ಬೆಂಗಳೂರು: ಕೋವಿಡ್ ಹಾವಳಿ ನಡುವೆಯೂ ತನ್ನ ಮೊದಲ ಇಡೀ ದಿನದ ಸೇವೆಯಲ್ಲೇ “ನಮ್ಮ ಮೆಟ್ರೋ’ ದಕ್ಷಿಣ ಭಾರತದಲ್ಲಿ ಅತಿ ಹೆಚ್ಚು ಪ್ರಯಾಣಿಕರನ್ನು ಕೊಂಡೊಯ್ದಿದೆ.
ಸುಮಾರು ಐದೂವರೆ ತಿಂಗಳ ನಂತರ ಸೆಪ್ಟೆಂಬರ್ 11ರಂದು ಮೊದಲ ಬಾರಿಗೆ ನಿರಂತರ 14 ತಾಸು ನಮ್ಮ ಮೆಟ್ರೋ ಕಾರ್ಯಾಚರಣೆಮಾಡಿತು.ಈಅವಧಿಯಲ್ಲಿ 271 ಟ್ರಿಪ್‌ಗ್ಳಲ್ಲಿ ಅಂದಾಜು 29,114 ಜನ ಪ್ರಯಾಣಿಕರು (ಮೆಟ್ರೋ ಹತ್ತಿಳಿದವರು) ಸಂಚರಿಸಿದ್ದಾರೆ. ಇದು ಕೋವಿಡ್-19 ಪೂರ್ವ ಸ್ಥಿತಿಯ ಶೇ. 10ರಷ್ಟೂ ಆಗುವುದಿಲ್ಲ. ಆದರೂ, ಹೈದರಾಬಾದ್, ಚೆನ್ನೈ, ಕೊಚ್ಚಿಮೆಟ್ರೋರೈಲುಸೇವೆಗಳಿಗೆಹೋಲಿಸಿದರೆ, ಕಡಿಮೆ ಮಾರ್ಗ ಮತ್ತು ಸುತ್ತುವಳಿಗಳಲ್ಲಿ ಬೆಂಗಳೂರು ಮೆಟ್ರೋದಲ್ಲಿ ಅತ್ಯಧಿಕ ಪ್ರಯಾಣಿಕರ ಸಂಖ್ಯೆ ಇದಾಗಿದೆ. ದೆಹಲಿ ಹೊರತುಪಡಿಸಿದರೆ, ಎರಡನೇ ಅತಿ ಹೆಚ್ಚು ಪ್ರಯಾಣಿಕರು ಎಂದೂ ವಿಶ್ಲೇಷಿಸಲಾಗುತ್ತಿದೆ.
ಸುದೀರ್ಘ ಲಾಕ್‌ಡೌನ್ ನಂತರ ಹೈದರಾಬಾದ್ ಮೆಟ್ರೋ ರೈಲು ಸೆ. 10ರಂದು ಬೆಳಿಗ್ಗೆ 7ರಿಂದ ಸಂಜೆ 9ರವರೆಗೆ 70 ಕಿ.ಮೀ. ಉದ್ದದ ತನ್ನ ಎಲ್ಲ 3ಕಾರಿಡಾರ್ ಗಳಲ್ಲಿ ಕಾರ್ಯಾಚರಣೆ ಆರಂಭಿಸಿತು. ಮೊದಲ ದಿನ 680 ಟ್ರಿಪ್ ನಡೆಸಿದ್ದು, ಅದರಲ್ಲಿ ಸಂಚರಿಸಿದ ಪ್ರಯಾಣಿಕರ ಸಂಖ್ಯೆ ಅಂದಾಜು 31 ಸಾವಿರ. ಅದೇ ರೀತಿ, ಚೆನ್ನೈಮೆಟ್ರೋ ಪೂರ್ಣ ಸೇವೆ ಶುರುವಾದ ಮೊದಲ 3 ದಿನಗಳಲ್ಲಿ 25 ಸಾವಿರ ಜನ ಸಂಚರಿಸಿದ್ದಾರೆ. ಅಲ್ಲಿನ ಮಾರ್ಗದ ಉದ್ದ 45 ಕಿ.ಮೀ. ಇನ್ನು 25 ಕಿ.ಮೀ.ಉದ್ದದ ಕೊಚ್ಚಿ ಮೆಟ್ರೋ ಸೆ. 7ರಂದು ಬೆಳಗ್ಗೆ 8ರಿಂದ ಸಂಜೆ 6ರವರೆಗೆ ಕಾರ್ಯಾಚರಣೆ ನಡೆಸಿದ್ದು, 20 ಸಾವಿರ ಪ್ರಯಾಣಿಕರು ಸಂಚರಿಸಿದ್ದಾರೆ.
