Advertisement

ಮತ್ತೆ ಬಂತು ನಮ್ಮೂರ ಹಬ್ಬ

01:46 AM Feb 09, 2019 | |

ದೂರದೂರಿನಿಂದ ಬೆಂಗಳೂರಿಗೆ ಬಂದವರು ಕ್ರಮೇಣ ಇಲ್ಲಿನವರೇ ಆಗಿ ಬಿಡುತ್ತಾರೆ. ಇಲ್ಲಿನ ಸಂಸ್ಕೃತಿ, ಜೀವನಶೈಲಿಗೆ ಒಗ್ಗಿಕೊಳ್ಳುತ್ತಾರೆ. ಬದುಕು ಕಟ್ಟಿಕೊಳ್ಳುತ್ತಾರೆ. ಅಷ್ಟಾದರೂ, ಹುಟ್ಟೂರಿನ ನೆನಪು ಅವರನ್ನು ಬಿಡುವುದಿಲ್ಲ. ರೆಂಬೆಗಳು ಆಕಾಶಕ್ಕೆ ಚಾಚಿದ್ದರೂ, ಬೇರು ನೆಲದಲ್ಲಿಯೇ ಭದ್ರವಾಗಿರುತ್ತದಲ್ಲ, ಹಾಗೆ. ಎದೆಯಲ್ಲಿ ಬೆಚ್ಚಗಿರುವ ಊರ ನೆನಪನ್ನು, ಅಲ್ಲಿನ ಸಂಸ್ಕೃತಿಯನ್ನು ಮೆಲುಕು ಹಾಕುವ, ಪಸರಿಸುವ ಪ್ರಯತ್ನ ಮಾಡುತ್ತಾರೆ. ಅಂಥದ್ದೊಂದು ಸಾರ್ಥಕ ಪ್ರಯತ್ನವೇ, ಕರಾವಳಿ ಕನ್ನಡಿಗರು ಹಮ್ಮಿಕೊಂಡಿರುವ “ನಮ್ಮೂರ ಹಬ್ಬ’ ಉತ್ಸವ.

Advertisement

ಇಂದು ಬೆಂಗಳೂರಿನಲ್ಲಿ ಸುಮಾರು 15 ಲಕ್ಷ ಕರಾವಳಿಯ ಜನರಿದ್ದಾರೆ. ಅವರೆಲ್ಲರ ಸಾಂಸ್ಕೃತಿಕ ಪ್ರತಿನಿಧಿಯಂತಿರುವ “ಅಭಿನಂದನ ಸಾಂಸ್ಕೃತಿಕ ಟ್ರಸ್ಟ್‌’, ಎಲ್ಲ ಕರಾವಳಿಗರನ್ನು ಒಂದೇ ಸೂರಿನಡಿ ಸೇರಿಸುವ, ಆ ಮೂಲಕ ತಮ್ಮತನವನ್ನು ಸಂಭ್ರಮಿ ಸುವ ಉದ್ದೇಶದಿಂದ ಕಳೆದ ಐದು ವರ್ಷಗಳಿಂದ “ನಮ್ಮೂರ ಹಬ್ಬ’ವನ್ನುನಡೆಸುತ್ತಿದೆ. ಎರಡು ದಿನಗಳ ಈ ಹಬ್ಬದಲ್ಲಿ, ಕರಾವಳಿಯ ಸಂಸ್ಕೃತಿ, ಜನಪದ ಆಚರಣೆ, ಕ್ರೀಡೆ, ಜೀವನಶೈಲಿಯ ಶ್ರೀಮಂತಿಕೆ, ಕರಾವಳಿ ಖಾದ್ಯ ವೈವಿಧ್ಯಗಳ ಪರಿಚಯವಾಗಲಿವೆ. ಎರಡೂ ದಿನ ಸಂಜೆ ಮುಖ್ಯ ವೇದಿಕೆಯಲ್ಲಿ ಹೆಸರಾಂತ ಕಲಾವಿದರು ಮತ್ತು ಕಲಾ ತಂಡಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.

