Advertisement

ಬೆಳ್ಮಣ್‌-ನಂದಳಿಕೆ: ಪುನಶ್ಚೇತನಕ್ಕೆ ಕಾಯುತ್ತಿವೆ ಕೆರೆಗಳು

06:40 AM May 04, 2018 | Team Udayavani |

ಬೆಳ್ಮಣ್‌: ಬಿರು ಬೇಸಗೆ ಸಂದರ್ಭ ಕುಡಿಯುವ ನೀರಿಗೆ ಅಭಾವ ಎದುರಾಗಿರುವಂತೆ, ಹಿಂದಿನ ಕಾಲದಲ್ಲಿ ನೀರಿನ ಒರತೆ ಹಾಗೂ ಜಲ ಸಂರಕ್ಷಣೆಗೆಂದೇ ತೋಡಲಾದ ಕೆರೆಗಳು ಬೆಳ್ಮಣ್‌, ಬೋಳ, ಮುಂಡ್ಕೂರು ಪರಿಸರದಲ್ಲಿ  ಸಾಯುವ ಅಂಚಿಗೆ ಬಂದು ನಿಂತಿವೆ. 

Advertisement

ಎರಡು ದಿನಕ್ಕೊಮ್ಮೆ ನೀರು 
ನಂದಳಿಕೆ ಗ್ರಾಮ ಪಂಚಾಯತ್‌ ವ್ಯಾಪ್ತಿಯಲ್ಲಿ ಈಗ ಎರಡು ದಿನಕ್ಕೊಮ್ಮೆ ನೀರು ಪೂರೈಕೆ ಇದೆ. ಆದರೆ ಇಲ್ಲಿ ನಂದಳಿಕೆ ಮಜಲ ಕೆರೆ ಎಂಬ ಪ್ರಾಚೀನ ಕೆರೆಯೊಂದಿದ್ದು, ಅದರ ಪುನಶ್ಚೇತನವಾದರೆ  ಇಡೀ ಗ್ರಾಮದ ನೀರಿನ ಸಮಸ್ಯೆಗೆ ಮುಕ್ತಿ ದೊರಕಬಹುದೆಂಬ ಆಶಯ ಈ ಊರಿನ ಜನರದ್ದು.

ಕಾಯಕಲ್ಪ ಬೇಕು
ಅತ್ಯಂತ  ವಿಸ್ತಾರವುಳ್ಳ  ಈ ನಂದಳಿಕೆ ಮಜಲ ಕೆರೆ  ಹೂಳೆತ್ತುವ ಮೂಲಕ ದುರಸ್ಥಿ ನಡೆಸದಿದ್ದಲ್ಲಿ ಕೆರೆ ಮುಂದಿನ ದಿನಗಳಲ್ಲಿ ಬತ್ತಿಹೋಗುವ ಲಕ್ಷಣವಿದೆ. ಈಗಾಗಲೇ ಕೆರೆ ಕೆಸರಿನಿಂದ ತುಂಬಿರುವ ಈ ಕೆರೆ, ಹೆಚ್ಚು ಉಪಯೋಗಕ್ಕೆ ಬಾರದಾಗಿದೆ.

22 ಕೆರೆಗಳಿವೆ!
ನಂದಳಿಕೆ ಗ್ರಾಮ ಪಂಚಾಯತ್‌ ವ್ಯಾಪ್ತಿ ಹಾಗೂ ಬೆಳ್ಮಣ್‌, ಬೋಳ, ಮುಂಡ್ಕೂರು ಪರಿಸರದ ಗುಡ್ಡಗಾಡು ಪ್ರದೇಶಗಳಲ್ಲಿ  ಸರಕಾರಿ ಹಾಗೂ ಖಾಸಗಿ ಜಮೀನುಗಳಲ್ಲಿ ಒಟ್ಟು ಸೇರಿ ಸುಮಾರು 22 ಕೆರೆಗಳಿವೆ. ಇವುಗಳ ಸೂಕ್ತ ನಿರ್ವಹಣೆ ಆಗಿದ್ದೇ ಆದಲ್ಲಿ ಅಂತರ್ಜಲ ವೃದ್ಧಿ, ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗಲಿದೆ. ಇದರೊಂದಿಗೆ ನಂದಳಿಕೆ ಗೋಳಿಕಟ್ಟೆಯ ಬಳಿಯಲ್ಲಿರುವ ಗುರುಬೆಟ್ಟು ಕೆರೆ, ಕೆದಿಂಜೆ ಮುಜಲೊಟ್ಟು ಕೆರೆ ಕೂಡ ಬತ್ತಿ ಹೋಗಿದ್ದು, ಈ ಭಾಗದಲ್ಲಿ ನೀರಿನ ಸಮಸ್ಯೆ ಕಾಡುವ ಆತಂಕ ಎದುರಾಗಿದೆ.  

