Advertisement

ದ.ಕ.: ಮಳೆ ಹಾನಿಗೆ 310 ಕೋಟಿ ರೂ. ಪರಿಹಾರ ಪ್ರಸ್ತಾವನೆ : ಸಂಸದ ನಳಿನ್‌ ಕುಮಾರ್‌ ಕಟೀಲು

12:48 PM Aug 24, 2022 | Team Udayavani |

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈ ವರ್ಷ ಸುರಿದ ಮಳೆಯಿಂದ ಆಗಿರುವ ಹಾನಿಗೆ ಸಂಬಂಧಿಸಿ ಪರಿಹಾರಕ್ಕಾಗಿ 310 ಕೋಟಿ ರೂ.ಗಳ ಪ್ರಸ್ತಾವನೆಯನ್ನು ರಾಜ್ಯ ಸರಕಾರಕ್ಕೆ ಸಲ್ಲಿಸಲಾಗಿದೆ.

Advertisement

ದ.ಕ. ಜಿ.ಪಂ.ನಲ್ಲಿ ಸಂಸದ ನಳಿನ್‌ ಕುಮಾರ್‌ ಕಟೀಲು ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆದ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ ಸಭೆಯಲ್ಲಿ (ದಿಶಾ) ಅಪರ ಜಿಲ್ಲಾಧಿಕಾರಿ ಕೃಷ್ಣಮೂರ್ತಿ ಈ ಬಗ್ಗೆ ಮಾಹಿತಿ ನೀಡಿದರು.

ರಸ್ತೆ, ಸೇತುವೆ, ಶಾಲೆ, ಅಂಗನವಾಡಿ ಸೇರಿದಂತೆ ಮಳೆಯಿಂದ ಆಗಿರುವ ಹಾನಿಯ ಬಗ್ಗೆ ಸಮಗ್ರ ವಿವರ ರಾಜ್ಯ ಸರಕಾರಕ್ಕೆ ನೀಡಲಾಗಿದೆ. ಮಳೆಹಾನಿಗೆ ಸಂಬಂಧಿಸಿ ಪ್ರಾಕೃತಿಕ ವಿಕೋಪ ಪರಿಹಾರ ನಿಧಿಯಿಂದ ಈಗಾಗಲೇ 20 ಕೋಟಿ ರೂ. ತಾತ್ಕಾಲಿಕ ಅನುದಾನ ಬಿಡುಗಡೆಯಾಗಿದೆ ಎಂದರು.

ಬಳ್ಪ ಆದರ್ಶ ಗ್ರಾಮಕ್ಕೆ 50 ಕೋ.ರೂ. ವಿನಿಯೋಗ
ಬಳ್ಪ ಆದರ್ಶ ಗ್ರಾಮ ಯೋಜನೆಯಲ್ಲಿ 60 ಕೋ.ರೂ. ಮೊತ್ತದ ವಿವಿಧ ಯೋಜನೆಗಳಲ್ಲಿ ಈಗಾಗಲೇ 50 ಕೋ.ರೂ.ಗೂ ಅಧಿಕ ಕಾಮಗಾರಿಗಳು ಪೂರ್ಣಗೊಂಡಿವೆ. ಇನ್ನೂ 10 ಕೋ.ರೂ. ವೆಚ್ಚದ ವಿವಿಧ ಯೋಜನೆಗಳು ಚಾಲನೆಯಲ್ಲಿವೆ ಆದರ್ಶ ಗ್ರಾಮದ ಯೋಜನೆ ಅನುಷ್ಠಾನ ಅಧಿಕಾರಿ ಮಾಹಿತಿ ನೀಡಿದರು.

ದೇಶದಲ್ಲಿಯೇ 60 ಕೋ.ರೂ. ಮೊತ್ತ ವಿನಿಯೋಗದ ಆದರ್ಶ ಗ್ರಾಮದ ಹೆಗ್ಗಳಿಕೆ ದ.ಕ. ಜಿಲ್ಲೆಯದ್ದಾಗಿದೆ. ಇಷ್ಟೊಂದು ಕಾರ್ಯ ನಡೆದಿದ್ದರೂ ಇದರ ಬಗ್ಗೆ ಅಧಿಕಾರಿಗಳು ಜನರಿಗೆ ಮಾಹಿತಿ ನೀಡುವ ಕಾರ್ಯ ಆಗುತ್ತಿಲ್ಲ. ಜನಪ್ರತಿ ನಿಧಿಗಳು ಟೀಕೆಯ ಮಾತುಗಳನ್ನು ಕೇಳಬೇಕಾಗಿದೆ ಎಂದು ನಳಿನ್‌ ಕುಮಾರ್‌ ಹೇಳಿದರು.

