ನಿರ್ಮಾಣ: ಶ್ರೀನಿವಾಸ್-ರಘುರಾಜ್
ನಿರ್ದೇಶನ: ಪ್ರಸನ್ನ ಶೆಟ್ಟಿ
ತಾರಾಗಣ: ಪವನ್, ರಘುರಾಜ್, ಸುನೀಲ್,ಮಮತಾ ರಾಹುತ್, ದೀಪ್ತಿ.
Advertisement
ಹಳ್ಳಿಯ ಮಕ್ಕಳೆಂದರೆ ಕೆಲಸ ಇಲ್ಲದೇ ತಿರುಗುವವರು, ಊರಕಟ್ಟೆಯಲ್ಲಿ ಕುಳಿತು ಹರಟೆಹೊಡೆಯುವವರು, ಪೋಲಿ ಕೆಲಸ ಮಾಡುತ್ತಾ, ಮನೆಗೆ ಭಾರವಾಗಿರುವವರು ಎಂಬ ಕಾನ್ಸೆಪ್ಟ್ ಯಾಕೋ ನಮ್ಮ ಚಿತ್ರರಂಗದಲ್ಲಿ ಇನ್ನೂ ಬದಲಾಗುತ್ತಲೇ ಇಲ್ಲ. ಹಳ್ಳಿಗಳು ಅಭಿವೃದ್ಧಿ ಪಥದತ್ತ ಸಾಗುತ್ತಿದ್ದರೂ ನಿರ್ದೇಶಕರ ಯೋಚನೆಗಳು ಬದಲಾಗುತ್ತಿಲ್ಲ. ಹಾಗಾಗಿಯೇ ಗ್ರಾಮೀಣ ಸೊಗಡಿನ ಚಿತ್ರವೆಂದು ಹೇಳಿಕೊಂಡು ಬರುವ ಚಿತ್ರಗಳೆಲ್ಲವೂ ಪಟಾಪಟಿ ಚಡ್ಡಿ, ಮೋಟು ಬೀಡಿ ಹಾಗೂ ಪೋಲಿ ಡೈಲಾಗ್‌ಗಳಿಗಷ್ಟೇ ಸೀಮಿತವಾಗುತ್ತಿವೆ. “ನಮ್ಮೂರ ಹೈಕ್ಳು’ ಚಿತ್ರ ಕೂಡಾ ಅದೇ ಸಾಲಿಗೆ ಸೇರುವ ಸಿನಿಮಾ. ಈ ಸಿನಿಮಾದಲ್ಲಿ ಏನಿದೆ ಎಂದರೆ ಹೊಸದಾಗಿ ಹೇಳುವಂಥದ್ದೇನೂ ಇಲ್ಲ. ಈಗಾಗಲೇ ಸಾಕಷ್ಟು ಸಿನಿಮಾಗಳಲ್ಲಿ ಬಂದಿರುವ ಹಳ್ಳಿ ಹೈದರ ತುಂಟತನ, ದೋಸ್ತಿ ಹಾಗೂ ಗ್ಯಾಪಲ್ಲಿ ಊರೂದ್ಧಾರ ಮಾಡುವ ಕನಸು ಇಲ್ಲೂ ರಿಪೀಟ್ ಆಗಿದೆ.
Related Articles
Advertisement
ಚಿತ್ರದಲ್ಲಿ ಒಳ್ಳೆಯ ವಿಚಾರವೇ ಇಲ್ಲವೆಂದಲ್ಲ. ಮನೆಗೊಂದು ಶೌಚಾಲಯ, ಪ್ರಾಣಿ ಹಿಂಸೆಗೆ ಕಡಿವಾಣ, ವಿಧವಾ ವಿವಾಹ … ಇಂತಹ ಅಂಶಗಳಿವೆ. ಆದರೆ, ಅವೆಲ್ಲವನ್ನು ಹೈಕ್ಳ “ಓವರ್’ ಕಾಮಿಡಿ ಮರೆಮಾಚಿದೆ. ಚಿತ್ರದಲ್ಲಿ ಪವನ್, ರಘುರಾಜ್, ಸುನೀಲ್, ಮಮತಾ ರಾಹುತ್, ದೀಪ್ತಿ ಸೇರಿದಂತೆ ಅನೇಕರು ನಟಿಸಿದ್ದಾರೆ. ಇವರೆಲ್ಲರೂ ಆಗಾಗ ಆ್ಯಕ್ಟಿಂಗ್ ಹಾಗೂ ಇನ್ನು ಕೆಲವೊಮ್ಮೆ ಓವರ್ ಆ್ಯಕ್ಟಿಂಗ್ ಮಾಡುತ್ತಾ ಪಾತ್ರದಲ್ಲಿ ಮಿಂಚಲು ಪ್ರಯತ್ನಿಸಿದ್ದಾರೆ.
ಮಮತಾ ರಾಹುತ್ ಅವರ ಖಡಕ್ ಸಾವಿತ್ರಿ ಪಾತ್ರ ಲುಂಗಿ ಉಟ್ಟುಕೊಂಡು ಬೀಡಿ ಸೇದುತ್ತದೆ. ಅದ್ಯಾವ ಊರಲ್ಲಿ ಹೆಣ್ಣು ಮಕ್ಕಳು ಲುಂಗಿ ಉಟ್ಟುಕೊಂಡು ಓಡಾಡುತ್ತಾರೋ ಗೊತ್ತಿಲ್ಲ. ಕಲ್ಪನೆ ನೈಜತೆಗೆ ಹತ್ತಿರವಾಗಿದ್ದರೆ ಚೆಂದ. ಚಿತ್ರದಲ್ಲಿ ನಟಿಸಿದ ಸತ್ಯಜಿತ್ ಹಾಗೂ ಸುಚೇಂದ್ರ ಪ್ರಸಾದ್ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ
ರವಿಪ್ರಕಾಶ್ ರೈ