Advertisement

ಬಸ್‌ ನಿಲ್ದಾಣ ಪಾರ್ಕಿಂಗ್‌ ವಿಭಾಗಿಸಿ ನಾಮಫಲಕ

12:29 PM Sep 01, 2018 | |

ನಗರ : ನಗರದ ಮುಖ್ಯ ರಸ್ತೆಯ ಗಾಂಧಿಕಟ್ಟೆಯ ಬಳಿಯಿಂದ ಬಸ್‌ ನಿಲ್ದಾಣದವರೆಗಿನ ಪಾರ್ಕಿಂಗ್‌ಗೆ ಸಂಬಂಧಪಟ್ಟಂತೆ ಪೊಲೀಸ್‌ ಇಲಾಖೆಯಿಂದ ಶುಕ್ರವಾರ ಮತ್ತೆ ನಾಮಫಲಕ ಅಳವಡಿಸಲಾಗಿದ್ದು, ಪೊಲೀಸ್‌ ಇಲಾಖೆ ಅನುಸರಿಸಿರುವ ಈ ಕ್ರಮ ರಿಕ್ಷಾ ಚಾಲಕರಲ್ಲಿ ಮತ್ತೆ ಆತಂಕವನ್ನು ಸೃಷ್ಟಿಸಿದೆ.

Advertisement

ಜಾಗೃತಿ ಸಪ್ತಾಹ ಅಭಿಯಾನದ ಮೂಲಕ ಸಾರ್ವಜನಿಕ ವಲಯದಿಂದ ಅಭಿಪ್ರಾಯ ಸಂಗ್ರಹಿಸಿ ಸೂಪರ್‌ ಟವರ್‌ ಹಾಗೂ ಎ.ಎಂ. ಕಾಂಪ್ಲೆಕ್ಸ್‌ಗೆ ಸಂಬಂಧಪಟ್ಟ ಪಾರ್ಕಿಂಗ್‌ ಅನ್ನು ಕೆಎಸ್‌ ಆರ್‌ಟಿಸಿ ಬಸ್ಸು ನಿಲ್ದಾಣದ ಕೆಳಗಿನ ಪಾರ್ಕಿಂಗ್‌ಗೆ ಸ್ಥಳಾಂತರಿಸಿದ್ದ ಪೊಲೀಸ್‌ ಇಲಾಖೆ ಅನಂತರ ವರ್ತಕರ ಆಕ್ಷೇಪದ ಮೇರೆಗೆ ಮತ್ತೆ ಹಿಂದಿನ ಜಾಗದಲ್ಲೇ ದ್ವಿಚಕ್ರ ಪಾರ್ಕಿಂಗ್‌ಗೆ ಅವಕಾಶ ಕಲ್ಪಿಸಿದ್ದರು.

ತ್ವರಿತ ಫಲಕ ಅಳವಡಿಕೆ
ಈ ಮಧ್ಯೆ 60:40 ಅನುಸರಿಸಿ ರಿಕ್ಷಾ ಪಾರ್ಕಿಂಗ್‌ ಹಾಗೂ ದ್ವಿಚಕ್ರ ವಾಹನಗಳಿಗೆ ಪಾರ್ಕಿಂಗ್‌ ಅವಕಾಶ ಕಲ್ಪಿಸಲಾಗಿತ್ತು. ಒಂದಷ್ಟು ಗೊಂದಲ ಉಂಟಾದಾಗ ಚುನಾವಣೆಯ ಬಳಿಕ ಚರ್ಚಿಸುವ ಭರವಸೆಯನ್ನು ನೀಡಲಾಗಿತ್ತು. ಆದರೆ ಶುಕ್ರವಾರ ಚುನಾವಣೆಯ ದಿನ ಪೊಲೀಸ್‌ ಇಲಾಖೆಯಿಂದ ಮತ್ತೆ ಪಾರ್ಕಿಂಗ್‌ ವಿಭಾಗಿಸಿರುವ ಕುರಿತ ಫಲಕ ಅಳವಡಿಸಲಾಗಿದೆ. ಇದರ ಪ್ರಕಾರ ಅರ್ಧದಿಂದ ಕೆಳಗಿನ ಭಾಗದಲ್ಲಿ ಮಾತ್ರ ರಿಕ್ಷಾಗಳಿಗೆ ಪಾರ್ಕಿಂಗ್‌ ಅವಕಾಶ ಕಲ್ಪಿಸಲಾಗಿದೆ. ಉಳಿದ ರಿಕ್ಷಾದವರು ನಾವೆಲ್ಲಿಗೆ ಹೋಗುವುದು ಎನ್ನುವ ಆತಂಕದಿಂದ ಇದ್ದಾರೆ.

