Advertisement

Namma clinic: 5 ತಾಲೂಕುಗಳಿಗಿಲ್ಲ ನಮ್ಮ ಕ್ಲಿನಿಕ್‌ ಭಾಗ್ಯ

03:54 PM Aug 14, 2023 | Team Udayavani |

ಚಿಕ್ಕಬಳ್ಳಾಪುರ: ಹಿಂದಿನ ಸರ್ಕಾರದಲ್ಲಿ ರೂಪಿಸಿ ಅನುಷ್ಠಾನಗೊಳಿಸಿರುವ ನಮ್ಮ ಕ್ಲಿನಿಕ್‌ಗಳು ಬಗ್ಗೆ ಜನರಲ್ಲಿ ಒಳ್ಳೆಯ ಅಭಿಪ್ರಾಯ ಇದ್ದರೂ, ನಿರೀಕ್ಷಿತ ಮಟ್ಟದಲ್ಲಿ ವೈದ್ಯಕೀಯ ಸೌಲಭ್ಯಗಳು ನಮ್ಮ ಕ್ಲಿನಿಕ್‌ನಲ್ಲಿ ಸಿಗುತ್ತಿಲ್ಲ ಎಂಬ ಕೊರಗು ನಗರ ನಿವಾಸಿಗಳ ಸಾಮಾನ್ಯ ಮಾತು.

Advertisement

ಹೌದು…ಜಿಲ್ಲೆಯ 8 ತಾಲೂಕುಗಳ ಪೈಕಿ ಕೇವಲ ಚಿಕ್ಕಬಳ್ಳಾಪುರ, ಚಿಂತಾಮಣಿ ಹಾಗೂ ಬಾಗೇಪಲ್ಲಿ ತಾಲೂಕುಗಳಲ್ಲಿ ಮಾತ್ರ ನಮ್ಮ ಕ್ಲಿನಿಕ್‌ಗಳು ಕಾರ್ಯನಿರ್ವಹಿಸುತ್ತಿದ್ದರೂ, ನಮ್ಮ ಕ್ಲಿನಿಕ್‌ಗಳು ಕಾರ್ಯನಿರ್ವಹಿಸುವ ಸಮಯ, ಕ್ಲಿನಿಕ್‌ಗಳಲ್ಲಿ ಅವಶ್ಯಕವಾದ ಮಾತ್ರೆ, ಚುಚ್ಚು ಮದ್ದುಗಳ ಕೊರತೆ ಬಗ್ಗೆ ಜನರ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

ನಮ್ಮ ಕ್ಲಿನಿಕ್‌ನಲ್ಲಿ ಇನ್ನಷ್ಟು ಗುಣಮಟ್ಟದ ಸೌಲಭ್ಯ ಬೇಕು: ಜಿಲ್ಲಾ, ತಾಲೂಕು, ಸಮುದಾಯ ಆರೋಗ್ಯ ಹಾಗೂ ನಗರ ಆರೋಗ್ಯ ಕೇಂದ್ರಗಳ ಮೇಲಿನ ಒತ್ತಡ ಕಡಿಮೆ ಮಾಡುವುದರ ಜತೆಗೆ ಜನರಿಗೆ ಸಮೀಪದಲ್ಲಿ ಸಕಾಲದಲ್ಲಿ ಚಿಕಿತ್ಸೆ ದೊರೆಯಬೇಕೆಂಬ ಮಹತ್ವಕಾಂಕ್ಷಿ ಹೊತ್ತು ಆರಂಭಿಸಿರುವ ನಮ್ಮ ಕ್ಲಿನಿಕ್‌ಗಳ ಪರಿಕಲ್ಪನೆ ಬಗ್ಗೆ ಜನ ಮೆಚ್ಚುಗೆ ವ್ಯಕ್ತಪಡಿಸಿದರೂ, ಕ್ಲಿನಿಕ್‌ಗಳಲ್ಲಿ ಇನ್ನಷ್ಟು ಗುಣಮಟ್ಟದ, ಅವಶ್ಯಕವಾಗಿರುವ ವೈದ್ಯಕೀಯ ಸೇವೆಗಳು ಲಭ್ಯ ಆಗಬೇಕೆಂಬ ಆಗ್ರಹ ಜನರಿಂದ ಕೇಳಿ ಬರುತ್ತಿದೆ. ನಮ್ಮ ಕ್ಲಿನಿಕ್‌ಗಳಲ್ಲಿ ಬಿಪಿ, ಶುಗರ್‌ ಪರೀಕ್ಷೆ ಬಿಟ್ಟರೆ ಹೆಚ್ಚೇನು ಮಾಡಲ್ಲ. ಶುಗರ್‌, ಬಿಪಿ ಟೆಸ್ಟ್‌ ಮಾಡಿದರೆ ಅದಕ್ಕೆ ಮಾತ್ರೆ ಕೊಡಲ್ಲ. ಕೆಮ್ಮ, ಜ್ವರ, ತಲೆನೋವು ಅಂತ ಕ್ಲಿನಿಕ್‌ಗೆ ಹೋದರೆ ಲಭ್ಯ ಇದ್ದರೆ ಮಾತ್ರೆ ಕೊಡುತ್ತಾರೆ, ಬಿಟ್ಟರೆ ಚುಚ್ಚು ಮದ್ದು ಕೊಡುವುದೇ ಇಲ್ಲ ಎನ್ನುವ ಆರೋಪ ಸಹಜವಾಗಿದೆ.

