Advertisement
ಈ ಸಂಬಂಧ ಇತ್ತೀಚೆಗೆ ನಡೆದ ಮೆಟ್ರೋ ಮಂಡಳಿ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದ್ದು, ಅದರಂತೆ ಮುಂದಿನ ಹಂತದಲ್ಲಿ ಬರುವ ಮೆಟ್ರೋ ಮಾರ್ಗ ಮತ್ತು ನಿಲ್ದಾಣಗಳ ನಿರ್ವಹಣೆ ಹಾಗೂ ಕಾರ್ಯಾಚರಣೆ ಹೊಣೆಯನ್ನು ಕಂಪೆನಿಯೊಂದಕ್ಕೆ ವಹಿಸಲು ನಿರ್ಧರಿಸಲಾಗಿದೆ. ಇದರಿಂದ ಮುಂದಿನ ದಿನಗಳಲ್ಲಿ ಬಿಎಂಆರ್‌ಸಿಎಲ್‌ನಲ್ಲಿ ಕಾಯಂ ನೇಮಕಾತಿಗೆ ಬಹುತೇಕ ಶಾಶ್ವತವಾಗಿ ತೆರೆ ಬೀಳಲಿದೆ.
Related Articles
Advertisement
ವೆಚ್ಚದ ಲೆಕ್ಕಾಚಾರ: ಪ್ರಸ್ತುತ ನಿರ್ವಹಣೆ ಮತ್ತು ಕಾರ್ಯಾಚರಣೆ ವಿಭಾಗದಲ್ಲಿ ಕಿರಿಯ ಎಂಜಿನಿಯರ್, ವಿಭಾಗ ನಿಯಂತ್ರಕ, ಪೈಲಟ್‌ಗಳು ಸೇರಿ ಸುಮಾರು 1,300 ಸಿಬ್ಬಂದಿ ಸೇವೆ ಸಲ್ಲಿಸುತ್ತಿದ್ದಾರೆ. ಅವರೆಲ್ಲರಿಗೂ ಮಾಸಿಕ ವೇತನ ಕನಿಷ್ಠ 40 ಸಾವಿರದಿಂದ ಗರಿಷ್ಠ 80 ಸಾವಿರ ರೂ.ವರೆಗೂ ಇದೆ. ಸರಾಸರಿ ವಾರ್ಷಿಕ 40ರಿಂದ 45 ಕೋಟಿ ರೂ. ಖರ್ಚಾಗುತ್ತಿದೆ. ಅಲ್ಲದೆ, ವೇತನ ಆಯೋಗದ ಅನ್ವಯ ಸಂಬಳವೂ ಹೆಚ್ಚಳ ಆಗುತ್ತಲೇ ಇರುತ್ತದೆ.
ಒಂದು ವೇಳೆ ಹೆಚ್ಚಳ ಮಾಡದಿದ್ದರೆ, ಪ್ರತಿಭಟನೆ ಎದುರಿಸಬೇಕಾಗುತ್ತದೆ. ಇದರ ಪರಿಣಾಮ ಮೆಟ್ರೋ ಸೇವೆಯಲ್ಲಿ ಆಗುತ್ತದೆ. ಹೊರಗುತ್ತಿಗೆ ನೀಡಿದರೆ, ಇದಾವುದರ ಕಿರಿಕಿರಿ ಇರುವುದಿಲ್ಲ. ಮಾಸಿಕ ವೇತನವನ್ನು 30-50 ಸಾವಿರ ರೂ.ಗಳಲ್ಲೇ ನಿಭಾಯಿಸಬಹುದು. ವೇತನ ಮಾತ್ರವಲ್ಲ; ಸೌಲಭ್ಯಗಳಿಗೂ ಕತ್ತರಿ ಬೀಳಲಿದೆ. ಆ ಮೂಲಕ ಖರ್ಚು ತಗ್ಗಲಿದೆ ಎಂಬ ಲೆಕ್ಕಾಚಾರ ನಿಗಮದ್ದಾಗಿದೆ ಎಂದು ಹೆಸರು ಹೇಳಲಿಚ್ಛಿಸದ ಅಧಿಕಾರಿಯೊಬ್ಬರು ತಿಳಿಸಿದರು.
