Advertisement

ನಳಿನ್‌ ಕುಮಾರ್‌ ಕಟೀಲ್‌ಗೆ ಜ್ಞಾನವಿಲ್ಲ

11:54 PM Sep 09, 2019 | Lakshmi GovindaRaju |

ಬೆಂಗಳೂರು: “ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ಕುಮಾರ್‌ ಕಟೀಲ್‌ಗೆ ಕನಿಷ್ಠ ಜ್ಞಾನವೂ ಇಲ್ಲ. ಡಿ.ಕೆ.ಶಿವಕುಮಾರ್‌ ಬಂಧನ ವಿಷಯದಲ್ಲಿ ದುರುದ್ದೇಶದಿಂದ ಹೇಳಿಕೆ ನೀಡಿದ್ದಾರೆ’ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.

Advertisement

ಸುದ್ದಿಗಾರರ ಜತೆ ಮಾತನಾಡಿ, ನಳಿನ್‌ಕುಮಾರ್‌ ಕಟೀಲ್‌ಗೆ ಐಟಿ, ಇಡಿ ಯಾರ ಅಧೀನದಲ್ಲಿವೆ ಎನ್ನುವುದು ಗೊತ್ತಿದೆಯಾ? ಅವೆಲ್ಲವೂ ಕೇಂದ್ರ ಸರ್ಕಾರದ ಅಧೀನದಲ್ಲಿರುವ ಸಂಸ್ಥೆಗಳು. ಸಮಾಜದಲ್ಲಿ ಹುಳಿ ಹಿಂಡುವುದು ಮತ್ತು ಬೆಂಕಿ ಹಚ್ಚುವುದು ಮಾತ್ರ ಅವರಿಗೆ ಗೊತ್ತು ಎಂದು ಆಕ್ರೋಶ ವ್ಯಕ್ತಪಡಿಸಿದರು. ಬಿಜೆಪಿಯವರು ಅವರನ್ನು ಯಾಕೆ ಅಧ್ಯಕ್ಷರನ್ನಾಗಿ ಮಾಡಿದರೋ ಗೊತ್ತಿಲ್ಲ. ಕನಿಷ್ಠ ಜ್ಞಾನ ಇಲ್ಲದವರನ್ನು ಅಧ್ಯಕ್ಷರನ್ನಾಗಿ ಮಾಡಿದರೆ, ಅವರು ಬೆಂಕಿ ಹಚ್ಚುವ ಕೆಲಸ ಮಾಡುತ್ತಾರೆ ಎಂದು ವಾಗ್ಧಾಳಿ ನಡೆಸಿದರು.

ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಮಾತನಾಡಿ, ನಳಿನ್‌ ಕುಮಾರ್‌ ಕಟೀಲ್‌ಗೆ ತಿಳಿವಳಿಕೆ ಕಡಿಮೆ ಇದೆ. ಅವರು ಜವಾಬ್ದಾರಿಯುತ ಸ್ಥಾನದಲ್ಲಿದ್ದಾರೆ. ಈಗ ಏನೇ ಮಾತನಾಡುವುದಿದ್ದರೂ ಅಧ್ಯಯನ ಮಾಡಿ ಮಾತನಾಡಲಿ. ಅವರು ಹುಚ್ಚುಚ್ಚಾಗಿ ಹೇಳಿಕೆ ನೀಡಿದರೆ ನಗೆಪಾಟಲಿಗೀ ಡಾಗುತ್ತಾರೆ. ಬಿಜೆಪಿಯೂ ನಗೆಪಾಟಲಿಗೆ ಈಡಾಗುತ್ತದೆ. ಅವರು ಜವಾಬ್ದಾರಿಯಿಂದ ಮಾತನಾಡು ವುದನ್ನು ಕಲಿಯಲಿ ಎಂದು ಸಲಹೆ ನೀಡಿದರು. ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್‌ ಖಂಡ್ರೆ ಮಾತನಾಡಿ, ನಳಿನ್‌ ಕುಮಾರ್‌ ಕಟೀಲ್‌ ಹೇಳಿಕೆ ಖಂಡನೀಯ. ಬಿಜೆಪಿಯ ರಾಜ್ಯಾಧ್ಯಕ್ಷರಾದವರಿಗೆ ಕನಿಷ್ಠ ಜ್ಞಾನವಾದರೂ ಇರಬೇಕು.

ಆದಾಯ ತೆರಿಗೆ ಇಲಾಖೆ, ಜಾರಿ ನಿರ್ದೇಶನಾಲಯ ಕೇಂದ್ರದ ವ್ಯಾಪ್ತಿಗೆ ಬರುತ್ತವೆ ಎಂದು ತಿಳಿಸಿದರು. ಕೇಂದ್ರ ಸರ್ಕಾರವು ತನಿಖಾ ಸಂಸ್ಥೆಗಳನ್ನು ದುರುಪಯೋಗ ಪಡೆಸಿಕೊಳ್ಳುತ್ತಿರುವ ಬಗ್ಗೆ ದೇಶದ ಜನರಿಗೆ ಅರಿವಾಗುತ್ತಿದೆ. ಆದರೆ, ನಳಿನ್‌ ಕುಮಾರ್‌ ಕಟೀಲ್‌ ಜನರ ದಾರಿ ತಪ್ಪಿಸಲು ಈ ರೀತಿಯ ಹೇಳಿಕೆ ನೀಡಿದ್ದಾರೆ. ಇದು ಅವರ ಬೌದ್ಧಿಕ ದಿವಾಳಿತನ ತೋರಿಸುತ್ತದೆ. ಬಿಜೆಪಿಯವರು ತನಿಖಾ ಸಂಸ್ಥೆಗಳನ್ನು ದುರುಪಯೋಗ ಪಡಿಸಿಕೊಂಡು ಪ್ರತಿಪಕ್ಷಗಳ ನಾಯಕರ ಧ್ವನಿ ಅಡಗಿಸಲು ಪ್ರಯತ್ನಿಸುತ್ತಿರುವುದರಿಂದ ಅವರಿಗೆ ಪಾಪ ಪ್ರಜ್ಞೆ ಕಾಡುತ್ತಿದೆ ಎಂದು ಟೀಕಿಸಿದರು.

ಅಪ್ರಬುದ್ಧ ಹೇಳಿಕೆ: ದಕ್ಷಿಣ ಕನ್ನಡದಲ್ಲಿ ಬೆಂಕಿ ಹಚ್ಚುತ್ತೇವೆ ಎಂದು ಜನರನ್ನು ಉತ್ತೇಜಿಸುವ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್‌ ಕುಮಾರ್‌ ಕಟೀಲ್, ಡಿ.ಕೆ.ಶಿವಕುಮಾರ್‌ ವಿಚಾರದಲ್ಲಿ ಅಪ್ರಬುದ್ಧ ಹೇಳಿಕೆ ನೀಡಿದ್ದಾರೆ ಎಂದು ಕಾಂಗ್ರೆಸ್‌ ನಾಯಕ ಉಗ್ರಪ್ಪ ಹೇಳಿದ್ದಾರೆ. ಜಾರಿನಿರ್ದೇಶನಾಲಯಕ್ಕೆ ದಾಖಲೆ ನೀಡಿ ನಿರ್ದೋಷಿ ಎಂದು ಹೊರಬರಬೇಕಿತ್ತು ಎಂದು ಹೇಳಿ ಕಟೀಲ್‌ ತಮ್ಮ ಅಪ್ರಬುದ್ಧತೆ ಮೆರೆದಿದ್ದಾರೆ. 2017 ರಲ್ಲಿ ಕೇಂದ್ರದಲ್ಲಿ ಯಾವ ಸರ್ಕಾರವಿತ್ತು? ಜಾರಿನಿರ್ದೇಶನಾಲಯ, ಆದಾಯ ತೆರಿಗೆ ಇಲಾಖೆಗಳು ಯಾರ ಅಧೀನದಲ್ಲಿ ಬರುತ್ತವೆ ಎಂಬ ಕನಿಷ್ಠ ಜ್ಞಾನವೂ ಅವರಿಗೆ ಇಲ್ಲ. ಸಂಸದರಾದವರಿಗೆ ಇದೆಲ್ಲ ಗೊತ್ತಿಲ್ಲದಿದ್ದರೆ ಹೇಗೆ ಎಂದು ಉಗ್ರಪ್ಪಲೇವಡಿ ಮಾಡಿದರು.

