Advertisement

ಯಡಿಯೂರಪ್ಪ ಜತೆ ನಾನೂ ರಾಜ್ಯ ಪ್ರವಾಸ ಮಾಡುವೆ: ನಳಿನ್‌

10:36 PM Aug 07, 2021 | Team Udayavani |

ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಸಂಪುಟ ರಚನೆಯಾಗಿದ್ದು, ನೂತನ ನಾಯಕತ್ವ, ಹೊಸ ಸಂಪುಟ ಸಚಿವರು, ಪಕ್ಷ ಹಾಗೂ ಸರ್ಕಾರದ ಮುಂದಿನ ಚಟುವಟಿಕೆಗಳು, ಯಡಿಯೂರಪ್ಪ ಅವರ ನಾಯಕತ್ವದ ಕುರಿತು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲು  “ಉದಯವಾಣಿ’ ಜತೆ ಮಾತನಾಡಿದ್ದಾರೆ.

Advertisement

ಹೊಸ ನಾಯಕತ್ವದಿಂದ ಏನು ನಿರೀಕ್ಷೆ ಇಟ್ಟುಕೊಂಡಿದ್ದೀರಿ?

ಬಸವರಾಜ ಬೊಮ್ಮಾಯಿ ಅನುಭವಿ, ಹಿರಿಯ ರಾಜಕಾರಣಿ, ಅತಿ ಹೆಚ್ಚು ಇಲಾಖೆಗಳನ್ನು ನಿರ್ವಹಿಸಿದ್ದಾರೆ. ಅವರ ತಂದೆ ಎಸ್‌.ಆರ್‌. ಬೊಮ್ಮಾಯ ಸಿಎಂ ಆಗಿದ್ದರು. ದೇವೇಗೌಡರು, ರಾಮಕೃಷ್ಣ ಹೆಗಡೆ, ಜೆ.ಎಚ್‌.ಪಟೇಲ್‌ ಅವರಂತಹ ಹಿರಿಯ ರಾಜಕಾರಣಿಗಳ ಜತೆಗೆ ಪಳಗಿದವರು. ಬೊಮ್ಮಾಯಿ ಎರಡು ಮೂರು ಅವಧಿಯಲ್ಲಿ ಯಡಿಯೂರಪ್ಪ ಮಾರ್ಗದರ್ಶನದಲ್ಲಿ ಕೆಲಸ ಮಾಡಿದ್ದಾರೆ. ಕೇಂದ್ರದ  ಮಾದರಿಯಲ್ಲಿ ರಾಜ್ಯದಲ್ಲೂ ಉತ್ತಮ ಆಡಳಿತ ನೀಡುವ ನಿರೀಕ್ಷೆಯಿದೆ.

ಮುಖ್ಯಮಂತ್ರಿಯನ್ನು ಬದಲಾಯಿಸಿ, ಹಳೆಯ ಸಚಿವರನ್ನು ಮುಂದುವರಿಸಲಾಗಿದೆ. ಇದರಿಂದೇನು  ಲಾಭ? 

ಇಲ್ಲ, ಆರು ಮಂದಿ ಹೊಸಬರನ್ನು ಸೇರಿಸಿಕೊಂಡಿದ್ದೇವೆ. ಏಕಾಏಕಿ ಎಲ್ಲವನ್ನೂ ಬದಲಾಯಿಸಲು ಆಗುವುದಿಲ್ಲ.  ವಿಚಾರಕ್ಕೆ ಬದ್ಧರಾಗಿದ್ದವರನ್ನು ತಂದಿದ್ದೇವೆ.

Advertisement

ಕೆಲವು ಸಚಿವರ ಮೇಲೆ ಭ್ರಷ್ಟಾಚಾರ ಆರೋಪವಿದೆಯಲ್ಲ?

ನಮ್ಮ ಸರಕಾರದ ಸಾಧನೆ ಮತ್ತು ಮಂತ್ರಿ ಗಳ ಕಾರ್ಯಶೈಲಿಯನ್ನು ಹಿರಿಯರು ಗಮನಿ ಸುತ್ತಾರೆ. ಸಚಿವರ ಮೇಲಿನ ಆರೋಪದ  ಸತ್ಯಾಸತ್ಯತೆಯನ್ನು ಸಿಎಂ ಪರಿಶೀಲಿಸುತ್ತಾರೆ.

ಬಿಎಸ್‌ವೈ ಜತೆ ಪ್ರವಾಸ ಮಾಡುತ್ತೀರಾ?

ಯಡಿಯೂರಪ್ಪ ನಮ್ಮ ಸರ್ವ ಸಮ್ಮತದ ನಾಯಕ. ಅವರ ನಾಯಕತ್ವದಲ್ಲಿ ಒಟ್ಟಿಗೆ ಪ್ರವಾಸ ಮಾಡುತ್ತೇವೆ. ಅವರ ಪ್ರವಾಸ ನಮ್ಮ ಪಕ್ಷಕ್ಕೆ ಶಕ್ತಿಯನ್ನು ತುಂಬಿ ಮುಂದಿನ ಚುನಾವಣೆಯಲ್ಲಿ  140 ಸ್ಥಾನ ಗೆಲ್ಲಲು ಅನುಕೂಲವಾಗುತ್ತದೆ.

