Advertisement

NamvsOmn: ಲೋ ಸ್ಕೋರ್‌ ಥ್ರಿಲ್ಲರ್ ನಲ್ಲಿ ಮಿಂಚಿದ ವಿಸ್ಸೆ: ಸೂಪರ್‌ ಓವರ್‌ ಗೆದ್ದ ನಮೀಬಿಯಾ

10:21 AM Jun 03, 2024 | Team Udayavani |

ಬಾರ್ಬಡೋಸ್: ಟಿ-20 ವಿಶ್ವಕಪ್‌ ನಲ್ಲಿನ ಗ್ರೂಪ್‌ ʼಬಿʼ ಯ ನಮೀಬಿಯಾ vs ಓಮನ್ ನಡುವಿನ ಮೂರನೇ ಪಂದ್ಯ ರೋಚಕ ಸೂಪರ್‌ ಓವರ್‌ ನಲ್ಲಿ ಮುಕ್ತಾಯ ಕಂಡಿದೆ.

Advertisement

ಮೊದಲು ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡ ನಮೀಬಿಯಾ ತನ್ನ ನಿರ್ಧಾರದಂತೆ ಅಮೋಘ ಬೌಲಿಂಗ್‌ ದಾಳಿ ಮಾಡಿ ಓಮನ್‌ ತಂಡವನ್ನು ಕೇವಲ 109 ರನ್‌ ಗಳಿಗೆ ಕಟ್ಟಿ ಹಾಕಿತು.

ಓಮನ್‌ ಪರವಾಗಿ ಖಾಲಿದ್ ಕೈಲ್ ಗರಿಷ್ಠ 34 ರನ್‌ ಗಳಿಸಿದರೆ, ಜೀಶನ್ ಮಕ್ಸೂದ್ 22 ರನ್‌ ಗಳಿಸಿದರು. ಉಳಿದಂತೆ ಓಮನ್‌ ತಂಡದ ಇತರೆ ಆಟಗಾರರು ಬ್ಯಾಟಿಂಗ್‌ ವೈಫಲ್ಯವನ್ನು ಅನುಭವಿಸಿದರು.

ನಮೀಬಿಯಾ ಓಮನ್‌ ಬ್ಯಾಟರ್‌ ಗಳನ್ನು ತನ್ನ ಶ್ರೇಷ್ಠ ಬೌಲಿಂಗ್‌ ದಾಳಿಯಿಂದ ಕಟ್ಟಿ ಹಾಕಿದರು. ಟ್ರಂಪೆಲ್ಮನ್ 4 ಪ್ರಾಮುಖ್ಯ ವಿಕೆಟ್‌ ಕಬಳಿಸಿದರೆ, ಅನುಭವಿ ಆಲ್‌ ರೌಂಡರ್‌ ಡೇವಿಡ್‌ ವಿಸ್ಸೆ 3 ವಿಕೆಟ್‌, ಕಪ್ತಾನ ಗೆರ್ಹಾರ್ಡ್ ಎರಾಸ್ಮಸ್ 2 ವಿಕೆಟ್‌ ಪಡೆದು ಮಿಂಚಿದರು.

110 ರ ಕನಿಷ್ಠ ಗುರಿಯನ್ನು ಬೆನ್ನಟ್ಟಿದ ನಮೀಬಿಯಾ ಆರಂಭದಲ್ಲೇ ಮೈಕೆಲ್ ವ್ಯಾನ್ ಲಿಂಗನ್ ಅವರ ವಿಕೆಟ್‌ ಕಳೆದುಕೊಂಡಿತು. ಜ್ಯಾನ್‌ ಫ್ರೈಲಿಂಕ್ಬಿ ಅವರ ಸ್ಫೋಟಕ 45 ರನ್‌ , ನಿಕೋಲಾಸ್ ಡೇವಿನ್ ಅವರ 24 ರನ್‌ ಗಳಿಂದ ಸುಲಭವಾಗಿ ಗುರಿ ಮುಟ್ಟುವತ್ತ ಸಾಗುತ್ತಿತ್ತು. ಆದರೆ ಆದಾದ ಬಳಿಕ ಒಂದರ ಮೇಲೊಂದು ವಿಕೆಟ್‌ ಕಳೆದುಕೊಂಡು ಗುರಿಯತ್ತ ತಲುಪಲು ಕಷ್ಟಪಡುವ ಸ್ಥಿತಿ ನಿರ್ಮಾಣವಾಯಿತು.