Advertisement

ಗಾಂಧೀಜಿ ಕೋಮುವಾದಿಯೇ?: ಕಟೀಲ್‌
ಕಲಬುರಗಿ: “ಸಂಸತ್‌ನಲ್ಲಿ 64 ಪಕ್ಷಗಳ ಸಂಸದರಿದ್ದಾರೆ. ಬಿಜೆಪಿ ಹೊರತುಪಡಿಸಿ ಇತರ 63 ಪಕ್ಷಗಳಿಗೆ ಸ್ವಂತ ವಿಚಾರಧಾರೆಗಳೇ ಇಲ್ಲ. ಕಾಂಗ್ರೆಸ್‌ ತನ್ನ ಹುಟ್ಟಿನ ಚಿಂತನೆಗಳನ್ನೇ ಮರೆತಿದೆ. ಮಹಾತ್ಮ ಗಾಂಧಿ ಸ್ವಾತಂತ್ರ ಸಂಗ್ರಾಮದಲ್ಲಿ ಈ ದೇಶ ರಾಮ ರಾಜ್ಯ ಆಗಬೇಕು ಎಂದು ಹೇಳಿದ್ದರು. ಈಗ ಕಾಂಗ್ರೆಸ್‌ನವರು ರಾಮನ ಹೆಸರು ಹೇಳಿದರೆ ಸಾಕು ಅವರನ್ನು ಕೋಮುವಾದಿಗಳು ಎನ್ನುತ್ತಾರೆ.

ಹಾಗಾದರೆ ರಾಮ ರಾಜ್ಯದ ಪರಿಕಲ್ಪನೆ ಹೇಳಿದ ಗಾಂಧೀಜಿ ಕೂಡ ಕೋಮುವಾದಿಯೇ’ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ ಕಟೀಲು ಪ್ರಶ್ನಿಸಿದ್ದಾರೆ. ನಗರದಲ್ಲಿ ಹಮ್ಮಿಕೊಂಡಿದ್ದ ಬಿಜೆಪಿ ಸಭೆಯಲ್ಲಿ ಮಾತನಾಡಿದ ಅವರು, “ರಾಮ ರಾಜ್ಯವಾಗುವುದು ನಿಜವಾದ ಪ್ರಜಾಪ್ರಭುತ್ವ. ಜಾತ್ಯತೀತ ರಾಷ್ಟ್ರ. ವ್ಯಕ್ತಿ-ವ್ಯಕ್ತಿಯನ್ನು ಬೆಸೆಯುವುದು ರಾಮ ರಾಜ್ಯ ಎಂದು ಗಾಂಧೀಜಿ ಹೇಳಿದ್ದರು. ರಾಮಾಯಣ ಕಾಲದಲ್ಲಿ ಒಬ್ಬ ರಾವಣ ಇದ್ದ. ಈಗ ಮನೆಗೊಬ್ಬ ರಾವಣ ಇದ್ದಾನೆ. ಆದ್ದರಿಂದ ಪ್ರತಿ ಮನೆಯಲ್ಲೂ ರಾಮ ಜನಿಸಬೇಕು’ ಎಂದರು.

