ಮೈಸೂರು: ಉತ್ತಮ ಸಮಾಜ ನಿರ್ಮಾಣಕ್ಕಾಗಿ ಹೋರಾಡಿದ ಮಹನೀಯರಲ್ಲಿ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಮತ್ತು ಸಾಹು ಮಹಾರಾಜ್ ಅವರ ಕೊಡುಗೆ ಅಪಾರ ಎಂದು ಯುವರಾಜ ಕಾಲೇಜಿನ ಸಹಾಯಕ ಪ್ರಾಧ್ಯಾಪಕಿ ಡಾ.ಸೌಭಾಗ್ಯವತಿ ಹೇಳಿದರು.
ಕರ್ನಾಟಕ ದಲಿತ ವೇದಿಕೆ ಜಿಲ್ಲಾ ಘಟಕ ಶನಿವಾರ ನಗರದಲ್ಲಿ ಏರ್ಪಡಿಸಿದ್ದ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಮತ್ತು ಸಾಹು ಮಹಾರಾಜ್ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಶಿಕ್ಷಣದಿಂದ ಮಾತ್ರ ದಲಿತರ ಅಭಿವೃದ್ಧಿ ಸಾಧ್ಯ ಎಂಬುದನ್ನು ಇಬ್ಬರೂ ಮಹನೀಯರು ಮನಗಂಡಿದ್ದರು.
ಬಾಬಾ ಸಾಹೇಬ್ ಅಂಬೇಡ್ಕರ್ ಕೆಳ ಜಾತಿಯವರ ಉದ್ಧಾರಕ್ಕಾಗಿ ಹೋರಾಡಲಿದ್ದಾರೆ ಎಂಬ ಅಪಾರ ನಂಬಿಕೆ, ವಿಶ್ವಾಸ ಹಾಗೂ ಅಭಿಮಾನ ಅವರಲ್ಲಿ ಬೇರೂರಿದ್ದರಿಂದ ಸಾಹು ಮಹಾರಾಜ್ ಅವರು ಅಂಬೇಡ್ಕರ್ ಅವರನ್ನು ನಾಡಿಗೆ ಪರಿಚಯಿಸಿದ ಕೀರ್ತಿಗೆ ಪಾತ್ರರಾಗಿದ್ದಾರೆ. ಹಾಗಾಗಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಎಣ್ಣೆಯಾದರೆ, ಸಾಹು ಮಹಾರಾಜ್ ಬತ್ತಿಯಾಗಿ ಡಾ.ಬಿ.ಆರ್.ಅಂಬೇಡ್ಕರ್‌ರವರು ಎಲ್ಲರೊಳಗಿನ ಬೆಳಕಾಗಿದ್ದಾರೆ ಎಂದರು.
ದಲಿತರಿಗಾಗಿ ಅಂದೇ ಮೀಸಲಾತಿ ಜಾರಿಗೊಳಿಸಿದ್ದ ನಾಲ್ವಡಿಯವರು, ತಮ್ಮ ಆಳ್ವಿಕೆಯಲ್ಲಿ ದಮನಿತರನ್ನು ಮೇಲೇತ್ತುವ ಕಾರ್ಯದಲ್ಲಿ ತೊಡಗಿದ್ದರು. ಕೃಷ್ಣರಾಜ ಸಾಗರ ಜಲಾಶಯವನ್ನು ನಿರ್ಮಿಸಿದ್ದು ಕೃಷ್ಣರಾಜ ಒಡೆಯರ್ ಅವರೇ ಆಗಿದ್ದರೂ ಹೆಸರು ಮಾತ್ರ ಅಣೆಕಟ್ಟು ನಿರ್ಮಾಣಕ್ಕೆ ನೀಲನಕ್ಷೆ ಹಾಕಿಕೊಟ್ಟಂತಹ ಸರ್ ಎಂ.ವಿಶ್ವೇಶ್ವರಯ್ಯ ಅವರದ್ದು,
ಇನ್ನು ಮೈಸೂರು ವಿಶ್ವವಿದ್ಯಾನಿಲಯದ ನಿರ್ಮಾತೃ ಸಹ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರೇ ಆದರೆ, ವಿವಿಯಲ್ಲಿ ಅವರ ಪ್ರತಿಮೆ ಸ್ಥಾಪನೆಗೆ ಸಾಕಷ್ಟು ವಿರೋಧಗಳು ಕೇಳಿಬಂದಿದ್ದು ವಿಪರ್ಯಾಸ ಎಂದು ಬೇಸರ ವ್ಯಕ್ತಪಡಿಸಿದರು. ಇತಿಹಾಸ ತಜ್ಞ ಪೊ›.ನಂಜರಾಜ ಅರಸು ಮಾತನಾಡಿದರು.
ಮೈಸೂರು ಮೆಡಿಕಲ್ ಕಾಲೇಜ್‌ನ ನಿವೃತ್ತ ಡೀನ್ ಮತ್ತು ನಿರ್ದೇಶಕ ಡಾ.ಬಿ.ಕೃಷ್ಣಮೂರ್ತಿ ಅವರನ್ನು ಸನ್ಮಾನಿಸಲಾಯಿತು. ಕರ್ನಾಟಕ ದಲಿತ ವೇದಿಕೆ ಜಿಲ್ಲಾಧ್ಯಕ್ಷ ಹಿನಕಲ್ ಸೋಮು, ರಾಜಾಧ್ಯಕ್ಷ ಡಿ.ಎಸ್.ಸಿದ್ದಲಿಂಗಮೂರ್ತಿ, ವಿಭಾಗೀಯ ಅಧ್ಯಕ್ಷ ನಾಗನಹಳ್ಳಿ ಎಂ.ರೇವಣ್ಣ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಿ.ಎಸ್.ರವಿ ಹಾಗೂ ತಾಲೂಕು ಅಧ್ಯಕ್ಷ ಧನಂಜಯ ಇನ್ನಿತರರು ಹಾಜರಿದ್ದರು.