Advertisement

ನಮ್ಮ ಕ್ಲಿನಿಕ್‌ ಯೋಜನೆ
ಸರಕಾರದ ನೂತನ ನಮ್ಮ ಕ್ಲಿನಿಕ್‌ ಯೋಜನೆಯಡಿ ಜಿಲ್ಲೆಗೆ 14 ಕ್ಲಿನಿಕ್‌ಗಳು ಮಂಜೂರಾಗಿವೆ. ನಗರದ ಕೊಳೆಗೇರಿ ಪ್ರದೇಶಗಳಲ್ಲಿ ಈ ಕ್ಲಿನಿಕ್‌ ಸ್ಥಾಪಿಸಬೇಕಾಗಿದ್ದು, ಜಿಲ್ಲೆಯಲ್ಲಿ ಕೊಳಚೆ ಪ್ರದೇಶಗಳು ಇಲ್ಲದಿರುವುದರಿಂದ ಕಟ್ಟಡ ಕಾರ್ಮಿಕರು ಹೆಚ್ಚು ಸಂಖ್ಯೆಯಲ್ಲಿ ವಾಸಿಸುವ ಪ್ರದೇಶಗಳಲ್ಲಿ ಈ ಕ್ಲಿನಿಕ್‌ಗಳನ್ನು ಸ್ಥಾಪಿಸಲಾಗುವುದು. ಮಂಗಳೂರು ಪಾಲಿಕೆ ವ್ಯಾಪ್ತಿಯಲ್ಲಿ 7 ಹಾಗೂ ಉಳಿದಂತೆ ಪ್ರತಿಯೊಂದು ತಾಲೂಕಗಳಲ್ಲಿ ತಲಾ ಒಂದು ಕ್ಲಿನಿಕ್‌ ಸ್ಥಾಪನೆಯಾಗಲಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ| ಕಿಶೋರ್‌ ಕುಮಾರ್‌ ತಿಳಿಸಿದರು.

ಪ್ರಧಾನಮಂತ್ರಿ ಸ್ವಾನಿಧಿ ಯೋಜನೆ
ಪ್ರಧಾನಮಂತ್ರಿ ಸ್ವಾನಿಧಿ ಯೋಜನೆಯಡಿ ಬೀದಿಬದಿ ವ್ಯಾಪಾರಸ್ಥರಿಗೆ ಪ್ರಥಮ ಹಂತದಲ್ಲಿ ತಲಾ 10 ಸಾವಿರ ರೂ. ಸಾಲಕ್ಕಾಗಿ 10,017 ಮಂದಿ ಅರ್ಜಿ ಸಲ್ಲಿಸಿದ್ದರು. 6,453 ಮಂದಿಗೆ ಸಾಲ ವಿತರಿಸಲಾಗಿದೆ. ಪ್ರಥಮ ಹಂತದ ಸಾಲ ಮರು ಪಾವತಿ ಮಾಡಿದವರಿಗೆ 2ನೇ ಹಂತದಲ್ಲಿ ತಲಾ 20 ಸಾವಿರ ರೂ. ಸಾಲ ನೀಡುವ ಯೋಜನೆಯಲ್ಲಿ 1,654 ಮಂದಿಗೆ ಸಾಲ ಪಡೆದಿದ್ದಾರೆ. 3ನೇ ಹಂತದಡಿ ತಲಾ 50 ಸಾವಿರ ರೂ. ಸಾಲದಡಿ ಈಗಾಗಲೇ 3 ಅರ್ಜಿಗಳು ಬಂದಿವೆ ಎಂದು ಜಿ.ಪಂ. ಸಿಇಒ ಡಾ| ಕುಮಾರ್‌ ವಿವರಿಸಿದರು.
ಮೇಯರ್‌ ಪ್ರೇಮಾನಂದ ಶೆಟ್ಟಿ, ಶಾಸಕರಾದ ವೇದವ್ಯಾಸ ಕಾಮತ್‌, ಡಾ| ಭರತ್‌ ಶೆಟ್ಟಿ, ಪಾಲಿಕೆ ಆಯುಕ್ತ ಅಕ್ಷಯ್ ಶ್ರೀಧರ್‌, ಸಹಾಯಕ ಆಯುಕ್ತ ಮದನ್‌ ಮೋಹನ್‌ , ದಿಶಾ ಸಭೆಯ ನಾಮನಿರ್ದೇಶಿತ ಸದಸ್ಯರು ಉಪಸ್ಥಿತರಿದ್ದರು.

