Advertisement

ಟ್ರೇಲರ್‌ ನಲ್ಲಿ ಭೂತದ ಕಾಟ: ಆ.4ಕ್ಕೆ ನಮೋ ಭೂತಾತ್ಮ-2 ಚಿತ್ರ ತೆರೆಗೆ

01:04 PM Jul 24, 2023 | Team Udayavani |

ಕೋಮಲ್‌ ನಾಯಕರಾಗಿರುವ “ನಮೋ ಭೂತಾತ್ಮ-2′ ಚಿತ್ರ ಆಗಸ್ಟ್‌ 4ರಂದು ತೆರೆಕಾಣುತ್ತಿದೆ. ಮೊದಲ ಹಂತವಾಗಿ ಚಿತ್ರದ ಟ್ರೇಲರ್‌ ಬಿಡುಗಡೆಯಾಗಿದೆ. ಟ್ರೇಲರ್‌ನಲ್ಲಿ ಹಾರರ್‌ ಜೊತೆಗೆ ಕಾಮಿಡಿ ಇರುವುದರಿಂದ ಇದೊಂದು ಪಕ್ಕಾ ಎಂಟರ್‌ಟೈನರ್‌ ಚಿತ್ರವಾಗಲಿದೆ ಎಂಬ ಮಾತು ಕೇಳಿಬರುತ್ತಿದೆ.

Advertisement

ಚಿತ್ರದ ಬಗ್ಗೆ ಮಾತನಾಡುವ ಕೋಮಲ್‌, “ನಾನು ನಿರ್ಮಿಸಿ, ನಟಿಸಿದ್ದ ಮುರಳಿ ಮಾಸ್ಟರ್‌ ನಿರ್ದೇಶಿಸಿದ್ದ “ನಮೋ ಭೂತಾತ್ಮ’ ಚಿತ್ರದ ಮೊದಲ ಭಾಗ ಬಿಡುಗಡೆಯಾಗಿ ಹತ್ತು ವರ್ಷಗಳಾಗಿದೆ. ಆ ಚಿತ್ರ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿತ್ತು. ನಂತರ ಮುರಳಿ ಮಾಸ್ಟರ್‌ ಹಾಗೂ ನಾನು ಇನ್ನೆರಡು ಚಿತ್ರಗಳ ಬಗ್ಗೆ ಚರ್ಚೆ ಮಾಡಿದ್ದೆವು. ಆದರೆ ಎಷ್ಟೋ ವರ್ಷಗಳ ಬಳಿಕ ಈ “ನಮೋ ಭೂತಾತ್ಮ-2′ ಚಿತ್ರ ನಮ್ಮಿಬ್ಬರ ಕಾಂಬಿನೇಶನ್‌ನಲ್ಲಿ ಬರುತ್ತಿದೆ. ಮೊದಲ ಭಾಗಕ್ಕೆ ಭಯ ಹುಟ್ಟಿಸುವ ಸನ್ನಿವೇಶಗಳು ಹೆಚ್ಚಾಗಿದ್ದವು. ಆದರೆ ಈ ಚಿತ್ರದಲ್ಲಿ ಕಾಮಿಡಿ ಕೂಡ ಅರ್ಧ ಭಾಗದಷ್ಟಿರುತ್ತದೆ’ ಎಂದು ಚಿತ್ರದ ಬಗ್ಗೆ ಹೇಳಿದರು.

ನಿರ್ದೇಶಕ ಮುರಳಿ ಈ ಬಾರಿ ನಿರ್ಮಾಣದಲ್ಲೂ ತೊಡಗಿದ್ದಾರೆ. ಚಿತ್ರದ ಬಗ್ಗೆ ಸಿಕ್ಕಾಪಟ್ಟೆ ನಿರೀಕ್ಷೆ ಇಟ್ಟುಕೊಂಡಿರುವ ಮುರಳಿ ಸಿನಿಮಾದ ಬಗ್ಗೆ ಖುಷಿಯಿಂದ ಮಾತನಾಡಿದ್ದಾರೆ. “2014 ರಲ್ಲಿ ನನಗೆ ಕೋಮಲ್‌ ಅವರು “ನಮೋ ಭೂತಾತ್ಮ’ ಚಿತ್ರ ನಿರ್ದೇಶಿಸಲು ಅವಕಾಶ ನೀಡಿದ್ದರು. ಆನಂತರ ಈಗ “ನಮೋ ಭೂತಾತ್ಮ-2′ ಚಿತ್ರದಲ್ಲಿ ಅವರ ಜೊತೆ ಮಾಡಿದ್ದೇನೆ. ನನ್ನ ಅಕ್ಕನ ಮಗ ಸಂತೋಷ್‌ ಶೇಖರ್‌ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಕೊರೊನಾ ಸಮಯದಲ್ಲೇ ಈ ಚಿತ್ರದ ಕಥೆ ಸಿದ್ಧ ಮಾಡಿಕೊಂಡಿದ್ದೆ. ಆ ನಂತರ ಕೋಮಲ್‌ ಅವರಿಗೆ ನಾನು ಹಾಗೂ ಸಂತೋಷ್‌ ಹೋಗಿ ಈ ಚಿತ್ರದ ಕಥೆ ಹೇಳಿದ್ದೆವು. ಕೋಮಲ್‌ ಅವರು ನಟಿಸಲು ಒಪ್ಪಿದರು.

ಚಿತ್ರಕ್ಕೆ “ನಮೋ ಭೂತಾತ್ಮ-2′ ಎಂದು ಹೆಸರಿಟ್ಟೆವು’ ಎನ್ನುವುದು ಮುರಳಿ ಮಾತು. ಚಿತ್ರದಲ್ಲಿ ಲೇಖಾ ಚಂದ್ರ, ವರುಣ್‌ ರಾಜ್‌ ಸೇರಿದಂತೆ ಅನೇಕರು ನಟಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next