Advertisement

ಇದು ಬರೀ ಶಾಲೆಯಲ್ಲ ; ಮಾದರಿ ಸರಕಾರಿ ಶಾಲೆ!

10:27 PM Apr 01, 2021 | Team Udayavani |

ಕಾರ್ಕಳ: ಸರಕಾರಿ ಶಾಲೆ ಎನ್ನುವ ಫ‌ಲಕ ನೋಡಿ ಆವರಣದೊಳಗೆ ದೃಷ್ಟಿ ಹಾಯಿಸಿದರೆ ಇದು ಶಾಲೆಯೋ ಅಥವಾ ಕೃಷಿ ಜಮೀನೋ, ಉದ್ಯಾನವೋ ಎಂಬ ಅನುಮಾನ ಮೂಡುತ್ತದೆ. ಹೂವು, ಔಷಧ ಗಿಡಗಳ ಜಗತ್ತು ಶಾಲೆಯನ್ನು ಪ್ರವೇಶಿಸುತ್ತಿದ್ದಂತೆ ಸ್ವಾಗತಿಸುತ್ತದೆ. ಶಾಲೆಯ ಆವರಣವೇ ಸಸ್ಯ  ತೋಟವಾದಂತೆ ಭಾಸವಾಗುತ್ತದೆ.

Advertisement

ನಲ್ಲೂರಿನಲ್ಲಿ  ಸ.ಹಿ.ಪ್ರಾ. ಶಾಲೆಯೊಂದಿದೆ. ಹಲವು ಚಟುವಟಿಕೆಗಳ ಮೂಲಕ ಅಕ್ಷರ  ಕ್ರಾಂತಿ  ಜತೆಗೆ  ಮಕ್ಕಳ ಚಟುವಟಿಕೆಗೆ ಪೂರಕ ವ್ಯವಸ್ಥೆಗಳು ಇಲ್ಲಿವೆ. ಮುಖ್ಯ ಶಿಕ್ಷಕ, ಸಹಶಿಕ್ಷಕರು, ಎಸ್‌ಡಿಎಂಸಿ, ಶಿಕ್ಷಣಾಭಿಮಾನಿಗಳ ಸಹಕಾರದಿಂದ ಶಾಲೆ ವಿವಿಧ ಚಟುವಟಿಕೆಗಳಿಂದ  ಗಮನ ಸೆಳೆಯುತ್ತಿದೆ.

ಇಲ್ಲಿದೆ 115 ಗಿಡಮೂಲಿಕೆಗಳು :

ಶಾಲಾವರಣದಲ್ಲಿ ಗಿಡಮೂಲಿಕೆಗಳ ಸಸಿಗಳ ಧನ್ವಂತರಿ, ಆಯುರ್ವೇದ ಆರೋಗ್ಯ ವನವಿದ್ದು,  115ಕ್ಕೂ  ಅಧಿಕ  ಸಸಿಗಳನ್ನು  ವನದಲ್ಲಿ ನೆಡಲಾಗಿದೆ. ಗಿಡಗಳಿಗೆ  ಹೆಸರನ್ನು ಬರೆಯ ಲಾಗಿದೆ. ಶಿಕ್ಷಕರು, ಮಕ್ಕಳು ಇದನ್ನು   ಆರೈಕೆ ಮಾಡುತ್ತಾರೆ.

ಶಾಲೆಯಲ್ಲಿವೆ  ಹತ್ತಾರು ವಿಶೇಷತೆಗಳು :

Advertisement

ಶಾಲಾ ಕೈತೋಟದಲ್ಲಿ ಹೂವು, ಬಸಳೆ ಇತ್ಯಾದಿ ತರಕಾರಿಗಳಿವೆ. ಗೋಡೆಗಳ ಮೇಲೆ ಪರಿಸರ ಸಂರಕ್ಷಣೆಯ ಜಾಗೃತಿ ವಾಣಿ, ತುಳುನಾಡ

ವೈಭವ, ಮರ-ಗಿಡಗಳಲ್ಲಿ ಮಹಾತ್ಮರು-ಕವಿಗಳ  ಹೆಸರು, ಸುಸಜ್ಜಿತ ಕಲಿಕಾ ಸಾಮಗ್ರಿ,  ನಲಿಕಲಿ, ಶಿಕ್ಷಣದ ರಥ ಪುಟಾಣಿ ದೇವರ ಮನಯಂಗಳದತ್ತ ವಿದ್ಯಾಗಮ ಶಿಕ್ಷಣ, ಗುಬ್ಬಚ್ಛಿ  ನ್ಪೋಕನ್‌, ನಿತ್ಯ ಸ್ಮರಣೆಗಳಿವೆ. ಬಹುಭಾಷಾ ದಿನಪತ್ರಿಕೆ  ಓದು, ಹಸುರು ಶಾಲೆ, ಉತ್ತಮ ಶಾಲೆ ಪ್ರಶಸ್ತಿ ಲಭಿಸಿದೆ.

