Advertisement

ಮುಲ್ಲಾ ಡಾಬಾಕ್ಕೆ ಬನ್ರೀ…

06:43 PM May 19, 2019 | mahesh |

ಈ ಡಾಬಾದಲ್ಲಿ ಸಿಗುವ ಶಾವಿಗೆ ಖೀರು ತಿನ್ನುವುದಕ್ಕೆ ಲಾರಿ ಡ್ರೈವರ್‌ಗಳು ಮಾತ್ರವಲ್ಲ, ಲಾರಿಯ ಮಾಲೀಕರು ಕೂಡ ಬರುವುದುಂಟು. ಇನ್ನು, ಇಲ್ಲಿ ಸಿಗುವ ಚಿಕನ್‌, ಮಟನ್‌, ಕಬಾಬ್‌ ತಿನ್ನಲೆಂದೇ ಬರುವ ಲಾರಿ ಡ್ರೈವರ್‌ಗಳೂ ಇದ್ದಾರೆ. ವಿಶೇಷ ಎಂದರೆ ಈ ಡಾಬಾದಲ್ಲಿ ಊಟ ಮಾಡಿ, ವಿಶ್ರಾಂತಿ ಪಡೆಯಲೂ ಎಲ್ಲಾ ಸೌಕರ್ಯಗಳುಂಟು. ಹೀಗಾಗಿಯೇ, ಧಾರವಾಡದ ಮುಲ್ಲಾ ಡಾಬಾ ಕಳೆದ ಐದು ದಶಕಗಳಿಂದಲೂ ಪೂನಾ-ಬೆಂಗಳೂರು ರಸ್ತೆಯಲ್ಲಿ ಸಂಚರಿಸುವ ಲಾರಿ ಡ್ರೈವರ್‌ಗಳ ನೆಚ್ಚಿನ ಊಟದ ತಾಣ ಆಗಿದೆ.

Advertisement

ಧಾರವಾಡ ಮತ್ತು ಕಿತ್ತೂರು ನಡುವೆ ತೇಗೂರು ಗ್ರಾಮದ ಸರಹದ್ದಿನಲ್ಲಿ ಈ ಡಾಬಾ ಇದೆ. ಅಲ್ಲಿ ಸಿಗುವ ರುಚಿ ರುಚಿಯಾದ ಊಟ, ಲಾರಿಗಳಲ್ಲಿ ಕಾಣಿಸಿಕೊಂಡ ಸಣ್ಣಪುಟ್ಟ ಯಾಂತ್ರಿಕ ದೋಷಗಳನ್ನು ಸರಿ ಮಾಡುವ ಗ್ಯಾರೇಜ್‌, ಮೆಕ್ಯಾನಿಕ್‌ಗಳು ಕೂಡ ಇಲ್ಲಿ ಲಭ್ಯ.

ಈ ಡಾಬಾಕ್ಕೆ ಪ್ರತಿ ನಿತ್ಯ 700-800 ಜನ ಬಂದು ಹೋಗುತ್ತಾರೆ. ಈ ಪೈಕಿ ಲಾರಿ ಚಾಲಕರೇ ಹೆಚ್ಚು. ಕಾರಣ, ಇಲ್ಲಿ ಬರುವ ಲಾರಿ ಚಾಲಕರಿಗೆ ಶೌಚಾಲಯ, ಸ್ನಾನ ಮಾಡಲು ಅಗತ್ಯ ವ್ಯವಸ್ಥೆ ಇದೆ. ವಿಶ್ರಾಂತಿ ಕೊಠಡಿ ಜೊತೆಗೆ ಪ್ರಾರ್ಥನೆ ಮಾಡಲು ಹಾಲ್‌ ಕೂಡ ನಿರ್ಮಿಸಿದ್ದಾರೆ. ಒಂದು ಪಕ್ಷ ಲಾರಿ ಕೆಟ್ಟು ನಿಂತಾಗ, ಚಾಲಕರಿಗೆ ಆರ್ಥಿಕ ಸಂಕಷ್ಟ ಎದುರಾದರೆ ಮನಿಟ್ರಾನ್ಸಫ‌ರ್‌ ರೀತಿಯ ಡಾಬಾ ಕೆಲಸ ಮಾಡುವುದುಂಟು.

ದಶಕಗಳ ರುಚಿಯ ನಂಟು
1978ರಲ್ಲಿ ಗೋರೆಸಾಬ ನಾಯಕ ಅವರು ಡಾಬಾ ಆರಂಭಿಸಿದಾಗ ಇದಕ್ಕೊಂದು ಹೆಸರೂ ಸಹ ಇರಲಿಲ್ಲ. ಗೋರೆಸಾಬ ಹಜ್‌ಯಾತ್ರೆಗೆ ಹೋಗಿ ಬಂದಿದ್ದರಿಂದ ಅವರಿಗೆ ಮುಲ್ಲಾ ಅಂತ ಕರೆದ ಜನರು ಮುಲ್ಲಾ ಡಾಬಾ ಎಂಬ ಹೆಸರೂ ಸಹ ಕೊಟ್ಟು ಬಿಟ್ಟರು. ಗೋರೆಸಾಬರ ಬಳಿಕ ಅವರ ಮಗ ಅಬ್ದುಲ್‌ ನಾಯಕ, ಈ ಡಾಬ ಮುನ್ನಡೆಸುತ್ತಿದ್ದಾರೆ.

