Advertisement

ವಿದ್ಯಾರ್ಥಿಗಳಿಂದ ನಮ್‌ ಕುಂದಾಪ್ರ ಸ್ವಚ್ಛ ಕುಂದಾಪ್ರ

06:55 PM Nov 21, 2019 | mahesh |

ಕಳೆದ ವರುಷ ಅಕ್ಟೋಬರ್‌ 2 ರ ಗಾಂಧಿ ಜಯಂತಿಯಂದು ಬೃಹತ್‌ ಸ್ವಚ್ಛತಾ ಜಾಗೃತಿ ಅಭಿಯಾನದ ಅಂಗವಾಗಿ, ನಮ್‌ ಕುಂದಾಪ್ರ ಸ್ವಚ್ಛ ಕುಂದಾಪ್ರ ಎನ್ನುವ ಹೆಸರಿನಲ್ಲಿ ಅದ್ಭುತ ಕಾರ್ಯಕ್ರಮವನ್ನು ಬೃಹತ್‌ ಮಟ್ಟದಲ್ಲಿ ಸಂಘಟಿಸಿ ಸುತ್ತಲಿನ ಸಮಾಜದಲ್ಲಿ ಸ್ವಚ್ಛತೆಯ ಬಗೆಗೆ ಮತ್ತಷ್ಟು ಅರಿವು ಮೂಡಿಸಿ ಪ್ರೇರೇಪಣೆ ನೀಡಿದ್ದ ಕುಂದಾಪುರದ ಭಂಡಾರ್‌ಕಾರ್ಸ್‌ ಕಲಾ ಮತ್ತು ವಿಜ್ಞಾನ ಕಾಲೇಜು ಈ ಬಾರಿ ಕೂಡ ತನ್ನ ಕಾರ್ಯ ನಿರಂತರತೆಯನ್ನು ಮೆರೆಯಿತು.

Advertisement

ಈ ಬಾರಿ ಕಾಲೇಜಿನ ಸುಮಾರು 2700ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಸ್ವತ್ಛತೆಯ ಮಹತ್ವದ ಜೊತೆಗೆ ಹಸಿ ಕಸ ಮತ್ತು ಒಣ ಕಸ ವಿಂಗಡಣೆ, ತ್ಯಾಜ್ಯ ನಿರ್ವಹಣೆಯ ಬಗೆಗೆ ಮಾಹಿತಿಯನ್ನು ಮೊದಲು ಒದಗಿಸಲಾಯಿತು. ಈ ವಿಚಾರಕ್ಕೆ ಸಂಬಂಧಿಸಿದಂತೆ ಸಾರ್ವಜನಿಕರಲ್ಲಿ ವಿಶೇಷ ಅರಿವನ್ನು ಮೂಡಿಸಲು ಕರಪತ್ರಗಳನ್ನು ತಯಾರಿಸಲಾಯಿತು. ಬ್ರಹ್ಮಾವರ, ಕುಂದಾಪುರ ಮತ್ತು ಬೈಂದೂರಿನ ವಿವಿಧ ಭಾಗಗಳಿಂದ ಕಾಲೇಜಿಗೆ ಬರುವ ಪ್ರತಿಯೊಬ್ಬ ವಿದ್ಯಾರ್ಥಿ ಕೂಡ ತನ್ನ ಸುತ್ತಲಿನ ಹತ್ತು ಮನೆಗಳಿಗೆ ಈ ಮಾಹಿತಿ ಪತ್ರವನ್ನು ನೀಡಿ ಅವರಲ್ಲಿ ಅರಿವನ್ನು ಎಚ್ಚರಿಸುವ ಕೆಲಸವನ್ನು ವಹಿಸಲಾಗಿತ್ತು. ಅದಕ್ಕೆ ತಕ್ಕ ಹಿಮ್ಮಾಹಿತಿಯ ವ್ಯವಸ್ಥೆ ಕೂಡ ಮಾಡಲಾಯಿತು.

