Advertisement

ಪ್ರಮಾಣೀಕೃತ ಕಾರ್ಯಾಚರಣೆಗೆ ಮೆಟ್ರೋ ಒತ್ತು

09:52 AM Jan 24, 2023 | Team Udayavani |

ಬೆಂಗಳೂರು: ಈಚೆಗೆ ನಿರ್ಮಾಣ ಹಂತದ ಕಂಬ ಬಿದ್ದು ತಾಯಿ- ಮಗು ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್ಸಿ) ತನಿಖಾ ವರದಿ ನೀಡಿದ ಬೆನ್ನಲ್ಲೇ ಬೆಂಗಳೂರು ಮೆಟ್ರೋ ರೈಲು ನಿಗಮವು “ನಮ್ಮ ಮೆಟ್ರೋ’ ಎಲ್ಲ ಪ್ರಕಾರದ ಹಂತಗಳಿಗೆ ಪ್ರತ್ಯೇಕ ಪ್ರಮಾಣೀಕೃತ ಕಾರ್ಯಾಚರಣೆ ವಿಧಾನ (ಎಸ್‌ ಒಪಿ) ರೂಪಿಸಲು ಮುಂದಾಗಿದೆ.

Advertisement

ಎಷ್ಟು ಹಂತಗಳಲ್ಲಿ ಕಂಬಗಳನ್ನು ನಿರ್ಮಿಸ ಬೇಕು? ಎತ್ತರದ ಕಂಬಗಳು ಬೀಳದಂತೆ ನೀಡುವ ಆಸರೆ ಹೇಗಿರಬೇಕು? ಆ ಕಬ್ಬಿಣದ ಸರಳುಗಳು ಎಷ್ಟು ದಪ್ಪ ಇರಬೇಕು? ಕಂಬಗಳ ನಿರ್ಮಾಣಕ್ಕೆ ಬಳಸುವ ಕಬ್ಬಿಣದ ಸರಳುಗಳ ಗಾತ್ರ ಎಷ್ಟಿರಬೇಕು ಎನ್ನುವುದು ಸೇರಿದಂತೆ ಅತ್ಯಂತ ವಿವರವಾದ ಎಸ್‌ ಒಪಿ ರೂಪಿಸಲು ನಿರ್ಧರಿಸಿದ್ದು, ವಾರದಲ್ಲಿ ಇದು ಗುತ್ತಿಗೆದಾರರು ಮತ್ತು ನಿಗಮದ ಎಂಜಿನಿಯರ್‌ ಗಳಿಗೆ ನೀಡಲಾಗುತ್ತಿದೆ.

“ಈಗಾಗಲೇ ಗುತ್ತಿಗೆ ಪಡೆದ ಕಂಪನಿಗಳು ಮತ್ತು ನಿಗಮದ ನಡುವೆ ಆಗುವ ಒಪ್ಪಂದದಲ್ಲಿ ಎಸ್‌ಒಪಿಗಳಿರುತ್ತವೆ. ಅದರ ಪಾಲನೆಯೂ ಆಗುತ್ತಿದೆ. ಇಷ್ಟರ ನಡುವೆಯೂ ಅವಘಡ ಸಂಭವಿಸಿದೆ. ಈ ಹಿನ್ನೆಲೆಯಲ್ಲಿ ಮತ್ತಷ್ಟು ಪರಿಣಾಮಕಾರಿಯಾದ ಕಾರ್ಯವಿಧಾನಗಳನ್ನು ರೂಪಿಸಲು ಉದ್ದೇಶಿಸಿದ್ದು, ಇದಕ್ಕಾಗಿ ತಜ್ಞರು ಮತ್ತು ಕನ್ಸಲ್ಟಂಟ್‌ಗಳೊಂದಿಗೆ ಚರ್ಚಿಸಲಾಗುವುದು. ಅವರೆಲ್ಲರ ಅಭಿಪ್ರಾಯಗಳನ್ನು ಸಂಗ್ರಹಿಸಿ, ಅಂತಿಮವಾಗಿ ಐಐಎಸ್ಸಿ ತಜ್ಞರೊಂದಿಗೂ ಮತ್ತೂಮ್ಮೆ ಸಮಾಲೋಚನೆ ನಡೆಸಿ ಅಂತಿಮಗೊಳಿಸಲಾಗುವುದು” ಎಂದು ಬಿಎಂಆರ್‌ಸಿಎಲ್‌ ವ್ಯವಸ್ಥಾಪಕ ನಿರ್ದೇಶಕ ಅಂಜುಂ ಪರ್ವೇಜ್‌ “ಉದಯವಾಣಿ’ಗೆ ತಿಳಿಸಿದರು.

“ಪ್ರತ್ಯೇಕ ಎಸ್‌ಒಪಿಯಲ್ಲಿ ಎತ್ತರದ ಕಂಬಗಳನ್ನು ಎರಡು ಹಂತಗಳಲ್ಲಿ ನಿರ್ಮಿಸಬೇಕು. ಕಬ್ಬಿಣದ ಸರಳುಗಳ ಗಾತ್ರ ಹಾಗೂ ಅದಕ್ಕೆ ನೀಡುವ ಆಸರೆ ಹೇಗಿರಬೇಕು ಎನ್ನುವುದನ್ನು ನಿಖರವಾಗಿ ಹೇಳಲಾಗುವುದು. ಆಸರೆ ತೆಗೆಯುವಾಗ ಕಂಬಗಳಿಗೆ ಕಡ್ಡಾಯವಾಗಿ ಕ್ರೇನ್‌ನಿಂದ “ಸಪೋರ್ಟ್‌’ ನೀಡಿರಬೇಕು. ಇಂತಹ ಹಲವು ಸೂಚನೆಗಳನ್ನು ನೀಡಲಾಗುವುದು’ ಎಂದು ಹೇಳಿದರು.

