Advertisement

ಪಿಲ್ಲರ್‌ ದುರಂತ: ಮಾರ್ಗದಲ್ಲಿವೆ 100ಕ್ಕೂ ಹೆಚ್ಚು ಉದ್ದದ ಕಂಬಗಳು!

09:21 AM Jan 11, 2023 | Team Udayavani |

ಬೆಂಗಳೂರು: ನಿರ್ಮಾಣ ಹಂತದ ಕಂಬ ಮಗುಚಿ ಎರಡು ಜೀವಗಳು ಬಲಿಯಾದ ಬೆನ್ನಲ್ಲೇ “ನಮ್ಮ ಮೆಟ್ರೋ’ ಕಾಮಗಾರಿ ನಡೆಯುತ್ತಿರುವ ಮಾರ್ಗದುದ್ದಕ್ಕೂ ತಲೆಯೆತ್ತಿರುವ ಅತಿ ಉದ್ದದ ಕಂಬಗಳ ಮೇಲೆ ವಿಶೇಷ ನಿಗಾ ಇಟ್ಟಿರುವ ಬೆಂಗಳೂರು ಮೆಟ್ರೋ ರೈಲು ನಿಗಮ (ಬಿಎಂಆರ್‌ಸಿಎಲ್‌), ಅವೆಲ್ಲವುಗಳಿಗೆ ಮುನ್ನೆಚ್ಚರಿಕೆ ಕ್ರಮವಾಗಿ ಹೆಚ್ಚುವರಿ “ಸಪೋರ್ಟ್‌’ (ಆಸರೆ) ನೀಡಲು ಮುಂದಾಗಿದೆ.

Advertisement

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮಾರ್ಗ ಅದರಲ್ಲೂ ವಿಶೇಷವಾಗಿ ಹೆಬ್ಬಾಳ- ಸೆಂಟ್ರಲ್‌ ಸಿಲ್ಕ್ ಬೋರ್ಡ್‌ ನಡುವೆ ನಡೆಯುತ್ತಿರುವ ಕಾಮಗಾರಿಯಲ್ಲಿ 10 ಮೀಟರ್‌ ಮತ್ತು ಅದಕ್ಕಿಂತ ಎತ್ತರ ಇರುವ ಕಂಬಗಳನ್ನು ಗುರುತಿಸಿ, ಅವುಗಳಿಗೆ ಹೆಚ್ಚುವರಿ ಕಬ್ಬಿಣದ ಹಗ್ಗಗಳನ್ನು ಆಸರೆಯಾಗಿ ನೀಡಲಾಗುತ್ತಿದೆ. ಈ ಮೂಲಕ ಘಟನೆ ಪುನರಾವರ್ತನೆ ಆಗದಿರಲು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುತ್ತಿದೆ. ನಿಗಮದ ಎಂಜಿನಿಯರ್‌ಗಳ ಪ್ರಾಥಮಿಕ ಲೆಕ್ಕಾಚಾರದ ಪ್ರಕಾರ ಸೆಂಟ್ರಲ್‌ ಸಿಲ್ಕ್ಬೋರ್ಡ್‌- ಕೆ.ಆರ್‌. ಪುರ-ಹೆಬ್ಬಾಳ ನಡುವೆ 10-12 ಮೀಟರ್‌ ಗಿಂತಲೂ ಎತ್ತರವಾಗಿರುವ 100-120 ನಿರ್ಮಾಣ ಹಂತದ ಕಂಬಗಳಿವೆ.

ಅವುಗಳಿಗೆ ಹೆಚ್ಚುವರಿ ಸಪೋರ್ಟ್‌ ನೀಡಲಾಗುತ್ತಿದೆ. ಅಷ್ಟೇ ಅಲ್ಲ, ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್ಸಿ)ಗೆ ಈಗಾಗಲೇ ಘಟನೆ ತನಿಖೆಗೆ ಮನವಿ ಮಾಡಿದೆ. ಜತೆಗೆ ರೈಟ್ಸ್‌ ಸಂಸ್ಥೆಗೂ ಘಟನೆಗೆ ಕಾರಣ ಏನಿರಬಹುದು ಎಂದು ತಿಳಿಸುವಂತೆ ಕೋರಲಾಗಿದೆ. ತಜ್ಞರು ವರದಿ ನೀಡಿದ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು. ಈ ಮಧ್ಯೆ ಇಡೀ ಮಾರ್ಗದ ಅಂದರೆ ವಿಮಾನ ನಿಲ್ದಾಣ ಮಾರ್ಗದ ಕಾಮಗಾರಿ ಸ್ಥಗಿತಗೊಳಿಸಲಾಗಿದೆ ಎಂದು ನಿಗಮದ ಹಿರಿಯ ಅಧಿಕಾರಿಯೊಬ್ಬರು “ಉದಯವಾಣಿ’ಗೆ ತಿಳಿಸಿದರು.

