ಬೆಂಗಳೂರು: ‘ನಳಿನ್ ಕುಮಾರ್ ಕಟೀಲ್ ಫಾರ್ ದಕ್ಷಿಣ ಕನ್ನಡ’ ಎಂಬ ಹ್ಯಾಷ್‌ಟ್ಯಾಗ್ ಟ್ವಿಟರ್ ನಲ್ಲಿ ಭಾರಿ ಸದ್ದು ಮಾಡುತ್ತಿದ್ದು, ಬಿಜೆಪಿ ಮಾಜಿ ರಾಜ್ಯಾಧ್ಯಕ್ಷ, ಹಾಲಿ ಸಂಸದ ಕಟೀಲ್ ಅವರಿಗೆ ಮತ್ತೆ ಟಿಕೆಟ್ ನೀಡಬೇಕು ಎಂದು ಟ್ವಿಟ್ಟರ್ ನಲ್ಲಿ ಆಗ್ರಹ ಕೇಳಿ ಬರುತ್ತಿದೆ.
#NalinKumarForDakshinaKannada ಹ್ಯಾಷ್ ಟ್ಯಾಗ್ ನಡಿ ಟ್ವಿಟ್ಟರ್ ಅಭಿಯಾನ ಆರಂಭಿಸಲಾಗಿದೆ. ಕಟೀಲು ಅವರ ಸಾಧನೆ, ಅಭಿವೃದ್ಧಿ ಮತ್ತು ವ್ಯಕ್ತಿತ್ವದ ಕುರಿತಾಗಿ ಟ್ವೀಟ್‌ಗಳ ಮೇಲೆ ಟ್ವೀಟ್ ಪೋಸ್ಟ್ ಮಾಡಿದ್ದಾರೆ. ಅದು ಟ್ವಿಟ್ಟರ್ ಟ್ರೆಂಡಿಂಗ್ ಆಗುತ್ತಿದೆ.
ಲೋಕಸಭಾ ಚುನಾವಣೆ ಹತ್ತಿರದಲ್ಲಿದ್ದು, ದಕ್ಷಿಣ ಕನ್ನಡ ಕ್ಷೇತ್ರದಿಂದ ನಳಿನ್ ಕುಮಾರ್ ಕಟೀಲು ಅವರು ಮತ್ತೆ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಅಲ್ಲದೆ ಇನ್ನೂ ಎರಡು ಮೂರು ಹೆಸರುಗಳು ಕೇಳಿ ಬರುತ್ತಿರುವಂತೆ ನಳಿನ್ ಪರವಾದ ಟ್ವಿಟ್ಟರ್ ಟ್ರೆಂಡ್ ನಡೆದಿರುವುದು ವಿಶೇಷ.
ʻಉರಿಯೋರು ಭೂದಿಯಾಗ್ತಾರೆ, ಕುದಿಯೋರು ಆವಿಯಾಗ್ತಾರೆ. ಈ ಬಾರಿಯೂ ನಮ್ಮಣ್ಣ ನಳಿನ್ ಕುಮಾರ್ ಅವರೇ ಗೆಲ್ತಾರೆʼ, ʻಚಾಲ್ತಿಲಿ ಇಲ್ಲದ ನಾಣ್ಯ ಶಬ್ಧ ಜಾಸ್ತಿ. ಯಾರು ಎಷ್ಟೇ ಬೊಬ್ಬೆ ಹಾಕಿದ್ರೂ ನಮ್ಮಣ್ಣ ನಳಿನ್ ಅವರೇ 2024ಕ್ಕೆ MP. ಬರೆದಿಟ್ಕೊಳಿʼ ʻ ನಮ್ಗಂತೂ ಯಾವ ಫ್ರೀ ಸ್ಕೀಮೂ ಸಿಗ್ಲಿಲ್ಲ. ಆದ್ರೆ ಈ MP ಎಲೆಕ್ಷನ್ ಲ್ಲಿ ನಮ್ಮ ನಳಿನ್ ಅಣ್ಣನ ಗೆಲುವು ಸಂಭ್ರಮಿಸೋಕೆ ನಾವೇ ಫ್ರೀ ಪಟಾಕಿ ಹಂಚ್ತೀವಿʼ, ʻ ಕರಿ ʻMoney’ ಮಾಲೀಕ ನೀವಲ್ಲಾ, ಸಂಘಟನೆಯ ಸಿದ್ಧಾಂತ ಬಿಟ್ಟಿಲ್ಲ.. ನಿಮ್ಮನ್ನು ಗೆಲ್ಲಿಸದಿದ್ರೆ ಆ ದೇವ್ರು ಖಂಡಿತ ಮೆಚ್ಚಲ್ಲ ಅಣ್ಣʼ ಅಂತೆಲ್ಲಾ ಟ್ವೀಟಿಸಿ ಅಭಿಮಾನಿಗಳು ಸಂಸದ ನಳಿನ್ ಕುಮಾರ್ ಅವರಿಗೆ ಬೆಂಬಲ ಸೂಚಿಸಿದ್ದಾರೆ.
ಅಲ್ಲದೆ, ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಹಾಗೂ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಅವರನ್ನು ಟ್ಯಾಗ್ ಮಾಡುವ ಮೂಲಕ ಈ ಬಾರಿಯೂ ನಳಿನ್ ಅವರನ್ನೇ ಅಭ್ಯರ್ಥಿಯಾಗಿ ಮಾಡಬೇಕೆಂದು ಕೇಂದ್ರದ ನಾಯಕರ ಗಮನ ಸೆಳೆಯುವ ಪ್ರಯತ್ನ ಮಾಡಿದ್ದಾರೆ.