ಇವರ ಮಾರ್ಗದರ್ಶನದಲ್ಲಿ ಅಳಿಯ ತೈಯಪೂರ ಅಹಮ್ಮದ ಉಡಿಕೇರಿ ಡಾಬ ನಿರ್ವಹಣೆ ಮಾಡುತ್ತಿದ್ದಾರೆ. ಆರು ಎಕರೆ ಪ್ರದೇಶದಲ್ಲಿ, ಮೂರು ಎಕರೆ ವಿಸ್ತಾರದ ಜಾಗವನ್ನು ಡಾಬಾ ಆವರಿಸಿಕೊಂಡಿದೆ. ಉಳಿದ ಜಾಗದಲ್ಲಿ ಲಾರಿ ನಿಲ್ಲಿಸಲು ಸ್ಥಳ, ಗ್ಯಾರೇಜ್‌ ಹಾಗೂ ಲಾರಿ ಚಾಲಕರಿಗಾಗಿ ಶೌಚಾಲಯ, ಸ್ನಾನದ ಮನೆ, ನೀರಿನ ಪೂರೈಕೆ, ವಿಶ್ರಾಂತಿ ಕೊಠಡಿಯ ಜೊತೆಗೆ ಪ್ರಾರ್ಥನಾ ಮಂದಿರವನ್ನೂ ಸಹ ನಿರ್ಮಿಸಲಾಗಿದೆ.

Advertisement

ಖೀರ್‌ ಕಮಾಲ್‌
ಇಲ್ಲಿ ಬೆಳಗ್ಗೆ 6 ರಿಂದ ರಾತ್ರಿ 1 ಗಂಟೆವರೆಗೂ ಊಟ ಸಿಗುತ್ತದೆ. ಬೆಳಗ್ಗೆ ಪರೋಟಾ ಹಾಗೂ ಮಧ್ಯಾಹ್ನದಿಂದ 10 ರೂ.ಗೆ ತಂದೂರಿ ರೊಟ್ಟಿ ಲಭ್ಯ. 40 ರೂ.ಗೆ ಸಿಗುವ ದಾಲ್‌ ಪ್ರೈ, ಖೀರ್‌ ಹೆಚ್ಚು ಜನಪ್ರಿಯ. ಉಳಿದಂತೆ ಸಸ್ಯಾಹಾರದಲ್ಲಿ ದಾಲ್‌ ಪ್ರೈ, ಮಡಕಿ, ಚೋಳಿ, ಬೈಗನ್‌ (ಬದನೇಕಾಯಿ), ಸಿಮಲಾ, ಅಕ್ಕ ಮಸೂರಿ, ಆಲೂ ಮಟರ್‌, ಆಲೂ ಗೋಬಿ, ಬೆಂಡಿ, ಚಲಾ ಹಾಗೂ ಮಾಂಸಾಹಾರದಲ್ಲಿ ಮಟನ್‌ ಪ್ರೈ, ಮಟನ್‌ ಮಸಾಲಾ, ಮಟನ್‌ ಡ್ರೈ, ಚಿಕನ್‌ ಡ್ರೈ, ಚಿಕನ್‌ ಮಸಾಲಾ, ಚಿಕನ್‌ ಕೊಲ್ಲಾಪೂರಿ ಈ ಡಾಬಾದ ವಿಶೇಷತೆ. ಇದಕ್ಕಾಗಿ ಪ್ರತಿ ದಿನ 15-20 ಕೆ.ಜಿ ಮಟನ್‌, 20-25 ಕೆ.ಜಿ ಚಿಕನ್‌, 12-15 ಕೆ.ಜಿ ದಾಲ್‌ ಸೇರಿದಂತೆ 4-5 ಕೆ.ಜಿಯಷ್ಟು ವಿವಿಧ ತರಕಾರಿಗಳು ಬಳಕೆಯಾಗುತ್ತವೆ. ಈ ಡಾಬದಲ್ಲಿ 25-30 ಜನ ಕೆಲಸ ಮಾಡುತ್ತಾ ಇದ್ದು, ಶುಚಿತ್ವಕ್ಕೆ ಹೆಚ್ಚು ಆದ್ಯತೆ ಕೊಡಲಾಗಿದೆ.

ಪ್ರಶಸ್ತಿಯ ಗರಿ
“ಬೆಸ್ಟ್‌ ಸರ್ವೀಸ್‌ ಆಫ್‌ ಹೈವೇ ಡಾಬ’ ಎಂಬ ಪ್ರಶಸ್ತಿಗೆ ಮುಲ್ಲಾ ದಾಬಾ ಭಾಜನವಾಗಿದ್ದು, ಮಾ.19ರಂದು ನವದೆಹಲಿಯ ಅಶೋಕ ಹೋಟೆಲ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಹೀಂದ್ರಾ ಕಂಪನಿ ಈ ಪ್ರಶಸ್ತಿ ನೀಡಿ ಗೌರವಿಸಿದೆ. “ನಮ್ಮ ಮಾಮಾ ಅಬ್ದುಲ್‌ ನಾಯಕ ಅವರ ಆಶಯದಂತೆ ಲಾರಿ ಚಾಲಕರ ಆರೋಗ್ಯವನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಉತ್ತಮ ಗುಣಮಟ್ಟದ ಊಟ ನೀಡುತ್ತಾ ಇದ್ದೇವೆ ತೈಯಪೂರ ಅಹ್ಮದ್‌ ಉಡಿಕೇರಿ.

ಶಶಿಧರ್‌ ಬುದ್ನಿ

Advertisement

Udayavani is now on Telegram. Click here to join our channel and stay updated with the latest news.

Next