Advertisement

Nandikur ರೈಲು ನಿಲ್ದಾಣ ಹೆಸರಿಗೆ ಮಾತ್ರ!

03:05 PM Aug 08, 2024 | Team Udayavani |

ಪಡುಬಿದ್ರಿ: ನಂದಿಕೂರು ರೈಲ್ವೇ ನಿಲ್ದಾಣದಿಂದ ಪಡುಬಿದ್ರಿ – ಕಾರ್ಕಳ – ಪಲಿಮಾರು ಸುತ್ತಮುತ್ತಲಿನ ಜನತೆಯ ನಿರೀಕ್ಷೆಗಳು ಹಲವಾರು ಇದ್ದವು. ಇಲ್ಲಿ ನಿಲ್ದಾಣವಾದರೆ ತಮಗೆ ರೈಲು ಸಂಪರ್ಕ ಸುಲಭವಾದೀತು ಎಂದು ಅವರೆಲ್ಲ ಭಾವಿಸಿದ್ದರು. ಆದರೆ, ದುರಂತವೆಂದರೆ ಇಲ್ಲಿನ ರೈಲು ನಿಲ್ದಾಣ ಕೇವಲ ನಾಮ್‌ ಕೇವಾಸ್ತೆ ಎಂಬಂತಿದೆ. ಇಲ್ಲಿ ನಿಲ್ಲಬೇಕಾದ ರೈಲುಗಳು ನಿಲ್ಲುವುದಿಲ್ಲ. ನಿಲ್ಲುವ ರೈಲುಗಳು ಈ ಭಾಗದ ಜನರಿಗೆ ಅಷ್ಟಾಗಿ ಉಪಯೋಗವಿಲ್ಲ!

Advertisement

ನಂದಿಕೂರು ನಿಲ್ದಾಣವನ್ನು ಸಾಕಷ್ಟು ವಿಸ್ತಾರವಾಗಿಯೇ ನಿರ್ಮಿಸಲಾಗಿದೆ. ಸಾಕಷ್ಟು ಸಿಬಂದಿಯಿದ್ದಾರೆ. ವಿಶೇಷ ಚೇತನರಿಗೆ, ವೃದ್ಧರಿಗಾಗಿ ಇಲ್ಲಿ ವೀಲ್‌ ಚೆಯರ್‌ ವೇಯನ್ನು ನಿಲ್ದಾಣದ ಮುಂಭಾಗದಿಂದಲೇ ಪ್ಲಾಟ್‌ಫಾರ್ಮ್ ವರೆಗೆ ನಿರ್ಮಿಸಲಾಗಿದೆ. ವಿಶ್ರಾಂತಿ ಕೊಠಡಿಯೂ ಇದೆ. ಆದರೆ ಇಲ್ಲಿ ಮಂಗಳೂರು – ಮಡಗಾಂವ್ ಪ್ಯಾಸೆಂಜರ್‌ ರೈಲು ಮಾತ್ರ ಬೆಳಗ್ಗೆ ಹಾಗೂ ಸಂಜೆ ವಾಪಸಾಗುವ ವೇಳೆ ನಿಲ್ಲುವುದು ಬಿಟ್ಟರೆ ಬೇರೆ ಯಾವುದೇ ರೈಲಿಗೂ ನಿಲುಗಡೆ ಇಲ್ಲ.

ಕೊರೊನಾ ಪೂರ್ವದಲ್ಲಿ ಓಡುತ್ತಿದ್ದ ಡೆಮೋ ರೈಲು ಇಲ್ಲಿ ನಿಲ್ಲುತ್ತಿತ್ತು. ಈಗ ಅದು ಮೆಮೋ ರೈಲು ಗಾಡಿಯಾಗಿ ಮಂಗಳೂರು – ಗೋವಾ ಮಧ್ಯೆ ಚಲಿಸುತ್ತಿದ್ದರೂ ತೋಕೂರು, ಉಡುಪಿ ಬಿಟ್ಟು ಬೇರೆಲ್ಲೂ ನಿಲ್ಲುತ್ತಿಲ್ಲ. ಮತ್ಸ್ಯಗಂಧ ರೈಲು ಹಾಗೂ ಮಂಗಳಾ ಎಕ್ಸ್‌ಪ್ರೆಸ್‌ಗಳನ್ನು ನಿಲ್ಲಿಸಬೇಕು ಎಂದು ಜನತೆಯ ಬೇಡಿಕೆಯಿದೆ

ಕಲ್ಲಿದ್ದಲು ಸಾಗಾಟಕ್ಕೆ ಮಾತ್ರ ಪೂರಕ!