ನಿಗಮ ಮಂಡಳಿ ಅಧ್ಯಕ್ಷರ ಬದಲಾವಣೆ ಇದೆಯೇ?

ಒಂದಷ್ಟು ಬದಲಾವಣೆಗಳಿಗೆ ಆದ್ಯತೆ ನೀಡುತ್ತೇವೆ. ಎಲ್ಲರನ್ನೂ ಬದಲಾಯಿಸುತ್ತೇವೆ ಎಂದು ಹೇಳುವುದಿಲ್ಲ. ಒಂದೂವರೆ ತಿಂಗಳಲ್ಲಿ ಎಲ್ಲವನ್ನೂ ಮಾಡಲಾಗುತ್ತದೆ.

ಕುಮಾರಸ್ವಾಮಿಯವರು ಇದು ಜನತಾ ಸರಕಾರ ಎನ್ನುತ್ತಿದ್ದಾರಲ್ಲ? 

ಕುಮಾರಸ್ವಾಮಿಯವರು ರಾಜಕಾರಣ ಕ್ಕಾಗಿ ಸಂದರ್ಭ ಹುಡುಕುತ್ತಾರೆ. ವಿಪಕ್ಷದವರು ಈ ಸರಕಾರ ಪತನಗೊಳ್ಳುತ್ತದೆ, ಬಿಜೆಪಿ ಇಬ್ಭಾಗ ಆಗುತ್ತದೆ ಎಂಬ ನಿರೀಕ್ಷೆಯಲ್ಲಿದ್ದರು. ಅವರಿಗೀಗ ನಿರಾಸೆಯಾಗಿದೆ.

ಬೊಮ್ಮಾಯಿ ಅವರು ದೇವೇಗೌಡರ ಮನೆಗೆ ಭೇಟಿ ನೀಡಿದ್ಯಾಕೆ?

ದೇವೇಗೌಡರು  ದೇಶದ ಹಿರಿಯ ರಾಜ ಕಾರಣಿ.  ಅವರ ಅನುಭವದ ಮಾರ್ಗದರ್ಶನ ಪಡೆಯಲು ಸಿಎಂ  ಭೇಟಿ ಮಾಡಿದ್ದಾರೆ.

ಬಿಎಸ್‌ವೈ ಬಂಡಾಯ ಸಾರಿದರೆ, ಗೌಡರ ಬೆಂಬಲ ಪಡೆಯುವ ಉದ್ದೇಶ ಇತ್ತೇ ?

ಅಂಥದ್ದೇನಿಲ್ಲ.

ಕೆಲವು ವಲಸಿಗರು ಬಿಜೆಪಿ ತಮ್ಮನ್ನು ನಡು ನೀರಿನಲ್ಲಿ ಕೈ ಬಿಟ್ಟಿತು ಎನ್ನುತ್ತಿದ್ದಾರಲ್ಲ?

ನಮ್ಮಲ್ಲಿ ಯಾರೂ ವಲಸಿಗರಲ್ಲ. ನಮ್ಮ ಪಕ್ಷಕೆ ಬಂದು  ಸ್ಪರ್ಧಿಸಿ ಗೆದ್ದವರೆಲ್ಲರೂ ನಮ್ಮವರೇ. ಯಾರಿಗೆ ಸಂಪುಟದಲ್ಲಿ ಸ್ಥಾನ ತಪ್ಪಿದೆಯೋ ಅವರಿಗೆಲ್ಲ ಮುಂದಿನ ದಿನಗಳಲ್ಲಿ ಒಳ್ಳೆಯ ಅವಕಾಶ ನೀಡಲಾಗುವುದು

ರಾಜ್ಯ ಘಟಕದಲ್ಲಿ ಬದಲಾವಣೆ ಆಗುತ್ತದೆ ಎನ್ನಲಾಗುತ್ತಿದೆಯಲ್ಲ ?

ಮುಂದಿನ ಎರಡು ವರ್ಷ ಪಕ್ಷದ ರಾಜ್ಯ ಘಟಕದಲ್ಲಿ ಯಾವುದೇ ಬದಲಾವಣೆಯಿಲ್ಲ. ಈಗಿರುವ ತಂಡವೇ ಮುಂದಿನ ಚುನಾವಣೆವರೆಗೂ ಮುಂದುವರಿಯುತ್ತದೆ. ಒಂದೆರಡು ಸ್ಥಾನಗಳು ಖಾಲಿ ಉಳಿದಿವೆ, ಅವುಗಳನ್ನು ಮಾತ್ರ ಭರ್ತಿ ಮಾಡಲಾಗುವುದು. ಉಳಿದಂತೆ ಪಕ್ಷದಲ್ಲಿ ಯಾವುದೇ ಬದಲಾವಣೆ ಇಲ್ಲ.

 

-ಶಂಕರ ಪಾಗೋಜಿ

Advertisement

Udayavani is now on Telegram. Click here to join our channel and stay updated with the latest news.

Next