Advertisement

ಕ್ಯಾನ್ಸರ್‌ ಗೆದ್ದು ವಿಶ್ವ ಸುಂದರಿಯಾದ ನಮಿತಾ

12:51 PM Jan 28, 2017 | Team Udayavani |

ಹುಬ್ಬಳ್ಳಿ: ಕ್ಯಾನ್ಸರ್‌ ಬಂತೆಂದರೆ ಬದುಕೇ ಮುಗಿಯಿತು ಎಂದು ಭಾವಿಸಿದವರಿಗೆ ಸ್ಫೂರ್ತಿಯಾಗಬಲ್ಲ ಸಾಧನೆಯನ್ನು 2015ರಲ್ಲಿ ಹಾಂಕಾಂಗ್‌ನಲ್ಲಿ ಅಂತಾರಾಷ್ಟ್ರೀಯ ವಲ್ಡ್‌ವೈಡ್‌ ಕ್ವೀನ್‌ ಆಗಿ ಆಯ್ಕೆಯಾದ ನಮಿತಾ ಪಾರಿತೋಷ್‌ ಕೋಹಾಕ್‌ ಮಾಡಿದ್ದಾರೆ. 

Advertisement

ಸಾಧನೆಯ ತುಡಿತ, ಸಕಾರಾತ್ಮಕ  ಚಿಂತನೆ, ಭರವಸೆ, ಉತ್ತಮ ಪುಸ್ತಕಗಳ ಓದಿನ ಮೂಲಕ ಕ್ಯಾನ್ಸರ್‌ ವಿರುದ್ಧ ಯಶಸ್ವಿ ಹೋರಾಟ ಮಾಡಬಹುದು ಎಂಬುದನ್ನು ಅವರು ಸಾಧಿಸಿ  ತೋರಿಸಿದ್ದಾರೆ. ಈಗ ಕ್ಯಾನ್ಸರ್‌ ಕುರಿತು ಗ್ರಾಮೀಣ ಭಾರತದಲ್ಲಿ ಜಾಗೃತಿಗೂ ಮುಂದಾಗಿರುವ ಅವರು “ಉದಯವಾಣಿ’ ಜತೆಗೆ ತಮ್ಮ  ಅಂತರಂಗದ ಅನಿಸಿಕೆಗಳನ್ನು ಹಂಚಿಕೊಂಡರು. 

ಕರ್ನಾಟಕ ಸೇರಿದಂತೆ ದೇಶದ ಎಲ್ಲಿಯೇ ಕ್ಯಾನ್ಸರ್‌ ಜಾಗೃತಿಗೆ ಕರೆದರೆ ಬರುವೆ. ಮುಖ್ಯವಾಗಿ ಗ್ರಾಮೀಣ ಭಾರತಕ್ಕೆ ಒತ್ತು ನೀಡುವೆ. ಗ್ರಾಮೀಣದಲ್ಲಿ ಅನೇಕರಿಗೆ ಚಿಕಿತ್ಸೆಗೆ ಹಣವಿಲ್ಲ. ಜಾಗೃತಿ ಹಾಗೂ ಅಗತ್ಯ ನೆರವು ನಿಟ್ಟಿನಲ್ಲಿ ತಂಡಗಳ  ನಿರ್ಮಾಣದ ಚಿಂತನೆ ಹೊಂದಿದ್ದೇನೆ – ಎಂದರು. ಹೆದರಬೇಡಿ.. ಹೆದರಿಸಿ: ಅಯ್ಯೋ ನನಗೆ ಕ್ಯಾನ್ಸರ್‌ ಬಂದು ಬಿಟ್ಟಿದೆ. 

ಬದುಕು ಮುಗಿದೇ  ಹೋಯಿತು ಎಂದು ಕುಳಿತರೆ ರೋಗ ನಿಮ್ಮನ್ನು ಆವರಿಸಿ, ಇನ್ನಷ್ಟು ಕುಗ್ಗಿಸಿ, ಅಧೈರ್ಯ ಮೂಡಿಸುತ್ತದೆ. ನನ್ನ ಅನುಭವ ಹೇಳುತ್ತೇನೆ. ಕ್ಯಾನ್ಸರ್‌  ಬಂದಿದೆ ಅಷ್ಟೇ. ಅದಕ್ಕೆ ಬೇಕಾದ ಚಿಕಿತ್ಸೆ ಪಡೆಯುತ್ತೇನೆ, ಇತರರಂತೆ ಬದುಕುತ್ತೇನೆ. ಇದ್ದ ಅವಕಾಶಗಳನ್ನು ಬಳಸಿಕೊಂಡು ಸಾಧಿಸುತ್ತೇನೆ ಎಂಬ ಸಕಾರಾತ್ಮಕ ಚಿಂತನೆ, 

