Advertisement
ಹಿಂದಿ ಸಾಹಿತ್ಯ ಜಡವಾಗಿದ್ದ ಕಾಲದಲ್ಲಿ ಡಾ. ನಾಮವರ್ ಸಿಂಗ್ ಅವರು ತಮ್ಮ ಪ್ರಖರವಾದ ವೈಚಾರಿಕ ನೆಲೆಗಳಿಂದ ಹಿಂದಿ ಸಾಹಿತ್ಯ ವಿಮರ್ಶೆಗೆ ಸಾಮಾಜಿಕ ಆಯಾಮ ತಂದುಕೊಟ್ಟವರು. ವಿಶ್ವವಿದ್ಯಾಲಯದಲ್ಲಿ ಹಿಂದಿ ಪಠ್ಯಕ್ರಮದಲ್ಲಿ ಕಾಲೋಚಿತ ಬದಲಾವಣೆಯನ್ನು ತಂದ ಐತಿಹಾಸಿಕ ಶ್ರೇಯವೂ ನಾಮವರರಿಗೆ ಸಲ್ಲುತ್ತದೆ. ಪ್ರಖರ ವೈಚಾರಿಕತೆಯನ್ನು ಪ್ರಚುರಪಡಿಸಲು ಆಲೋಚನ್ ಎಂಬ ತ್ತೈಮಾಸಿಕವೊಂದನ್ನು ಸಂಪಾದಿಸುತ್ತಿದ್ದರು. ಈ ಪತ್ರಿಕೆಯು ಹಿಂದಿ ಸಾಹಿತ್ಯ ವಿಮರ್ಶೆಯ ಜಾಡನ್ನೇ ಬದಲಾಯಿಸಿತು. ಕವಿತಾ ಕೇ ನಯೇ ಪ್ರತಿಮಾನ್ - ಹಿಂದಿ ವಿಮರ್ಶೆಗೆ ಹೊಸ ಪರಿಭಾಷೆಗಳನ್ನು ಒದಗಿಸಿಕೊಟ್ಟಿತು..
ತಾವು ಆರಂಭದಲ್ಲಿ ಕವಿಯಾಗಿದ್ದು ನಂತರ ಕಾವ್ಯದ ಹಾದಿಯನ್ನು ಬಿಟ್ಟು ಗದದತ್ತ ತಿರುಗಿದ್ದು ಹೇಗೆ ?
– ಹಾಗೇನಿಲ್ಲ. ಆರಂಭಿಕ ದಿನಗಳಲ್ಲಿ ಪ್ರತಿಯೊಬ್ಬರೂ ಕವಿಯಾಗಿಯೇ ಇರುತ್ತಾರೆ. ಆದರೆ, ನನಗೆ ಮೊದಲಿನಿಂದಲೂ ಅಧ್ಯಾಪಕನಾಗುವ ಆಸೆಯಿತ್ತು. ಅದೂ ಬನಾರಸ್ ಹಿಂದೂ ವಿಶ್ವವಿದ್ಯಾಲಯದಲ್ಲಿಯೇ ಅಧ್ಯಾಪಕನಾಗಬೇಕೆಂಬ ಕನಸು. ಕಾಶಿ ಹಿಂದೂ ವಿಶ್ವವಿದ್ಯಾಲಯದಲ್ಲಿ ನನ್ನ ಮೊದಲ ಗುರು ಪಂ.ಕೇಶವ್ ಪ್ರಸಾದ್ ಮಿಶ್ರರ ಪ್ರೇರಣೆಯಿಂದಲೇ 1950ರಲ್ಲಿ ಹಿಂದಿ ಕೇ ವಿಕಾಸ್ ಮೇ ಅಪಭ್ರಂಶ್ ಕಾ ಯೋಗ ಎನ್ನುವ ವಿಷಯದ ಮೇಲೆ ಎಂಎಯಲ್ಲಿ ಪ್ರಬಂಧವನ್ನು ಮಂಡಿಸಿದೆ. ಅದೇ ಕಾಲಕ್ಕೆ ಆಚಾರ್ಯ ಹಜಾರಿಪ್ರಸಾದ್ ದ್ವಿವೇದಿ ಅವರು ಬನಾರಸ್ ಹಿಂದೂ ವಿಶ್ವವಿದ್ಯಾಲಯದ ಹಿಂದಿ ವಿಭಾಗದ ಮುಖ್ಯಸ್ಥರಾಗಿ ಶಾಂತಿನಿಕೇತನದಿಂದ ಆಗಮಿಸಿದ್ದರು. ಆ ದಿನಗಳಲ್ಲಿ ಆಚಾರ್ಯರಂಥ ಪ್ರಖರ ವಿದ್ವಾಂಸರ ಮಾರ್ಗದರ್ಶನ ಲಭಿಸಿದ್ದು ನನ್ನ ಪುಣ್ಯ. ಅವರು ಅನೇಕ ಭಾಷಾಪ್ರವೀಣರಷ್ಟೇ ಅಲ್ಲ, ಸಂಸ್ಕೃತ, ಪ್ರಾಕೃತ, ಅಪಭ್ರಂಶದ ಪಂಡಿತರಾಗಿದ್ದರು. ಆಗ ಆಚಾರ್ಯರೊಂದು ಮಾತನ್ನು ಹೇಳಿದರು-“ನಿನಗೆ ಬನಾರಸ್ ಹಿಂದೂ ವಿಶ್ವವಿದ್ಯಾಲಯದಲ್ಲಿ ಅಧ್ಯಾಪಕನಾಗಬೇಕಾದರೆ ನೀನು ಭಾಷಾಶಾಸ್ತ್ರ ಹಾಗೂ ಅಪಭ್ರಂಶ್‌ನಲ್ಲಿ ಪ್ರವೀಣನಾಗು’. ಆ ವಿಭಾಗದಲ್ಲಿ ಕಲಿಸಲು ಅಧ್ಯಾಪಕರೇ ಇದ್ದಿಲ್ಲ ಆಗ. ಹೀಗೆ ನನ್ನ ಅಭಿರುಚಿಯೂ ಅಪಭ್ರಂಶ್ ಹಾಗೂ ಭಾಷಾಶಾಸ್ತ್ರದಲ್ಲಿ ಬೆಳೆಯುತ್ತ ಹೋಯಿತು, ಕಾವ್ಯ ಹಿಂದೆ ಉಳಿದುಹೋಯಿತು.
Related Articles
Advertisement
ಕಬೀರ್ ಔರ್ ದೂಸರೀ ಪರಂಪರಾ ಕೀ ಖೋಜ… ಬರೆಯಲು ಪ್ರೇರೇಪಿಸಿದ ಅಂಶಗಳು ? ತಮ್ಮನ್ನು ಗಾಢವಾಗಿ ಪ್ರಭಾವಿಸಿದ ಲೇಖಕರು ?
-ಮುನ್ಷಿ ಪ್ರೇಮಚಂದ್, ನಿರಾಲಾ ರಿಂದ ಪ್ರಭಾವಿತರಾಗದವರಿದ್ದಾರೆಯೇ? ನಾನು ಹುಟ್ಟಿದ ಬನಾರಸ್ ಬರೀ ಊರಲ್ಲ, ಅದು ಸಂಸ್ಕೃತಿ. ಪರಂಪರೆ. ಅತ್ಯಂತ ಪುರಾತನ ಸಂಸ್ಕೃತಿಯ ಊರು. ಒಂದೇ ಸಂಸ್ಕೃತಿ, ಒಂದೇ ಪರಂಪರೆಯದಲ್ಲ. ಸಂಸ್ಕೃತಿ-ಪರಂಪರೆ ಪುಸ್ತಕಗಳಲ್ಲಿಲ್ಲ. ಸಂಸ್ಕೃತಿ ಕಾಶಿಯ ಓಣಿಗಳಲ್ಲಿದೆ, ಗಲ್ಲಿಗಳಲ್ಲಿದೆ, ಘಾಟ್‌ಗಳಲ್ಲಿದೆ. ಒಂದೆಡೆ ಕಬೀರರಿದ್ದಾರೆ, ರೇಶಿಮೆ ಸೀರೆ ನೇಯುವ ನೇಕಾರರಿದ್ದಾರೆ, ಇನ್ನೊಂದೆಡೆ ಘಾಟ್‌ನಲ್ಲಿ ತುಲಸೀದಾಸ ಇದ್ದಾರೆ. ಮತ್ತೂಂದು ಗಲ್ಲಿಯಲ್ಲಿ ಪ್ರೇಮಚಂದ್ ಇದ್ದರು. ಬನಾರಸಿನ ರಸ್ತೆಗಳಲ್ಲಿ ಓಡಾಡಿದರೆ ಸಾಕು ಸಂಸ್ಕೃತಿ ಗೋಚರಿಸುತ್ತದೆ. ಇಂಥ ಊರಿನಲ್ಲಿ ಹುಟ್ಟಿ ಬೆಳೆದ ನನಗೆ ಪರಂಪರೆಯ ಬಗ್ಗೆ ಆಗಾಧ ಕುತೂಹಲವಿದ್ದುದು ಸಹಜವೇ ಆಗಿತ್ತು.
