Advertisement

ಬಾಗಲಕೋಟೆ ವಿವಿಗೆ ಬಸವಣ್ಣನ ಹೆಸರಿಡಿ; ಸಂಸದ ವಿ. ಶ್ರೀನಿವಾಸ ಪ್ರಸಾದ್‌

05:46 PM May 04, 2022 | Team Udayavani |

ಮೈಸೂರು: ಕರ್ನಾಟಕದಲ್ಲಿ ಬಸವಣ್ಣ ಹೆಸರಿನಲ್ಲಿ ವಿಶ್ವವಿದ್ಯಾನಿಲಯ ಸ್ಥಾಪಿಸಬೇಕು ಎಂದು ಸಂಸದ ವಿ. ಶ್ರೀನಿವಾಸ ಪ್ರಸಾದ್‌ ಸರ್ಕಾರಕ್ಕೆ ಮನವಿ ಮಾಡಿದರು. ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬಸವ ಜಯಂತ್ಯುತ್ಸವ ಸಮಿತಿ ಆಶ್ರಯದಲ್ಲಿ ಮಂಗಳವಾರ ಕಲಾಮಂದಿರದಲ್ಲಿ ಏರ್ಪಡಿಸಿದ್ದ ಬಸವ ಜಯಂತಿಯಲ್ಲಿ ಮಾತನಾಡಿದ ಅವರು, ಕೂಡಲ ಸಂಗಮದಲ್ಲಿ ಬಸವಣ್ಣ ಹೆಸರಿನಲ್ಲಿ ವಿವಿ ಸ್ಥಾಪಿಸಲು ಪ್ರಾಶಸ್ತವಾಗಿದೆ. ಈ ದಿಸೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮನಸ್ಸು ಮಾಡಬೇಕು ಎಂದು ಒತ್ತಾಯಿಸಿದರು.

Advertisement

ಚಾಮರಾಜನಗರದಲ್ಲಿ ಅಂಬೇಡ್ಕರ್‌ ವಿವಿ, ಕೊಡಗಿನಲ್ಲಿ ಕ್ರೀಡಾ ವಿವಿ ಸ್ಥಾಪಿಸಲು ನಿರ್ಧರಿಸುವಂತೆ ಬಾಗಲಕೋಟೆಯಲ್ಲಿ ಬಸವಣ್ಣ ವಿವಿ ಸ್ಥಾಪಿಸಬೇಕು. ಬಾಗಲಕೋಟೆ ತೋಟಗಾರಿಕೆ ವಿವಿಗೆ ಬಸವಣ್ಣ ಹೆಸರು ನಾಮಕರಣ ಮಾಡಬೇಕೆಂದು ಸಲಹೆ ನೀಡಿದರು.

ವೀರಶೈವ ಜಾತಿಯಲ್ಲ, ಧರ್ಮ: ವೀರಶೈವ ಜಾತಿ ಅಲ್ಲ, ಅದೊಂದು ಧರ್ಮ. ಬದುಕಿಗೆ ದಾರಿ ತೋರುವ, ಮೋಕ್ಷಕ್ಕೆ ಕೊಂಡೊಯ್ಯುವ ಬೇಕಾದ ಎಲ್ಲ ರೀತಿಯ ಚಿಂತನೆಗಳು ಬಸವಣ್ಣ ಪ್ರತಿಪಾದಿಸಿದ ಧರ್ಮದಲ್ಲಿದೆ. ಅದು ಮಾನವ ಧರ್ಮ. ಎಲ್ಲ ಜೀವಾತ್ಮಗಳ ಲೇಸನ್ನು ಬಯಸಿದ ಧರ್ಮ ಸಾಧಾರಣ ಅಲ್ಲ ಎಂದರು.

ಜೈನ, ಸಿಖ್‌ ಧರ್ಮಗಳ ರೀತಿಯಲ್ಲಿ ಬಸವಣ್ಣ ಪ್ರತಿಪಾದಿಸಿದ ವೀರಶೈವ-ಲಿಂಗಾಯತ ಧರ್ಮ ವೈದಿಕ ಧರ್ಮದ ವಿರುದ್ಧ ಸಿಡಿದೆದ್ದ ಧರ್ಮವಾಗಿದೆ. ಎಲ್ಲ ಜಾತಿಯ ಶರಣರು ಕಾಣಬಹುದಾದ ಯಾವುದಾದರೂ ಧರ್ಮ ಇದ್ದರೆ ಅದು ವೀರಶೈವ ಧರ್ಮ ಎಂದು ತಿಳಿಸಿದರು.

ಹೃದಯ ಪರಿವರ್ತನೆ: ಅನುಭವ ಮಂಟಪವೆಂದರೆ ಕಟ್ಟಡ ಕಟ್ಟುವುದಲ್ಲ. ಅದು ಹೃದಯಗಳ ಪರಿವರ್ತನೆ ಮತ್ತು ಸಮಾಜದ ಚಿಂತನೆ ನಡೆಯುವ ಸ್ಥಳ. ಪ್ರತಿ ಗ್ರಾಮ ಪಂಚಾಯಿತಿಯೂ ಅನುಭವ ಮಂಟಪವಾಗ ಬೇಕಿತ್ತು. ಈಗ ಅವುಗಳು ಜನರ ರಕ್ತ ಹೀರುವ ಕೇಂದ್ರಗಳಾಗಿವೆ ಎಂದು ವಿಷಾದಿಸಿದರು.

Advertisement

ನಾಗರಿಕತೆ, ವಿಜ್ಞಾನ, ಮಾಹಿತಿ ತಂತ್ರಜ್ಞಾನ ನಾಗ ಲೋಟದಲ್ಲಿ ಓಡುತ್ತಿದೆ. ಆದರೆ ಇವತ್ತಿಗೂ ಸಮಾಜ ದಲ್ಲಿ ಜಾತೀಯತೆ, ಮೌಡ್ಯತೆ ಇದೆ. ನಮ್ಮದು ದೇಶ ದೊಡ್ಡದು, ಚಿಂತನೆ ಸಣ್ಣದು ಎಂಬಂತಾಗಿದೆ. ಅಸಮಾನತೆಗಳು ಜೀವಂತವಾಗಿರುವುದು ವಚನಗಳ ಪ್ರಭಾವ ಸಾಕಷ್ಟು ಪ್ರಮಾಣದಲ್ಲಿ ಆಗಿಲ್ಲ ಎಂಬುದನ್ನು ಸೂಚಿಸುತ್ತದೆ ಎಂದರು. ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸಾನಿಧ್ಯವಹಿಸಿದ್ದರು.

ಮೇಯರ್‌ ಸುನಂದಾ ಫಾಲನೇತ್ರ, ಶಾಸಕರಾದ ಜಿ. ಟಿ.ದೇವೇಗೌಡ, ಎಸ್‌.ಎ. ರಾಮದಾಸ್‌, ವಿಧಾನ ಪರಿ ಷತ್‌ ಸದಸ್ಯರಾದ ಡಾ.ಡಿ. ತಿಮ್ಮಯ್ಯ, ಸಿ.ಎನ್‌.ಮಂಜೇಗೌಡ, ಮೈಲ್ಯಾಕ್‌ ಅಧ್ಯಕ್ಷ ಎನ್‌.ವಿ.ಫ‌ಣೀಶ್‌, ಕರ್ನಾಟಕ ಮೃಗಾಲಯ ಪ್ರಾಧಿಕಾರದ ಅಧ್ಯಕ್ಷ ಎಲ್‌. ಆರ್‌.ಮಹದೇವಸ್ವಾಮಿ, ಕಾಡಾ ಅಧ್ಯಕ್ಷ ಎನ್‌. ಶಿವಲಿಂಗಯ್ಯ, ಕನ್ನಡ ಪುಸ್ತಕ ಪ್ರಾಧಿ ಕಾರದ ಅಧ್ಯಕ್ಷ ಡಾ.ಎಂ.ಎನ್‌.ನಂದೀಶ್‌ ಹಂಚೆ, ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್‌, ಜಿಪಂ ಸಿಇಒ ಪೂರ್ಣಿಮಾ,
ಮುಡಾ ಅಧ್ಯಕ್ಷ ಡಾ.ಡಿ.ಬಿ.ನಟೇಶ್‌, ಎಸ್‌ಪಿ ಆರ್‌. ಚೇತನ್‌ ಇತರರು ಇದ್ದರು.