ಮುಂದೊಂದು ವರ್ಷದಲ್ಲಿ ಎರಡನೇ ಹಂತದ ಮೊದಲ ಮಾರ್ಗವು ಸೇವೆಗೆ ಮುಕ್ತವಾಗಲಿದೆ. ಹಾಗಾಗಿ, ಈ ಹೊರಗುತ್ತಿಗೆ ಪ್ರಯೋಗ ತತ್‌ಕ್ಷಣಕ್ಕೆ ಮಾಡುವುದಿಲ್ಲ. ಆರಂಭದ ಕೆಲವು ದಿನಗಳು ಸ್ವತಃ ಬಿಎಂಆರ್‌ಸಿಎಲ್ ಸಿಬ್ಬಂದಿಯಿಂದಲೇ ನಿರ್ವಹಣೆ ಮಾಡಲಾಗುತ್ತದೆ. ನಂತರದಲ್ಲಿ ಹಂತ ಹಂತವಾಗಿ ಖಾಸಗಿ ಕಂಪೆನಿಗೆ ವರ್ಗಾಯಿಸುವ ಸಾಧ್ಯತೆ ಇದೆ. ದೇಶದಲ್ಲಿ ಈಗಿರುವ ಬಹುತೇಕ ಮೆಟ್ರೋ ಯೋಜನೆಗಳಲ್ಲಿ ಇದೇ ಮಾದರಿಯನ್ನು ಅನುಸರಿಸಲಾಗುತ್ತಿದೆ ಎಂದು ಅಧಿಕಾರಿಗಳು ಹೇಳಿದರು.
ಮುಂದುವರಿಯಲಿದೆ ಹೊರಗುತ್ತಿಗೆ: “ನಮ್ಮ ಮೆಟ್ರೋ’ 2ಎ ಮತ್ತು ಬಿ ಹಾಗೂ 3ನೇ ಹಂತವೂ ಬರಲಿದೆ. ಅದಕ್ಕೂ ಹೊರಗುತ್ತಿಗೆ ಮಾದರಿ ಅನುಸರಿಸುವ ಚಿಂತನೆ ಇದೆ. ಹಾಗೊಂದು ವೇಳೆ ಮುಂಬರುವ ಎಲ್ಲ ಹಂತಗಳೂ ಹೊರಗುತ್ತಿಗೆ ನೀಡಿದರೆ, ಆಗ ಮೊದಲ ಹಂತ ಹೊರತುಪಡಿಸಿ ಉಳಿದೆಲ್ಲದ ಹೊಣೆ ಖಾಸಗಿ ಕಂಪನಿಗೆ ನೀಡಿದಂತಾಗಲಿದೆ. ಈ ಕ್ರಮದಿಂದ ಸ್ಥಳೀಯವಾಗಿ ಉದ್ಯೋಗಾವಕಾಶಗಳು ಕ್ಷೀಣಿಸುವ ಸಾಧ್ಯತೆಯೂ ಇದೆ. ಯಾಕೆಂದರೆ, ಗುತ್ತಿಗೆ ಪಡೆದ ಕಂಪೆನಿಯು ತನ್ನ ಪ್ರಾದೇಶಿಕ ಪ್ರತಿಭೆಗಳಿಗೆ ಆದ್ಯತೆ ನೀಡವ ಸಾಧ್ಯತೆಗಳು ಹೆಚ್ಚಿರುತ್ತವೆ ಎಂದು ನೌಕರರು ಆರೋಪಿಸುತ್ತಾರೆ.
ಎರಡನೇ ಹಂತದ ವಿವರಮಾರ್ಗದ ಉದ್ದ 72 ಕಿ.ಮೀ.
ಒಟ್ಟು ನಿಲ್ದಾಣಗಳು 61
ಎತ್ತರಿಸಿದ ನಿಲ್ದಾಣಗಳು 49
ಸುರಂಗ ನಿಲ್ದಾಣಗಳು 12
ವಿಸ್ತರಿಸಿದ ಮಾರ್ಗಗಳ ಉದ್ದ 32.025 ಕಿ.ಮೀ.
ಯೋಜನಾ ಅಂದಾಜು ವೆಚ್ಚ 26,405 ಕೋಟಿ ರೂ.
* ವಿಜಯಕುಮಾರ್ ಚಂದರಗಿ