ಮಂಗಳೂರು/ ಉಡುಪಿ: ಬಿಜೆಪಿ ಕೇಂದ್ರ ಸಂಸದೀಯ ಸಮಿತಿ ಸಚೇತಕರಾಗಿ ದಕ್ಷಿಣ ಕನ್ನಡ ಸಂಸದ ನಳಿನ್ ಕುಮಾರ್ ಕಟೀಲು ಮತ್ತು ಉಡುಪಿ-ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಅವರನ್ನು ನೇಮಕ ಮಾಡಲಾಗಿದೆ. ನಳಿನ್‌ಗೆ ಕರ್ನಾಟಕದ 21 ಸಂಸದರ ಹೊಣೆಗಾರಿಕೆ ಮತ್ತು ಶೋಭಾ ಅವರಿಗೆ 12 ಮಂದಿ ಮಹಿಳಾ ಸಂಸದೆಯರ ಜವಾಬ್ದಾರಿ ವಹಿಸಲಾಗಿದೆ.
ಸತತ ಮೂರು ಬಾರಿ ಬಿಜೆಪಿಯಿಂದ ಸಂಸದರಾಗಿ ಆಯ್ಕೆಯಾದ ನಳಿನ್ ಅವರಿಗೆ ಕೇಂದ್ರ ಸಚಿವ ಸ್ಥಾನಮಾನ ದೊರೆಯಬಹುದು ಎಂದು ನಿರೀಕ್ಷಿಸಲಾಗಿತ್ತಾದರೂ ಕರಾವಳಿಗೆ ಸಂಪುಟ ಸ್ಥಾನಮಾನ ದೊರೆತಿರಲಿಲ್ಲ. ಆದರೆ ಇದೀಗ ಇಬ್ಬರು ಸಂಸದರಿಗೆ ಬಿಜೆಪಿಯ ಸಂಸದೀಯ ಸಮಿತಿಯ ಸಚೇತಕ ಸ್ಥಾನ ದೊರೆಯುವ ಮೂಲಕ ಕರಾವಳಿಗೆ ವಿಶೇಷ ಸ್ಥಾನಮಾನ ದೊರೆತಂತಾಗಿದೆ.
2004ರಲ್ಲಿ ಜಿಲ್ಲಾ ಬಿಜೆಪಿಯ ಸಂಘಟನ ಕಾರ್ಯದರ್ಶಿಯಾಗಿ ಆಯ್ಕೆಯಾದ ನಳಿನ್ 2009ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ನ ಹಿರಿಯ ನಾಯಕ ಜನಾರ್ದನ ಪೂಜಾರಿ ವಿರುದ್ಧ ಸ್ಪರ್ಧಿಸಿ 40,420 ಮತಗಳ ಅಂತರದಿಂದ ಗೆದ್ದು ಸಂಸತ್ ಪ್ರವೇಶಿಸಿದರು. 2014ರಲ್ಲಿ ಮತ್ತೆ ಪೂಜಾರಿ ವಿರುದ್ಧ 1,43,709 ಮತಗಳ ಅಂತರದಿಂದ ಗೆದ್ದಿದ್ದರು. ರಾಜ್ಯ ಬಿಜೆಪಿ ಉಪಾಧ್ಯಕ್ಷರಾಗಿದ್ದ ನಳಿನ್ ಕೇರಳ ರಾಜ್ಯದಲ್ಲಿ ಬಿಜೆಪಿಯ ಪ್ರಭಾರಿಯಾಗಿಯೂ ಕಾರ್ಯನಿರ್ವಹಿಸಿದ್ದಾರೆ. ಕೇಂದ್ರ ಸರಕಾರದ ವಿವಿಧ ಸಮಿತಿಗಳ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದಾರೆ. ಇತ್ತೀಚೆಗೆ ನಡೆದ ಲೋಕಸಭಾ ಚುನಾವOೆಯಲ್ಲಿ ಮತ್ತೂಮ್ಮೆ ದಾಖಲೆ ಮತಗಳ ಅಂತರದ ಗೆಲುವು ದಾಖಲಿಸಿ ಕರಾವಳಿಯಲ್ಲಿ ಬಿಜೆಪಿ ಕೋಟೆಯನ್ನು ಭದ್ರಗೊಳಿಸುವಲ್ಲಿ ಯಶಸ್ವಿಯಾಗಿದ್ದರು.
ಉಡುಪಿ-ಚಿಕ್ಕಮಗಳೂರು ಕ್ಷೇತ್ರ ದಲ್ಲಿ 2014 ಮತ್ತು 2019ರಲ್ಲಿ 2 ಬಾರಿ ಸಂಸದೆಯಾಗಿ ಶೋಭಾ ಕರಂದ್ಲಾಜೆ ಅವರು ಆಯ್ಕೆಯಾ ಗಿದ್ದಾರೆ. 2010ರಲ್ಲಿ ರಾಜ್ಯ ಇಂಧನ ಸಚಿವರಾಗಿಯೂ ಇವರು ಕರ್ತವ್ಯ ನಿರ್ವಹಿಸಿ ಜನಮೆಚ್ಚುಗೆ ಗಳಿಸಿದ್ದಾರೆ.