Advertisement

Namma Metro: ಮೆಟ್ರೋದಲ್ಲಿ ಉಸಿರುಗಟ್ಟಿಸುವ ರೀತಿ ಜನ!

02:09 PM Jul 05, 2023 | Team Udayavani |

ಬೆಂಗಳೂರು: ಸಿಗ್ನಲಿಂಗ್‌ ಅಳವಡಿಕೆ ಮತ್ತಿತರ ತಾಂತ್ರಿಕ ಕಾರಣಗಳಿಂದ “ನಮ್ಮ ಮೆಟ್ರೋ’ ಸಕಾಲದಲ್ಲಿ ಬಾರದೆ ಕೈಕೊಟ್ಟಿದ್ದರಿಂದ ಮಂಗಳವಾರ ಸಾವಿರಾರು ಪ್ರಯಾಣಿಕರು ಪರದಾಡುವಂ ತಾಯಿತು. ಕೆಲಸಕ್ಕೆ ತೆರಳುವ ಧಾವಂತದೊಂದಿಗೆ ಆಗಮಿಸುವ ಜನರನ್ನು ತಡವಾಗಿ ಬಂದ ರೈಲಿನಲ್ಲಿ ತುಂಬುತ್ತಿದ್ದರಿಂದ ಬೋಗಿಗಳು ಅಕ್ಷರಶಃ ಕುರಿದೊಡ್ಡಿಗಳಾಗಿದ್ದವು. ಬಿಎಂಆರ್‌ಸಿಎಲ್‌ಗೆ ಹಿಡಿಶಾಪ ಹಾಕುತ್ತಿರುವುದು ಕಂಡುಬಂತು.

Advertisement

ನೇರಳೆ ಮಾರ್ಗವಾದ ಬೈಯಪ್ಪನಹಳ್ಳಿ- ಕೆಂಗೇರಿ ನಡುವೆ ಸಂಚರಿಸುವ ಪ್ರಯಾಣಿಕರಿಗೆ ಈ ತಾಂತ್ರಿಕ ಸಮಸ್ಯೆಯ ಬಿಸಿ ತುಸು ಜೋರಾಗಿ ತಟ್ಟಿತು. “ಪೀಕ್‌ ಅವರ್‌’ (ದಟ್ಟಣೆ ಅವಧಿ)ನಲ್ಲಿ 5 ನಿಮಿಷಕ್ಕೊಂದು ಮೆಟ್ರೋ ರೈಲು ಸೇವೆ ಇರುತ್ತದೆ. ಆದರೆ, ಉದ್ದೇಶಿತ ಮಾರ್ಗದಲ್ಲಿನ ಬಹುತೇಕ ಎಲ್ಲ ನಿಲ್ದಾಣಗಳಲ್ಲಿ 10-15 ನಿಮಿಷಗಳಾದರೂ ರೈಲುಗಳು ಬರಲಿಲ್ಲ. ಹಾಗಾಗಿ, ಕಾಯುವ ಪ್ರಯಾಣಿಕರ ಸಂಖ್ಯೆ ಎರಡು-ಮೂರುಪಟ್ಟು ಆಗಿತ್ತು. ಇದು ದಟ್ಟಣೆಗೆ ಎಡೆಮಾಡಿಕೊಟ್ಟಿತು.

ಸಾಮಾನ್ಯವಾಗಿ ಬೆಳಗಿನ ಜಾವ 5 ಗಂಟೆಗೆ ಆರಂಭವಾಗಬೇಕಾದ ರೈಲು ಸೇವೆಯು ಸುಮಾರು 45 ನಿಮಿಷ ತಡವಾಗಿ ಕಾರ್ಯಾಚರಣೆ ಆರಂಭಿಸಿತು. ಅಷ್ಟೇ ಅಲ್ಲ, ಅಲ್ಲಲ್ಲಿ ತುಸು ನಿಧಾನಗತಿಯಲ್ಲಿ ಸಾಗಿತು. ಇದರಿಂದ ಎರಡು ರೈಲುಗಳ ನಡುವಿನ ಸಂಚಾರ ಅವಧಿ ಕೂಡ ಹೆಚ್ಚಿತು. ಪರಿಣಾಮ ಪ್ಲಾಟ್‌ ಫಾರಂಗಳಲ್ಲಿ ಪ್ರಯಾಣಿಕರ ದಟ್ಟಣೆ ಹೆಚ್ಚುತ್ತಲೇ ಇತ್ತು. ತಡವಾಗಿ ಬರುವ ರೈಲುಗಳೂ ಭರ್ತಿಯಾಗಿರುತ್ತಿದ್ದವು. ಅದರ ಮಧ್ಯೆಯೇ ಮತ್ತಷ್ಟು ಜನ ರೈಲಿಗೆ ಮುಗಿಬೀಳುತ್ತಿದ್ದರು.

