Advertisement

ದೇಶ ಮೋದಿಜಿ ಹಾಗೂ ಬಿಜೆಪಿ ಜೊತೆಗೆ ಇದೆ ಎಂಬುದು ಮತ್ತೆ ಸಾಬೀತಾಗಿದೆ : ನಳಿನ್‍ಕುಮಾರ್ ಕಟೀಲ್

08:07 PM May 02, 2021 | Team Udayavani |

ಬೆಂಗಳೂರು: ಪಂಚರಾಜ್ಯಗಳ ಚುನಾವಣೆಯಲ್ಲಿ ಬಿಜೆಪಿ ಅಸಾಮಾನ್ಯ ಸಾಧನೆ ಮಾಡಿದೆ. ಅಸ್ಸಾಂನಲ್ಲಿ ಸಿಎಎ ಷಡ್ಯಂತ್ರ ಮೆಟ್ಟಿ ನಿಂತು ಮತ್ತೆ ಗೆದ್ದಿದ್ದೇವೆ. ಪುದುಚೆರಿಯಲ್ಲಿ ಇತಿಹಾಸ ಸೃಷ್ಟಿಸಿ ಇದೇ ಮೊದಲ ಬಾರಿ ಅಧಿಕಾರಕ್ಕೇರಿದ್ದೇವೆ. ಪಶ್ಚಿಮ ಬಂಗಾಳದಲ್ಲಿ ಐತಿಹಾಸಿಕ ಸಾಧನೆ ಮಾಡಿದ್ದೇವೆ, 3 ರಿಂದ ಎಂಭತ್ತರ ಗಡಿಗೆ ಬಂದಿದ್ದೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‍ಕುಮಾರ್ ಕಟೀಲ್ ಹೇಳಿದ್ದಾರೆ.

Advertisement

ಚುನಾವಣಾ ಫಲಿತಾಂಶ ಬಳಿಕ ಮಾಧ್ಯಮ ಪ್ರಕಟಣೆ ಬಿಡುಗಡೆ ಮಾಡಿದ ಅವರು, ಕೇರಳ, ತಮಿಳುನಾಡಿನಲ್ಲಿ ಭಾರೀ ಪ್ರಮಾಣದಲ್ಲಿ ವೋಟ್ ಶೇರ್ ಹೆಚ್ಚಿಸಿಕೊಂಡಿದ್ದೇವೆ. ಕರ್ನಾಟಕದಲ್ಲಿಯೂ ಬಿಜೆಪಿ ಉತ್ತಮ ಪ್ರದರ್ಶನವನ್ನೇ ನೀಡಿದೆ ಎಂದು ಪಕ್ಷದ ಸಾಧನೆ ಕುರಿತು ಸಂತಸ ವ್ಯಕ್ತಪಡಿಸಿದ್ದಾರೆ.

ಕೆಲವೇ ವರ್ಷಗಳ ಹಿಂದೆ ಇವಿಷ್ಟೂ ರಾಜ್ಯಗಳಲ್ಲಿ ಬಿಜೆಪಿ ಸರಿಯಾಗಿ ಅಸ್ತಿತ್ವವೂ ಇರಲಿಲ್ಲ.. ಮುಂದಿನ ದಿನಗಳಲ್ಲಿ ಅಧಿಕಾರಕ್ಕೇರುವ ಮೂಲಕ ಮತ್ತೆ ಇತಿಹಾಸ ಸೃಷ್ಟಿಸುತ್ತೇವೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ದೇಶ ಮೋದಿಜಿ ಹಾಗೂ ಬಿಜೆಪಿ ಜೊತೆಗೆ ಇದೆ ಎಂಬುದು  ಮತ್ತೆ  ಸಾಬೀತಾಗಿದೆ. ಕಾಂಗ್ರೆಸ್ ಧೂಳಿಪಟವಾಗಿದೆ. ಚುನಾವಣೆ ನಡೆದ ಅಷ್ಟೂ ರಾಜ್ಯಗಳಲ್ಲಿ ಕಾಂಗ್ರೆಸ್ ನ ಅಭ್ಯರ್ಥಿಗಳು ಹೀನಾಯವಾಗಿ ಸೋತಿದ್ದಾರೆ. ಇತಿಹಾಸದ ಅತಿ ಹಳೆಯ ಪಕ್ಷ ಇತಿಹಾಸದ ಪುಟ ಸೇರುವಂತೆ ಭಾರತದ ಜನತೆ ಮತ್ತೆ ತೀರ್ಪು ನೀಡಿದ್ದಾರೆ ಎಂದು ತಿಳಿಸಿದ್ದಾರೆ.

ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ಕಾರ್ಯಕರ್ತರು ಕೆಲವೆಡೆ ಬಿಜೆಪಿ ಕಾರ್ಯಾಲಯಗಳನ್ನು ಸುಟ್ಟಿರುವ ಘಟನೆ ಖಂಡನೀಯ. ಇದು ಟಿಎಂಸಿಯ ಗೂಂಡಾಗಿರಿಗೆ ಸ್ಪಷ್ಟ ಉದಾಹರಣೆಯಾಗಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸೋಲು- ಗೆಲುವನ್ನು ಸಮಾನವಾಗಿ ಸ್ವೀಕರಿಸುವ ಮನೋಭಾವ ಇಲ್ಲದೆ ಇರುವುದನ್ನು ಇದು ತೋರಿಸುತ್ತದೆ ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

Advertisement

ಇದನ್ನೂ ಓದಿ : ವಿಡಿಯೋ ಕಾಲ್‌ನಲ್ಲಿ ಅಂತ್ಯಕ್ರಿಯೆ ವೀಕ್ಷಿಸಿದ ಮೃತರ ಬಂಧುಗಳು

ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ಗೆಲುವು ಸಾಧಿಸಿದ ಬಿಜೆಪಿ ಅಭ್ಯರ್ಥಿಯಾದ ಮಂಗಳಾ ಅಂಗಡಿ ಮತ್ತು ಬಸವಕಲ್ಯಾಣ ವಿಧಾನಸಭಾ ಕ್ಷೇತ್ರದಲ್ಲಿ ಗೆದ್ದಿರುವ  ಶರಣು ಸಲಗರ್ ಅವರನ್ನು  ನಳಿನ್‍ಕುಮಾರ್ ಕಟೀಲ್ ಅವರು ಅಭಿನಂದಿಸಿದ್ದಾರೆ. ಕೇಂದ್ರದ ಅಭಿವೃದ್ಧಿ ಕಾರ್ಯಗಳು ಮತ್ತು ರಾಜ್ಯದ ರೈತಪರ ಮುಖ್ಯಮಂತ್ರಿಗಳಾದ ಶ್ರೀ ಬಿ.ಎಸ್.ಯಡಿಯೂರಪ್ಪ ಅವರ ಉತ್ತಮ ಕಾರ್ಯಗಳನ್ನು ಗಮನಿಸಿದ ಜನತೆ ಬಿಜೆಪಿಯನ್ನು ಬೆಂಬಲಿಸಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಮಸ್ಕಿಯಲ್ಲಿ ಪಕ್ಷದ ಅಭ್ಯರ್ಥಿ ಸೋತಿದ್ದಾರೆ. ಕಾಂಗ್ರೆಸ್ ಹಣ ಹಂಚಿರುವುದು ಮತ್ತು ಕಾಂಗ್ರೆಸ್ ಅಭ್ಯರ್ಥಿಯ ಬಗ್ಗೆ ಅನುಕಂಪ ಇದ್ದುದರಿಂದ ಇಲ್ಲಿ ಬಿಜೆಪಿ ಅಭ್ಯರ್ಥಿಗೆ ಸೋಲುಂಟಾಗಿದೆ ಎಂದು ಅವರು ಹೇಳಿದ್ದಾರೆ. ರಾಜ್ಯದ ಮೂರೂ ಕಡೆ ಪಕ್ಷದ ಚುನಾವಣಾ ಪ್ರಚಾರದಲ್ಲಿ ತಮ್ಮನ್ನು ತೊಡಗಿಸಿಕೊಂಡ ಮುಖಂಡರು ಮತ್ತು ಕಾರ್ಯಕರ್ತರಿಗೆ ಅವರು ಧನ್ಯವಾದ ಸಮರ್ಪಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next