ಹಿಂದೆ ಹೂಳೆತ್ತಲಾಗಿತ್ತು
ಬಹುದೊಡ್ಡ ಕೆರೆಗಳ ಪೈಕಿ ಮಜಲಕೆರೆ  ವಿಸ್ತಾರವಾಗಿದೆ. ಸುಮಾರು 10 ವರ್ಷಗಳ  ಹಿಂದೆ ಈ ಕೆರೆಯನ್ನು ಹೂಳೆತ್ತಲಾಗಿದ್ದು, ಆ ಬಳಿಕ ಯಾವುದೇ ಅಭಿವೃದ್ಧಿ  ಕಾರ್ಯ ನಡೆದಿಲ್ಲ. ಇದೀಗ ಕೆರೆ ಮತ್ತೆ ಹೂಳು ತುಂಬಿದ್ದು ಜಲ ಸಾಮರ್ಥ್ಯ ಕಡಿಮೆಯಾಗುತ್ತಿದೆ. ಮಜಲ ಕೆರೆಯಿಂದಾಗಿಯೇ ಹಲವಾರು ಕೃಷಿಕರಿಗೆ ನೀರಿನ ಪ್ರಯೋಜನ ಹಾಗೂ, ಮನೆಯ ಬಾವಿಗಳಲ್ಲಿ ನೀರಿನ ಹೆಚ್ಚಳಕ್ಕೆ ಕಾರಣವಾಗಿತ್ತು. ಈ ಕೆರೆಯನ್ನು ಅಭಿವೃದ್ಧಿ ಪಡಿಸಿದ್ದೇ ಆದಲ್ಲಿ ಗ್ರಾಮಕ್ಕೆ ನೀರು ಪೂರೈಕೆ ಯೋಜನೆ ಮಾಡಬಹುದಾಗಿದೆ.  

Advertisement

ಸಮಸ್ಯೆಯನ್ನು ತುರ್ತು ಬಗೆಹರಿಸಿ
ಜಲ ಸಮಸ್ಯೆ ಮುಂದಿನ ದಿನಗಳಲ್ಲಿ ಬೃಹದಾಕಾರ ತಾಳುವ ಮೊದಲು ಅಧಿಕಾರಿಗಳು ಎಚ್ಚೆತ್ತು ನಿರ್ಜೀವ ಕೆರೆಗಳ ಅಭಿವೃದ್ಧಿ ಪಡಿಸಬೇಕಿದೆ. 
– ಗುರುರಾಜ್‌,ಗ್ರಾಮಸ್ಥರು

ಕೆರೆ ಅಭಿವೃದ್ಧಿಯಾದಲ್ಲಿ ಸಮಸ್ಯೆ ಪರಿಹಾರ
ನಂದಳಿಕೆ ಮಜಲ ಕೆರೆಯು ಅಭಿವೃದ್ಧಿಯಾದಲ್ಲಿ ಇಡೀ ಗ್ರಾಮಕ್ಕೆ ನೀರಿನ ಸಮಸ್ಯೆ ದೂರವಾಗಲಿದೆ. ಕೆರೆಯ ಸಮೀಪದಲ್ಲೇ ಬಾವಿಯನ್ನು ನಿರ್ಮಿಸಿ ಗ್ರಾಮದ ಜನರಿಗೆ ನೀರು ಪೂರೈಕೆ ಮಾಡಬಹುದಾಗಿದೆ.   
– ರಾಕೇಶ್‌,ಸ್ಥಳಿಯರು

ಹೂಳು ತೆಗೆಯುವ ಕಾರ್ಯ ನಡೆಯಲಿ
ಮಜಲ ಕೆರೆಯಲ್ಲಿ ಸಂಪೂರ್ಣ ಕೆಸರು ಮಣ್ಣು ತುಂಬಿದ್ದು ಹೂಳು ತೆಗೆಯುವ ಕಾರ್ಯ ನಡೆಯಬೇಕಾಗಿದೆ. ನೀರಿನ ಒರತೆ ಹೆಚ್ಚಿರುವ ಕೆರೆಗಳ ಅಭಿವೃದ್ಧಿ ಪ್ರತಿ ಗ್ರಾಮದಲ್ಲೂ ನಡೆಯಬೇಕಾಗಿದೆ 
– ಸುರೇಶ್‌,ಕೃಷಿಕರು

– ಶರತ್‌ ಶೆಟ್ಟಿ ಮುಂಡ್ಕೂರು

Advertisement

Udayavani is now on Telegram. Click here to join our channel and stay updated with the latest news.

Next