“ಧೀಂ ಕಿಟ’ ಜುಗಲ್‌ಬಂದಿ
ಶನಿವಾರ ಸಂಜೆಯ ಮುಖ್ಯ ಆಕರ್ಷಣೆಯಾಗಿ “ಬೀಟ್‌ ಗುರೂಸ್‌’ ತಂಡದಿಂದ ಪಾಶ್ಚಾತ್ಯ ಹಾಗೂ ಕರಾವಳಿ ವಾದ್ಯಗಳ ವಿಭಿನ್ನ ಜುಗಲ್‌ಬಂದಿ ನಡೆಯಲಿದೆ.

ಬನ್ನಂಜೆ ಸಂಜೀವ ಸುವರ್ಣ ಅವರ ಸಾರಥ್ಯದಲ್ಲಿ ಯಕ್ಷಕೇಂದ್ರ ಉಡುಪಿಯವರಿಂದ “ಯಕ್ಷ ಪದ ಧ್ವನಿ’, ಪ್ರಶಾಂತ್‌ ಅಂಡ್‌ ಗ್ರೂಪ್‌ ಕಡಿಯಾಳಿ ಅವರಿಂದ ನೃತ್ಯೋತ್ಸವ, ಸಂಗೀತ ನಿರ್ದೇಶಕ ಪ್ರವೀಣ್‌ ಡಿ. ರಾವ್‌ ನೇತೃತ್ವದಲ್ಲಿ, ಜನಪ್ರಿಯ ಭಾವಗೀತೆ ಹಾಗೂ ಚಿತ್ರಗೀತೆಗಳ “ಸಂಗೀತ ಸಂಜೆ’ ನಡೆಯಲಿದೆ. ಗಾನಲೋಕದ ರಾಯಭಾರಿಗಳಾಗಿ ಸುಪ್ರಿಯಾ ರಘುನಂದನ್‌, ವಿನಯ್‌ ನಾಡಿಗ್‌, ವಾರಿಜಾಶ್ರೀ ವೇಣುಗೋಪಾಲ್‌,ಗಣೇಶ್‌ ಕಾರಂತ್‌ ಹಾಗೂ ಅಖೀಲಾ ಪಜಿಮಣ್ಣು ಭಾಗವಹಿಸಲಿದ್ದಾರೆ. 

ನಗೆ ಹನಿ, ರ್ಯಾಪ್‌ ದನಿ…ಭಾನುವಾರ ಸಂಜೆಯ ಕಾರ್ಯಕ್ರಮದಲ್ಲಿ, ಕನ್ನಡ ರ್ಯಾಪರ್‌ ಚಂದನ್‌ ಶೆಟ್ಟಿ ಗಾಯನ ಹಾಗೂ ಮನು ಹಂದಾಡಿಯವರ “ನಗೆ ಅಟ್ಟುಳಿ’ ಕಾರ್ಯಕ್ರಮ ಕಚಗುಳಿ ಇಡಲಿವೆ. “ಮೆಲ್ಲೋ ಟ್ರೀ’ಯವರ ಸಂಯೋಜನೆಯಲ್ಲಿ ಅನನ್ಯ ಭಟ್‌, ಅನಿರುದ್ಧ ಶಾಸಿŒ, ಮೈತ್ರಿ ಅಯ್ಯರ್‌, ರಚನಾ ಚಂದ್ರಶೇಖರ್‌, ಲಿಖೀತ್‌ ಕರ್ಕೇರ ಅವರಿಂದ ಗಾಯನ, ರಾಧಾಕೃಷ್ಣ ಉರಾಳ ಮತ್ತು ತಂಡದವರಿಂದ ಯಕ್ಷ ನೃತ್ಯ ರೂಪಕ ನಡೆಯಲಿವೆ. 

