Advertisement

ಉಸುಳಿ-ಮಿಸಳ್‌ ಸವಿಯಲು ಬನ್ನಿ  ಸುವರ್ಣ ಮಂದಿರಕ್ಕೆ

06:05 PM Mar 26, 2018 | |

ಸಣ್ಣ ಓಣಿಯ ಮಧ್ಯೆ ಹೋಟೆಲ್‌ನ ಪ್ರವೇಶ ದ್ವಾರವಿದೆ. ಒಳ ಪ್ರವೇಶಿಸಿದರೆ ತಪ್ಪಿ ಎಲ್ಲಿ ದೇವಾಲಯ ಪ್ರವೇಶಿಸಿದೆವೋ ಎಂದು
ಭಾಸವಾಗುತ್ತದೆ. ಮಹಡಿಗೆ ಮಣ್ಣಿನ ಚಾವಣಿಯಿರುವುದರಿಂದ ಯಾವಾಗಲೂ ತಂಪಾದ ವಾತಾವರಣ.  ಸಾಲು ಸಾಲು ಕಂಬಗಳಿದ್ದು, ಅಲ್ಲಿರುವ ವರಾಂಡದಲ್ಲಿ ಕುಳಿತು ಮರಳು ಮರಳಾದ ಉಪ್ಪಿಟ್ಟು, ಮೃದು ಇಡ್ಲಿ, ಹೂವಿನಂಥ ಮಸಾಲೆ ದೋಸೆ, ಮೆತ್ತನೆಯ ಪೂರಿ ತಿನ್ನಬಹುದು.

Advertisement

ಸುತ್ತಲೂ ಗಿಜುಗುಟ್ಟುವ ಮಾರುಕಟ್ಟೆಯ ಮಧ್ಯೆ ಹಳೇ ಕಂಬದ ಮನೆ. ಆ ಮನೆಯಲ್ಲೊಂದು ಹೋಟೆಲ್‌. ಹೋಟೆಲ್‌ ಎನ್ನುವುದಕ್ಕಿಂತ 
ಬಹುತೇಕರ ಪಾಲಿಗೆ ಇದೊಂದು ಮನತಣಿಸುವ ತಾಣ. ಇನ್ನು ಇಲ್ಲಿ ಮಾಡುವ ಉಸುಳಿ ಹಾಗೂ ಮಿಸಳ್‌ ಖಾದ್ಯ ಅವಳಿ ನಗರಕ್ಕೆ ಫೇಮಸ್ಸು. ರುಚಿಗೋ, ಆರೋಗ್ಯಕ್ಕೋ ಅಥವಾ ಸಮಾಧಾನಕ್ಕೋ ದಿನಕ್ಕೊಮ್ಮೆ ಇಲ್ಲಿಗೆ ಬಂದು ಏನನ್ನಾದರೂ ತಿಂದು ಹೋಗದಿದ್ದರೆ ಕೆಲವರಿಗೆ ಸಮಾಧಾನವೇ ಇರುವುದಿಲ್ಲ. ಹೌದ್ರಿ , ಹುಬ್ಳಿ ನಗರದ ಮಧ್ಯದ ದುರ್ಗದ ಬೈಲ್‌ ಹತ್ತಿರ ಇರೋ ಸುವರ್ಣ ಮಂದಿರ
ಹೋಟೆಲ್ಲೇ ಇದು. 

ಸುಮಾರು 80 ವರ್ಷಗಳ ಇತಿಹಾಸವಿರುವ ಈ ಹೋಟೆಲ್‌ಗೆ 70 ವರ್ಷಗಳಷ್ಟು ಹಳೆಯ ಗ್ರಾಹಕರಿದ್ದಾರೆ. ಅವರು 8-10 ವರ್ಷ
ವಯಸ್ಸಿನವರಿದ್ದಾಗಿನಿಂದಲೂ ಇಲ್ಲಿಗೆ ತಿಂಡಿ ತಿನ್ನಲು ಬರುತ್ತಿದ್ದರಂತೆ. ಅಂದಿನಿಂದ ಇಂದಿನವರೆಗೂ ಇಲ್ಲಿನ ಎಲ್ಲ ತಿಂಡಿಗಳು
ಗ್ರಾಹಕರ ಅಚ್ಚುಮೆಚ್ಚು. ಕುಮಟಾ ಮೂಲದ ವೆಂಕಟರಮಣ ಶಂಭು ಭಟ್ಟ ಎಂಬುವವರು ಈ ಸುವರ್ಣ ಮಂದಿರ ಹೋಟೆಲ್‌ ಆರಂಭಿಸಿದ್ದು, ಅವರ ನಂತರ ಅವರ ಕುಟುಂಬದ ಮೂರನೇ ತಲೆಮಾರಿನ ಪ್ರಕಾಶ ಭಟ್ಟ ಅವರು ಈಗ ಸಾರಥ್ಯ ವಹಿಸಿದ್ದಾರೆ. ಇಲ್ಲಿ ಜಗಮಗಿಸುವ ಕಟ್ಟಡ, ಆಕರ್ಷಕ ಕುರ್ಚಿ ಟೇಬಲ್‌ಗ‌ಳಿಲ್ಲ. ಹಳೆಯ ಕಟ್ಟಡದಲ್ಲಿ ಹಳೆಯ ಪೀಠೊಪಕರಣಗಳೊಂದಿಗೆ ಸಾಂಪ್ರದಾಯಕ ಶೈಲಿಯ ಖಾದ್ಯಗಳನ್ನೇ ಸಿದ್ಧಪಡಿಸಲಾಗುತ್ತದೆ. 