Advertisement

ಅಂತಿಮ ಓವರ್‌ ನಲ್ಲಿ ಗೆಲ್ಲಲು 5 ರನ್‌ ಗಳ ಅವಶ್ಯಕತೆಯಿತ್ತು. ಆದರೆ ಎರಡು ವಿಕೆಟ್‌ ಕಳೆದುಕೊಂಡು ಗುರಿ ತಲಪಲು ಸಾಧ್ಯವಾಗಲಿಲ್ಲ. ಅಂತಿಮವಾಗಿ ನಮೀಬಿಯಾ 20 ಓವರ್‌ ನಲ್ಲಿ 6 ವಿಕೆಟ್‌ ಕಳೆದುಕೊಂಡು 109 ರನ್‌ ಗಳಿಸಿ ಪಂದ್ಯವನ್ನು ಸಮಬಲ ಮಾಡಿಕೊಂಡಿತು.

ಮೆಹ್ರಾನ್ ಖಾನ್ 3 ಪ್ರಾಮುಖ್ಯವಾದ ವಿಕೆಟ್‌ ನ್ನು ಪಡೆದರು. ಬಿಲಾಲ್ ಖಾನ್, ಅಕಿಬ್ ಇಲ್ಯಾಸ್ ಹಾಗೂ ಅಯಾನ್‌ ಖಾನ್‌ ತಲಾ 1 ವಿಕೆಟ್‌ ಪಡೆದರು.

ರೋಚಕ ಸೂಪರ್‌ ಓವರ್:‌ ಸೂಪರ್‌ ಓವರ್‌ ನಲ್ಲಿ ನಮೀಬಿಯಾ ಪರ ಕಪ್ತಾನ ಗೆರ್ಹಾರ್ಡ್ ಎರಾಸ್ಮಸ್ ಹಾಗೂ ವಿಸ್ಸೆ ಬ್ಯಾಟಿಂಗ್‌ ಇಳಿದರು. ಡೇವಿಡ್‌ ವಿಸ್ಸೆ 4 ಎಸೆತಗಳಲ್ಲಿ  1 ಬೌಂಡರಿ, 1 ಸಿಕ್ಸರ್‌ ಸಿಡಿಸಿದರೆ, ಗೆರ್ಹಾರ್ಡ್‌  2 ಎಸೆತಗಳಲ್ಲಿ 2 ಬೌಂಡರಿ ಬಾರಿಸಿದರು.

6 ಎಸೆತಗಳಲ್ಲಿ 21 ರನ್‌ ಗಳಿಸಿ, 22 ರ ಗುರಿಯನ್ನು ನೀಡಿತು. ಗುರಿ ಬೆನ್ನಟ್ಟಲು ಕ್ರಿಸ್‌ ಗಿಳಿದ ಓಮನ್‌ ನ ನಸೀಮ್ ಖುಷಿ, ಜೀಶನ್ ಮಕ್ಸೂದ್ ದೊಡ್ಡ ಹೊಡೆತಕ್ಕೆ ಪ್ರಯತ್ನ ಮಾಡಿದರೂ ಯಶಸ್ಸು ಗಳಿಸಲಿಲ್ಲ. ನಸೀಮ್‌ ಖುಷಿ ವಿಸ್ಸೆ ಅವರ ಎಸೆತಕ್ಕೆ ವಿಕೆಟ್‌ ಒಪ್ಪಿಸಿದರು. ಬಳಿಕ ಬಂದ ಅಕಿಬ್ ಇಲ್ಯಾಸ್ ಅಂತಿಮ ಎಸೆತದಲ್ಲಿ ಸಿಕ್ಸರ್‌ ಬಾರಿಸಿದರು. ಓಮನ್‌ ಸೂಪರ್‌ ಓವರ್‌ ನಲ್ಲಿ 10 ಗಳಿಸಲು ಅಷ್ಟೇ ಸಾಧ್ಯವಾಯಿತು.

ಡೇವಿಡ್‌ ವಿಸ್ಸೆ ಅವರ ಆಲ್‌ ರೌಂಡ್‌ ಆಟದಿಂದಾಗಿ ಸೂಪರ್‌ ಓವರ್‌ ನಲ್ಲೂ ನಮೀಬಿಯಾ ಭರ್ಜರಿ ಪ್ರದರ್ಶನದಿಂದ ಪಂದ್ಯವನ್ನು ಗೆಲುವನ್ನು ತನ್ನದಾಗಿಸಿಕೊಂಡಿತು.

 

Advertisement

Udayavani is now on Telegram. Click here to join our channel and stay updated with the latest news.

Next