Advertisement
ಮಂಗಳವಾರ ದ.ಕ. ಜಿ.ಪಂ. ಸಭಾಂಗಣದಲ್ಲಿ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ (ದಿಶಾ) ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಮಳೆಗಾಲಕ್ಕೆ ಮೊದಲು ಬಿ.ಸಿ.ರೋಡ್-ಮುಕ್ಕ, ತಲಪಾಡಿ-ಹೆಜಮಾಡಿ ಚತುಷ್ಪಥ ಹೆದ್ದಾರಿಗಳ ಗುಂಡಿ ಮುಚ್ಚುವ ಕೆಲಸವನ್ನು ಪೂರ್ಣಗೊಳಿಸಬೇಕು, ಸ್ಥಗಿತಗೊಂಡಿರುವ ಕೂಳೂರು ಸೇತುವೆ ಕೆಲಸವನ್ನು ಮತ್ತೆ ಕೈಗೆತ್ತಿಕೊಳ್ಳಲು ಗುತ್ತಿಗೆದಾರರಿಗೆ ಆದೇಶಿಸಬೇಕು ಎಂದರು.
ಎನ್‌ಎಚ್‌ಎಐ ಯೋಜನಾ ನಿರ್ದೇಶಕ ಲಿಂಗೇಗೌಡ ವಿವರಣೆ ನೀಡಿ, ಜೂನ್ ಪೂರ್ವದಲ್ಲಿ ಬಿ.ಸಿ.ರೋಡ್-ಅಡ್ಡಹೊಳೆ ಹೆದ್ದಾರಿ ಕಾಂಕ್ರೀಟ್ ಕಾಮಗಾರಿ ಎರಡೂ ವಿಭಾಗಗಳಲ್ಲಿ ಒಟ್ಟು 20 ಕಿ.ಮೀ.ನಷ್ಟು ಪೂರ್ಣಗೊಳ್ಳಲಿದೆ. ಮಳೆಗಾಲದಲ್ಲೂ ಕೆಲಸ ನಡೆಯಲಿದೆ. ಕಲ್ಲಡ್ಕದ ಫ್ಲೈ ಓವರ್ 2 ಕಿ.ಮೀ. ಇರುವ ಕಾರಣ ಮುಂದಿನ ಜನವರಿಗೆ ಆಗಬಹುದು. ಕೂಳೂರು ಸೇತುವೆ ಕೆಲಸವನ್ನು ಮತ್ತೆ ಆರಂಭಿಸಲಾಗುವುದು ಎಂದರು. ಕೆಪಿಟಿ ಫ್ಲೈ ಓವರ್ ಗೆ 610 ಮರಗಳನ್ನು ತೆರವು ಮಾಡಬೇಕಾಗುತ್ತದೆ, ಮೊದಲು ಸರ್ವಿಸ್ ರೋಡ್ ಕೈಗೆತ್ತಿಕೊಂಡು ಮಳೆಗಾಲದ ಬಳಿಕ ಮುಖ್ಯ ಕೆಲಸ ಕೈಗೊಳ್ಳಲಾಗುವುದು. ನಂತೂರಿನಲ್ಲೂ ಓವರ್‌ಪಾಸ್ ಕೆಲಸಕ್ಕೆ ಇನ್ನೊಂದು ತಿಂಗಳಲ್ಲಿ ಕಾರ್ಯಾದೇಶ ನೀಡಲಾಗುವುದು ಎಂದರು.
Related Articles
ಭೂಸ್ವಾಧೀನ ಸರಿಯಾಗಿ ಆಗದ ಕಾರಣ ರಾ.ಹೆ. 169ರ ಚತುಷ್ಪಥ ಕಾಮಗಾರಿಯನ್ನು ಕೈಬಿಡುವುದಾಗಿ ಗುತ್ತಿಗೆದಾರರಾದ ದಿಲೀಪ್ ಬಿಲ್ಡ್‌ಕಾನ್‌ನವರು ಹೇಳಿರುವುದನ್ನು ಪ್ರಸ್ತಾವಿಸಿದ ನಳಿನ್ ಯಾವುದೇ ಕಾರಣಕ್ಕೂ ಕಾಮಗಾರಿ ನಿಲ್ಲಬಾರದು ಎಂದು ತಿಳಿಸಿದರು.