ಸಣ್ಣ ಓಣಿಯ ಮಧ್ಯೆ ಹೋಟೆಲ್‌ನ ಪ್ರವೇಶ ದ್ವಾರವಿದೆ. ಒಳ ಪ್ರವೇಶಿಸಿದರೆ ತಪ್ಪಿ ಎಲ್ಲಿ ದೇವಾಲಯ ಪ್ರವೇಶಿಸಿದೆವೋ ಎಂದು ಭಾಸವಾಗುತ್ತದೆ. ಮಹಡಿಗೆ ಮಣ್ಣಿನ ಚಾವಣಿಯಿರುವುದರಿಂದ ಯಾವಾಗಲೂ ತಂಪನೆಯ ವಾತಾವರಣವಿದೆ. ಸಾಲು ಸಾಲು
ಕಂಬಗಳಿದ್ದು, ಅಲ್ಲಿರುವ ವರಾಂಡದಲ್ಲಿ ಕುಳಿತು ಗ್ರಾಹಕರು ತಿಂಡಿ ತಿನ್ನಬಹುದು. ಮೊದಲು ಕೈಕಾಲು ತೊಳೆದು ಒಳಬರುವ ಪದ್ದತಿ ಇದ್ದು, ಅದರೆ ಈಗ ಕೆಲ ಹಿರಿಯ ಗ್ರಾಹಕರು ಆದನ್ನು ಪಾಲಿಸುತ್ತಾರೆ. ಮರಳು ಮರಳಾದ ಉಪ್ಪಿಟ್ಟು, ಮೃದು ಇಡ್ಲಿ, ಹೂವಿನಂತ ಮಸಾಲೆ ದೋಸೆ, ಮೆತ್ತನೆಯ ಪೂರಿ ಜತೆಗೆ ಸಾಂಪ್ರದಾಯಕ ಉಸುಳಿ, ಮಿಸಳ್‌, ಪಾತಾಳ್‌ ಬಾಜಿ, ವಗ್ಗರಣೆ ಅವಲಕ್ಕಿ, ಮೊಸರನ್ನ ಗ್ರಾಹಕರ ಫೇವರಿಟ್‌.ಮಡಿಕೆ ಕಾಳು ನೆನೆಸಿ ಅವು ಮೊಳಕೆ ಬಂದ ನಂತರ ಒಣಕೊಬ್ಬರಿಯೊಂದಿಗೆ ವಿವಿಧ ಮಸಾಲೆ ಹಾಕಿ ಕೊನೆಗೊಂದಿಷ್ಟು ಒಗ್ಗರಣೆ ಕೊಟ್ಟರೇ ಉಸುಳಿ ತಯಾರ್‌.  