ಇನ್ನೊಂದು ಮಹತ್ವಪೂರ್ಣ ಮಾತೆಂದರೆ, ನನ್ನ ಗುರುಗಳಾದ ಆಚಾರ್ಯ ಹಜಾರಿಪ್ರಸಾದ್ ದ್ವಿವೇದಿಯವರ ಮೂಲಕವೇ ನನಗೆ ಮೊತ್ತಮೊದಲ ಬಾರಿ ಅನಿಸಿದ್ದೆಂದರೆ, ನಮ್ಮ ಹಿಂದೀ ಸಾಹಿತ್ಯಕ್ಕೆ ಒಂದೇ ಪರಂಪರೆಯಿಲ್ಲ, ಅನೇಕ ಪರಂಪರೆಗಳಿವೆ. ಕಬೀರ, ತುಲಸೀ, ಸೂರದಾಸ, ಭರತೇಂದು ಹೀಗೇ. ಬಹುತೇಕ ಹಿಂದಿಭಾಷಿಕರು ಸೂರದಾಸ್ ಅಥವಾ ತುಲಸೀದಾಸ ಪರಂಪರೆಯನ್ನೇ ಮೂಲ ಪರಂಪರೆಯಾಗಿ ನೋಡುತ್ತಾರೆ, ಇಂದಿನ ಸಿದ್ಧಪರಂಪರೆಗಿಂತ ಹೆಚ್ಚು ಜೀವಂತವಾಗಿದ್ದುದು ಮತ್ತೂಂದಿದೆ. ಸಿದ್ಧ ಪರಂಪರೆಯನ್ನು ನಿರಾಕರಿಸುವ ಸಾಹಸದಿಂದ ಹುಟ್ಟುವ ಕಬೀರ ಪರಂಪರೆ ಹೆಚ್ಚು ಸಾರ್ಥಕವೆನಿಸುತ್ತದೆ. ಆಚಾರ್ಯ ದ್ವಿವೇದಿಯವರು ನೇಕಾರ ಪರಂಪರೆಯತ್ತ ಗಮನವನ್ನು ಸೆಳೆದರು. ಇದೇ ಶೋಧನೆಯ ಜಿಜ್ಞಾಸೆಯಲ್ಲಿ ದೂಸರಿ ಪರಂಪರಾ ಕೀ ಖೋಜ ಹುಟ್ಟಿಕೊಂಡಿತು. ಆದರೆ, ಶೋಧನೆ ಅಲ್ಲಿಗೇ ನಿಂತಿಲ್ಲ ಇನ್ನೂ ಬಹಳಷ್ಟಿದೆ. ತಮಗೆ ಕುವೆಂಪು ರಾಷ್ಟ್ರೀಯ ಪುರಸ್ಕಾರ ಲಭಿಸಿದೆ. ಕನ್ನಡ ಸಾಹಿತ್ಯ ಹಾಗೂ ಸಾಹಿತಿಗಳೊಂದಿಗಿನ ನಿಮ್ಮ ಒಡನಾಟದ ಬಗ್ಗೆ ತಿಳಿಸಿ. -ನಾನು ಕರ್ನಾಟಕದ ತುಂಬೆಲ್ಲ ಬಹಳಷ್ಟು ಸಾರಿ ಓಡಾಡಿದ್ದೇನೆ. ಧಾರವಾಡ, ಮೈಸೂರು, ಶಿವಮೊಗ್ಗ-ಇನ್ನೂ ಅನೇಕ ಕಡೆಗಳಲ್ಲಿ ಬಂದಿದ್ದೇನೆ. ಕೇರಳದ ಬಹಳಷ್ಟು ವಿದ್ಯಾರ್ಥಿ-ವಿದ್ಯಾರ್ಥಿನಿಯರು ಕಾಶಿ ವಿದ್ಯಾಲಯದ ಹಿಂದಿ ವಿಭಾಗದಲ್ಲಿ ಓದುತ್ತಿದ್ದು, ಕೇರಳಕ್ಕೆ ಸಾಕಷ್ಟು ಬಾರಿ ಹೋಗಿದ್ದೇನೆ. ತಮಿಳುನಾಡಿನಿಂದ ಅಷ್ಟೊಂದು ವಿದ್ಯಾರ್ಥಿಗಳು ಬರುತ್ತಿದ್ದಿಲ್ಲ. ಕರ್ನಾಟಕದ ನಾಗಪ್ಪಾಜೀ ಅವರನ್ನೂ ಅವರ ಇಳಿವಯಸ್ಸಿನಲ್ಲಿ ಭೇಟಿಯಾಗಿದ್ದೆ. ಉಡುಪಿ ರಾಜಗೋಪಾಲಾಚಾರ್ಯ ಅನಂತಮೂರ್ತಿ ಅವರೂ ನನ್ನ ಒಳ್ಳೆಯ ಮಿತ್ರರು, ಅಪ್ಪಟ ಲೋಹಿಯಾವಾದಿಯಾಗಿದ್ದರು. ಬಿ. ವಿ. ಕಾರಂತರು, ಬೇಂದ್ರೇಜೀ, ಶಿವರಾಮ ಕಾರಂತಜೀ ಎಲ್ಲರನ್ನೂ ಬಲ್ಲೆ. ಕುವೆಂಪುಜೀ ರಾಮಾಯಣದರ್ಶನಂ ಬರೆದ ಮೇರು ಕವಿಗಳು. (ಕುವೆಂಪು ಪ್ರತಿಷ್ಠಾನದಿಂದ ತಮಗೆ ಬಂದ ಪುಸ್ತಕಗಳನ್ನು ತೋರಿಸಿದರು). ನಾನು ಭೇಟಿ ಆಗಲು ಹೋದ ದಿನವೇ ಅವರ ಒಬ್ಬ 79 ವರ್ಷದ ಶ್ರೀವಲ್ಲಭ ಶುಕ್ಲಾ ಜೀ ಎಂಬ ಶಿಷ್ಯರು ದೂರದ ಊರಿನಿಂದ ಭೇಟಿಗಾಗಿ ಆಗಮಿಸಿದ್ದರು. ತಮ್ಮ ಗುರುಗಳ ಪಾದಗಳಿಗೆ ನಮಸ್ಕರಿಸಿ ತಮ್ಮ ಸರದಿಗಾಗಿ ಕಾಯುತ್ತಿದ್ದರು. ಆ ಗುರು-ಶಿಷ್ಯರನ್ನು ತಮ್ಮ ಹಳೆಯ ದಿನಗಳನ್ನು ಮೆಲುಕುಹಾಕಲು ಏಕಾಂತದಲ್ಲಿ ಬಿಟ್ಟು, ಮತ್ತೂಮ್ಮೆ ಬರುವುದಾಗಿ ಹೇಳಿ, ನಾನು ಹೊರಡಲು ಅನುಮತಿ ಕೇಳಿ ಹೊರಟುಬಂದೆ. – ರೇಣುಕಾ ನಿಡಗುಂದಿ