Advertisement
ಈ ಕುರಿತು ಜಿಲ್ಲಾಧಿಕಾರಿ ಮಾತನಾಡಿ, ಭೂ ಸ್ವಾಧೀನಕ್ಕೆ ಸಂಬಂಧಿಸಿ ಭೂಮಾಲಕರು ಅಸಮಾಧಾನಗೊಳ್ಳುವುದು, ವ್ಯಾಜ್ಯ ದಾಖಲಿಸುವುದು ಸಹಜ. ಆದರೆ ಅದೇ ಕಾರಣಕ್ಕೆ ಕೆಲಸ ನಿಲ್ಲಿಸಬಾರದು. ಅಲ್ಲದೆ ವಿಶೇಷ ಭೂಸ್ವಾಧೀನಾಧಿಕಾರಿಯ ಆದೇಶ ಹಾಗೂ ಆರ್ಬಿಟ್ರೇಶನ್ ಆದೇಶಗಳನ್ನು ಒಪ್ಪಿಕೊಳ್ಳಬೇಕು, ಇಲ್ಲವಾದರೆ ಆಗುವ ವಿಳಂಬದಿಂದ ಪರಿಹಾರದಲ್ಲಿ 400-500 ಕೋಟಿ ರೂ. ಹೆಚ್ಚುವರಿಯಾಗಿ ನೀಡಬೇಕಾಗುತ್ತದೆ ಎಂದು ಎಚ್ಚರಿಸಿದರು.
2 ವರ್ಷ ಈ ಕೆಲಸಕ್ಕೆ ಅವಧಿ ಇದೆ, ಸದ್ಯ ಶೇ. 12ರಷ್ಟು ಕಾಮಗಾರಿ ಆಗಿದೆ, ವಿವಾದ ಇರುವ ಜಾಗ ಬಿಟ್ಟು ಉಳಿದ ಕಡೆ ಕಾಮಗಾರಿ ನಡೆಯುತ್ತಿದೆ, ಪರಿಹಾರದ ವಿಚಾರದಲ್ಲೂ ಶೀಘ್ರ ಕ್ರಮ ಜರಗಿಸಲಾಗುವುದು ಎಂದು ರಾ.ಹೆ. ಅಧಿಕಾರಿಗಳು ತಿಳಿಸಿದರು.
ವಿಧಾನ ಪರಿಷತ್ ಸದಸ್ಯ ಪ್ರತಾಪಸಿಂಹ ನಾಯಕ್, ಮನಪಾ ಆಯುಕ್ತ ಚನ್ನಬಸಪ್ಪ ಉಪಸ್ಥಿತರಿದ್ದರು.
6 ಬಹುಗ್ರಾಮ ನೀರು ಯೋಜನೆಜಿಲ್ಲೆಗೆ ಹೊಸದಾಗಿ 6 ಬಹುಗ್ರಾಮ ಕುಡಿಯುವ ನೀರು ಯೋಜನೆ ರೂಪಿಸಿದ್ದು, ಈ ಬಾರಿಯ ಕ್ಯಾಬಿನೆಟ್ ಸಭೆಯಲ್ಲಿ ಅವುಗಳಿಗೆ ಅನುಮೋದನೆ ಸಿಗುವ ನಿರೀಕ್ಷೆ ಇದೆ ಎಂದು ಜಿ.ಪಂ. ಸಿಇಒ ಡಾ| ಕುಮಾರ ತಿಳಿಸಿದರು. ಮೂಡುಬಿದಿರೆ, ಉಳಾçಬೆಟ್ಟು, ಇಳಂತಿಲ, ಪುತ್ತೂರಿನ ಕುಟ್ರಾಪಾಡಿ, ಆಲಂಕಾರು ಹಾಗೂ ಅಳಿಕೆಯಲ್ಲಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯನ್ನು ಒಟ್ಟು 1,563 ಕೋಟಿ ರೂ. ವೆಚ್ಚದಲ್ಲಿ ಕೈಗೊಳ್ಳಲು ಪ್ರಸ್ತಾವನೆ ಕಳುಹಿಸಲಾಗಿದೆ ಎಂದರು. ನರೇಗಾದಲ್ಲಿ 3 ಗುರಿ
