Advertisement

ಸಂಚಾರಕ್ಕೆ ದುಸ್ತರ ನಲ್ಲೂರು ಪರಪ್ಪಾಡಿ -ಹುಕ್ರಟ್ಟೆ ಮಾಳ ಸಂಪರ್ಕ ರಸ್ತೆ

09:38 PM Dec 01, 2019 | Sriram |

ಬಜಗೋಳಿ: ನಲ್ಲೂರು ಗ್ರಾಮ ಪಂಚಾಯತ್‌ ವ್ಯಾಪ್ತಿಯ ನಲ್ಲೂರು ಪರಪ್ಪಾಡಿ ಹುಕ್ರಟ್ಟೆ-ಮಾಳ ಸಂಪರ್ಕ ರಸ್ತೆ ಹೊಂಡಗಳಿಂದ ಆವೃತವಾಗಿ ಸಂಚಾರಕ್ಕೆ ದುಸ್ತರ ವಾಗಿದೆ. ಈ ರಸ್ತೆ ಸುಮಾರು 6 ರಿಂದ 7 ಕಿ.ಮೀ. ಉದ್ದವಿದ್ದು, ಡಾಮರು ಕಾಣದೆ ಹಲವು ದಶಕಗಳು ಕಳೆದಿವೆ. 7 ಕಿ.ಮೀ. ಉದ್ದದ ರಸ್ತೆಯಲ್ಲಿ ಎರಡು ವರ್ಷಗಳ ಹಿಂದೆ ಕೇವಲ 1 ಕಿ.ಮೀ. ಡಾಮರುಗೊಂಡಿದ್ದರೂ ಆ ಭಾಗ ಕೂಡ ಇದೀಗ ಡಾಮರು ಎದ್ದು ಹೋಗಿ ರಸ್ತೆ ಪೂರ್ತಿ ಜಲ್ಲಿಕಲ್ಲುಗಳಿಂದ ಆವೃತವಾಗಿದೆ. ಉಳಿದ 6 ಕಿ.ಮೀ. ರಸ್ತೆ ಕಚ್ಚಾ ರಸ್ತೆ ಯಾಗಿಯೇ ಉಳಿದಿದ್ದು ಈವರೆಗೂ ಡಾಮರು ಕಂಡಿಲ್ಲ.

Advertisement

ರಸ್ತೆಯುದ್ದಕ್ಕೂ ಬೃಹತ್‌ ಗಾತ್ರದ ಹೊಂಡ ನಿರ್ಮಾಣಗೊಂಡಿವೆ. ಹಲವು ಬಾರಿ ಜನಪ್ರತಿನಿಧಿಗಳನ್ನು ಸಂಪರ್ಕಿಸಿದರೂ ಯಾವುದೇ ಪ್ರಯೋಜನವಿಲ್ಲ ಎಂದು ಸ್ಥಳೀಯರು ದೂರಿದ್ದಾರೆ.

ಪರಪ್ಪಾಡಿ ಮಹಾಲಿಂಗೇಶ್ವರ ದೇಗುಲಕ್ಕೆ ಹತ್ತಿರದ ದಾರಿ
ನಲ್ಲೂರು ಗ್ರಾಮದ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಸಂಪರ್ಕಿ ಸುವ ಪ್ರಮುಖ ರಸ್ತೆ ಇದಾಗಿದ್ದು, ಪ್ರತೀ ಸೋಮವಾರ ಹಾಗೂ ತಿಂಗಳ ಸಂಕ್ರಮಣದಂದು ಭಕ್ತರು ಈ ರಸ್ತೆಯನ್ನೇ ಅವಲಂಬಿಸಿದ್ದಾರೆ.

ಈ ರಸ್ತೆಯು ನಲ್ಲೂರು ಗ್ರಾಮ ಪಂಚಾಯತ್‌ ಹಾಗೂ ಮಾಳ ಗ್ರಾಮ ಪಂಚಾಯತ್‌ನ ಹುಕ್ರಟ್ಟೆ ಭಾಗವನ್ನು ಸಂಪರ್ಕಿಸುವ ರಸ್ತೆಯಾದ್ದರಿಂದ ಎರಡು ಗ್ರಾ.ಪಂ.ಗಳ ಗ್ರಾಮಸ್ಥರು ಈ ರಸ್ತೆಯನ್ನೇ ಅವಲಂಬಿಸಿದ್ದಾರೆ.