ವೈದ್ಯರು ಹೊರಗಡೆ ಖರೀದಿಸಲು ಚೀಟಿ ಬರೆದುಕೊಡುವುದೇ ಹೆಚ್ಚು. ಇಲ್ಲ ಅಂದರೆ ಜಿಲ್ಲಾಸ್ಪತ್ರೆಗೆ ಹೋಗಿ ತೋರಿಸಿಕೊಳ್ಳಿ ಅಂತಾರೆ. ರಕ್ತ ಪರೀಕ್ಷೆ, ಟಿಬಿ, ಕ್ಷಯ ಮತ್ತಿತರ ಪರೀಕ್ಷೆಗಳು ನಮ್ಮ ಕ್ಲಿನಿಕ್‌ನಲ್ಲಿ ನಡೆದರೆ ಒಳ್ಳೆಯದು ಎನ್ನುವ ಮಾತು ಸಾರ್ವಜನಿಕರಿಂದ ಕೇಳಿ ಬರುತ್ತಿದೆ.

ಸಮಯ ಬದಲಾವಣೆಗೆ ಪಟ್ಟು:  ಬೆಳಗ್ಗೆ 9 ರಿಂದ ಮಧ್ಯಾಹ್ನ 1:30ರ ವರೆಗೂ ಬಳಿಕ ಮಧ್ಯಾಹ್ನ 2 ರಿಂದ ಸಂಜೆ 4 ಗಂಟೆವರೆಗೂ ಮಾತ್ರ ನಮ್ಮ ಕ್ಲಿನಿಕ್‌ಗಳು ಕಾರ್ಯನಿರ್ವಹಿಸುತ್ತಿವೆ. ಆದರೆ, ನಮ್ಮ ಕ್ಲಿನಿಕ್‌ಗಳು ಇರುವ ಪ್ರದೇಶದಲ್ಲಿ ಜನ ಬೆಳಗ್ಗೆ ಕೆಲಸ ಕಾರ್ಯಗಳಿಗೆ ಹೋದರೆ ವಾಪಸ್‌ ಬರುವುದೇ ರಾತ್ರಿ ಆಗುತ್ತವೆ. ಅಷ್ಟರೊಳಗೆ ನಮ್ಮ ಕ್ಲಿನಿಕ್‌ಗಳ ಸಮಯ ಮುಗಿದು ಬಾಗಿಲು ಹಾಕಿರುತ್ತೇವೆ. ರಾತ್ರಿ ಏನಾದರೂ ಹೆಚ್ಚು ಕಡಿಮೆ ಆಗಿ ಆಸ್ಪತ್ರೆಗೆ ಹೋಗಬೇಕಾದರೆ ಜಿಲ್ಲಾಸ್ಪತ್ರೆ ಅಥವಾ ಖಾಸಗಿ ಆಸ್ಪತ್ರೆಗೆ ಹೋಗಬೇಕು. ಹೀಗಾಗಿ ನಮ್ಮ ಕ್ಲಿನಿಕ್‌ಗಳ ಸಮಯದ ಅವಧಿಯನ್ನು ಆದಷ್ಟು ಸಂಜೆ 6 ರಿಂದ 9, ಬೆಳಗ್ಗೆ 8 ರಿಂದ 10 ಗಂಟೆಯವರೆಗೂ ಮಾಡಿದರೂ ಸೂಕ್ತ ಎನ್ನುವ ಮಾತು ಜನರಿಂದ ಕೇಳಿ ಬರುತ್ತಿದೆ. ಅಲ್ಲದೇ ಸರ್ಕಾರಿ ರಜೆ ಇದ್ದರೆ ನಮ್ಮ ಕ್ಲಿನಿಕ್‌ ಕಾರ್ಯನಿರ್ವಹಿಸುವುದಿಲ್ಲ. ಸರ್ಕಾರಿ ರಜೆ ದಿನಗಳಲ್ಲಿ ಕೂಡ ಕಾರ್ಯನಿರ್ವಹಿಸಿದರೆ ಜನರಿಗೆ ಅನುಕೂಲ ಎಂದು ಜನ ನಮ್ಮ ಕ್ಲಿನಿಕ್‌ ಬಗ್ಗೆ ಸರ್ಕಾರ ಹೆಚ್ಚು ಒತ್ತು ಕೊಟ್ಟು ಅಗತ್ಯ ಮೂಲ ಸೌಕರ್ಯ, ವೈದ್ಯಕೀಯ ಸೌಲಭ್ಯಗಳನ್ನು ಒದಗಿಸಬೇಕೆಂದು ಸಾರ್ವಜನಿಕರ ಒತ್ತಾಸೆಯಾಗಿದೆ.