ಹೀಗೆ, ಒಂದೆರಡು ದಿನಗಳಲ್ಲೇ ಮಕ್ಕಳು ಬರೋಬ್ಬರಿ 24,000ಕ್ಕೂ ಅಧಿಕ ಜನರನ್ನು ಸಂಪರ್ಕಿಸಿ ಸ್ವತ್ಛತೆ ಮತ್ತು ನೈರ್ಮಲ್ಯದ ಬಗೆಗೆ ಅರಿವನ್ನು ಮೂಡಿಸುವಂತಹ ಶ್ಲಾಘನೀಯ ಪ್ರಯತ್ನ ಮಾಡಿದ್ದರು. ಗಾಂಧಿ ಜಯಂತಿಯ ದಿನ ವಿಶೇಷವಾಗಿ ಗಂಗೊಳ್ಳಿ, ತ್ರಾಸಿ ಮತ್ತು ಕೆರಾಡಿ ಗ್ರಾಮಗಳಲ್ಲಿ ಈ ಬಗೆಗೆ ವಿಶೇಷ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಆ ದಿನ ಗುರುಹಿರಿಯರ ಮಾರ್ಗದರ್ಶನದಲ್ಲಿ ಭಂಡಾರ್‌ಕಾರ್ಸ್‌ ವಿದ್ಯಾರ್ಥಿಗಳು ಕುಂದಾಪುರ ತಾಲೂಕಿನ ಗ್ರಾಮವಾದ ಗಂಗೊಳ್ಳಿಯಲ್ಲಿ ಜಲ ಸಂರಕ್ಷಣೆ ಮತ್ತು ಪ್ಲಾಸ್ಟಿಕ್‌ ಬಳಕೆಯ ದುಷ್ಪರಿಣಾಮಗಳು, ಜನಜಾಗೃತಿ ಮತ್ತು ಮನೆ ಮನೆ ಸಂಪರ್ಕದ ವಿಶೇಷ ಅಜೆಂಡಾದೊಂದಿಗೆ ವಿಶೇಷವಾಗಿ ಸ್ವತ್ಛತಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲು ನಿರ್ಧರಿಸಿದ್ದರು. ಅದರಂತೆ ಗಂಗೊಳ್ಳಿಯ ಗ್ರಾಮ ಪಂಚಾಯತ್‌ ಸಹಯೋಗದಲ್ಲಿ ಮೂವತ್ತು ಭಂಡಾರ್‌ಕಾರ್ಸ್‌ ವಿದ್ಯಾರ್ಥಿಗಳು ಮೇಲ್‌ಗ‌ಂಗೊಳ್ಳಿಯ ಬಾವಿಕಟ್ಟೆಯಿಂದ ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಹಿರಿಯ ಮಾದರಿ ಪ್ರಾಥಮಿಕ ಶಾಲೆಯ ತನಕ ಸುಮಾರು ಎರಡೂವರೆ ಕಿ. ಮೀ. ವರೆಗೂ ರಸ್ತೆ ಬದಿಯಲ್ಲಿದ್ದ ಪ್ಲಾಸ್ಟಿಕ್‌ ಮತ್ತಿತರ ಕಸದ ತ್ಯಾಜ್ಯಗಳನ್ನು ಆಯ್ದು ಸ್ವತ್ಛಗೊಳಿಸುವ ನಿರ್ಧಾರ ಮಾಡಿದ್ದರು. ಅವರಿಗೆ ಬೆಂಬಲವಾಗಿ 24×7 ಹೆಲ್ಪ್ಲೈನ್‌, ಮೇಲ್‌ಗ‌ಂಗೊಳ್ಳಿಯ ಡಾ. ಬಿ. ಆರ್‌.ಅಂಬೇಡ್ಕರ್‌ ಯುವಕ ಮಂಡಲ, ಅರ್ಚನಾ ಮಹಿಳಾ ಮಂಡಳಿ ಮತ್ತು ಅಮೃತಾ ಯುವತಿ ಮಂಡಳಿಯ ಸದಸ್ಯರು ಮತ್ತು ಸ್ಥಳೀಯ ಜನಪ್ರತಿನಿಧಿಗಳು, ಸ್ಥಳೀಯರು ಸಹಕರಿಸಿದ್ದರು. ಆದಿನ ಅಭಿಯಾನದಡಿಯಲ್ಲಿ ಒಟ್ಟು ಎರಡು ಟನ್‌ ಕಸ ಸಂಗ್ರಹವನ್ನು ವಿದ್ಯಾರ್ಥಿಗಳು ಮತ್ತು ಸ್ಥಳೀಯರು ಸೇರಿ ಮಾಡಿದ್ದರು. ಊರಿನ ವಿದ್ಯಾರ್ಥಿಗಳೇ ಹೆಚ್ಚು ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ಮಕ್ಕಳಿಗೆ ಸೂಕ್ತ ಗ್ಲೌಸ್‌ ಮತ್ತಿತರ ಸೂಕ್ತ ವ್ಯವಸ್ಥೆಗಳನ್ನು ಮಾಡಲಾಗಿತ್ತು.