ಸರದಿಯಲ್ಲಿ ನಿಂತು ಕಸರತ್ತು ಮಾಡಿ ರೈಲುಗಳಲ್ಲಿ ನುಗ್ಗಿದರೂ ಒಳಗಡೆ ಉಸಿರುಗಟ್ಟುವ ವಾತಾವರಣ ಇತ್ತು. ತಳ್ಳಾಟದಲ್ಲೇ ಪ್ರಯಾಣ ಬೆಳೆಸುತ್ತಿದ್ದರು. ಆದರೆ, ಇಳಿಯುವಾಗ ಮತ್ತೂಂದು ಸುತ್ತಿನ ಸರ್ಕಸ್‌ ಮಾಡಬೇಕಾಗಿತ್ತು. ನಡುವೆ ಸಿಲುಕಿದ ಜನ, ನಿರ್ಗಮನ ದ್ವಾರದ ಕಡೆ ಬರುವಷ್ಟರಲ್ಲಿ ಹೈರಾಣಾಗುತ್ತಿದ್ದರು. ಕೆಲವರು ಇಳಿಯಲಾಗದೆ ಮುಂದಿನ ನಿಲ್ದಾಣಕ್ಕೆ ಇಳಿದು ಹಿಂತಿರುಗಿದ ಪ್ರಸಂಗವೂ ನಡೆಯಿತು. ಈ ವೇಳೆ ಪ್ರಯಾಣಿಕರು, ಬಿಎಂಆರ್‌ಸಿಎಲ್‌ಗೆ ಹಿಡಿಶಾಪ ಹಾಕಿದರು. “ವ್ಯತ್ಯಯದ ಬಗ್ಗೆ ಮುಂಚಿತವಾಗಿಯೇ ತಿಳಿಸಬಹು ದಿತ್ತು. ಆಗ ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳುತ್ತಿ ದ್ದರು. ಹೀಗೆ ಏಕಾಏಕಿ ಅವ್ಯವಸ್ಥೆ ಮಾಡಿದರೆ ಹೇಗೆ?’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇನ್ನು ನೂಕುನುಗ್ಗಲಿನಲ್ಲಿ ತೂರಿಕೊಳ್ಳಲಾಗದ ಕೆಲವರು ಮುಂದಿನ ರೈಲಿಗಾಗಿ ಕಾಯಬೇಕಾಯಿತು. ಕೆಲವರು ಅನಿವಾರ್ಯವಾಗಿ ರ್ಯಾಪಿಡೊ, ಆಟೋ, ಆ್ಯಪ್‌ ಆಧಾರಿತ ಕ್ಯಾಬ್‌ ಸೇವೆಗಳ ಮೊರೆ ಹೋದರು. ಈ ನಡುವೆ ರೈಲಿನ ಒಳಗೆ ತಡವಾಗಿಯಾದರೂ ಮೆಟ್ರೋ ರೈಲುಗಳಲ್ಲೇ ಪ್ರಯಾಣ ಬೆಳೆಸಿದವರು, ಕಚೇರಿಗಳಿಗೆ ಸಕಾಲದಲ್ಲಿ ತಲುಪಲು ಸಾಧ್ಯವಾಗಲಿಲ್ಲ. ವ್ಯತ್ಯಯದ ಪರಿಣಾಮವನ್ನು ಕಡಿಮೆಗೊಳಿಸಲು ಬಿಎಂಆರ್‌ಸಿಎಲ್‌ ಅಧಿಕಾರಿಗಳು ಇನ್ನಿಲ್ಲದ ಕಸರತ್ತು ನಡೆಸಿದರು. ಇಂದಿರಾನಗರ, ಮೆಜೆಸ್ಟಿಕ್‌ ಸೇರಿದಂತೆ ಕೆಲವು ನಿಲ್ದಾಣಗಳಿಂದಲೇ ರೈಲುಗಳ ವ್ಯವಸ್ಥೆ ಮಾಡಿದ್ದರು. ಇದರಿಂದ ತುಸು ಅನುಕೂಲವೂ ಆಯಿತು.