ಅದಾನಿ ಪವರ್‌ – ಉಡುಪಿ ಟಿಪಿಪಿಗೆ ಕಲ್ಲಿದ್ದಲು ಪೂರೈಕೆಯ ಗೂಡ್ಸ್‌ ಗಾಡಿಗಳು ನಿಲ್ಲಲು ಮತ್ತು ದೂರ ಸಂಚಾರ ರೈಲುಗಳು ಮತ್ತು ಗೂಡ್ಸ್‌ ರೈಲುಗಳಿಗೆ ಕ್ರಾಸಿಂಗ್‌ ಗಾಗಿಯೇ ನಂದಿಕೂರು ನಿಲ್ದಾಣ ಹೆಚ್ಚು ಬಳಕೆಯಲ್ಲಿದೆ!

Advertisement

ಮನವಿ ನೀಡಿದ್ದೇವೆ

ಸುಮಾರು 20 ವರ್ಷ ಗಳಿಂದಲೂ ಈ ಕುರಿತಾದ ಪ್ರಯತ್ನಗಳು ನಡೆಯುತ್ತಿದ್ದರೂ ಯಶಸ್ವಿಯಾಗಿಲ್ಲ. ಮತ್ಸ್ಯಗಂಧ ಹಾಗೂ ಮಂಗಳಾ ಎಕ್ಸ್‌ ಪ್ರಸ್‌ ರೈಲುಗಳ ನಿಲುಗಡೆಗೆ ಈಗಲೂ ಜನರ ಬೇಡಿಕೆ ಇದೆ. ಸಂಸದರಿಗೆ ಮನವಿ ನೀಡಿದ್ದೇವೆ.

– ಸೌಮ್ಯಲತಾ ಶೆಟ್ಟಿ, ಪಲಿಮಾರು ಗ್ರಾ. ಪಂ. ಅಧ್ಯಕ್ಷೆ

ದಿನಕ್ಕೆ 5-6 ಪ್ರಯಾಣಿಕರು ಮಾತ್ರ!

ನಂದಿಕೂರು ನಿಲ್ದಾಣದಿಂದ ರೈಲ್ವೇಗೆ ಪ್ರಯಾಣಿಕರ ಸಂಖ್ಯೆ ಸದ್ಯ ದಿನವಹಿ 5-10 ಮಾತ್ರ ಇದೆ. ಆದ್ದರಿಂದ ರೈಲು ನಿಲ್ದಾಣ ಅಭಿವೃದ್ಧಿಯೂ ಸಾಧ್ಯವಾಗಿಲ್ಲ. ಹೆಚ್ಚಿನ ರೈಲು ನಿಲುಗಡೆಗೂ ರೈಲ್ವೇ ಬೋರ್ಡ್‌ ಮನಮಾಡುತ್ತಿಲ್ಲ. ಖಾಸಗಿ ಸಹಭಾಗಿತ್ವದಲ್ಲಿ ಪಡು ಬಿದ್ರಿ – ಕಾರ್ಕಳ ರಾ.ಹೆ.ಯಲ್ಲಿನ ನಂದಿಕೂರು ರೈಲ್ವೇ ಮೇಲ್ಸೇತುವೆಯ ದಕ್ಷಿಣ ಬದಿಯಲ್ಲಿ ರಸ್ತೆ ನಿರ್ಮಾಣಕ್ಕಾಗಿ ಅದಾನಿ ಸಿಎಸ್‌ಆರ್‌ ನಿಧಿಯನ್ನು ಬಳಸಿಕೊಳ್ಳುವ ಚಿಂತನೆ ಇದೆ.

– ಸುಧಾ ಕೃಷ್ಣಮೂರ್ತಿ, ಕೊಂಕಣ ರೈಲ್ವೇ, ಮಂಗಳೂರು ಸಾರ್ವಜನಿಕ ಸಂಪರ್ಕ ಅಧಿಕಾರಿ

ಆ. 12ರ ಬಳಿಕ ಪರಿಶೀಲನೆ ಭರವಸೆ ಹಿಂದಿನ ಸಂಸದೆ ಶೋಭಾ ಕರಂದ್ಲಾಜೆ ಅವರಿಗೆ ಮನವಿ ಪತ್ರವನ್ನು ಸಲ್ಲಿಸಲಾಗಿದ್ದರೂ ಯಾವುದೇ ಆಶಾದಾಯಕ ಬೆಳವಣಿಗೆಗಳಾಗಿಲ್ಲ. ಹಾಲಿ ಸಂಸದರಾದ ಕೋಟ ಶ್ರೀನಿವಾಸ ಪೂಜಾರಿ ಅವರ ಸಂಸತ್‌ ಅಧಿವೇಶನ ಮುಗಿದು ಆ. 12ರ ಬಳಿಕ ಜಿಲ್ಲೆಗೆ ಆಗಮಿಸಿದ ನಂತರ ನಂದಿ ಕೂರು ನಿಲ್ದಾಣಕ್ಕೆ ತೆರಳಿ ಪರಿಶೀಲನೆ ನಡೆಸುವುದಾಗಿ ಭರವಸೆ ನೀಡಿದ್ದಾರೆ.