ಹುಟ್ಟುಹಬ್ಬಕ್ಕೆ  ಸಿಹಿ ಬದಲಿಗೆ ಪುಸ್ತಕ :

ಓದ್ಕೊಳ್ಳಿ ಗ್ರಂಥಾಲಯವಿದೆ. 30ರಿಂದ 40 ಸಾವಿರ ಪುಸ್ತಕಗಳು ಇಲ್ಲಿವೆ. ಮಕ್ಕಳು, ಪೋಷಕರು, ಶಿಕ್ಷಣ ಅಭಿಮಾನಿಗಳು. ಹಳೇ ವಿದ್ಯಾರ್ಥಿಗಳು ಯಾರೇ ಇರಲಿ  ಹುಟ್ಟುಹಬ್ಬ ಸವಿನೆನಪಿಗೆ   ಸಿಹಿ ತಿಂಡಿ ಪಡೆಯುವ ಬದಲು ಗ್ರಂಥಾಲಯಕ್ಕೆ  ಪುಸ್ತಕಗಳನ್ನು  ಇಲ್ಲಿ  ಪಡೆಯಲಾಗುತ್ತದೆ.

ಮುಂದೆ   ವೃತ್ತಿ ಶಿಕ್ಷಣಕ್ಕೆ ಪ್ರೋತ್ಸಾಹ :

ಹೊಸ ಶಿಕ್ಷಣ ನೀತಿಯ  ಆಶಯದಂತೆ  ವೃತ್ತಿ ಶಿಕ್ಷಣ ಅಧಾರಿತ ಶಿಕ್ಷಣಕ್ಕೆ ಪ್ರೋತ್ಸಾಹ ನೀಡುವ ಉದ್ದೇಶ ಶಿಕ್ಷಕರಲ್ಲಿದೆ. ಟೈಲರಿಂಗ್‌, ಭರತನಾಟ್ಯ, ಸಂಗೀತ ಹೀಗೆ ಸ್ವ-ಉದ್ಯೋಗಕ್ಕೆ ಪೂರಕವಾದ   ಯೋಜನೆಗಳನ್ನು ಮುಂದೆ ಹಾಕಿಸಿಕೊಳ್ಳುವ ಚಿಂತನೆ ಶಾಲೆಯಲ್ಲಿದೆ.

“ಸೌಂಡ್‌ ಬಾಡಿ’ ಆಟದ  ಮೈದಾನ :

ಬೌದ್ಧಿಕ ದೃಢತೆಯಷ್ಟೇ  ಶಾರೀರಿಕ ಚಟುವಟಿಕೆಗೆ ಆದ್ಯತೆ ನೀಡುವ ಸಲುವಾಗಿ ಸೌಂಡ್‌ ಬಾಡಿ ಎನ್ನುವ ಆಟದ ಮೈದಾನವನ್ನು 7 ಲಕ್ಷ ರೂ. ವೆಚ್ಚದಲ್ಲಿ  ಇಲ್ಲಿ ಸಿದ್ಧಪಡಿಸಲಾಗಿದೆ.

ಇಲ್ಲಿದೆ ಪರಶುರಾಮ ಕುಟೀರ! :

ಪಠ್ಯದ ಕಲಿಕೆ ಜತೆಗೆ ಜೀವನ ಮೌಲ್ಯ ತಿಳಿಸುವ ಕಾರ್ಯವಾಗಬೇಕೆಂದು  ಹುಟ್ಟಿಕೊಂಡ  ಕುಟೀರ ಶಿಕ್ಷಣಕ್ಕೆ ಪೂರಕವಾಗಿ  ಗುರುಕುಲ ಮಾದರಿಯ ಪರಶುರಾಮ ಕುಟೀರ  ಶಾಲಾವರಣದಲ್ಲಿ  ನಿರ್ಮಿಸಲಾಗಿದೆ.

