ಬೆಂಗಳೂರು: “ನಮ್ಮ ಮೆಟ್ರೋ’ 2ನೇ ಹಂತದ ಹೊಸ ವಿಸ್ತರಿತ ಮಾರ್ಗ ಕೆ. ಆರ್. ಪುರಂ-ವೈಟ್‌ಫೀಲ್ಡ್ ನಡುವೆ ಎರಡನೇ ದಿನವಾದ ಸೋಮವಾರ ಸುಮಾರು 18 ಸಾವಿರ ಜನ ಪ್ರಯಾಣಿಸಿದ್ದಾರೆ. ಬೆಳಗ್ಗೆ 5ರಿಂದ ರಾತ್ರಿ 9ರವರೆಗೆ ಹೆಚ್ಚು-ಕಡಿಮೆ 18 ಸಾವಿರ ಜನ ಈ ನೂತನ ವಿಸ್ತರಿತ ಮಾರ್ಗದ ಪ್ರಯೋಜನ ಪಡೆದಿದ್ದಾರೆ.
ವಾಣಿಜ್ಯ ಸಂಚಾರ ಆರಂಭಗೊಂಡ ದಿನ ಅಂದರೆ ಭಾನುವಾರ ಬೆಳಗ್ಗೆ 7ರಿಂದ ರಾತ್ರಿ 11ರವರೆಗೆ 16,319 ಜನ ಸಂಚರಿಸಿದ್ದರು. ಎರಡನೇ ದಿನ ಪ್ರಯಾಣಿಕರ ಸಂಖ್ಯೆಯಲ್ಲಿ ಕೊಂಚ ಏರಿಕೆ ಕಂಡುಬಂದಿದೆ. ಮುಂಬರುವ ದಿನಗಳಲ್ಲಿ ಇದರಲ್ಲಿ ಮತ್ತಷ್ಟು ಹೆಚ್ಚಳ ಆಗಲಿದೆ ಎಂದು ಬೆಂಗಳೂರು ಮೆಟ್ರೋ ರೈಲು ನಿಗಮ (ಬಿಎಂಆರ್‌ಸಿಎಲ್) ತಿಳಿಸಿದೆ.
ಈ ಮಾರ್ಗದಲ್ಲಿ ಪ್ರತಿ 12 ನಿಮಿಷಗಳ ಅಂತರದಲ್ಲಿ ರೈಲು ಸೇವೆ ಕಲ್ಪಿಸಲಾಗಿದ್ದು, ಹೆಚ್ಚು ಪ್ರಯಾಣಿಕರ ದಟ್ಟಣೆಯಲ್ಲೂ ಇದೇ ಫೀಕ್ವೆನ್ಸಿಯಲ್ಲಿ ರೈಲುಗಳ ಕಾರ್ಯಾಚರಣೆ ಆಗುತ್ತಿದೆ. ಜನದಟ್ಟಣೆ ಆಧರಿಸಿ ಮುಂಬರುವ ದಿನಗಳಲ್ಲಿ ಫ್ರೀಕ್ವೆನ್ಸಿ ಹೆಚ್ಚಿಸುವ ಉದ್ದೇಶ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಮಧ್ಯೆ ಕೆ.ಆರ್. ಪುರಂನಿಂದ ಬೈಯಪ್ಪನಹಳ್ಳಿವರೆಗೆ ಮೆಟ್ರೋ ಸೇವೆ ಇನ್ನೂ ಆರಂಭವಾಗಿಲ್ಲ. ಹಾಗಾಗಿ, ವೈಟ್ ಫೀಲ್ಡ್‌ನಿಂದ ಕೆ.ಆರ್. ಪುರಂಗೆ ಬಂದಿಳಿಯುವ ಜನ, ಅಲ್ಲಿ ಬಸ್ ಅಥವಾ ಆಟೋ ಅಥವಾ ಟ್ಯಾಕ್ಸಿಗಳ ಮೊರೆಹೋಗಬೇಕಿದೆ. ಈ ಅನಿವಾರ್ಯತೆಯ ದುರುಪಯೋಗ ಪಡೆದುಕೊಳ್ಳುತ್ತಿರುವ ಕೆಲ ಆಟೋ ಚಾಲಕರು ಸುಲಿಗೆ ಮಾಡುತ್ತಿದ್ದಾರೆ ಎಂಬ ಆರೋಪ ಪ್ರಯಾಣಿಕರಿಂದ ಕೇಳಿಬರುತ್ತಿದೆ.
“ಕೇವಲ 2 ಕಿ.ಮೀ. ಅಂತರದ ಆಟೋ ಸೇವೆಗೆ 100 ರೂಪಾಯಿ ಸುಲಿಗೆ ಮಾಡುತ್ತಿದ್ದಾರೆ. ಈ ಬಗ್ಗೆ ಆಕ್ಷೇಪಿಸುವಂತೆಯೂ ಇಲ್ಲ. ಬಸ್‌ಗಳಿಗೆ ಕಾದುಕುಳಿತರೆ, ಸಮಯ ವ್ಯಯ ಆಗುತ್ತದೆ. ಆ್ಯಪ್ ಆಧಾರಿತ ಟ್ಯಾಕ್ಸಿಗಳು ಕೆಲವು ಸಲ ಬೇಗ ಬರುವುದೇ ಇಲ್ಲ. ಇದರಿಂದ ಸಮಸ್ಯೆ ಆಗುತ್ತಿದೆ’ ಎಂದು ಪ್ರಯಾಣಿಕ ಮಹೇಶ್ ಆರೋಪಿಸಿದರು.