ಮನೋಬಲದೊಂದಿಗೆ ಮುನ್ನುಗ್ಗಿದರೆ ಖಂಡಿತವಾಗಿಯೂ ಕ್ಯಾನ್ಸರ್‌ ನಿಮ್ಮನ್ನು ನೋಡಿ ಹೆದರುತ್ತದೆ.  ಕ್ಯಾನ್ಸರ್‌ ಇದೆ ಎಂದು ಗೊತ್ತಾದ ಕೂಡಲೇ ಕುಟುಂಬ, ಸ್ನೇಹಿತರು, ಬಂಧುಗಳು ಸಾಂತ್ವನದ ಮಾತು ಹೇಳುತ್ತಾರೆ. ಕೆಲವರ ಮಾತುಗಳಿಂದ ಹೆದರಿಕೆಯೂ ಮೂಡುತ್ತದೆ. ಆರಂಭದಲ್ಲಿ ನನಗೂ ಇಂತಹ ಅನುಭವಗಳಾದರೂ ಮೆಟ್ಟಿ ನಿಂತಿದ್ದೇನೆ. ಧೈರ್ಯ ನಮ್ಮ ಮನಸ್ಸಿನಲ್ಲೇ ಮೂಡಬೇಕು. 

Advertisement

ಯುವರಾಜ ಸಿಂಗ್‌ ನಮ್ಮ ಮುಂದಿಲ್ಲವೆ?: ಸಿನಿಮಾಗಳಲ್ಲಿ ಕ್ಯಾನ್ಸರ್‌ ಪೀಡಿತರು ಅಂತಿಮವಾಗಿ ಸಾವನ್ನಪ್ಪುತ್ತಾರೆ. ಇಂತಹ ದೃಶ್ಯಗಳೇ  ಸಾಮಾನ್ಯ. ನನ್ನ ಅನಿಸಿಕೆ ಇಷ್ಟೇ: ಚಿತ್ರರಂಗ ಹಾಗೂ ಇತರೆ ಮಾಧ್ಯಮಗಳು ಜನರಲ್ಲಿ ಇನ್ನಷ್ಟು ಭಯ ಬೀಳಿಸುವ ಬದಲು ಆತ್ಮಸ್ಥೈಯ  ತುಂಬುವ ಕಥೆ ಪ್ರದರ್ಶಿಸಬೇಕಾಗಿದೆ. ಕ್ಯಾನ್ಸರ್‌ ಪೀಡಿತ ಅನೇಕರ ಯಶೋಗಾಥೆಗಳು ನಮ್ಮ ಮುಂದಿವೆ. 

ಕ್ರಿಕೆಟಿಗ ಯುವರಾಜ ಸಿಂಗ್‌  ಕ್ಯಾನ್ಸರ್‌ ಪೀಡಿತರಾದರೂ ಎದೆಗುಂದಲಿಲ್ಲ. ಅಗತ್ಯ ಚಿಕಿತ್ಸೆ ಪಡೆದರು. ಇತ್ತೀಚಿನ ಪಂದ್ಯದಲ್ಲಿ 150 ರನ್‌ ಬಾರಿಸಿ, ತಮ್ಮ ಸಾಮರ್ಥ್ಯ  ತೋರಲಿಲ್ಲವೇ? ತಂಡವನ್ನು ಗೆಲ್ಲಿಸಲಿಲ್ಲವೇ? ಮರುಗುವ ಬದಲು μàನಿಕ್ಸ್‌ ಪಕ್ಷಿಯಂತೆ ಜೀವನೋತ್ಸಾಹ ಚಿಮ್ಮಿಸಬೇಕು. ನನ್ನನ್ನೇ  ತೆಗೆದುಕೊಳ್ಳಿ, ಹಲವು ಬಾರಿ ಕಿಮೋಥೆರಪಿಗೆ ಒಳಗಾಗಿ, ಔಷಧಿ ಪಡೆದು ನನ್ನ ತಲೆಗೂದಲು ಉದುರಿ ಹೋದವು.

 ಅಂತಹ ಸ್ಥಿತಿಯನ್ನು  ಮೆಟ್ಟಿನಿಂತೆ. ಆತ್ಮಸ್ಥೈರ್ಯ ಬೆಳೆಸಿಕೊಂಡು ವಿಶ್ವಮಟ್ಟದ ಕ್ವೀನ್‌ ಪಟ್ಟ ಅಲಂಕರಿಸಿದೆ. ಕ್ಯಾನ್ಸರ್‌ ಪೀಡಿತರ ಇನ್ನೂ ಅನೇಕ ಯಶೋಗಾಥೆಗಳು  ಪ್ರೇರಣೆ ಆಗಬೇಕು. ಇನ್ನು ಕೆಲವರು ಕ್ಯಾನ್ಸರ್‌ ಪತ್ತೆಯಾದ ಮೇಲೆ ಶಸ್ತ್ರ ಚಿಕಿತ್ಸೆಗೆ ಒಳಗಾಗುತ್ತಾರೆ, ಕಿಮೋಥೆರಪಿಗೆ ಸುಲಭವಾಗಿ ಒಪ್ಪುವುದಿಲ್ಲ. 