Advertisement

12ರವರೆಗೆ ಮುಂದುವರಿದ ಸಮಸ್ಯೆ: ಬೆಳಗಿನಜಾವದಿಂದ ಮಧ್ಯಾಹ್ನ 12ರವರೆಗೂ ಈ ವ್ಯತ್ಯಯದ ಬಿಸಿ ಪ್ರಯಾಣಿಕರಿಗೆ ತಟ್ಟಿತು. 12.08ಕ್ಕೆ ಸಮಸ್ಯೆಯನ್ನು ಸರಿಪಡಿಸಲಾಯಿತು. ಇದರಿಂದ ಎಂದಿನಂತೆ ಸೇವೆ ಪುನಾರಂಭ ವಾಯಿತು ಎಂದು ನಿಗಮದ ಸಾರ್ವಜನಿಕ ಸಂಪರ್ಕಾಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

19 ರೈಲುಗಳಲ್ಲಿ ಸಂಚರಿಸುವ ಜನ 15 ರೈಲುಗಳಲ್ಲಿ! : ನಿತ್ಯ ಬೆಳಗ್ಗೆ 5ರಿಂದ ಮಧ್ಯಾಹ್ನ 12ರವರೆಗೆ ಅಂದಾಜು 15 ಮೆಟ್ರೋ ರೈಲುಗಳು ಕಾರ್ಯಾಚರಣೆ ಮಾಡಿದ್ದು, 1.30 ಲಕ್ಷ ಜನ ಪ್ರಯಾಣಿಸಿದ್ದಾರೆ. ಸಾಮಾನ್ಯವಾಗಿ ಉಳಿದ ದಿನಗಳಲ್ಲಿ ಇದೇ ಅವಧಿಯಲ್ಲಿ 19 ರೈಲುಗಳು ಸಂಚರಿಸುತ್ತವೆ. 1.35 ಲಕ್ಷ ಜನ ಪ್ರಯಾಣಿಸುತ್ತಾರೆ. ಅಂದರೆ ಪ್ರಯಾಣಿಕರ ಸಂಖ್ಯೆಯಲ್ಲಿ ಕೇವಲ 5 ಸಾವಿರ ವ್ಯತ್ಯಾಸ ಆಗಿದೆ. ಇದಕ್ಕಿಂತ ಹೆಚ್ಚಾಗಿ 19 ರೈಲುಗಳಲ್ಲಿ ಸಂಚರಿಸುವ ಜನ, 15 ರೈಲುಗಳಲ್ಲೇ ಪ್ರಯಾಣಿಸಿದ್ದಾರೆ. ಇದರಿಂದ ಪ್ರಯಾಣಿಕರು ಹೈರಾಣಾದರು ಎನ್ನಲಾಗಿದೆ.

ಸಂಪರ್ಕ ಕಲ್ಪಿಸಲು ಹೋಗಿ ಸೇವೆ ವ್ಯತ್ಯಯ!: ಬೈಯಪ್ಪನಹಳ್ಳಿ- ಕೆ.ಆರ್‌. ಪುರ ನಡುವೆ ಮೆಟ್ರೋ ಸಂಪರ್ಕ ಕಲ್ಪಿಸಲು ಸಿಗ್ನಲ್‌ಗ‌ಳ ವೈರಿಂಗ್‌, ವಿದ್ಯುದ್ದೀಕರಣ ಮತ್ತಿತರ ತಾಂತ್ರಿಕ ಕಾರ್ಯಗಳನ್ನು ಬೆಂಗಳೂರು ಮೆಟ್ರೋ ರೈಲು ನಿಗಮ (ಬಿಎಂಆರ್‌ ಸಿಎಲ್‌) ಕೈಗೆತ್ತಿಕೊಂಡಿದೆ. ಈ ನಿರ್ವಹಣಾ ಕಾರ್ಯ ಸಾಮಾನ್ಯವಾಗಿ ತಡರಾತ್ರಿಯಿಂದ ಬೆಳಗಿನಜಾವ 4.30ರವರೆಗೆ ನಡೆಯುತ್ತದೆ. ಆದರೆ, ಮಂಗಳವಾರ ಈ ಕಾರ್ಯ ತುಸು ತಡವಾಗಿ ಮುಗಿಯಿತು. ಇದು ಕಾರ್ಯಾಚರಣೆ ವ್ಯತ್ಯಯದ ರೂಪದಲ್ಲಿ ಪರಿಣಮಿಸಿತು ಎಂದು ನಿಗಮದ ಅಧಿಕಾರಿಗಳು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next