ಮಂಗಳೂರು : ನಳಿನ್ ಕುಮಾರ್ ಕಟೀಲು ಅವರು ಸಂಸದ ರಾಗಿ, ಬಿಜೆಪಿ ರಾಜ್ಯಾಧ್ಯಕ್ಷರಾಗಿ ಯಶಸ್ವಿಯಾಗಿ ಅಭಿವೃದ್ಧಿ ಕೆಲಸ, ಪಕ್ಷ ಸಂಘಟನೆಗಳನ್ನು ಮಾಡುತ್ತಾ ಬಂದಿದ್ದಾರೆ. ಅವರ ಬಗ್ಗೆ ಟೀಕೆ ಮಾಡುತ್ತಿರುವವರು ಬಿಜೆಪಿ ಕಾರ್ಯಕರ್ತರಲ್ಲ ಎಂದು ದಕ್ಷಿಣ ಕನ್ನಡ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ (ದಿಶಾ) ಸದಸ್ಯರು ಹೇಳಿದ್ದಾರೆ.
ನಗರದಲ್ಲಿ ಮಂಗಳವಾರ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ “ದಿಶಾ’ ಸದಸ್ಯ ವಿ. ಕೃಷ್ಣಪ್ಪ ಪೂಜಾರಿ ಅವರು, ಸಾಮಾಜಿಕ ಜಾಲತಾಣಗಳಲ್ಲಿ ಅವಹೇಳನಕಾರಿಯಾಗಿ ಪೋಸ್ಟ್ ಮಾಡುತ್ತಿರುವವರ ಬಗ್ಗೆ ಕ್ರಮ ಜರಗಿಸುವ ಕುರಿತು ಚಿಂತನೆ ನಡೆಸಲಾಗುತ್ತಿದೆ. ನಳಿನ್ ಅವರನ್ನು ಬಿಜೆಪಿ ಕಾರ್ಯಕರ್ತರು ಟೀಕಿಸುತ್ತಿಲ್ಲ, ಅದರಲ್ಲಿ ವಿಪಕ್ಷಗಳ ಕೈವಾಡ ಇದೆ ಎಂದು ಹೇಳಿದರು.
ಸಂಸದ ನಳಿನ್ ಅವರು ತಮ್ಮ ಅವಧಿಯಲ್ಲಿ ಸಾಕಷ್ಟು ಅನುದಾನಗಳನ್ನು ಜಿಲ್ಲೆಗೆ ತರುವಲ್ಲಿ ಯಶಸ್ವಿಯಾಗಿದ್ದಾರೆ. ಕೊರನಾ ಸಂದರ್ಭದಲ್ಲಿಯೂ ಜನರ ಸಂಕಷ್ಟಗಳಿಗೆ ಸ್ಪಂದಿಸಿದ್ದಾರೆ. ಕೋಸ್ಟ್ ಗಾರ್ಡ್ ತರಬೇತಿ ಕೇಂದ್ರ, ಪ್ಲಾಸ್ಟಿಕ್ ಪಾರ್ಕ್, ಮಂಗಳೂರು ನಗರ ಸ್ಮಾರ್ಟ್ ಸಿಟಿ ಯೋಜನೆ, ಅಮೃತ್ ಯೋಜನೆ, ಮಾಣಿ-ಮೈಸೂರು, ಕುಲಶೇಖರ – ಬೆಳುವಾಯಿ, ಬಿ.ಸಿ ರೋಡ್- ಚಾರ್ಮಾಡಿ, ಬಿ.ಸಿ ರೋಡ್- ಅಡ್ಡಹೊಳೆ ಮೊದಲಾದ ಹೆದ್ದಾರಿಗಳ ಅಭಿವೃದ್ಧಿ ಯೋಜನೆ, ಆದರ್ಶ ಗ್ರಾಮದ ಅಭಿವೃದ್ಧಿ ಮೊದಲಾದವು ಸಂಸದರ ಕೊಡುಗೆಯಾಗಿದೆ.
ನಿರಂತರ ರಾಜ್ಯಪ್ರವಾಸದ ಮೂಲಕ ಬೂತ್ ಮಟ್ಟದವರೆಗೂ ಪಕ್ಷ ಸಂಘಟಿಸುತ್ತಿದ್ದಾರೆ. ಇದೀಗ ನರೇಂದ್ರ ಮೋದಿಯವರು ಮಂಗಳೂರಿಗೆ ಆಗಮಿಸುತ್ತಿದ್ದು ಆ ಸಂದರ್ಭ ಕೇಂದ್ರದ ಅನೇಕ ಯೋಜನೆಗಳ ಫಲಾನುಭವಿಗಳನ್ನು ಕುರಿತು ಮಾತನಾಡಲಿದ್ದಾರೆ. ಸಮಾವೇಶ ಎಲ್ಲರ ಸಹಭಾಗಿತ್ವದಲ್ಲಿ ಪೂರ್ಣ ಯಶಸ್ವಿಯಾಗಲಿದೆ ಎಂದರು.
ದಿಶಾದ ಸದಸ್ಯರಾದ ಜಯಶ್ರೀ ಕುಲಾಲ್, ರಾಮದಾಸ್ ಹಾರಾಡಿ, ರಘುರಾಮ ಮುಗೇರ ಹಾಗೂ ಮೋನಪ್ಪ ದೇವಸ್ಯ ಉಪಸ್ಥಿತರಿದ್ದರು.