ರಸ್ತೆ ಸಂಪರ್ಕವೇ ಅಡ್ಡಾದಿಡ್ಡಿ !

ನಂದಿಕೂರು ರೈಲು ನಿಲ್ದಾಣಕ್ಕೆ ಸಮರ್ಪಕ ರಸ್ತೆ ಸಂಪರ್ಕವೇ ಇಲ್ಲದಿರುವುದು ಕಳೆದ ಎರಡು ದಶಕಗಳಿಂದಲೂ ಚರ್ಚೆಯಾಗುತ್ತಿದೆ. ಬೇಡಿಕೆ, ಮನವಿಗಳು ಆಗಿನ ಸಂಸದರ ಕಚೇರಿ, ಕೊಂಕಣ ರೈಲು ನಿಗಮಗಳಿಗೆ ಸುತ್ತಿದರೂ ಪ್ರಯೋಜನವಾಗಿಲ್ಲ.

ಕಾರ್ಕಳ – ಪಡುಬಿದ್ರಿ ರಾಜ್ಯ ಹೆದ್ದಾರಿ ಮೂಲಕ ಇಲ್ಲಿನ ಆನಡ್ಕ ದಾಟಿ ಜಾರಂದಾಯ ದೈವಸ್ಥಾನದ ಬಳಿಯಿಂದ ಮೇಲ್ಸೇತುವೆ ಹಾದು ಎಧ್ದೋ ಬಿಧ್ದೋ ನಿಲ್ದಾಣಕ್ಕೆ ಹೋಗುವುದು ಈಗ ಇರುವ ದಾರಿ. ಇದು ಸುಮಾರು 3.5 ಕಿ.ಮೀ. ದೂರವಿದೆ.

ರೈಲ್ವೇ ಟ್ರ್ಯಾಕ್‌ ಬಳಿಯೂ ಕೊಂಕಣ ರೈಲು ನಿಗಮವು ರಸ್ತೆಗಾಗಿ ಕಾದಿರಿಸಿದ ಜಾಗವೂ ಇದೆ. ಈ ಮಾರ್ಗ ಆದರೆ 2.5 ಕಿಮೀ ಅಂತರದಲ್ಲಿಯೇ ನಂದಿಕೂರು ರೈಲು ನಿಲ್ದಾಣ ಸಿಗುತ್ತದೆ. ಇಲ್ಲಿ ರಸ್ತೆ ನಿರ್ಮಾಣವಾದಲ್ಲಿ ಸರ್ವಕಾಲದಲ್ಲೂ ಬಳಕೆ ಆಗಬಹುದು.

ಪಲಿಮಾರಿನಿಂದ ಪಂಚಾಯತ್‌ ಎದುರಿನ ಶಾಲಾ ರಸ್ತೆಯಲ್ಲಿ ಬೆರಂದಿಕಟ್ಟೆಗೆ ಕ್ರಮಿಸಿ ರೈಲ್ವೇ ಮೇಲ್ಸೇತುವೆಯಿಂದ ನೇರ ಉತ್ತರಕ್ಕೆ ಸುಮಾರು ಅರ್ಧ ಕಿಮೀ ದೂರದಲ್ಲೇ ರೈಲು ನಿಲ್ದಾಣ ಸೇರಬಹುದು.

ಪಡುಬಿದ್ರಿ ಕಡೆಯಿಂದ ಹೋಗುವುದಾದಲ್ಲಿ ನಂದಿಕೂರು ದೇವಸ್ಥಾನದ ಎದುರೇ ಕಾಣ ಸಿಗುವ ರೈಲು ನಿಲ್ದಾಣಕ್ಕೆ ರೈಲ್ವೇ ಮೇಲ್ಸೇತುವೆ ದಾಟಿ ಎಡಕ್ಕೆ ತಿರುಗಿದರೆ ಅರ್ಧ ಕಿಮೀ ಮಾತ್ರ. ಆದರೆ ಬೆರಂದಿಕಟ್ಟ ರಸ್ತೆ ಏನೇನೂ ಅಭಿವೃದ್ಧಿಯಾಗಿಲ್ಲ. ಈ ಎರಡೂ ರಸ್ತೆಗಳೂ ಸಿಂಗಲ್‌ ರೂಟ್‌ ರಸ್ತೆಗಳಾಗಿವೆ. ವಿರುದ್ಧ ದಿಕ್ಕಿನಿಂದ ವಾಹನಗಳು ಬಂದಲ್ಲಿ ಯಾವುದೇ ದಾರಿಯಿಲ್ಲ!

– ಆರಾಮ ಪಡುಬಿದ್ರಿ

Advertisement

Udayavani is now on Telegram. Click here to join our channel and stay updated with the latest news.

Next