ಕೋವಿಡ್ ಮುನ್ನ ಬೆಂಗಳೂರು ಮೆಟ್ರೋದಲ್ಲಿ ನಿತ್ಯ ಪ್ರಯಾಣಿಸುವವರ ಸಂಖ್ಯೆ 4 ಲಕ್ಷಕ್ಕೂ ಅಧಿಕ ಇತ್ತು. ಇದಕ್ಕೆ ಹೋಲಿಸಿದರೆ, ಪ್ರಯಾಣಿಕರ ಸಂಖ್ಯೆ ಶೇ. 10ಕ್ಕಿಂತ ಕಡಿಮೆ ಇದೆ. ಆದರೆ, ಉಳಿದ ನಗರಗಳಲ್ಲಿನ ಮೆಟ್ರೋ ರೈಲಿಗೆ ಹೋಲಿಸಿದರೆ, “ನಮ್ಮ ಮೆಟ್ರೋ’ ಪ್ರದರ್ಶನ ಸದ್ಯಕ್ಕೆ ತೃಪ್ತಿಕರ. ಹೈದರಾಬಾದ್ ಮೆಟ್ರೋದಲ್ಲಿ 31 ಸಾವಿರ ಜನ ಪ್ರಯಾಣಿಸಿದ್ದರೂ, ಇದಕ್ಕಾಗಿ 680 ಟ್ರಿಪ್‌ಗ್ಳನ್ನು ಪೂರೈಸಿದೆ. ಪ್ರತಿ ಟ್ರಿಪ್‌ಗೆ 45-46 ಜನ ಪ್ರಯಾಣಿಸಿದ್ದಾರೆ. ಆದರೆ, ನಮ್ಮ ಮೆಟ್ರೋದಲ್ಲಿ ದುಪ್ಪಟ್ಟು ಅಂದರೆ ಪ್ರತಿ ಟ್ರಿಪ್‌ಗೆ 110 ಜನ ಸಂಚರಿಸಿದ್ದಾರೆ. ಅಲ್ಲಿನ ಮೆಟ್ರೋ ಜಾಲ ನಮಗಿಂತ ಹೆಚ್ಚಿದೆ ಎಂದುಬೆಂ.ಮೆಟ್ರೋರೈಲುನಿಗಮದಕಾರ್ಯಾಚರಣೆ ವಿಭಾಗದ ಅಧಿಕಾರಿಯೊಬ್ಬರು ತಿಳಿಸುತ್ತಾರೆ.
ಐಟಿ ಮೇಲೆ ಅವಲಂಬನೆ: “ನಮ್ಮ ಮೆಟ್ರೋ ಪುನಾರಂಭಗೊಂಡ ಮೊದಲ ದಿನ ನೇರಳೆ ಮಾರ್ಗದಲ್ಲಿ ಮಾತ್ರ ಕಾರ್ಯಾಚರಣೆ ನಡೆದಿತ್ತು. ಆಗ, ಸುಮಾರು3,800 ಜನ ಪ್ರಯಾಣಿಸಿದ್ದರು. 4 ದಿನಗಳ ಅಂತರದಲ್ಲಿ ಅದು 8ಪಟ್ಟು ಏರಿಕೆ ಕಂಡಿದೆ. ಇನ್ನು ಚೆನ್ನೈಗೆ ಹೋಲಿಸಿದರೆ, ಅಲ್ಲಿ ಸಾಮಾನ್ಯ ಪ್ರಯಾಣಿಕರು ಹೆಚ್ಚು. ಬೆಂ. ಮೆಟ್ರೋದಲ್ಲಿ ಐಟಿ-ಬಿಟಿ ಉದ್ಯೋಗಿಗಳೇ ಅಧಿಕ. ಆದರೆ, ಆ ಕಂಪನಿಗಳಲ್ಲಿ ಈಗಲೂ ಮನೆಯಿಂದಲೇ ಕೆಲಸಕ್ಕೆ ಸೂಚಿಸಿರುವುದರಿಂದ ಸಹಜ ವಾಗಿಯೇ ಪ್ರಯಾಣಿಕರ ಸಂಖ್ಯೆ ಮೇಲೆ ಪರಿಣಾಮ ಬೀರುತ್ತದೆ. ಇನ್ನು ದೆಹಲಿ ಮೆಟ್ರೋ ಪ್ರಯಾಣಿಕರ ಸಂಖ್ಯೆ ಈಗಾಗಲೇ 1.40 ಲಕ್ಷ ದಾಟಿದೆ. ಅದು 345 ಕಿ.