ಡಿ.ಸಿ. ನೋಟಿಫಿಕೇಶನ್‌ನಂತೆ ಕ್ರಮ
ಸೂಪರ್‌ ಟವರ್‌ನ ಮೆಡಿಕಲ್‌ಗಿಂತ ಕೆಳಭಾಗದಲ್ಲಿ ಮಾತ್ರ ಆಟೋ ರಿಕ್ಷಾಗಳಿಗೆ ಪಾರ್ಕಿಂಗ್‌ ಅವಕಾಶವಿರುವ ಕುರಿತು 2012ರ ಡಿಸಿ ನೋಟಿಫಿಕೇಶನ್‌ ಇದೆ. ಅದರ ಮೇಲ್ಭಾಗದಲ್ಲಿ ಫಾರೆಸ್ಟ್‌ ಆಫೀಸ್‌ ತನಕ ದ್ವಿಚಕ್ರ ವಾಹನಗಳಿಗೆ ಅವಕಾಶ ಎಂದಿದೆ. ಜಿಲ್ಲಾಧಿಕಾರಿ ನೊಟಿಫಿಕೇಶನ್‌ ಅನುಸಾರ ಕ್ರಮ ಕೈಗೊಳ್ಳುವುದು ನಮಗೆ ಅನಿವಾರ್ಯ. ಹಾಲಿ ಎರಡು ವಿಭಾಗಗಳಲ್ಲಿ ದ್ವಿಚಕ್ರ ವಾಹನಗಳನ್ನು ರಸ್ತೆಯಲ್ಲಿ ನಿಲ್ಲಿಸುತ್ತಿರುವುದರಿಂದ ಮತ್ತು ರಿಕ್ಷಾಗಳು ಅನಧಿಕೃತವಾಗಿ ಪಾರ್ಕಿಂಗ್‌ ಮಾಡುತ್ತಿರುವುದರಿಂದ ಸಂಚಾರಕ್ಕೆ ತೊಡಕುಂಟಾಗುತ್ತಿದೆ. ನೋಟಿಫಿಕೇಶನ್‌ ನಂತೆ ಈ ಎರಡೂ ವಿಭಾಗಿಸದ ಪಾರ್ಕಿಂಗ್‌ಗಳು ನಗರಸಭೆಯ ಪೇ ಪಾರ್ಕಿಂಗ್‌ ಆಗಿರುತ್ತದೆ. ಸಾರ್ವಜನಿಕ ಪಾರ್ಕಿಂಗ್‌ ಸ್ಥಳವಿದ್ದೂ ನಾವು ಯಾಕೆ ದಂಡ ಕಟ್ಟಬೇಕು ಎನ್ನುವ ಸಾರ್ವಜನಿಕರ ಪ್ರಶ್ನೆಗೂ ನಾವು ಉತ್ತರಿಸಬೇಕಿದೆ. ಜನಾಭಿಪ್ರಾಯವನ್ನೂ ಸಂಗ್ರಹಿಸಿಯೇ ಈ ಕ್ರಮವನ್ನು ಅನುಸರಿಸಲಾಗಿದೆ ಎಂದು ಪುತ್ತೂರು ನಗರ ಪೊಲೀಸ್‌ ಠಾಣೆ ಇನ್ಸ್‌ಪೆಕ್ಟರ್‌ ಮಹೇಶ್‌ ಪ್ರಸಾದ್‌ ಅವರು ಹೇಳಿದ್ದಾರೆ.

ಸ್ಪಂದನೆ ಇಲ್ಲ 
ಶಾಸಕ ಸಂಜೀವ ಮಠಂದೂರು ಅವರಿಗೆ ಮನವಿ ನೀಡಿದ ಸಂದರ್ಭ ಚುನಾವಣೆಯ ಬಳಿಕ ಚರ್ಚಿಸುವ ಭರವಸೆ ನೀಡಿದ್ದರು. ಕಟ್ಟಡದವರಿಗೆ ಹಾಗೂ ರಿಕ್ಷಾದ ಪಾರ್ಕಿಂಗ್‌ಗೆ ಸಂಬಂಧಪಟ್ಟಂತೆ ಜವಾಬ್ದಾರಿ ಹೊಂದಿರುವ ನಗರಸಭೆ ಇಲ್ಲಿ ಮೌನ ವಹಿಸಿದೆ. 60:40 ಅನುಪಾತದ ಕ್ರಮವನ್ನೂ ಅನುಸರಿಸದೆ ಮಧ್ಯ ಭಾಗದಲ್ಲಿ ನೋ ಪಾರ್ಕಿಂಗ್‌ ಮತ್ತು ಮೇಲ್ಭಾಗದಲ್ಲಿ ದ್ವಿಚಕ್ರ ವಾಹನಗಳಿಗೆ ಪಾರ್ಕಿಂಗ್‌ ಅವಕಾಶ ಕಲ್ಪಿಸಲಾಗಿದೆ ಎನ್ನುವ ಆರೋಪ ರಿಕ್ಷಾ ಚಾಲಕರ ಕಡೆಯಿಂದ ಕೇಳಿಬಂದಿದೆ.ಅಷ್ಟು ಚಿಕ್ಕ ಜಾಗದಲ್ಲಿ 10 ರಿಕ್ಷಾಗಳನ್ನೂ ನಿಲ್ಲಿಸಲು ಸಾಧ್ಯವಿಲ್ಲ. ಸುಮಾರು 100 ರಿಕ್ಷಾಗಳು ಹಲವು ವರ್ಷಗಳಿಂದ ಈ ಪಾರ್ಕಿಂಗ್‌ ಮೂಲಕ ಬಾಡಿಗೆ ನಡೆಸುತ್ತಿದ್ದವು.  

Advertisement
Advertisement

Udayavani is now on Telegram. Click here to join our channel and stay updated with the latest news.

Next