Advertisement

ಕರಾವಳಿ ಸ್ಟೈಲಲ್ಲಿ ಚಾಲನೆ
ಶನಿವಾರ ಬೆಳಗ್ಗೆ 10.30ಕ್ಕೆ ಖ್ಯಾತ ಯಕ್ಷಗುರು ಬನ್ನಂಜೆ ಸಂಜೀವ ಸುವರ್ಣ ಅವರು, ಕರಾವಳಿಯ ಸಾಂಪ್ರದಾಯಿಕ ಶೈಲಿಯಲ್ಲಿ ಹಬ್ಬವನ್ನು ಉದ್ಘಾಟಿಸಲಿದ್ದಾರೆ. ಸಚಿವ ಡಿ.ಕೆ. ಶಿವಕುಮಾರ್‌ ಅಧ್ಯಕ್ಷತೆ ವಹಿಸಲಿದ್ದು, ಶಾಸಕ ಮುನಿರತ್ನ ನಾಯ್ಡು, ಬಿಬಿಎಂಪಿ ಸದಸ್ಯೆ ನಳಿನಿ ಮಂಜುನಾಥ್‌, ಕ್ರೀಡಾಪಟು ರೋಹಿತ್‌ ಹೆಗ್ಡೆ ಎರ್ಮಾಳು, ಡೈರಿ ಡೇ ಐಸ್‌ಕ್ರೀಂ ನಿರ್ದೇಶಕ ಸಿ.ಕೆ.ಚಂದ್ರಶೇಖರ್‌ ಹಾಗೂ ಇತರ ಗಣ್ಯರು ಭಾಗವಹಿಸಲಿದ್ದಾರೆ.

ಕಾಯ್ಕಿಣಿಗೆ ಕಿರೀಟ
ಅಭಿನಂದನಾ ಸಾಂಸ್ಕೃತಿಕ ಟ್ರಸ್ಟ್‌ ವತಿಯಿಂದ ನೀಡಲಾಗುವ “ಕಿರೀಟ ಪ್ರಶಸ್ತಿ’ ಈ ಬಾರಿ, ಸಾಹಿತಿ ಜಯಂತ್‌ ಕಾಯ್ಕಿಣಿ ಹಾಗೂ ಯಕ್ಷಕೇಂದ್ರ ಉಡುಪಿಯ ಮುಡಿಗೇರಲಿದೆ.

ಶನಿವಾರ ಸಂಜೆ ನಡೆಯುವ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ, ಸಚಿವ ಯು.ಟಿ. ಖಾದರ್‌, ವಿಧಾನ ಪರಿಷತ್‌ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ, ಪತ್ರಕರ್ತ ಜೋಗಿ, ಸಿನಿಮಾ ನಿರ್ದೇಶಕ ಯೋಗರಾಜ್‌ ಭಟ್‌, ನಟ/ನಿರ್ದೇಶಕ ರಿಷಭ್‌ ಶೆಟ್ಟಿ, ಬಿಗ್‌ಬಾಸ್‌ ಸ್ಪರ್ಧಿಗಳಾದ ಧನರಾಜ್‌, ನವೀನ್‌ ಸಜ್ಜು ಹಾಗೂ ಇತರರು ಉಪಸ್ಥಿತರಿರಲಿದ್ದಾರೆ.

ನಮ್ಮೂರ ಸಂತೆ: ಕರಾವಳಿಯಿಂದ ಬಂದ ತಾಜಾ ತರಕಾರಿಗಳು, ಅಪರೂಪದ ಗೃಹೋಪಯೋಗಿ ವಸ್ತುಗಳ ಪ್ರದರ್ಶನ ಮತ್ತು ಮಾರಾಟ.