ಸುರತ್ಕಲ್‌ ಟೋಲ್‌ ತಿಂಗಳೊಳಗೆ ವಿಲೀನ
ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಸುರತ್ಕಲ್‌ ಬಳಿಯ ಎನ್‌ಐಟಿಕೆ ಸಮೀಪ ಇರುವ ಟೋಲ್‌ ಸಂಗ್ರಹ ಕೇಂದ್ರ ಒಂದು ತಿಂಗಳೊಳಗೆ ಹೆಜಮಾಡಿ ಟೋಲ್‌ ಸಂಗ್ರಹ ಕೇಂದ್ರದೊಂದಿಗೆ ವಿಲೀನಗೊಳ್ಳುವ ಬಗ್ಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕ ಲಿಂಗೇಗೌಡ ದೃಢಪಡಿಸಿದ್ದಾರೆ.

ದಿಶಾ ಸಭೆಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು, ಒಂದು ತಿಂಗಳೊಳಗೆ ವಿಲೀನ ಪ್ರಕ್ರಿಯೆ ನಡೆಯಲಿದೆ. ಟೋಲ್‌ ವಿಲೀನದ ಬಗ್ಗೆ ಕ್ರಮ ಕೈಗೊಳ್ಳಲು ಭೂಸಾರಿಗೆ ಮತ್ತು ರಾಷ್ಟ್ರೀಯ ಹೆದ್ದಾರಿ ಸಚಿವ ನಿತಿನ್‌ ಗಡ್ಕರಿಯವರು ಸೂಚನೆ ನೀಡಿದ್ದಾರೆ ಎಂದರು.

ಎನ್‌ಐಟಿಕೆ ಬಳಿಯ ಟೋಲ್‌ ಕೇಂದ್ರವನ್ನು ರದ್ದುಗೊಳಿಸಬೇಕು ಎಂದು ಜಿಲ್ಲೆಯ ನಾಗರಿಕರಿಂದ ಬಲವಾದ ಆಗ್ರಹ ಹೋರಾಟಗಳು ನಡೆದಿದ್ದವು. 60 ಕಿ.ಮೀ. ವ್ಯಾಪ್ತಿಯೊಳಗಿರುವ ಹೆಚ್ಚುವರಿ ಟೋಲ್‌ಗ‌ಳನ್ನು ರದ್ದುಗೊಳಿಸುವುದಾಗಿ ಕೇಂದ್ರ ಭೂಸಾರಿಗೆ ಮತ್ತು ರಾಷ್ಟ್ರೀಯ ಹೆದ್ದಾರಿ ಸಚಿವ ನಿತಿನ್‌ ಗಡ್ಕರಿ ಕೆಲವು ತಿಂಗಳ ಹಿಂದೆ ಸಂಸತ್‌ನಲ್ಲಿ ಘೋಷಿಸಿದ್ದರು.