ನರೇಗಾ ಯೋಜನೆ ಸಂಬಂಧಿಸಿದಂತೆ ಈ ಬಾರಿ ಶೌಚಾಲಯ ಸರಿ ಇಲ್ಲದ ಶಾಲೆಗಳಿಗೆ ಸರಿಯಾದ ಶೌಚಾಲಯ ನಿರ್ಮಾಣ, ಅಸಮರ್ಪಕ ಬಿಸಿಯೂಟದ ಕೊಠಡಿಗಳನ್ನು ಸರಿಪಡಿಸುವುದು ಅಥವಾ ನೂತನ ಕೊಠಡಿ ನಿರ್ಮಾಣ ಹಾಗೂ ಆಟದ ಮೈದಾನಗಳ ನಿರ್ಮಾಣ, ವಿಸ್ತರಣೆಗಳನ್ನು ಗುರಿಯಾಗಿ ಇರಿಸಿಕೊಂಡು ಕೆಲಸ ಮಾಡುವಂತೆ ಸಂಸದರು ಸೂಚಿಸಿದರು. ಜಿಲ್ಲೆಯಲ್ಲಿ ನರೇಗಾದಲ್ಲಿ 140 ಶಾಲೆಗಳಿಗೆ ಈ ವರ್ಷ ಮಳೆ ನೀರು ಕೊçಲು ವ್ಯವಸ್ಥೆ ಕೈಗೊಳ್ಳಲಾಗುವುದು, ಅಮೃತ್ ಸರೋವರ್ ಯೋಜನೆಯಲ್ಲಿ 75 ಕೆರೆ ಅಭಿವೃದ್ಧಿ, ಅಂಗನವಾಡಿಗಳ ಅಭಿವೃದ್ಧಿ, ಗ್ರಾ.ಪಂಗಳಲ್ಲಿ ಉದ್ಯಾನವನ, ಪ್ರತೀ ತಾಲೂಕಿಗೆ 10ರಷ್ಟು ಕಿಂಡಿ ಅಣೆಕಟ್ಟು ನಿರ್ಮಾಣ, ಶಾಲೆಗಳ ಸುಂದರೀಕರಣದಂತಹ ಕೆಲಸಗಳನ್ನು ಕೈಗೊಳ್ಳಲಾಗುತ್ತಿದೆ, 68 ಶಾಲೆಗಳಲ್ಲಿ ಅಕ್ಷರ ಕೈತೋಟ ನಿರ್ಮಾಣ ಮಾಡಲಾಗುತ್ತಿದೆ ಎಂದು ಸಿಇಒ ಕುಮಾರ ತಿಳಿಸಿದರು. ವಿವೇಕಾನಂದ ಸಂಘಗಳ ಸ್ಥಾಪನೆ
ಪ್ರತೀ ಗ್ರಾ.ಪಂ.ಗೆ ಎರಡರಂತೆ ಜಿಲ್ಲೆಯಲ್ಲಿ 446 ವಿವೇಕಾನಂದ ಯುವ ಸ್ವಸಹಾಯ ಸಂಘಗಳನ್ನು ರಚಿಸಲಾಗಿದೆ. ಅವುಗಳಿಗೆ ಸುತ್ತುನಿಧಿಯನ್ನು ಸರಕಾರ ಒದಗಿಸಲಿದ್ದು, ಸ್ವಯಂ ಉದ್ಯೋಗ ಕೈಗೊಳ್ಳುವುದಕ್ಕೆ ಇದು ನೆರವಾಗಲಿದೆ. ಪ್ರತೀ ಗುಂಪಿನಲ್ಲಿ ಸರಾಸರಿ 10 ಸದಸ್ಯರಿದ್ದಾರೆ ಎಂದು ಸಿಇಒ ತಿಳಿಸಿದರು. ಬಳ್ಪಕ್ಕೆ 31.53 ಕೋಟಿ ರೂ.
ಬಳ್ಪ ಆದರ್ಶಗ್ರಾಮಕ್ಕೆ ಇದುವರೆಗೆ 31.53 ಕೋಟಿ ರೂ. ಅನುದಾನ ಸಿಕ್ಕಿದೆ. ಇದರಲ್ಲಿ 27 ಕೋಟಿ ರೂ. ಸರಕಾರದಿಂದ ಬಂದರೆ 3.52 ಕೋಟಿ ರೂ. ವಿವಿಧ ಕಂಪೆನಿಗಳ ಸಿಎಸ್‌ಆರ್ ಮೂಲಕ ಬಂದಿದೆ.