ಬೆಂಗಳೂರು: ಹಳೆ ಮೈಸೂರು ಭಾಗದಲ್ಲಿ ಬೇರೆ ಪಕ್ಷಗಳ ಅನೇಕ ನಾಯಕರು ಬಿಜೆಪಿ ಸಿಎಂ ಹಾಗೂ ನನ್ನ ಸಂಪರ್ಕದಲ್ಲಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.
ಬೆಂಗಳೂರಿನ ಖಾಸಗಿ ಹೊಟೆಲ್‌ನಲ್ಲಿ ನಡೆದ ಬೆಂಗಳೂರು ಉತ್ತರ ಜಿಲ್ಲಾ ಬಿಜೆಪಿ ಕೋರ್ ಕಮಿಟಿ ಸಭೆ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ವಿಧಾನಸಭೆ ಚುನಾವಣೆ ವೇಳೆಗೆ ಹಲವರು ನಮ್ಮ ಪಕ್ಷಕ್ಕೆ ಬರುತ್ತಾರೆ. ಬಿಜೆಪಿಯಲ್ಲಿ ಬಹಳಜನ ಗೆಲ್ಲುವ ಅಭ್ಯರ್ಥಿಗಳಿದ್ದಾರೆ. ಹೀಗಾಗಿ ಹೊರಗಿನವರನ್ನು ಸೇರಿಸಿಕೊಳ್ಳುವುದು ಹೆಚ್ಚು ಅವಶ್ಯಕತೆ ಬರುವುದಿಲ್ಲ ಎಂದರು.
ಹಳೇ ಮೈಸೂರು ಭಾಗದಲ್ಲಿ ತುಂಬಾ ಜನ ನಮ್ಮ ಪಕ್ಷ ಹಾಗೂ ಸಿಎಂ ಬಸವರಾಜ ಬೊಮ್ಮಾಯಿ ಸಂಪರ್ಕದಲ್ಲಿ ಇದ್ದಾರೆ. ಎಲ್ಲವನ್ನೂ ಪರಿಶೀಲನೆ ಮಾಡುತ್ತಿದ್ದೇವೆ. ನಾವು ತೆಗೆದುಕೊಂಡ ನಿರ್ಣಯವನ್ನು ವರಿಷ್ಠರ ಗಮನಕ್ಕೆ ತರುತ್ತೇವೆ. ಪಕ್ಷ ಸೇರ್ಪಡೆಗೆ ಅಮಿತ್ ಶಾ ಬರುತ್ತಾರೆ ಅಂತ ಏನೂ ಇಲ್ಲ. ಮುಖ್ಯಮಂತ್ರಿಗಳ ಸಮ್ಮುಖದಲ್ಲಿ ಪಕ್ಷ ಸೇರ್ಪಡೆ ಮಾಡಿಕೊಳ್ಳುತ್ತೇವೆ. ಇದಕ್ಕೆ ರಾಷ್ಟ್ರೀಯ ನಾಯಕರ ಒಪ್ಪಿಗೆ ಪಡೆದುಕೊಳ್ಳುತ್ತೇವೆ. ಬೇರೆ ಬೇರೆ ಪಕ್ಷಗಳ ಹತ್ತಾರು ಜನ ಶಾಸಕರು ನಮ್ಮ ಸಂಪರ್ಕದಲ್ಲಿದ್ದಾರೆ. ಬೇರೆ ಬೇರೆ ಪಕ್ಷಗಳ ನಾಯಕರೂ ನಮ್ಮ ಸಂಪರ್ಕದಲ್ಲಿದ್ದಾರೆ. ಯಾರನ್ನು ತೆಗೆದುಕೊಳ್ಳಬೇಕು ಎನ್ನುವ ಬಗ್ಗೆ ಅವಲೋಕನ ಮಾಡಿ ನಿರ್ಧಾರ ಮಾಡುತ್ತೇವೆ ಎಂದರು.
ಎಲೆಕ್ಷನ್ ಕ್ಯಾಬಿನೆಟ್ ಪ್ರಸ್ತಾಪ ಇಲ್ಲ: ಎಲೆಕ್ಷ್ಯನ್ ಕ್ಯಾಬಿನೆಟ್ ರಚನೆ ಮಾಡುವ ಪ್ರಸ್ತಾಪ ನಮ್ಮ ಮುಂದೆ ಇಲ್ಲ. ಸರ್ಕಾರ ಮತ್ತು ಪಕ್ಷ ಒಟ್ಟಾಗಿ ಚುನಾವಣೆಯನ್ನು ಎದುರಿಸುತ್ತೇವೆ ಎಂದು ಹೇಳಿದರು.
ಮುಂದಿನ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆಗೆ ಎಲ್ಲ ರೀತಿಯ ಸಮೀಕ್ಷೆ ಮಾಡಲಾಗುವುದು. ಜನರ ಅಭಿಪ್ರಾಯಗಳನ್ನೂ ಪರಿಗಣಿಸಲಾಗುವುದು ಎಂದರು. ಇದೇ ವೇಳೆ, ಸ್ವಾಮೀಜಿಗಳಿಗೆ 50 ಕ್ಷೇತ್ರ ಬಿಟ್ಟು ಕೊಡುವಂತೆ ಭಟ್ಕಳದಲ್ಲಿ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ನೀಡಿರುವ ಹೇಳಿಕೆ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಬ್ರಹ್ಮಾನಂದ ಸ್ವಾಮೀಜಿಗಳು ನಮ್ಮ ಗುರುಗಳು. ಅವರ ಮೇಲೆ ಅಪಾರ ಗೌರವ ಇದೆ. ರಾಜಕಾರಣದ ಬಗ್ಗೆ ಅವರು ಏನು ಹೇಳಿ¨ªಾರೋ ನನಗೆ ಗೊತ್ತಿಲ್ಲ. ಅವರ ಹೇಳಿಕೆ ಬಗ್ಗೆ ವಿಚಾರಿಸುತ್ತೇನೆ ಎಂದರು.