ಪ್ರಮುಖ ಅಂಶಗಳು
– ಜಿಲ್ಲೆಯಲ್ಲಿ 35,253 ವಿದ್ಯಾರ್ಥಿಗಳಿಗೆ ರೈತ ವಿದ್ಯಾನಿಧಿ
– ಅಮೃತ ಸರೋವರ ಯೋಜನೆಯಲ್ಲಿ 75 ಕೆರೆಗಳ ಅಭಿವೃದ್ಧಿ
– ಪಶ್ಚಿಮವಾಹಿನಿಯಲ್ಲಿ 143 ಕಿಂಡಿಅಣೆಕಟ್ಟು, 28 ಪೂರ್ಣ, 99 ಪ್ರಗತಿಯಲ್ಲಿ
– ಜಲಜೀವನ್‌ ಪ್ರಥಮ ಹಂತವನ್ನು ಪೂರ್ಣಗೊಳಿಸಲು ಸೆ. 15ರ ಗಡು
– ನರೇಗಾ ಯೋಜನೆಯಲ್ಲಿ 67 ಶಾಲೆಗಳಲ್ಲಿ ಅಕ್ಷರ ಕೈತೋಟ
– ಜಿಲ್ಲೆಯಲ್ಲಿ 278 ಡೆಂಗ್ಯೂ, 114 ಮಲೇರಿಯಾ ಪ್ರಕರಣಗಳು
– ಬಿಕರ್ನಕಟ್ಟೆ-ಸಾಣೂರು ರಾ.ಹೆ. ಉನ್ನತೀಕರಣಕ್ಕೆ ಶೇ. 75ರಷ್ಟು ಭೂಸ್ವಾಧೀನ ಪೂರ್ಣ
– ಉಜಿರೆ, ಕೆದಂಬಾಡಿ ಹಾಗೂ ನರಿಕೊಂಬು ಗ್ರಾಮಗಳಲ್ಲಿ ಮಿನಿ ಎಂಆರ್‌ಎಫ್‌ ಘಟಕಗಳು
– ಕೂಳೂರು ನೂತನ ಸೇತುವೆ ಶೇ. 40ರಷ್ಟು ಪೂರ್ಣ

ಬಿ.ಸಿ.ರೋಡು- ಅಡ್ಡಹೊಳೆ ಚತುಷ್ಪಥ
ಬಿ.ಸಿ.ರೋಡು – ಅಡ್ಡಹೊಳೆ ಹೆದ್ದಾರಿ ಚತುಷ್ಪಥ ಕಾಮಗಾರಿಯಲ್ಲಿ ಅಡ್ಡಹೊಳೆಯಿಂದ ಧರ್ಮಸ್ಥಳ ಕ್ರಾಸ್‌ ವರೆಗಿನ ರಸ್ತೆ ಕಾಮಗಾರಿ ಡಿಸೆಂಬರ್‌ಗೆ ಪೂರ್ಣಗೊಳ್ಳಲಿದೆ. ಪೆರಿಯಶಾಂತಿ ಯಿಂದ ಬಿ.ಸಿ.ರೋಡ್‌ ವರೆಗಿನ ಕಾಮಗಾರಿ 2024ರ ಮಾರ್ಚ್‌ ವೇಳೆಗೆ ಪೂರ್ಣಗೊಳ್ಳುವ ನಿರೀಕ್ಷೆ ಇದೆ. ಕಲ್ಲಡ್ಕದಲ್ಲಿ ನಿರ್ಮಾಣಗೊಳ್ಳುತ್ತಿರುವ ಫ್ಲೈ ಓವರ್‌ ವಿಶೇಷ ವಿನ್ಯಾಸ ಹೊಂದಿರುವ ಹಿನ್ನೆಲೆಯಲ್ಲಿ ಇದರ ಕಾಮಗಾರಿ 2024ರ ಡಿಸೆಂಬರ್‌ ವೇಳೆಗೆ ಪೂರ್ಣಗೊಳ್ಳಲಿದೆ ಎಂದು ರಾ.ಹೆ. ಪ್ರಾಧಿಕಾರದ ಯೋಜನ ನಿರ್ದೇಶಕ ಲಿಂಗೇಗೌಡ ವಿವರಿಸಿದರು.

ಪ್ರಸ್ತುತ ಮಳೆಯಿಂದ ಹದಗೆಟ್ಟಿರುವ ಬಿ.ಸಿ.ರೋಡ್‌ನಿಂದ ಅಡ್ಡಹೊಳೆ ವರೆಗಿನ ರಸ್ತೆ ದುರಸ್ತಿ ಕಾಮಗಾರಿಯನ್ನು ಕೂಡಲೇ ಕೈಗೆತ್ತಿಕೊಳ್ಳುವಂತೆ ನಳಿನ್‌ ಕುಮಾರ್‌ ಕಟೀಲು ನೀಡಿದ ಸೂಚನೆಗೆ ಉತ್ತರಿಸಿದ ಯೋಜನಾ ನಿರ್ದೇಶಕರು ಸೆಪ್ಟಂಬರ್‌ನಲ್ಲಿ ರಸ್ತೆ ದುರಸ್ತಿ ಕಾಮಗಾರಿಯನ್ನು ಆರಂಭಿಸಲಾಗುವುದು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next