ಕಿಮೋಥೆರಪಿಯಿಂದ ಕೂದಲು ಉದುರುವಿಕೆ ಇತ್ಯಾದಿ ತಾತ್ಕಾಲಿಕ ಪರಿಣಾಮಗಳು ಆಗಬಹುದು. ಆದರೆ, ರೋಗಕ್ಕೆ ಶಾಶ್ವತ  ಪರಿಹಾರ ಸಿಗುತ್ತದೆ. ಕಳೆದು ಹೋಯಿತೆಂದು ಭಾವಿಸಿದ ಸೌಂದರ್ಯವನ್ನೂ ಮರಳಿಸುತ್ತದೆ ಎಂದು ವಿಶ್ವಾಸದಿಂದ ಹೇಳಿದರು.

ಗ್ರಾಮೀಣ ಭಾರತಕ್ಕೆ ಆದ್ಯತೆ: ಕ್ಯಾನ್ಸರ್‌ ಪೀಡಿತರಿಗೆ ಜಾಗೃತಿ ಹಾಗೂ ಸಹಾಯಕ್ಕೆ ಯುವ ಸಮೂಹ ಮುಂದಾಗಬೇಕಾಗಿದೆ. ಸಕಾರಾತ್ಮಕ  ಚಿಂತನೆ ಹಾಗೂ ಭರವಸೆಗಳನ್ನು ಪೀಡಿತರಿಗೆ ಮೂಡಿಸುವ ಸಂಕಲ್ಪ ತೊಡಬೇಕಾಗಿದೆ. ಕ್ಯಾನ್ಸರ್‌ ವಿರುದ್ಧ ಸಮರ ಸಣ್ಣ ಕೆಲಸವೇನಲ್ಲ. ಇದಕ್ಕೆ  ದೊಡ್ಡ ಯತ್ನವೇ ಅಗತ್ಯವಾಗಿದೆ. 

ಕ್ಯಾನ್ಸರ್‌ ಕುರಿತಾಗಿ ಜಾಗೃತಿ ಮೂಡಿಸಲು ನಾನು ನಗರಗಳಿಗಿಂತ ಗ್ರಾಮೀಣ ಭಾರತದ ಕಡೆ ಹೆಚ್ಚು ಒತ್ತು  ನೀಡುತ್ತೇನೆ. ಮಹಾರಾಷ್ಟ್ರದ ನಾಶಿಕ್‌ ಬಳಿಯ ಕುಗ್ರಾಮಗಳಿಗೆ ಭೇಟಿ ನೀಡಿ ಜಾಗೃತಿ ಮೂಡಿಸಿದ್ದೇನೆ. ಸರಕಾರಗಳು ದೊಡ್ಡ ವಾಹನ ಗ್ರಾಮಕ್ಕೆ  ಕಳುಹಿಸಿ ಕ್ಯಾನ್ಸರ್‌ ಪರೀಕ್ಷೆ ಎಂದರೆ ಜನ ಹಿಂದೇಟು ಹಾಕುತ್ತಾರೆ. 

ಕ್ಯಾನ್ಸರ್‌ ರೋಗಿಗಳ ಕುರಿತ ಮಡಿವಂತಿಕೆ ಹಾಗೂ ನಕರಾತ್ಮಕ ಯೋಚನಾ ಲಹರಿ ಬದಲಾಗಬೇಕು. ಕ್ಯಾನ್ಸರ್‌ ಗೆಲ್ಲುವ ಕುರಿತು ಹಿಂದಿ, ಇಂಗ್ಲಿಷ್‌ ಹಾಗೂ ಮರಾಠಿ ಭಾಷೆಯಲ್ಲಿ ನನ್ನ ಪುಸ್ತಕಗಳು ಬಂದಿವೆ. ಸ್ವಯಂ ಅರಿತುಕೊಳ್ಳುವಿಕೆ ಹಾಗೂ ಭಯದ ಜಾಗದಲ್ಲಿ ಸಕಾರಾತ್ಮಕ ಹಾಗೂ ಜಾಗೃತ ಮನೋಭಾವದಿಂದ ಕ್ಯಾನ್ಸರ್‌ ನಿಮ್ಮನ್ನು ಕಂಡು  ಹೆದರುತ್ತದೆ ಎಂದರು.  

* ಅಮರೇಗೌಡ ಗೋನವಾರ

Advertisement

Udayavani is now on Telegram. Click here to join our channel and stay updated with the latest news.

Next