ಮಕ್ಕಳು, ನೆಮ್ಮದಿ, ಶಾಂತಿ, ತಾಳ್ಮೆ ಮೂಲಕ ಪಾಠ, ಪ್ರವಚನ ಆಲಿಸಿ ಬದುಕು ರೂಪಿಸಲು ನಾಲ್ಕು ಗೋಡೆಗಳಿಂದ ಹೊರಬಂದು ಕುಟೀರದೊಳಗೆ  ತರಗತಿ ನಡೆಸಲಾಗುತ್ತದೆ.

ಡಿಸಿ  ನಮ್ಮ ಶಾಲೆಗೂ ಬರುತ್ತಿದ್ದರೆ…! :

ಮಕ್ಕಳಿಗೆ ಶಾಲೆಯಲ್ಲಿ ನಡೆಯುವ ಎಲ್ಲ ಚಟುವಟಿಕೆಗಳು ಪ್ರಯೋಗಶಾಲೆಯಂತಿವೆ.   ಹೆಚ್ಚಿನ ಮಕ್ಕಳ  ಮನೆಯಲ್ಲಿ  ಕೈತೋಟ, ಕೃಷಿ ಭೂಮಿ ಇರುವುದರಿಂದ ಮನೆಯ ತೋಟದ ಕೆಲಸದಂತೆ ಶಾಲೆಯಲ್ಲಿಯೂ ಮಕ್ಕಳು ಎಲ್ಲ  ಕೆಲಸಗಳನ್ನು ಖುಷಿಯಾಗಿಯೇ ಮಾಡುತ್ತಿರುತ್ತಾರೆ. ಉಡುಪಿ ಜಿಲ್ಲೆಯ ಡಿಸಿಯವರು ಮನೆಯಲ್ಲಿ ಕೃಷಿ ಚಟುವಟಿಕೆಯನ್ನು  ಮಾಡುತ್ತಿರುವ  ದೃಶ್ಯವನ್ನು ಕೆಲ ಮಕ್ಕಳು ಮೊಬೈಲ್‌ನಲ್ಲಿ ವೀಕ್ಷಿಸಿದ್ದು,  ಡಿಸಿ  ನಮ್ಮ ಶಾಲೆಗೂ  ಒಮ್ಮೆ ಬರುತ್ತಿದ್ದರೇ … ಎಂದು ಹೇಳಿ ಮಕ್ಕಳು  ಅಚ್ಚರಿ ಮೂಡಿಸಿದರು.

ಮುಖ್ಯ ಶಿಕ್ಷಕರ ಕನಸಿನ ಕೂಸು ಆರೋಗ್ಯ ವನ :

ವೈದ್ಯ ಕ್ಷೇತ್ರವನ್ನೇ  ಕೋವಿಡ್‌ ಸೋಂಕು ಬುಡಮೇಲು ಮಾಡಿತ್ತು.  ಲಸಿಕೆಗಿಂತ ಮುಂಚಿತವಾಗಿ ಎಲ್ಲರೂ ಇದೇ ಆಯುರ್ವೇದ  ಔಷಧ ಪದ್ಧತಿಯನ್ನು ಮೊರೆ ಹೋಗಿದ್ದರು.  ಮುಂದಿನ ತಲೆಮಾರಿಗೆ  ಪರಿಚಯಿಸುವ ದೃಷ್ಟಿಯಿಂದ ಮುಖ್ಯ ಶಿಕ್ಷಕರ ಕನಸಿನ ಕೂಸಾಗಿ  ಧನ್ವಂತರಿ ಆಯುರ್ವೇದ ಆರೋಗ್ಯ ವನ ಮೂಡಿಬಂದಿದೆ.

ಶಾಲೆಯ ಎಲ್ಲ ಚಟುವಟಿಕೆಗೆ ಶಿಕ್ಷಣ  ಇಲಾಖೆ, ಶಾಸಕರು, ಸಹಶಿಕ್ಷಕರು, ಶಾಲಾಭಿವೃದ್ಧಿ ಸಮಿತಿಯವರು, ಮಕ್ಕಳು, ಪೋಷಕರು ದಾನಿಗಳು, ಶಿಕ್ಷಣ  ಪ್ರೇಮಿಗಳು ಸಹಕರಿಸುತ್ತ ಬಂದಿದ್ದು, ಎಲ್ಲರ ಸಹಕಾರದಿಂದ ಮಕ್ಕಳಿಗೆ ಉತ್ತಮ ವಾತಾವರಣ ನಿರ್ಮಿಸಲು ಸಾಧ್ಯವಾಗಿದೆ. -ನಾಗೇಶ್‌, ಮುಖ್ಯ ಶಿಕ್ಷಕರು

Advertisement

Udayavani is now on Telegram. Click here to join our channel and stay updated with the latest news.

Next