ಕ್ರಾಂತಿ ಯೋಗಿ ವಿಡಿಯೋ ಲೋಕಾರ್ಪಣೆ
ವಿದ್ವತ್‌ ಇನ್ನೋವೇಟಿವ್‌ ಸಲ್ಯೂಷನ್ಸ್‌ ಸಂಸ್ಥೆ ನಿರ್ಮಾಣದ ಸೋಮಶೇಖರ್‌ ಜಿಗಣಿ ರಚನೆಯ ನೀತು ನಿನಾದ್‌ ಸಂಗೀತ ಸಂಯೋಜಿಸಿರುವ ಕ್ರಾಂತಿ ಯೋಗಿ ವಿಡಿಯೋ ಅಲ್ಬಮ್‌ ಅನ್ನು ಲೋಕಾರ್ಪಣೆ ಮಾಡಲಾಯಿತು. ಅಣ್ಣ ಬಸವಣ್ಣ ಹಾಡು ಪ್ರಸಾರಗೊಂಡಾಗ ಸಭಿಕರಿಂದ ಕರಡತಾನ ಮಾಡಿದರು. ಜತೆಗೆ ಪತ್ರಕರ್ತ ಗಣೇಶ್‌ ಅಮೀನಗಡ ಅವರ ಬಣ್ಣದ ಬದುಕಿನ ಚಿನ್ನದ ದಿನಗಳು ಪುಸ್ತಕ 8ನೇ ಆವೃತ್ತಿ ಬಿಡುಗಡೆ ಮಾಡಲಾಯಿತು.

ಕಲಾ ತಂಡಗಳ ಮೆರವಣಿಗೆ
ಗನ್‌ಹೌಸ್‌ ವೃತ್ತದ ಬಳಿಯಿರುವ ಬಸವೇಶ್ವರರ ಪ್ರತಿಮೆಗೆ ಜಿಲ್ಲಾಡಳಿತದ ವತಿಯಿಂದ ಜಿಲ್ಲಾಧಿಕಾರಿ, ನಗರ ಪೊಲೀಸ್‌ ಆಯುಕ್ತ, ಎಸ್ಪಿ ಹಾಗೂ ಜಿಪಂ ಸಿಇಒ ಮಾಲಾರ್ಪಣೆ ಮಾಡಲಾಯಿತು. ಬಳಿಕ ಸುತ್ತೂರು ಶ್ರೀ, ಹೊಸಮಠದ ಚಿದಾನಂದ ಸ್ವಾಮೀಜಿ, ಶಾಸಕ ಜಿ.ಟಿ. ದೇವೇಗೌಡ ಸೇರಿದಂತೆ ಅನೇಕರು ಪುಷ್ಪನಮನ ಸಲ್ಲಿಸಿದರು. ನಂತರ ಬಸವೇಶ್ವರರ ಪ್ರತಿಮೆಯನ್ನು ಕಲಾಮಂದಿರವರೆಗೆ ಕಲಾತಂಡಗಳೊಂದಿಗೆ ಮೆರವಣಿಗೆ ಮೂಲಕ ಕರೆತರಲಾಯಿತು.

ದಾರ್ಶನಿಕರ ಜಯಂತಿಗಳಿಗೆ ಸರ್ಕಾರಿ ರಜೆ ಕೊಡುವುದು ಸರಿಯಲ್ಲ. ಕಾಯಕವೇ ಕೈಲಾಸವೆಂದು ಪ್ರತಿಪಾದಿಸಿದ ಬಸವಣ್ಣರ ಜಯಂತಿ ರಜೆ ವಾಪಸ್‌ ಪಡೆಯುವಂತೆ ಬಸವ ಜಯಂತ್ಯುತ್ಸವ ಸಮಿತಿ ಸರ್ಕಾರಕ್ಕೆ ಒತ್ತಾಯಿಸಬೇಕು.
● ಜಿ.ಟಿ.ದೇವೇಗೌಡ, ಶಾಸಕ

Advertisement

Udayavani is now on Telegram. Click here to join our channel and stay updated with the latest news.

Next