ಕನಕಪುರ: ಸರ್ಕಾರವನ್ನು ಮುಜುಗರಕ್ಕೀಡು ಮಾಡಿ ಸಚಿವ ರಮೇಶ್ ಜಾರಕಿಹೊಳಿ ಅವರನ್ನು ರಾಜಕೀಯವಾಗಿ ಹಣಿಯಲು ವಿರೋಧ ಪಕ್ಷಗಳು ಪಿತೂರಿ ನಡೆಸಿವೆ ಎಂದು ಬಿಜೆಪಿ ಜಿಲ್ಲಾ ಉಪಾಧ್ಯಕ್ಷೆ ನಂದಿನಿಗೌಡ ಆರೋಪಿಸಿದರು.
ನಗರದ ತಮ್ಮ ನಿವಾಸದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಚಿವ ರಮೇಶ್ ಜಾರಕಿಹೊಳಿ ನೀರಾವರಿ ಸಚಿವರಾಗಿ ಉತ್ತಮ ಕೆಲಸ ಮಾಡುತ್ತಿದ್ದಾರೆ. ಕೇಂದ್ರದ ಬಿಜೆಪಿ ಮುಖಂಡರಿಗೆ ತುಂಬಾ ಆಪ್ತರಾಗಿದ್ದರು. ಇವರ ರಾಜಕೀಯ ಬೆಳವಣಿಗೆಯನ್ನು ಸಹಿಸದೆ, ಅವರನ್ನು ರಾಜಕೀಯವಾಗಿ ತುಳಿಯಲು ಕಾಂಗ್ರೆಸ್ ಮತ್ತು ಜೆಡಿಎಸ್ ಮುಖಂಡರು ನಕಲಿ ಸಿಡಿಯನ್ನು ಸೃಷ್ಟಿಸಿದೆ. ಇಂತಹ ಸಣ್ಣತನದ ರಾಜಕೀಯ ಮಾಡುವುದರಲ್ಲಿ ವಿರೋಧ ಪಕ್ಷಗಳು ನಿಸ್ಸಿಮರು ಎಂದು ಆರೋಪಿಸಿದರು.
ಸಿ.ಪಿ.ಯೋಗೇಶ್ವರ್ ಮಂತ್ರಿಯಾಗಲು ರಮೇಶ್ ಜಾರಕಿಹೊಳಿ ಪ್ರಮುಖ ಪಾತ್ರ ವಹಿಸಿ ಜಿಲ್ಲೆಗೆ ರಾಜಕೀಯವಾಗಿ ಶಕ್ತಿ ತುಂಬಿದ್ದಾರೆ. ನೀರಾವರಿ ಸಚಿವರಾಗಿರುವ ರಮೇಶ್ ಜಾರಕಿಹೋಳಿ ಬಹುದಿನಗಳ ಕನಸಾಗಿದ್ದ ಮೇಕೆದಾಟು ಯೋಜನೆಗೆ ಮರುಜೀವ ಕೊಟ್ಟು ಕೇಂದ್ರದ ಗಮನ ಸೆಳೆದಿದ್ದಾರೆ. ಕಳೆದ ನಾಲ್ಕು ಬಾರಿ ಚುನಾವಣೆಯಲ್ಲಿ ಗೆದ್ದು, ಜನರ ವಿಶ್ವಾಸ ಗಳಿಸಿದ್ದಾರೆ. ಇಂತಹ ಸಚಿವರ ಹೆಸರಿಗೆ ಮಸಿ ಬಳಿಯಲು ವಿರೋಧ ಪಕ್ಷಗಳು ಸಣ್ಣತನಕ್ಕಿಳಿದಿರುವುದು ಸರಿಯಲ್ಲ ಎಂದರು.
ರಾಜಕೀಯ ಪಿತೂರಿ: ಅನ್ಯಾಯಕ್ಕೊಳಗಾದವರು ನೇರವಾಗಿ ಬಂದು ದೂರು ಸಲ್ಲಿಸಿ ನ್ಯಾಯ ಪಡೆಯಬಹುದಿತ್ತು. ಆದರೆ, ಮೂರನೇ ವ್ಯಕ್ತಿ ಸಚಿವರ ವಿರುದ್ಧ ದೂರು ಸಲ್ಲಿಸಿರುವುದು ರಾಜಕೀಯ ಪಿತೂರಿ ಅಲ್ಲದೇ ಬೇರೆನೂ ಅಲ್ಲ.
