ಬೆಂಗಳೂರು: ಸಾಮಾಜಿಕ ಅಂತರ ಸೇರಿದಂತೆ ಎಲ್ಲ ಮುಂಜಾಗ್ರತಾ ಕ್ರಮಗಳೊಂದಿಗೆ ವಾಣಿಜ್ಯ ಸಂಚಾರ ಸೇವೆಗೆ “ನಮ್ಮ ಮೆಟ್ರೋ’ ಸಿದ್ಧವಾಗಿದೆ. ಕೇವಲ ಕೇಂದ್ರದ ಅನುಮತಿ ಬಾಕಿ ಇದೆ.
ಪ್ರಯಾಣಿಕರ ಪ್ರವೇಶ, ಸ್ಮಾರ್ಟ್‌ಕಾರ್ಡ್‌ಗಳ ಆನ್ ಲೈನ್ ರೀಚಾರ್ಜ್, ರೈಲಿನ ಒಳಗೆ ಸ್ಯಾನಿಟೈಸ್ ಸೇರಿದಂತೆ ಅಗತ್ಯ ವ್ಯವಸ್ಥೆಗಳನ್ನು ಮಾಡಿಕೊಳ್ಳಲಾಗಿದೆ. ರೈಲುಗಳ ಪರೀಕ್ಷಾರ್ಥ ಸಂಚಾರ ಕೂಡ ನಿತ್ಯ ನಡೆಯುತ್ತಿದೆ. ನಿಲ್ದಾಣದಲ್ಲಿ ಸಹ ಹೆಜ್ಜೆ-ಹೆಜ್ಜೆಗೂ ಗುರುತುಗಳನ್ನು ಮಾಡಿ, ಪ್ರಯಾಣಿಕರಿಗೆ ಮಾಹಿತಿ ನೀಡುವ ವ್ಯವಸ್ಥೆ ಇದೆ. ಅತ್ತ ಕೇಂದ್ರದಿಂದ ಹಸಿರು ನಿಶಾನೆ ದೊರೆಯುತ್ತಿದ್ದಂತೆ, ಇತ್ತ ಮೆಟ್ರೋ ಕಾರ್ಯಾಚರಣೆಗಿಳಿಯಲಿದೆ.
“ಕೇಂದ್ರದ ನಗರಾಭಿವೃದ್ಧಿ ಇಲಾಖೆ ಅಧಿಕಾರಿಗಳು ನೀಡಿದ ಮಾಹಿತಿ ಪ್ರಕಾರ ಸೆಪ್ಟೆಂಬರ್ 10ರ ಒಳಗೆ ಮೆಟ್ರೋ ಕಾರ್ಯಾಚರಣೆಗೆ ಕೇಂದ್ರದಿಂದ ಅನುಮತಿ ದೊರೆಯುವ ಸಾಧ್ಯತೆ ಇದೆ. ಬೆನ್ನಲ್ಲೇ ಮಾರ್ಗಸೂಚಿಗಳನ್ನೂ ಬಿಡುಗಡೆ ಮಾಡಲಿದ್ದು, ಅದರ ಪ್ರಕಾರ ವ್ಯವಸ್ಥೆ ಮಾಡಲಾಗುವುದು. ಮಾರ್ಗಸೂಚಿ ಹೊರಡಿಸಿದ ಮೂರ್‍ನಾಲ್ಕು ದಿನಗಳಲ್ಲಿ ಕಾರ್ಯಾಚರಣೆ ಆರಂಭಿಸಲಾಗುವುದು’ ಎಂದು ಹೆಸರು ಹೇಳಲಿಚ್ಛಿಸದ ಬಿಎಂಆರ್‌ಸಿಎಲ್‌ನ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.
10-15 ನಿಮಿಷಗಳ ಅಂತರದಲ್ಲಿ ಸೇವೆ : ಮೆಟ್ರೋ ನಿಲ್ದಾಣದ ಒಂದು ಪ್ರವೇಶ ಮತ್ತು ಒಂದು ನಿರ್ಗಮನ ದ್ವಾರ ಪ್ರಯಾಣಿಕರಿಗೆ ಮುಕ್ತವಾಗಿರಲಿದೆ. ಎರಡೂ ದ್ವಾರಗಳಲ್ಲಿ ಸ್ಯಾನಿಟೈಸರ್ ಮತ್ತು ಜ್ವರ ತಪಾಸಣೆ ಮಾಡುವ ಸ್ಕ್ಯಾನಿಂಗ್ ಯಂತ್ರ ಇರಲಿದೆ. ಉಷ್ಣಾಂಶ ಪರೀಕ್ಷೆ ಮಾಡಲಾಗುತ್ತದೆ. (ಉಷ್ಣಾಂಶ ಹೆಚ್ಚಿದ್ದರೆ ನಿರ್ಬಂಧ) ನೇರಳೆ ಮಾರ್ಗದಲ್ಲಿ “ಪೀಕ್ ಅವರ್’ನಲ್ಲಿ ಪ್ರತಿ 5 ನಿಮಿಷಗಳ ಅಂತರ ಹಾಗೂ ಹಸಿರು ಮಾರ್ಗದಲ್ಲಿ ಪ್ರತಿ 8-10 ನಿಮಿಷಗಳ ಅಂತರದಲ್ಲಿ ಮತ್ತು ಉಳಿದ ಸಮಯದಲ್ಲಿ 10-15 ನಿಮಿಷಗಳ ಅಂತರದಲ್ಲಿ ಸೇವೆ ಇರಲಿದೆ ಎಂದು ಅಧಿಕಾರಿಗಳು ವಿವರಿಸಿದರು.
350 ಜನ ಇದ್ರೆ : ಬಾಗಿಲು ತೆರೆಯಲ್ಲ ಪ್ರತಿ ನಿಲ್ದಾಣದಲ್ಲಿ ಇಳಿಯುವ ಮತ್ತು ಹತ್ತುವ ಪ್ರಯಾಣಿಕರ ವಿವರ ನಿಯಂತ್ರಣ ಕೊಠಡಿಗೆ ರವಾನೆ ಆಗಲಿದೆ. ಎಷ್ಟು ಪ್ರಯಾಣಿಕರು ಇಳಿಯುತ್ತಾರೋ, ಅಷ್ಟು ಜನ ಮಾತ್ರ ರೈಲು ಏರಬಹುದು. ಒಂದು ವೇಳೆ ರೈಲಿನಲ್ಲಿ ಮೊದಲೇ 350 ಪ್ರಯಾಣಿಕರಿದ್ದರೆ, ರೈಲಿನ ಬಾಗಿಲು ತೆರೆಯುವುದಿಲ್ಲ. ರೈಲಿನಲ್ಲಿ ಆಸನಗಳಿಗೆ ಗುರುತು ಹಾಕಲಾಗಿರುತ್ತದೆ. ಅಲ್ಲಿ ಮಾತ್ರ ಕುಳಿತುಕೊಳ್ಳಬೇಕು.