“ಕ್ರೇನ್‌ ಸಪೋರ್ಟ್‌ ಇದ್ದರೆ ತಪ್ಪುತ್ತಿತ್ತು’: ಐಐಎಸ್ಸಿ ನೀಡಿರುವ ವರದಿ ಪ್ರಕಾರ ಕಂಬಕ್ಕೆ ನಿರ್ಮಿಸಿದ್ದ ಸಾರ್ವೆ (ಹತ್ತಾರು ಅಡಿ ಎತ್ತರಕ್ಕೆ ತಲುಪಲು ರೂಪಿಸಲಾಗುವ ತಾತ್ಕಾಲಿಕ ವ್ಯವಸ್ಥೆ) ಅನ್ನು ಒಂದು ದಿನದ ಹಿಂದೆಯೇ ತೆರವುಗೊಳಿಸಲಾಗಿತ್ತು. ಇದರಿಂದ ಕಂಬಕ್ಕೆ ನೀಡಿದ್ದ ಆಸರೆ ದುರ್ಬ ಲವಾಯಿತು. ಕಟ್ಟಿದ್ದ ಕಬ್ಬಿಣದ ಸರಳುಗಳ ಮೇಲೆ ಒತ್ತಡ ಬಿದ್ದಿತು. ಆಗ ಕಂಬ ವಾಲಿದ್ದು, ಉಳಿದೆರಡು ಸರಳುಗಳ ಮೇಲೆ ಮತ್ತಷ್ಟು ಭಾರವಾಗಿ ತುಂಡಾದವು ಎಂದು ಉಲ್ಲೇಖೀಸಲಾಗಿದೆ.

Advertisement

ಬಿಎಂಆರ್‌ಸಿಎಲ್‌ಗೆ ವರದಿ ಸಲ್ಲಿಕೆ : “ಎರಡು ದಿನಗಳ ಹಿಂದೆಯೇ ವರದಿಯನ್ನು ಇ- ಮೇಲ್‌ ಮೂಲಕ ಕಳುಹಿಸಲಾಗಿತ್ತು. ಸೋಮವಾರ ಖುದ್ದು ಬಿಎಂಆರ್‌ಸಿಎಲ್‌ ಕಚೇರಿಗೆ ಭೇಟಿ ನೀಡಿ ವರದಿ ನೀಡಲಾಗಿದೆ. ಅದರಲ್ಲಿ ಎತ್ತರದ ಕಂಬಗಳನ್ನು ಎರಡು ಹಂತಗಳಲ್ಲಿ ನಿರ್ಮಿಸಬೇಕು. ಸಾರ್ವೆ ತೆರವುಗೊಳಿಸುವಾಗ ಮುನ್ನೆಚ್ಚರಿಕೆ ಕ್ರಮವಾಗಿ ಕಂಬಗಳಿಗೆ ಕ್ರೇನ್‌ ಆಸರೆ ನೀಡಬೇಕು. ಅತಿ ಎತ್ತರದ ಕಂಬಗಳ ನಿರ್ಮಾಣ ಕಾಮಗಾರಿ ಜಾಗಗಳಲ್ಲಿ ನುರಿತ ಎಂಜಿನಿಯರ್‌ಗಳನ್ನು ನಿಯೋಜಿಸಬೇಕು ಎನ್ನುವುದು ಸೇರಿದಂತೆ ಹಲವು ಶಿಫಾರಸುಗಳನ್ನು ಮಾಡಲಾಗಿದೆ. ಇದಕ್ಕೆ ನಿಗಮದಿಂದ ಸ್ಪಂದನೆಯೂ ದೊರಕಿದೆ’ ಎಂದು ಐಐಎಸ್ಸಿ ಸಿವಿಲ್‌ ಎಂಜಿನಿಯರಿಂಗ್‌ ವಿಭಾಗದ ಪ್ರೊ.ಜೆ.ಎಂ. ಚಂದ್ರಕಿಶನ್‌ ಹೇಳಿದರು.

ಕಂಪನಿ ವಿರುದ್ಧ ಕಾನೂನು ಕ್ರಮ : ಕಾಮಗಾರಿ ಗುತ್ತಿಗೆ ಪಡೆದ ಕಂಪನಿ ವಿರುದ್ಧ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುವುದು ಎಂದು ಬಿಎಂಆರ್ಶಿಎಲ್‌ ವ್ಯವಸ್ಥಾಪಕ ನಿರ್ದೇಶಕ ಅಂಜುಂ ಪರ್ವೇಜ್‌ ತಿಳಿಸಿದರು. ವರದಿ ಈಗಷ್ಟೇ ತಲುಪಿದೆ. ಕಂಪನಿಯ ಲೋಪ ಯಾವ ನಿಯಮದಡಿ ಬರುತ್ತದೆ ಎಂಬುದನ್ನು ಪರಿಶೀಲಿಸಲಾಗುವುದು. ಅದರಂತೆ ಕ್ರಮ ಕೈಗೊಳ್ಳಲಾಗುವುದು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next