ಸಾಮಾಜಿಕ ಕಾರ್ಯಕರ್ತ ಎಂದು ಹೇಳಿಕೊಳ್ಳುವ ದೂರುದಾರ ದಿನೇಶ್ ಕಲ್ಲಹಳ್ಳಿ ಯಾವ ಸಮಾಜಿಕ ಹೋರಾಟಗಾರನು ಅಲ್ಲ. ತಾಲೂಕಿನಲ್ಲಿ ಮಹಿಳೆಯರ ಮೇಲೆ ನಡೆದಿರುವ ದೌರ್ಜನ್ಯಗಳ ವಿರುದ್ಧ ಈವರೆಗೆ ಎಷ್ಟು ಹೋರಾಟಗಳನ್ನು ಮಾಡಿದ್ದಾರೆ. ಸ್ಥಳೀಯವಾಗಿ ಅನ್ಯಾಯಕ್ಕೊಳಗಾದ ಎಷ್ಟು ಮಹಿಳೆಯರಿಗೆ ನ್ಯಾಯ ಕೊಡಿಸಿದ್ದಾರೆ? ದಿನೇಶ್ ಕಲ್ಲಹಳ್ಳಿಗೂ ಉತ್ತರ ಕರ್ನಾಟಕದ ಸಂತ್ರಸ್ತೆಗೂ ಎಲ್ಲಿಂದೆಲ್ಲಿಯ ಸಂಬಂಧ. ದೂರುದಾರ ದಿನೇಶ್ ಕಲ್ಲಹಳ್ಳಿ ಸಂತ್ರಸ್ತೆಯ ಬಗ್ಗೆ ಈವರೆಗೆ ಯಾವುದೇ ಮಾಹಿತಿಯನ್ನು ಕೊಟ್ಟಿಲ್ಲ. ಇವರಿಗೆ ಸಿಡಿಯನ್ನು ಕೊಟ್ಟವರು ಯಾರು? ಇವರ ಹಿಂದೆ ಕೆಲಸ ಮಾಡುತ್ತಿರುವ ಕಾಣದ ಕೈ ಯಾವುದು. ಈ ಹಿಂದೆ ವಿವಿಧ ಪಕ್ಷಗಳ ದೊಡ್ಡ ದೊಡ್ಡ ನಾಯಕರ ವಿರುದ್ಧವು ಇಂತಹ ಆರೋಪಗಳು ಬಂದಿವೆ. ಇದು ಹೊಸದೇನಲ್ಲ. ಆದರೂ ಸಚಿವ ರಮೆಶ್ ಜಾರಕಿಹೋಳಿ ನೈತಿಕ ಹೊಣೆ ಹೊತ್ತು ರಾಜೀನಾಮೆ ಕೊಟ್ಟಿದ್ದಾರೆ ಎಂದರು. ಮುಖಂಡ ಬಿಜ್ಜಹಳ್ಳಿ ಶಿವಕುಮಾರ್, ಹೇರಿದ್ಯಾಪನಹಳ್ಳಿ ಸಾಗರ್ ಇದ್ದರು.
ಸಮಗ್ರ ತನಿಖೆ ನಡೆಸಿ: ಸಚಿವ ರಮೇಶ್ ಜಾರಕಿಹೊಳಿ ವಿರುದ್ಧ ಬಂದಿರುವ ಆರೋಪವು ಸತ್ಯಕ್ಕೆ ದೂರವಾದದ್ದು, ಇದರಲ್ಲಿ ಯಾವುದೇ ಹುರುಳಿಲ್ಲ. ಇದು ರಾಜಕೀಯ ಪಿತೂರಿ. ಹಾಗಾಗಿ ಸಮಗ್ರವಾಗಿ ತನಿಖೆ ನಡೆಸಬೇಕು. ಈ ಪಿತೂರಿ ಹಿಂದೆ ಯಾರ ಕೈವಾಡವಿದೆ ಎಂಬುದು ಬೆಳಕಿಗೆ ಬರಬೇಕು ಎಂದು ಬಿಜೆಪಿ ಜಿಲ್ಲಾ ಉಪಾಧ್ಯಕ್ಷೆ ನಂದಿನಿಗೌಡ ಒತ್ತಾಯಿಸಿದರು.