ಪ್ಲಾಸ್ಟಿಕ್‌ ತ್ಯಾಜ್ಯ ಸಂಗ್ರಹಣೆಯ ಜೊತೆಗೆ ರಸ್ತೆಯ ಇಕ್ಕೆಲಗಳಲ್ಲಿರುವ ಮನೆ ಮತ್ತು ವಾಣಿಜ್ಯ ಸಂಕೀರ್ಣಗಳಿಗೆ ತೆರಳಿ ಕರಪತ್ರವನ್ನು ನೀಡಿ ಜಲ ಸಂರಕ್ಷಣೆ ಮತ್ತು ಪ್ಲಾಸ್ಟಿಕ್‌ ಬಳಕೆಯ ದುಷ್ಪರಿಣಾಮಗಳ ಬಗೆಗೆ ಜನಜಾಗೃತಿ ಮೂಡಿಸುವ ಪ್ರಯತ್ನವನ್ನು ವಿದ್ಯಾರ್ಥಿಗಳು ನಡೆಸಿದ್ದರು. 24×7 ಹೆಲ್ಪ್ಲೈನ್‌ ವಾಹನವನ್ನು ಬಳಸಿಕೊಂಡು ಧ್ವನಿವರ್ಧಕದ ಮೂಲಕವೂ ಜಾಗೃತಿ ಮೂಡಿಸುವ ಪ್ರಯತ್ನ ಮಾಡಲಾಯಿತು. ವಿದ್ಯಾರ್ಥಿ ಸಮುದಾಯದ ಈ ಎಲ್ಲ ಶ್ಲಾಘನೀಯ ನಡೆ ಗಂಗೊಳ್ಳಿಯ ಜನತೆಯಲ್ಲಿ ಹೊಸ ಪ್ರೇರಣೆಯನ್ನು ಮೂಡಿಸುವುದರಲ್ಲಿ ಯಶಸ್ವಿಯಾಯಿತು. ಊರಿನ ಜನತೆ ಈ ಮಕ್ಕಳ ಕೆಲಸವನ್ನು ಮನತುಂಬಿ ಹರಸಿದ್ದರು. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳ ಜೊತೆಗೆ ಅವರನ್ನು ಪ್ರೋತ್ಸಾಹಿಸಿದ ಭಂಡಾರ್‌ಕಾರ್ನ ಗುರುಹಿರಿಯರ ಬಳಗಕ್ಕೆ ಮತ್ತು ಸಹಕಾರ ನೀಡಿದವರಿಗೆ ಅಭಿನಂದನೆಗಳನ್ನು ಸಲ್ಲಿಸಬೇಕಿದೆ. ವಿದ್ಯಾಸಂಸ್ಥೆಯೊಂದರ ಇಂತಹ ಆದರ್ಶ ನಡೆಗಳು ಉಳಿದೆಲ್ಲ ವಿದ್ಯಾಸಂಸ್ಥೆಗಳಿಗೂ ಮಾದರಿಯಾಗಬೇಕಿದೆ ಮತ್ತು ವಿದ್ಯಾರ್ಥಿಗಳ ಇಂತಹ ಸಮಾಜಮುಖೀ ಕಾರ್ಯವನ್ನು ಮುಕ್ತ ಕಂಠದಿಂದ ಪ್ರಶಂಸಿಸಿ ಅವರ ಜೊತೆ ಹೆಗಲು ನೀಡುವ ಜವಾಬ್ದಾರಿಯನ್ನು ಪ್ರತಿಯೊಬ್ಬ ನಾಗರಿಕನೂ ಮಾಡಬೇಕಿದೆ.

Advertisement

ನರೇಂದ್ರ ಎಸ್‌. ಗಂಗೊಳ್ಳಿ
ವಾಣಿಜ್ಯ ಶಾಸ್ತ್ರ ಉಪನ್ಯಾಸಕರು, ಸರಸ್ವತಿ ವಿದ್ಯಾಲಯ ಪದವಿ ಪೂರ್ವ ಕಾಲೇಜು, ಗಂಗೊಳ್ಳಿ

Advertisement

Udayavani is now on Telegram. Click here to join our channel and stay updated with the latest news.

Next