ಕೆ.ಆರ್‌.ಪುರ- ಸೆಂಟ್ರಲ್‌ ಸಿಲ್ಕ್ಬೋರ್ಡ್‌ ಮಾರ್ಗದಲ್ಲಿ ಮೇಲ್ಸೇತುವೆಗಳು ಬರುತ್ತವೆ. ಕೆಲವು ಕಡೆಗಳಲ್ಲಿ ಆ ಸೇತುವೆಗಳ ಮೇಲಿನಿಂದ ಮೆಟ್ರೋ ಮಾರ್ಗ ಹಾದುಹೋಗಬೇಕಾಗುತ್ತದೆ. ಹಾಗಾಗಿ, ಕಂಬಗಳು ಹೆಚ್ಚು ಎತ್ತರದಲ್ಲಿವೆ. ಏರ್‌ ಪೋರ್ಟ್‌ ಮಾರ್ಗದಲ್ಲಿನ ಎತ್ತರದ ಕಂಬಗಳನ್ನೂ ಗುರುತಿಸಲು ಆ ಮಾರ್ಗದ ಎಂಜಿನಿಯರ್‌ಗಳಿಗೆ ಸೂಚಿಸಲಾಗಿದೆ ಎಂದರು. ಮತ್ತೂಂದೆಡೆ ಕಂಬಗಳ ನಿರ್ಮಾಣ ವ್ಯವಸ್ಥೆಯಲ್ಲಿ ತಾಂತ್ರಿಕ ಬದಲಾವಣೆಗೂ ಚಿಂತನೆ ನಡೆಸಿದೆ.

ಸಾಮಾನ್ಯವಾಗಿ ಮೆಟ್ರೋ ಯೋಜನೆಗಳಲ್ಲಿ 1ರಿಂದ 2 ಮೀಟರ್‌ಗಳಲ್ಲಿ ಜೋಡಿಸುತ್ತ ವಿವಿಧ ಹಂತಗಳಲ್ಲಿ ಕಂಬಗಳನ್ನು ನಿರ್ಮಿಸಲಾಗುತ್ತದೆ. ಈ ಪದ್ಧತಿಯಲ್ಲಿ ಕಂಬಗಳ ಉದ್ದಕ್ಕೂ ಗೆರೆಗಳು ಬರುತ್ತವೆ. ಅಲ್ಲದೆ, ಪ್ರತಿ ಹಂತದಲ್ಲೂ ಕಾಂಕ್ರೀಟ್‌ ತಯಾರಿಸಬೇಕಾಗುತ್ತದೆ. ರಸ್ತೆ ಮಧ್ಯೆ ಕಾಮಗಾರಿ ನಡೆಯುವುದರಿಂದ ಇದರ ನಿರ್ವಹಣೆ ಕಷ್ಟ ಎಂಬ ಕಾರಣಕ್ಕೆ 10-12 ಮೀಟರ್‌ ಎತ್ತರದ ಕಂಬವನ್ನು ಒಂದೇ ಹಂತದಲ್ಲಿ “ನಮ್ಮ ಮೆಟ್ರೋ’ ಯೋಜನೆಯಲ್ಲಿ ನಿರ್ಮಿಸಲಾಗುತ್ತಿದೆ.

