಾಗಿ ಮುಂದಿನ ದಿನಗಳಲ್ಲಿ 5-6 ಲಕ್ಷ ಲೀಟರ್‌ಗಳಷ್ಟು ಹಾಲನ್ನು ಈ ಪ್ರದೇಶದಲ್ಲಿ ಮಾರಾಟ ಮಾಡುವ ಗುರಿಯನ್ನು ಹಾಕಿಕೊಂಡಿದೆ. ಉತ್ತರ ಭಾರತದ ಪ್ರದೇಶಗಳಿಗೆ ಹಾಲು ಸಾಗಣೆ ಒಂದಿಷ್ಟು ತ್ರಾಸದಾಯಕವಾದರೂ ಹಾಲಿನ ಗುಣಮಟ್ಟದಲ್ಲಿ ಯಾವುದೇ ರಾಜಿ ಮಾಡಿಕೊಳ್ಳದೆ ಅತ್ಯಂತ ಸುರಕ್ಷಿತವಾಗಿ ಹಾಲನ್ನು ಪೂರೈಕೆ ಮಾಡಲು ಕೆಎಂಎಫ್ ಅಗತ್ಯ ವ್ಯವಸ್ಥೆಯನ್ನು ಮಾಡಿಕೊಂಡಿದೆ. ಒಟ್ಟಾರೆ ಕೆಎಂಎಫ್ ನ ಐದು ದಶಕಗಳ ಅವಧಿಯಲ್ಲಿ ಇದೊಂದು ಮಹತ್ತರ ಮೈಲಿಗಲ್ಲು ಎಂಬುದರಲ್ಲಿ ಎರಡು ಮಾತಿಲ್ಲ.
ಇದೇ ವೇಳೆ ಕೆಎಂಎಫ್ ನ ಈ ಎಲ್ಲ ಕಾರ್ಯಯೋಜನೆಗಳಿಗೆ ರಾಜ್ಯ ಸರಕಾರ ನಿರಂತರ ಬೆಂಬಲ ನೀಡುತ್ತ ಬಂದಿದೆ. ಅಷ್ಟು ಮಾತ್ರವಲ್ಲದೆ ಹಾಲು ಉತ್ಪಾದಕ ಸಂಘಗಳಿಗೆ ಹಾಲನ್ನು ಪೂರೈಸುವ ಹೈನುಗಾರರಿಗೆ ಸರಕಾರ ಪ್ರೋತ್ಸಾಹಧನವನ್ನು ನೀಡುತ್ತಿದೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಸರಕಾರ ಪ್ರೋತ್ಸಾಹಧನ ನೀಡಿಕೆಯಲ್ಲಿ ತಿಂಗಳುಗಳ ಕಾಲ ವಿಳಂಬ ಮಾಡುತ್ತಿರುವುದರಿಂದಾಗಿ ಹೈನುಗಾರರಿಗೆ ಸಮಸ್ಯೆಯುಂಟಾಗಿದೆ.
ಅಲ್ಲದೆ ವರ್ಷಗಳುರುಳಿದಂತೆಯೇ ಹೈನುಗಾರಿಕೆ ವಿವಿಧ ಸಮಸ್ಯೆಗಳ ಸುಳಿಗೆ ಸಿಲುಕಿದ್ದು ರೈತರು ಈ ಎಲ್ಲ ಬವಣೆಗಳಿಂದ ಬೇಸತ್ತು ಹೈನುಗಾರಿಕೆಯಿಂದ ಹಿಂದೆ ಸರಿಯುತ್ತಿದ್ದಾರೆ. ಹೀಗಾಗಿ ಕೆಎಂಎಫ್ ಮತ್ತು ರಾಜ್ಯ ಸರಕಾರ ಹೈನುಗಾರರ ಸಮಸ್ಯೆ, ಬೇಡಿಕೆಗೆ ಕ್ಲಪ್ತವಾಗಿ ಸ್ಪಂದಿಸಿ ಅವರು ಹೈನುಗಾರಿಕೆಯಿಂದ ವಿಮುಖರಾಗದಂತೆ ನೋಡಿಕೊಳ್ಳಬೇಕು. ಹೈನುಗಾರಿಕೆಗೆ ಇನ್ನಷ್ಟು ಉತ್ತೇಜನ ನೀಡಿದ್ದೇ ಆದಲ್ಲಿ “ನಂದಿನಿ’ ಬ್ರ್ಯಾಂಡ್ ಅನ್ನು ಜಾಗತಿಕ ಬ್ರ್ಯಾಂಡ್ ಆಗಿ ರೂಪಿಸುವ ಕೆಎಂಎಫ್ನ ಕನಸು ಸಾಕಾರಗೊಳ್ಳಲು ಸಾಧ್ಯ.