“ಬಿಜೆಪಿ ಕಾರ್ಯಕರ್ತರ ಪಕ್ಷ: ರೈಲ್ವೆ ನಿಲ್ದಾಣದಲ್ಲಿ ಚಾಯ್‌ ಮಾರುತ್ತಿದ್ದ ಹುಡುಗ ನರೇಂದ್ರ ಮೋದಿ ಪ್ರಧಾನಿಯಾಗಿದ್ದಾರೆ. ಮತಗಟ್ಟೆಯಲ್ಲಿ ಕೆಲಸ ಮಾಡುತ್ತ ಬಂದ ನನ್ನಂತ ಸಾಮಾನ್ಯ ಕಾರ್ಯಕರ್ತ ರಾಜ್ಯಾಧ್ಯಕ್ಷರಾಗಲು ಬಿಜೆಪಿಯಲ್ಲಿ ಮಾತ್ರವೇ ಸಾಧ್ಯ. ಕಾರ್ಯಕರ್ತರ ಬೆಂಬಲದಿಂದಲೇ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ 150 ಸ್ಥಾನಗಳನ್ನು ಗೆಲ್ಲುತ್ತೇವೆ. ಪ್ರತಿ ಮತಗಟ್ಟೆಯಲ್ಲೂ ಬಿಜೆಪಿ ಬಾವುಟ ಹಾರಿಸುತ್ತೇವೆ’ ಎಂದರು.

ಬಿಜೆಪಿ ರಾಜ್ಯಾಧ್ಯಕ್ಷರಾದ ಬಳಿಕ ಪ್ರಥಮ ಬಾರಿಗೆ ಜಿಲ್ಲೆಗೆ ಆಗಮಿಸಿದ ನಳಿನ್‌ ಕುಮಾರ್‌ ಬೆಳಗ್ಗೆ ಪ್ರಸಿದ್ಧ ದೇವಲಗಾಣಗಾಪುರದ ದತ್ತಾತ್ರೇಯ ಕ್ಷೇತ್ರಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು. ದತ್ತನ ಪಾದುಕೆಗಳಿಗೆ ಅಭಿಷೇಕ ಮಾಡಿದರು. ಸಂಸದ ಭಗವಂತ ಖೂಬಾ, ಮಾಲೀಕಯ್ಯ ಗುತ್ತೇದಾರ ಇದ್ದರು. ಅಲ್ಲಿಂದ ಮಹಾದಾಸೊಹಿ ಶರಣಬಸವೇಶ್ವರರ ದರ್ಶನ ಪಡೆದರು. ಪೀಠಾಧಿಪತಿ ಡಾ| ಶರಣಬಸವಪ್ಪ ಅಪ್ಪ ಅವರನ್ನು ಭೇಟಿಯಾಗಿ ಆರ್ಶೀವಾದ ಪಡೆದರು.

ಐಎಎಸ್‌ ಅಧಿಕಾರಿ ಸಸಿಕಾಂತ ಸೆಂಥಿಲ್‌ ಪಾಕಿಸ್ತಾನಕ್ಕೆ ಹೋಗಲಿ ಎಂಬ ಸಂಸದ ಅನಂತಕುಮಾರ ಹೇಳಿಕೆಯನ್ನು ಭಾಷಾರ್ಥದಿಂದ ನೋಡದೆ, ಭಾವಾರ್ಥದಿಂದ ಅರ್ಥೈಸಿಕೊಳ್ಳಬೇಕು. ಸೆಂಥಿಲ್‌ ಪೂರ್ವಾಗ್ರಹ ಪೀಡಿತರಾಗಿ ಕೆಲಸ ಮಾಡಿದ್ದರು. ಸಂವಿಧಾನದ ಆಶಯದ ವಿರುದ್ಧವಾಗಿ ಒಂದು ವರ್ಗದ ಪರವಾಗಿದ್ದರು. ಹೀಗಾಗಿ ದೇಶಾಭಿಮಾನ ಇಲ್ಲದಿದ್ದರೆ ಪಾಕಿಸ್ತಾನಕ್ಕೆ ಹೋಗಿ ಎಂದು ಅನಂತಕುಮಾರ ಹೇಳಿದ್ದರಲ್ಲಿ ತಪ್ಪಿಲ್ಲ.
-ತೇಜಸ್ವಿನಿ ರಮೇಶ್‌, ಬಿಜೆಪಿ ನಾಯಕಿ

Advertisement

Udayavani is now on Telegram. Click here to join our channel and stay updated with the latest news.

Next