ಮೂಡುಬಿದಿರೆ: ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣ ಕಾರ್ಯ 2020ರ ಆಗಸ್ಟ್ 5ರಂದು ಪ್ರಾರಂಭಗೊಂಡಿದ್ದರೆ ಮುನ್ನಾದಿನವೇ ಮೂಡುಬಿದಿರೆ ಸಮೀಪದ ಬೆಳುವಾಯಿ -ಅಳಿಯೂರು ರಸ್ತೆಯ ಬದಿಯಲ್ಲೇ ಇರುವ “ಸುರಕ್ಷಾ” ಹೆಸರಿನ ಮನೆಯಲ್ಲಿ ರಾಮ ಮಂದಿರ ನಿರ್ಮಾಣ ನಿರ್ವಿಘ್ನವಾಗಿ ನೆರವೇರಲೆಂಬ ಸಂಕಲ್ಪದೊಂದಿಗೆ ಬೆಳಗಿಸಿದ ನಂದಾ ದೀಪ ಇದುವರೆಗೂ ನಿರಂತರವಾಗಿ ಬೆಳಗುತ್ತಿದೆ.
ಬೆಳುವಾಯಿ ಬಿಜೆಪಿ ಸ್ಥಾನೀಯ ಸಮಿತಿ ಮಾಜಿ ಅಧ್ಯಕ್ಷ ಸುರೇಶ್ ಕುಮಾರ್ ಮನೆಮಂದಿಯ ಜತೆಗೂಡಿ ಇಂಥ ದೃಢಸಂಕಲ್ಪ ಮಾಡಿದ್ದು ಸೋಮವಾರಕ್ಕೆ ಸರಿಯಾಗಿ 1,267 ದಿನಗಳೇ ಸರಿದಂತಾಗುತ್ತಿದೆ.
ಮೊದಮೊದಲು 24 ದಿನಗಳಿಗೆ 5 ಲೀಟರ್ ಎಳ್ಳೆಣ್ಣೆ ಬೇಕಾಗಿದ್ದರೆ ಮತ್ತೆ ಮತ್ತೆ 40 ದಿನಗಳ ವರೆಗೆ ವ್ಯಯವಾಗುತ್ತಿರುವುದು ಹೇಗೆ ಎಂಬುದು ಮನೆಯರಿಗೂ ಮನವರಿಕೆ ಆಗಿಲ್ಲ.
ಸುರೇಶ್ ಅವರ ಪುತ್ರಿ ಸುಪ್ರೀತಾ ನಿತ್ಯವೂ ಈ ದೀಪ ಬೆಳಗುತ್ತಿರುವಂತೆ ನೋಡಿಕೊಳ್ಳುವಲ್ಲಿ ಶ್ರದ್ಧೆ, ಸಂತೃಪ್ತಿಯ ಭಾವ ಮೈಮನಗಳಲ್ಲಿ ತುಂಬಿಕೊಂಡಿದ್ದಾರೆ. ಊರಿನವರೇ ಆದ ಕುಕ್ಕುಡೇಲು ಸುರೇಶ್ ಭಟ್ ಅವರು ಪ್ರತೀ ವರ್ಷ ಆಗಸ್ಟ್ 5ರಂದು ಈ ಮನೆಗೆ ಬಂದು ನಂದಾದೀಪಕ್ಕೆ ಅಲಂಕಾರ ಪೂಜೆ, ಗಣಪತಿ ಹವನ ನೆರವೇರಿಸುತ್ತ ಬಂದಿದ್ದಾರೆ.
ಇದುವರೆಗೆ ಬಳಕೆಯಾಗಿರುವ 5 ಲೀಟರ್‌ನ ಕ್ಯಾನುಗಳನ್ನು ತಾರೀಕು ನಮೂದಿಸಿ ಇಟ್ಟುಕೊಂಡಿರುವುದು ಈ ಮನೆಯವರ ಶ್ರದ್ಧೆ, ರಾಮಭಕ್ತಿಗೆ ಸಾಕ್ಷಿಯಾಗಿದೆ. ಒಟ್ಟು 180 ಲೀ. ಎಳ್ಳೆಣ್ಣೆ ದೀಪವಾಗಿ ಬೆಳಗಿದೆ.
ಶ್ರೀರಾಮ ಮಂದಿರ ನಿರ್ಮಿಸುವ ಪ್ರಧಾನಿ ಮೋದಿ ಅವರ ಸಂಕಲ್ಪ ನಿರ್ವಿಘ್ನವಾಗಿ ನೆರವೇರಲಿ ಎಂಬ ಆಶಯದಿಂದ ಈ ನಂದಾದೀಪ ಬೆಳಗುತ್ತ ಬಂದಿದ್ದೇವೆ. ನಾವಂದುಕೊಂಡಂತೆ ಎಲ್ಲವೂ ಸಾಂಗವಾಗಿ ನೆರವೇರುತ್ತಿದೆ.ಸದ್ಯ ನಮ್ಮಲ್ಲಿ ಶ್ರೀರಾಮ ದೇವರ ಬಿಂಬ, ಚಿತ್ರಗಳಿಲ್ಲ, ಅಯೋಧ್ಯೆಯಲ್ಲಿ ಪ್ರಾಣಪ್ರತಿಷ್ಠೆ ಆದ ಬೆನ್ನಲ್ಲೇ ನಮ್ಮ ದೇವರ ಕೋಣೆಯಲ್ಲೂ ಶ್ರೀರಾಮ ದೇವರ ಪಟ ಇರಿಸಿ ಆರಾಧಿಸಲು ನಿರ್ಧರಿಸಿದ್ದೇವೆ.
– ಸುರೇಶ್ ಕುಮಾರ್