Advertisement

ಶಿಡ್ಲಘಟ್ಟ, ಗುಡಿಬಂಡೆ, ಗೌರಿಬಿದನೂರಿಗಿಲ್ಲ ನಮ್ಮ ಕ್ಲಿನಿಕ್‌ ಭಾಗ್ಯ:

ಜಿಲ್ಲೆಯ 6 ತಾಲೂಕು ಕೇಂದ್ರಗಳ ಪೈಕಿ ಜಿಲ್ಲಾ ಕೇಂದ್ರ ಚಿಕ್ಕಬಳ್ಳಾಪುರ, ಚಿಂತಾಮಣಿ ಹಾಗೂ ಬಾಗೇಪಲ್ಲಿ ಪಟ್ಟಣದಲ್ಲಿ ಮಾತ್ರ ನಮ್ಮ ಕ್ಲಿನಿಕ್‌ ಇದೆ. ಉಳಿದಂತೆ ಗೌರಿಬಿದನೂರು, ಗುಡಿಬಂಡೆ ಹಾಗೂ ಶಿಡ್ಲಘಟ್ಟ ನಗರದಲ್ಲಿ ಇಲ್ಲ. ಹೊಸದಾಗಿ ತಾಲೂಕುಗಳಾಗಿರುವ ಮಂಚೇನಹಳ್ಳಿ, ಚೇಳೂರಿನಲ್ಲಿ ಕೂಡ ನಮ್ಮ ಕ್ಲಿನಿಕ್‌ ಇಲ್ಲ. ಈ ಭಾಗದಲ್ಲಿ ಕೂಡ ನಮ್ಮ ಕ್ಲಿನಿಕ್‌ ಆಗಬೇಕೆಂಬ ಬೇಡಿಕೆ ಜನರಿಂದ ಇದೆ ಎನ್ನುತ್ತಾರೆ ಆರೋಗ್ಯ ಇಲಾಖೆ ಅಧಿಕಾರಿಗಳು. ಬಾಗೇಪಲ್ಲಿ ಪಟ್ಟಣದಲ್ಲಿ ನಗರ ಆರೋಗ್ಯ ಕೇಂದ್ರ ಇಲ್ಲ. ಸಾಮಾನ್ಯರಿಗೆ, ಕೂಲಿ ಕಾರ್ಮಿಕರಿಗೆ ಅನುಕೂಲವಾಗಲೆಂದು ಆಗ ಆರೋಗ್ಯ ಸಚಿವರಾಗಿದ್ದ ಡಾ.ಕೆ.ಸುಧಾಕರ್‌ ಮೇಲೆ ಒತ್ತಡ ತಂದು ನಮ್ಮ ಕ್ಲಿನಿಕ್‌ ತೆರೆಯಲಾಗಿದೆಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದರು.

ಸರಾಸರಿ 30 ರಿಂದ 50 ರೋಗಿಗಳು ಭೇಟಿ:

ನಮ್ಮ ಕ್ಲಿನಿಕ್‌ಗೆ ರೋಗಿಗಳ ಬರುವುದು ತುಂಬ ಕಡಿಮೆ. ಮೊದಲೇ ಕ್ಲಿನಿಕ್‌ನಲ್ಲಿ ಮೂಲ ಸೌಕರ್ಯಗಳು ಕಡಿಮೆ ವಿಶೇಷವಾಗಿ ರಕ್ತದೊತ್ತಡ, ಮಧುಮೇಹಕ್ಕೆ ಬಿಟ್ಟರೆ ಬೇರೆ ಪರೀಕ್ಷೆಗಳು ನಡೆಸುವುದಿಲ್ಲ. ಆಗಾಗಿ ನಮ್ಮ ಕ್ಲಿನಿಕ್‌ಗಳಿಗೆ ಬೆರಳಣಿಕೆಯಷ್ಟು ಮಂದಿ ಬರುತ್ತಾರೆ. ಕೆಲವು ಕೆಲವು ಕ್ಲಿನಿಕ್‌ಗಳಿಗೆ ದಿನಕ್ಕೆ 20 ರಿಂದ 30 ಮಂದಿ ಬರುತ್ತಾರೆ. ತಾಲೂಕು ಕೇಂದ್ರಗಳಲ್ಲಿರುವ ನಮ್ಮ ಕ್ಲಿನಿಕ್‌ಗೆ ಕನಿಷ್ಠ 30-50 ಜನ ಬಂದು ತೋರಿಸಿಕೊಳ್ಳುತ್ತಾರೆಂದು ನಮ್ಮ ಕ್ಲಿನಿಕ್‌ ದಾದಿಯರು ಹೇಳುತ್ತಾರೆ.

