ಹುಬ್ಬಳ್ಳಿ: ಸಿದ್ಧರಾಮಯ್ಯ ಓರ್ವ ಅಸಮರ್ಥ ರಾಜಕಾರಣಿ. ಅವರು ಸಿಎಂ ಆಗಿದ್ದಾಗ ಮಾಡಿದ ಕಾರ್ಯಗಳೇ ಈಗಿನ ಕೋಮು ಗಲಭೆಗಳಿಗೆ ಕಾರಣ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಗಂಭೀರ ಆರೋಪ ಮಾಡಿದರು.
ನಗರದಲ್ಲಿ ಗಲಭೆಗೊಳಗಾದ ಪ್ರದೇಶಕ್ಕೆ ಮಂಗಳವಾರ ಭೇಟಿ ನೀಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಹಿಂದೂಗಳ ಮೇಲೆ ನಿರಂತರ ದೌರ್ಜನ್ಯ ನಡೆದವು. ಕೇರಳದಿಂದಲೂ ಬಂದು ಇಲ್ಲಿ ಗಲಭೆಗಳನ್ನು ಸೃಷ್ಟಿಸಿದರು. ಅವರ ಮೇಲೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವುದು ಬಿಟ್ಟು ಮೃದು ಧೋರಣೆ ತೋರಿದರು. ಅಪರಾಧಿಗಳಿಗೆ ಬಿಡುಗಡೆ ಭಾಗ್ಯ ನೀಡಿದರು. ಅದರ ಪರಿಣಾಮವೇ ಇಂದು ಗಲಭೆಗಳಿಗೆ ಪ್ರೇರಣೆಯಾಗಿದೆ. ಇಂಥವರು ನಮ್ಮ ಸರಕಾರದ ಬಗ್ಗೆ ಮಾತನಾಡುತ್ತಾರೆ ಎಂದರು.
ಹುಬ್ಬಳ್ಳಿ ಗಲಭೆಯು ಪೂರ್ವ ನಿಯೋಜಿತ ಕೃತ್ಯ. ಇದರ ಹಿಂದೆ ಯಾರೇ ಇದ್ದರೂ ನಿರ್ದಾಕ್ಷಿಣ್ಯ ಕ್ರಮ ಖಚಿತ. ಎಐಎಂಐಎಂ ಪಕ್ಷವೇ ಆಗಲಿ ಇತರ ಸಂಘಟನೆಗಳಾಗಲಿ ಪೊಲೀಸರು ಕ್ರಮ ಕೈಗೊಳ್ಳತ್ತಿದ್ದಾರೆ. ಇದೊಂದು ಭಾವನೆಗಳಿಂದ ಕೆರಳಿದ ಘಟನೆ ಅಲ್ಲ. ದೇವಾಲಯಗಳ ಮೇಲೆ, ಪೊಲೀಸರ ಮೇಲೆ ದಾಳಿಯನ್ನು ನಾವು ಗಂಭೀರವಾಗಿ ಪರಿಗಣಿಸಿದ್ದೇವೆ. ಗಲಭೆಗೆ ಯಾರೇ ಕಾರಣರಾದವರನ್ನು ಸಹ ನಾವು ಬಿಡೋದಿಲ್ಲ. ಈಗಾಗಲೇ ಕೆಲ ಸಂಘಟನೆಗಳ ನಾಯಕರ ಬಂಧನ ಆಗಿದೆ ಎಂದರು.
ಇದನ್ನೂ ಓದಿ:ಶೇ. 40 ಕಮಿಷನ್ ತನಿಖೆಗೆ ನಿವೃತ್ತ ನ್ಯಾ| ಸಮಿತಿ ರಚಿಸಿ
ಗೃಹ ಸಚಿವ ಅಸಮರ್ಥರೆನ್ನುವ ಸಿದ್ದರಾಮಯ್ಯ ಅವರು ಐದು ವರ್ಷ ಅಸಮರ್ಥವಾಗಿ ಆಡಳಿತ ಮಾಡಿದ್ದಾರೆ. ಅವರಷ್ಟು ಅಸಮರ್ಥರು ನಮ್ಮ ಗೃಹ ಸಚಿವರಲ್ಲ. ಅವರ ಸರಕಾರದಲ್ಲಿ ಅತಿ ಹೆಚ್ಚು ಗಲಭೆಯಾಗಿವೆ. ಹೆಚ್ಚು ಹಿಂದೂ ಯುವಕರ ಹತ್ಯೆಗಳಾಗಿವೆ. ಜೈಲಿನಲ್ಲಿಯೂ ಸಹ ಹತ್ಯೆಗಳಾಗಿದ್ದವು. ಆವಾಗಲೇ ಹತ್ಯೆಗಳನ್ನು ತಡಿಯೋಕೆ ಆಗಿಲ್ಲ. ಗಲಭೆಕೋರರಿಗೆ ಬಿ ರಿಪೋರ್ಟ್ ಕೊಡುವ ಕಾರ್ಯ ಅವರು ಮಾಡಿದರು. ಅದರಿಂದಲೇ ಇಂತಹ ಗಲಾಟೆಗಳಾಗುತ್ತಿವೆ. ಯಾವ ಯಾವ ಸಂಘಟನೆಗಳು ಭಾಗಿಯಾಗಿವೆಯೆಂದು ಬಗ್ಗೆ ತನಿಖೆ ನಡೆಯುತ್ತಿದೆ. ಡಿಜೆ ಹಳ್ಳಿ, ಕೆಜಿ ಹಳ್ಳಿ ಹಾದಿಯಲ್ಲಿ ಈ ಗಲಭೆ ತನಿಖೆ ನಡೆಯುತ್ತಿದೆ. ಇದರಲ್ಲಿ ಯಾರೇ ಭಾಗಿಯಾದ್ದರು ಅವರ ವಿರುದ್ಧ ಕ್ರಮ ಆಗುತ್ತದೆ ಎಂದರು.