ಪೂರಿ ಹಾಗೂ ದೋಸೆಗೆ ಇದು ಒಳ್ಳೆ ಭಾಜಿ(ಪಲ್ಯ) ಕೂಡ. ಈ ಉಸುಳಿಗೇ ಒಂದು ಈರುಳ್ಳಿ ಬಜ್ಜಿ ಇಟ್ಟು, ಮೇಲೊಂದಿಷ್ಟು ಹೆಚ್ಚಿದ ಈರುಳ್ಳಿ, ಕೊತ್ತಂಬರಿ ಸೊಪ್ಪು ಹಾಗೂ ಸೇವ್‌ ಹಾಕಿಕೊಟ್ಟರೇ ಅದೇ ಮಿಸಳ್‌. ಇದರ ಜತೆಗೆ ವಿವಿಧ ಬಗೆಯ ವಿಶೇಷ ಮಿಸಳ್‌ಗಳನ್ನು ಇಲ್ಲಿ ಮಾಡಲಾಗುತ್ತದೆ. ಒಂದು ಪ್ಲೇಟ್‌ ಉಸುಳಿಗೆ 20 ರೂ. ಹಾಗೂ ಮಿಸಳ್‌ಗೆ 25ರೂ. ದರವಿದ್ದು, ಸಂಜೆ ಸಮಯದಲ್ಲೇ
200ಕ್ಕೂ ಹೆಚ್ಚು ಪ್ಲೇಟ್‌ ಖಾಲಿಯಾಗುತ್ತದೆ ಎನ್ನುತ್ತಾರೆ ಮಾಲೀಕ ಪ್ರಕಾಶ್‌ ಭಟ್ಟರು. ಇದಲ್ಲದೇ ಅಲ್ಲಿ ಮಾಡುವ ಮೊಸರನ್ನ,
ಅದರೊಟ್ಟಿಗೆ ಕೊಡುವ ಚಟ್ನಿ ಪುಡಿ, ಆಲೂಗಡ್ಡೆ ಹಾಗೂ ಬಟಾಣಿ ಹಾಕಿ ಮಾಡುವ ಪಾತಾಳ್‌ ಬಾಜಿ ಗ್ರಾಹಕರ ಅಚ್ಚು ಮೆಚ್ಚು. ಬೆಳಗ್ಗೆ 8.30 ರಿಂದ ಮಧ್ಯಾಹ್ನ 2 ಹಾಗೂ ಸಂಜೆ 4ರಿಂದ ರಾತ್ರಿ 8ಗಂಟೆ ವರೆಗೂ ಈ ಹೋಟೆಲ್‌ ತೆರೆದಿರುತ್ತದೆ. ಇಲ್ಲಿ ಖುದ್ದು ಮಾಲೀಕರೇ ಗ್ರಾಹಕರ ಬಳಿ ಬಂದು ಪ್ರೀತಿಯಿಂದ ಮಾತನಾಡಿಸಿ ಆರ್ಡರ್‌ ಪಡೆಯುತ್ತಾರೆ. ಇಲ್ಲಿನ ವಾತಾವರಣ ಮನೆಯ ಅನುಭವದ ಜತೆ
ಮನಸ್ಸಿಗೆ ಶಾಂತಿ ನೀಡುತ್ತದೆ. ಯಾವುದೇ ರಾಸಾಯನಿಕ ಪದಾರ್ಥ ಬಳಸದೇ ಶುಚಿತ್ವದ ಜೊತೆಗೆ ಆರೋಗ್ಯಕರ ಸಾಂಪ್ರದಾಯಿಕ ಆಹಾರ ಸಿಗುವುದರಿಂದ ನಗರದ ಎಲ್ಲಾ ಹೋಟೆಲ್‌ ಬಿಟ್ಟು ಇಲ್ಲಿಗೇ ಬರುತ್ತೇವೆ ಎನ್ನುತ್ತಾರೆ ಗ್ರಾಹಕರಾದ ದಂತ ವೈದ್ಯೆ
ಡಾ| ವಿಜಯಲಕ್ಷ್ಮೀ. ಅಡುಗೆಗೆ ಯಾವುದೇ ಸಿದ್ಧ ಮಾದರಿಯ ಪದಾರ್ಥಗಳನ್ನು ಬಳಸದೇ ಇರುವುದು ಹಾಗೂ
ಮಾಲೀಕರೇ ವಂಶಪಾರಂಪರ್ಯವಾಗಿ ಬಂದ ವಿಧಾನ ಬಳಸಿ ಅಡುಗೆ ತಯಾರಿಸುವುದು ಇಲ್ಲಿನ ರುಚಿಯ ಗುಟ್ಟು. 

Advertisement

ಹಳೆಯ ಹೊಸ ದರಪಟ್ಟಿ
ಪ್ರಸ್ತುತ ಖಾದ್ಯ ಹಾಗೂ ದರಪಟ್ಟಿಯ ಜೊತೆಗೆ 1965ರ ಖಾದ್ಯ ಹಾಗೂ ದರಪಟ್ಟಿಯನ್ನು ಅಂಗಡಿಯಲ್ಲಿ ನೇತು ಹಾಕಿದ್ದು,
ಅವೆರಡರಲ್ಲೂ ಬಹುತೇಕ ಒಂದೇ ಖಾದ್ಯಗಳಿದ್ದು, ದರ ಮಾತ್ರ ಪೈಸೆಗಳಿಂದ ರೂಪಾಯಿಗೆ ಏರಿದೆ. ಅಂದು ಮಿಸಳ್‌ಗೆ 20 ಪೈಸೇ ಇದ್ದರೇ ಇಂದು ಅದು 25 ರೂ. ಆಗಿದೆ. ಇಲ್ಲಿ ಸಿಗುವ ಮಿಸಳ್‌ ಹುಡುಕಿಕೊಂಡು ಸಿನಿಮಾ ನಟರಾದ ಶರಣ್‌ ಹಾಗೂ ಶ್ರುತಿ 
ಕುಟುಂಬದವರು ಆಗಾಗ ಅಂಗಡಿಗೆ ಬರುತ್ತಾರೆ. ಸಾಹಿತಿ ಜಯಂತ್‌ ಕಾಯ್ಕಿಣಿಯವರೂ ಒಮ್ಮೆ ಇಲ್ಲಿಗೆ ಬಂದು ರುಚಿ ನೋಡಿದ್ದಾರೆ. ಇನ್ನು ರಾಜಕಾರಣಿಗಳಾದ ಜಗದೀಶ್‌ ಶೆಟ್ಟರ್‌ ಹಾಗೂ ಎಚ್‌.ಕೆ. ಪಾಟೀಲರಿಗೆ ಆಗಾಗ ಇಲ್ಲಿಂದ ಪಾರ್ಸಲ್‌
ಹೋಗುತ್ತಿರುತ್ತದೆ. 

 ಜಯಪ್ರಕಾಶ್‌ ಬಿರಾದಾರ್‌ 

Advertisement

Udayavani is now on Telegram. Click here to join our channel and stay updated with the latest news.

Next