ನಮ್ಮ ಕ್ಲಿನಿಕ್‌ನಲ್ಲಿ ಇಂಜಕ್ಷನ್‌ ಕೊಡುವುದೇ ಇಲ್ಲ!:

ನಮ್ಮ ಕ್ಲಿನಿಕ್‌ ಒಳ್ಳೆಯ ಯೋಜನೆ. ಆದರೆ ಮೂಲ ಸೌಕರ್ಯಗಳಿಲ್ಲ. ಕ್ಲಿನಿಕ್‌ಗೆ ಬರುವ ರೋಗಿಗಳಿಗೆ ಚುಚ್ಚು ಮದ್ದು ಕೊಡುವುದೇ ಇಲ್ಲ. ಬಹಳಷ್ಟು ಬಾರಿ ಸರಿಯಾಗಿ ಮಾತ್ರೆಗಳೆ ಕೊರತೆ ಇರುತ್ತದೆ. ವೈದ್ಯರು ಪರೀಕ್ಷೆ ಮಾಡಿ ಹೊರಗೆ ಚೀಟಿ ಬರೆದುಕೊಡತಾರೆ. ಇಲ್ಲ ಅಂದರೆ ಜಿಲ್ಲಾಸ್ಪತ್ರೆಗೆ ಹೋಗಿ ತೋರಿಸಿಕೊಳ್ಳಿ ಅಂತಾರೆ. ಇದರಿಂದ ಕೆಲವರು ನಮ್ಮ ಕ್ಲಿನಿಕ್‌ಗೆ ಬರುವುದೇ ಇಲ್ಲ. ಕೆಮ್ಮು, ಜ್ವರ, ನೆಗಡಿ ಅಂತ ಹೋದರೆ ಮಾತ್ರೆ ಇದ್ದರೆ ಕೊಟ್ಟು ಕಳಿಸುತ್ತಾರೆ ಎನ್ನುತ್ತಾರೆ ಆಟೋ ಚಾಲಕ ಸುಬ್ಟಾನ್‌.

15ನೇ ಹಣಕಾಸು ಯೋಜನೆಯಡಿ ಚಿಕ್ಕಬಳ್ಳಾಪುರ, ಚಿಂತಾಮಣಿ ಹಾಗೂ ಬಾಗೇಪಲ್ಲಿ ಪಟ್ಟಣದಲ್ಲಿ ನಮ್ಮ ಕ್ಲಿನಿಕ್‌ಗಳು ಕಾರ್ಯನಿರ್ವಹಿಸು ತ್ತಿವೆ. ಉಳಿದ ಕಡೆಯು ನಮ್ಮ ಕ್ಲಿನಿಕ್‌ಗಳಿಗೆ ಬೇಡಿಕೆ ಇದೆ. ಆದರೆ ಸರ್ಕಾರದ ಹಂತದಲ್ಲಿ ನಿರ್ಧಾರ ಆಗಬೇಕು, ನಮ್ಮ ಕ್ಲಿನಿಕ್‌ಗೆ ನಿತ್ಯ ಸರಾಸರಿ 30 ರಿಂದ 70 ಮಂದಿ ಆಗಮಿಸಿ ಚಿಕಿತ್ಸೆ ಪಡೆಯುತ್ತಿದ್ದಾರೆ. ನಮ್ಮ ಕ್ಲಿನಿಕ್‌ಗಳಿಗೆ ವೈದ್ಯರು, ಸಿಬ್ಬಂದಿ ಕೊರತೆ ಇಲ್ಲ.-ಡಾ.ಎಸ್‌.ಎಸ್‌.ಮಹೇಶ್‌ ಕುಮಾರ್‌. ಜಿಲ್ಲಾ ಆರೋಗ್ಯಾಧಿಕಾರಿ. 

-ಕಾಗತಿ ನಾಗರಾಜಪ್ಪ

Advertisement

Udayavani is now on Telegram. Click here to join our channel and stay updated with the latest news.

Next