Advertisement

ನಾಗವಾರ ಬಳಿ ಮಂಗಳವಾರ ನಡೆದ ಘಟನೆಯು ಬಿಎಂಆರ್‌ಸಿಎಲ್‌ ಅನುಸರಿಸುತ್ತಿರುವ ಕ್ರಮವನ್ನು ಮರುಚಿಂತನೆಗೆ ಹಚ್ಚಿದ್ದು, ಇದೇ ಕಂಬಗಳನ್ನು ಎರಡು ಹಂತಗಳಲ್ಲಿ ಮಾಡಬಹುದೇ ಎಂಬುದರ ಬಗ್ಗೆ ಯೋಚಿಸಲಾಗುತ್ತಿದೆ. ಉದಾಹರಣೆಗೆ 12 ಮೀಟರ್‌ ಉದ್ದದ ಕಂಬ ಇದ್ದರೆ, ಎರಡು ಹಂತಗಳಲ್ಲಿ ಅಂದರೆ ಮೊದಲಿಗೆ 6 ಮೀಟರ್‌ ಕಟ್ಟುವುದು. ಮತ್ತೂಮ್ಮೆ 6 ಮೀಟರ್‌ ನಿರ್ಮಿಸುವ ಬಗ್ಗೆ ಆಲೋಚನೆ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಹಿಂದೆಯೂ ಕಂಬಗಳು ವಾಲಿದ್ದವು: ಹೀಗೆ ನಿರ್ಮಾಣ ಹಂತದಲ್ಲಿರುವ ಉದ್ದದ ಮೆಟ್ರೋ ಕಂಬಗಳು ರಸ್ತೆಗಳಿಗೆ ವಾಲುವುದು ಇದೇ ಮೊದಲಲ್ಲ; 2008-09ರಲ್ಲಿ ಮೊದಲ ಹಂತದ ರೀಚ್‌- 1ರ ಎಂ.ಜಿ. ರಸ್ತೆ- ಬೈಯಪ್ಪನಹಳ್ಳಿ ನಡುವೆ ಕಾಂಕ್ರೀಟ್‌ ಪೂರ್ವ ಹಂತದಲ್ಲಿದ್ದ ಕಂಬ ವಾಲಿತ್ತು. ಎರಡನೇ ಹಂತದಲ್ಲಿ ಕೆ.ಆರ್‌. ಪುರ ಬಳಿ ಕೂಡ ಕಂಬವು ವಾಲಿತ್ತು. ಅದೃಷ್ಟವಶಾತ್‌ ಈ ಎರಡೂ ಘಟನೆಗಳಲ್ಲಿ ಯಾವುದೇ ಅನಾಹುತಗಳು ಸಂಭವಿಸಿರಲಿಲ್ಲ. ಆದರೆ, ಸಂಚಾರದಟ್ಟಣೆಯಿಂದ ಸಾಮಾನ್ಯರಿಗೆ ತೀವ್ರ ತೊಂದರೆ ಉಂಟಾಗಿತ್ತು. ಉದ್ದನೆಯ ಕಂಬಗಳು ವಾಲುವ ವಿಷಯವು ಗುಣಮಟ್ಟದ ವಿಚಾರಕ್ಕೆ ಸಂಬಂಧಿಸಿದ ಸಭೆಗಳಲ್ಲಿ ಹಲವು ಬಾರಿ ಪ್ರಸ್ತಾಪವೂ ಆಗಿದೆ ಎಂದು ಮೂಲಗಳು ತಿಳಿಸಿವೆ.  ಕಾಂಕ್ರೀಟ್‌ ಪೂರ್ವದ ಸುಮಾರು 12 ಮೀಟರ್‌ ಎತ್ತರದ ಒಂದು ಕಂಬವು ಹೆಚ್ಚು- ಕಡಿಮೆ 2.5ರಿಂದ 3 ಟನ್‌ ತೂಕ ಇರುತ್ತದೆ. ಅಂದಾಜು 28-32 ಎಂಎಂ ಗಾತ್ರದ ಕಬ್ಬಿಣದ ಸರಳುಗಳಿಂದಾಗಿ ಅದು ಹೆಚ್ಚು ಭಾರವಾಗಿರುತ್ತದೆ. ಒಂದು ಕಂಬಕ್ಕೆ 6 ಕ್ಯುಬಿಕ್‌ ಮೀಟರ್‌ ಅಂದರೆ ಎರಡು ಟ್ರ್ಯಾಕ್ಟರ್‌ ಲೋಡ್‌ ನಷ್ಟು ಕಾಂಕ್ರೀಟ್‌ ಬೇಕಾಗುತ್ತದೆ.

-ವಿಜಯ ಕುಮಾರ್‌ ಚಂದರಗಿ

Advertisement

Udayavani is now on Telegram. Click here to join our channel and stay updated with the latest news.

Next