Advertisement

ರಾಜ್ಯದಲ್ಲಿ ಮಾತ್ರವಲ್ಲ ತವರು ಜಿಲ್ಲೆಯಲ್ಲೂ ರಾಜ್ಯಾಧ್ಯಕ್ಷರಿಗೆ ಹಿನ್ನಡೆ

12:18 AM May 14, 2023 | Team Udayavani |

ಮಂಗಳೂರು: ಬಿಜೆಪಿಯು 2018ರಲ್ಲಿ ಬಿ.ಎಸ್‌. ಯಡಿಯೂರಪ್ಪ ನೇತೃತ್ವದಲ್ಲಿ ರಾಜ್ಯದಲ್ಲಿ 104 ಸ್ಥಾನ, ದ.ಕ. ಜಿಲ್ಲೆಯಲ್ಲಿ 8ರಲ್ಲಿ 7 ಸ್ಥಾನಗಳನ್ನು ಗೆದ್ದಿತ್ತು. ಆ ಬಾರಿ ದ.ಕ. ಜಿಲ್ಲೆಯಲ್ಲಿ ಟಿಕೆಟ್‌ ಹಂಚಿಕೆ ವೇಳೆ ನೇತೃತ್ವ ವಹಿಸಿದ್ದು ಸಂಸದರಾಗಿದ್ದ ನಳಿನ್‌ ಕುಮಾರ್‌ ಕಟೀಲು. ಆಗ ಅವರ ತೀರ್ಮಾನಗಳು ಯಶ ಕಂಡಿದ್ದವು. ಈ ಬಾರಿ ಬಿಜೆಪಿ ರಾಜ್ಯಾಧ್ಯಕ್ಷರಾಗಿ ನಳಿನ್‌ ರಾಜ್ಯಾದ್ಯಂತ ಪ್ರಚಾರ ಕಾರ್ಯದಲ್ಲಿ ಭಾಗವಹಿಸಿದ್ದರೂ ಯಶಸ್ಸು ಕೈ ಹಿಡಿಯಲಿಲ್ಲ. ರಾಜ್ಯದಲ್ಲಿ 65 ಸ್ಥಾನಕ್ಕೆ ಕುಸಿತ ಕಂಡಿದ್ದರೆ, ಅವರ ತವರು ಜಿಲ್ಲೆಯಲ್ಲೂ, ತವರು ತಾಲೂಕಿನಲ್ಲೂ ವಿಫ‌ಲರಾದರು.

Advertisement

ತವರು ಜಿಲ್ಲೆಯಲ್ಲಿ ನಿರಾಶೆ
ಜಿಲ್ಲೆಯಲ್ಲಿ ಸುಲಭವಾಗಿ ಗೆಲ್ಲುವ ಸ್ಥಾನವಾಗಿದ್ದ ಪುತ್ತೂರನ್ನು ಬಿಜೆಪಿಯೇ ಕೈಚೆಲ್ಲಿಕೊಂಡಿದೆ ಎಂಬ ಮಾತು ವ್ಯಕ್ತವಾಗಿದೆ. ಸಂಜೀವ ಮಠಂದೂರು ಬಗ್ಗೆ ಕಾರ್ಯಕರ್ತರಲ್ಲಿ ಇದ್ದ ಅಸಮಾಧಾನವನ್ನು ಆಲಿಸಿದ್ದ ಹೈಕಮಾಂಡ್‌ ಅವರಿಗೆ ಟಿಕೆಟ್‌ ನಿರಾಕರಿಸಿತ್ತು. ಆದರೆ ಅಲ್ಲಿ ಆಕಾಂಕ್ಷಿಯಾಗಿದ್ದ ಹಿಂದೂ ಹೋರಾಟಗಾರ ಅರುಣ್‌ ಪುತ್ತಿಲ ಅವರಿಗೆ ಕೊಡುವ ಬದಲು ಸುಳ್ಯ ಕ್ಷೇತ್ರದ ಆಶಾ ತಿಮ್ಮಪ್ಪ ಗೌಡರನ್ನು ಪುತ್ತೂರಿನಲ್ಲಿ ಇಳಿಸಿದ್ದಕ್ಕೆ ಮತ್ತೆ ಅಸಮಾಧಾನ ಭುಗಿಲೆದ್ದಿತ್ತು. ಅದನ್ನು ಶಮನ ಮಾಡಲು ಅಧ್ಯಕ್ಷರು ಗಮನ ಕೊಟ್ಟಿದ್ದು ಕಡಿಮೆ. ಈ ಅತೃಪ್ತಿಯ ತೀವ್ರತೆ ವ್ಯಕ್ತವಾಗಿದ್ದು ಫಲಿತಾಂಶದ ವೇಳೆಯೇ. ನಿರೀಕ್ಷೆಗೂ ಮೀರಿ ಮತ ಗಳಿಸಿದ್ದ ಅರುಣ್‌ ಪುತ್ತಿಲ ಅವರು ಕಾಂಗ್ರೆಸ್‌ಗೆ ನೇರ ಹೋರಾಟ ನೀಡಿದ್ದರು. ಇಲ್ಲಿ ಬಿಜೆಪಿ ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟಿರುವುದು ನಳಿನ್‌ ಅವರಿಗೆ ನೈತಿಕವಾಗಿ ಹಿನ್ನಡೆ ಉಂಟು ಮಾಡಿದೆ.

ನನ್ನ ರಾಜ್ಯಾಧ್ಯಕ್ಷ ಅವಧಿ ಮುಗಿಯುತ್ತಾ ಬಂದಿದೆ, ಈ ಬಾರಿ ರಾಜ್ಯದಲ್ಲಿ ಗೆಲುವಿನೊಂದಿಗೆ ಅದನ್ನು ಮುಗಿಸುವೆ ಎಂದು ಹೇಳಿದ್ದ ಆವರಿಗೆ ರಾಜ್ಯದಲ್ಲಿ, ಹಾಗೂ ಅವರ ತವರು ಜಿಲ್ಲೆಯಲ್ಲೇ ನಿರಾಶೆ ಅನುಭವಿಸುವಂತಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next