ಮೀ. ಉದ್ದ ಇದ್ದು, ಹತ್ತು ಲೈನ್‌ಗಳಿವೆ. ಸಾವಿರಾರು ಟ್ರಿಪ್‌ಗಳನ್ನು ಅದು ಪೂರೈಸುತ್ತದೆ. ಅದೇ ರೀತಿ, ಮುಂಬೈ ಮತ್ತು ನಾಗ್ಪುರ ಮೆಟ್ರೋ ರೈಲು ಸೇವೆ ಪುನಾರಂಭಗೊಂಡಿಲ್ಲ. ಕೊಲ್ಕತ್ತಾ ಮೆಟ್ರೋ ರೈಲು ಸೇವೆ ಪೂರ್ಣಪ್ರಮಾಣದಲ್ಲಿ (ಬೆಳಗ್ಗೆ 8ರಿಂದ ಸಂಜೆ 7) ಸೋಮವಾರದಿಂದಷ್ಟೇ ಶುರುವಾಗಿದೆ.
ಮೊದಲ ನಾಲ್ಕು ದಿನ ಕರೆಂಟ್ ಬಿಲ್ಲೂ ಗಿಟ್ಟಿರಲಿಲ್ಲ! : ಮೊದಲ ನಾಲ್ಕು ದಿನಗಳು ಅಂದರೆ ಸೆ. 7ರಿಂದ 10ರವರೆಗೆ “ನಮ್ಮ ಮೆಟ್ರೋ’ ಪ್ರಯಾಣಿಕರ ಸಂಖ್ಯೆ ತುಂಬಾ ನೀರಸವಾಗಿತ್ತು. ಕಾರ್ಯಾಚರಣೆಗೆ ಪ್ರತಿಯಾಗಿ ಬಂದ ವರಮಾನವು ಆಯಾ ದಿನ ಖರ್ಚಾದ ವಿದ್ಯುತ್ ಶುಲ್ಕಕ್ಕಿಂತ ಹಲವು ಪಟ್ಟು ಕಡಿಮೆ ಇತ್ತು! ಮೆಟ್ರೋ ಒಂದು ಟ್ರಿಪ್ ಪೂರೈಸಲು 320 ಯೂನಿಟ್ ವಿದ್ಯುತ್ ಖರ್ಚಾಗುತ್ತದೆ. ಅದನ್ನು ವಿದ್ಯುತ್ ದರಕ್ಕೆ ಲೆಕ್ಕಹಾಕಿದರೆ, 1,600 ರೂ. ಆಗುತ್ತದೆ. ಮೊದಲ ದಿನ 91 ಟ್ರಿಪ್‌ಗ್ಳನ್ನು ಮೆಟ್ರೋ ಪೂರೈಸಿತ್ತು. ಇದಕ್ಕಾಗಿ ವಿದ್ಯುತ್ ಶುಲ್ಕವೇ 1.45 ಲಕ್ಷ ರೂ. ಆಗುತ್ತದೆ. ಅಂದು ಪ್ರಯಾಣಿಸಿದವರ ಸಂಖ್ಯೆ 3,800 ಹಾಗೂ ಅದರಿಂದ ಬಂದ ವರಮಾನ 1.20 ಲಕ್ಷ. ಸೆ. 11ರಂದು ಪ್ರಯಾಣಿಸಿದವರ ಸಂಖ್ಯೆ ಸುಮಾರು 30 ಸಾವಿರ ಇದ್ದು, 9.6 ಲಕ್ಷ ವರಮಾನ ಹರಿದುಬಂದಿದೆ. ಅಂದು ಪೂರೈಸಿದ 271 ಟ್ರಿಪ್‌ಗ್ಳಿಗೆ ಲೆಕ್ಕಹಾಕಿದರೆ, 4.33 ಲಕ್ಷ ರೂ. ವಿದ್ಯುತ್ ಬಿಲ್ ಆಗುತ್ತದೆ.
–ವಿಜಯಕುಮಾರ್ ಚಂದರಗಿ