ಆಟ ಆಡೋಕೆ ಬನ್ನಿ: ಹಬ್ಬಕ್ಕೆ ಬಂದವರು, ಮೈದಾನಕ್ಕಿಳಿದು ಆಟವನ್ನೂ ಆಡಬಹುದು. ವಯಸ್ಕರಿಗಾಗಿ ಹಗ್ಗ ಜಗ್ಗಾಟ, ದಂಪತಿಗಳಿಗೆ ಪ್ರತ್ಯೇಕ ಕ್ರೀಡೆಗಳು ನಡೆಯಲಿವೆ. ಕಂಬಳ, ದೋಣಿ ಓಟದಂಥ ಅಪರೂಪದ ಆಟಗಳ ಸಾಂಕೇತಿಕ ಪ್ರದರ್ಶನವನ್ನೂ ಹಮ್ಮಿಕೊಳ್ಳಲಾಗಿದೆ. ಮಕ್ಕಳಿಗಾಗಿ
ಚಿತ್ರಕಲಾ ಸ್ಪರ್ಧೆ ಇರಲಿದೆ.

ಫೋಟೋ ಸಂತೆ: ಕರಾವಳಿಯ ವೈವಿಧ್ಯಮಯ ಸಂಸ್ಕೃತಿಯನ್ನು
ಬಿಂಬಿಸುವ ಛಾಯಾಚಿತ್ರಗಳ ಅನಾವರಣ
 

ಒಂದ್‌ ಸೆಲ್ಫಿ ಪ್ಲೀಸ್‌: ಸೆಲ್ಫಿ ತೆಗೆಯದೆ ಹಬ್ಬ ಮಾಡೋಕಾಗುತ್ತಾ? ಸೆಲ್ಫಿà ಪ್ರಿಯರಿಗಾಗಿಯೇ ವಿಶೇಷ ಕಲಾಕೃತಿಗಳು ಇರಲಿದ್ದು, ಪಕ್ಕ ನಿಂತು
ಪೋಸ್‌ ಕೊಟ್ಟು ಸೆಲ್ಫಿ ಕ್ಲಿಕ್ಕಿಸಿಕೊಳ್ಳಬಹುದು.

ಕರಾವಳಿಯ ಹೆಮ್ಮೆಯ ಜನಪದ ಕ್ರೀಡೆ ಕಂಬಳ. ಈ ಬಾರಿಯ “ನಮ್ಮೂರ ಹಬ್ಬ’ದಲ್ಲಿ ಸಾಂಕೇತಿಕವಾಗಿ ಕಂಬಳದ ಓಟ ನಡೆಯಲಿದೆ. ಮನುಷ್ಯರೇ ಮುಖವಾಡ ಧರಿಸಿ ಕಂಬಳದ ಓಟದಲ್ಲಿ ಪಾಲ್ಗೊಳ್ಳಲಿದ್ದಾರೆ. ಜನಮನದಿಂದ ಮರೆಯಾಗುತ್ತಿರುವ ಜನಪದ ಕ್ರೀಡೆಗಳನ್ನು ನಗರವಾಸಿಗಳಿಗೆ ಪರಿಚಯಿಸುವ, ಆ ಮೂಲಕ ಕ್ರೀಡೆಗಳನ್ನು ಪ್ರೋತ್ಸಾಹಿಸುವ ಉದ್ದೇಶ ನಮ್ಮದು.
∙ಭಾಸ್ಕರ ಬಂಗೇರ, ಟ್ರಸ್ಟ್‌ನ ಸದಸ್ಯ 

ಎಲ್ಲಿ?:
ನಂದಿ ಲಿಂಕ್‌ ಗ್ರೌಂಡ್ಸ್‌,ಹೊಸಕೆರೆಹಳ್ಳಿ ನೈಸ್‌ ಟೋಲ್‌ ಸಮೀಪ
ಯಾವಾಗ?: ಫೆ.9-10,
ಶನಿ-ಭಾನುವಾರ, ಬೆಳಗ್ಗೆ 10.10ಕ್ಕೆ

Advertisement

Udayavani is now on Telegram. Click here to join our channel and stay updated with the latest news.

Next