ಅತ್ಯಂತ ಗ್ರಾಮೀಣ ಭಾಗವಾದ ನಲ್ಲೂರು ಪರಪ್ಪಾಡಿಯಲ್ಲಿ ಸುಮಾರು 500ಕ್ಕೂ ಅಧಿಕ ಮನೆಗಳಿದ್ದು, ಇಲ್ಲಿಯ ಗ್ರಾಮಸ್ಥರು ಬಜಗೋಳಿ ಪೇಟೆಯಲ್ಲಿರುವ ಪಡಿತರ,
ಗ್ರಾ.ಪಂ. ಕಚೇರಿ, ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ವಿದ್ಯಾರ್ಥಿಗಳು ಶಾಲೆ ಕಾಲೇಜು ಸಂಪರ್ಕಿಸಲು ಈ ರಸ್ತೆ ಯನ್ನೇ ಅವಲಂಬಿಸಿದ್ದಾರೆ.

Advertisement

ರಿಕ್ಷಾ ಚಾಲಕರು ಈ ರಸ್ತೆಯಲ್ಲಿ ಸಂಚರಿಸಲು ಹಿಂದೇಟು ಹಾಕುತ್ತಾರೆ.ಮಳೆಗಾಲದಲ್ಲಿ ರಸ್ತೆಯಲ್ಲೇ ನೀರು ನಿಂತು ವಾಹನ ಸವಾರರಿಗೆ ತೀರಾ ಅಪಾಯಕಾರಿ ಯಾದರೆ, ಬೇಸಗೆ ಸಂದರ್ಭ ಸಂಪೂರ್ಣ ಧೂಳಿನಿಂದ ಕೂಡಿರುತ್ತದೆ.ಸಂಬಂಧಪಟ್ಟ ಅಧಿಕಾರಿಗಳು, ಜನಪ್ರತಿನಿಧಿಗಳು ಈ ರಸ್ತೆಯ ತುರ್ತು ದುರಸ್ತಿಗೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಶೀಘ್ರ ಕಾಮಗಾರಿ ಆರಂಭ
ನಲ್ಲೂರು ಭಾಗದ ರಸ್ತೆ ಅಭಿವೃದ್ಧಿಗೆ ಶಾಸಕರು ವಿಶೇಷ ಮುತುವರ್ಜಿ ವಹಿಸಿ ಸೇತುವೆ ಸಹಿತ ರಸ್ತೆ ಅಭಿವೃದ್ಧಿಗೆ 3 ಕೋಟಿ ರೂ. ಅನುದಾನ ಮಂಜೂರುಗೊಳಿಸಿದ್ದು, ಶೀಘ್ರವಾಗಿ ರಸ್ತೆ ಕಾಮಗಾರಿ ಆರಂಭಗೊಳ್ಳುವುದು.
-ಲೋಕೇಶ್‌ ಶೆಟ್ಟಿ,ಅಧ್ಯಕ್ಷರು,ನಲ್ಲೂರು ಗ್ರಾಮ ಪಂಚಾಯತ್‌

ಸ್ಥಳೀಯರಿಗೆ ಈ ರಸ್ತೆ ಆವಶ್ಯಕ
ಪರಪ್ಪಾಡಿ -ಹುಕ್ರಟ್ಟೆ ಭಾಗದ ಸ್ಥಳೀಯರಿಗೆ ಈ ರಸ್ತೆ ಅತ್ಯವಶ್ಯಕವಾಗಿದೆ. ಹಲವು ವರ್ಷಗಳಿಂದ ರಸ್ತೆ ಅಭಿವೃದ್ಧಿಗೆ ಮನವಿ ಮಾಡಿದ್ದರೂ ಈವರೆಗೂ ರಸ್ತೆ ಮಾತ್ರ ಅಭಿವೃದ್ಧಿಯಾಗಿಲ್ಲ.
– ಜಿತೇಶ್‌ ಪೂಜಾರಿ, ನಲ್ಲೂರು

– ಸಂದೇಶ್‌ ಕುಮಾರ್‌

Advertisement

Udayavani is now on Telegram. Click here to join our channel and stay updated with the latest news.

Next