Advertisement
ಲೋಕಸಭೆಯಲ್ಲಿ ಶುಕ್ರವಾರ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಸಾಕಷ್ಟು ಸ್ಥಳಾವಕಾಶವಿರುವ ಮಂಗಳೂರು ಜಂಕ್ಷನ್‌ನಲ್ಲಿ ವಿಭಾಗೀಯ ಕೇಂದ್ರ ಕಚೇರಿ ನಿರ್ಮಿಸಬಹುದಾಗಿದೆ. ಮಂಗಳೂರು ಸೆಂಟ್ರಲ್ ರೈಲ್ವೇ ನಿಲ್ದಾಣ ದಕ್ಷಿಣ ರೈಲ್ವೇಯ 7 ಕಿ.ಮೀ., ಕೊಂಕಣ ರೈಲ್ವೇಯ 18 ಕಿ.ಮೀ. ಮತ್ತು ನೈಋತ್ಯ ರೈಲ್ವೇಯ 6 ಕಿ.ಮೀ. ವ್ಯಾಪ್ತಿಯನ್ನು ಹೊಂದಿದೆ. ಹೀಗಾಗಿ ಕೊಂಕಣ ರೈಲ್ವೇಯ ಅಧೀನದಲ್ಲಿ ಪ್ರತ್ಯೇಕ ಮಂಗಳೂರು ವಿಭಾಗ ರಚಿಸಬೇಕು ಎಂದರು.
ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣಕ್ಕೆ ಹೊಸ ಕಟ್ಟಡ ನಿರ್ಮಿಸಿ ವಿಶ್ವದರ್ಜೆಯ ನಿಲ್ದಾಣವಾಗಿ ಅಭಿವೃದ್ಧಿಪಡಿಸಬೇಕು ಎಂದರು. ಮಂಗಳೂರು-ಬೆಂಗಳೂರು ರೈಲುಮಾರ್ಗದ ಹಳಿ ದ್ವಿಗುಣ ಮತ್ತು ವಿದ್ಯುದೀಕರಣಗೊಳಿಸಬೇಕು. ಸುಬ್ರಹ್ಮಣ್ಯ ಮಾರ್ಗದಿಂದ ಮಂಗಳೂರು ವರೆಗೆ 8 ಕಡೆ ಮೇಲ್ಸೇತುವೆ ಅಥವಾ ಕೆಳಸೇತುವೆ ನಿರ್ಮಿಸಬೇಕು, ಮಂಗಳೂರಿನಿಂದ ಎಲ್ಲ ಜಿಲ್ಲಾ ಹಾಗೂ ರಾಜ್ಯಗಳ ಕೇಂದ್ರ ಸ್ಥಾನಗಳಲ್ಲಿ ರೈಲ್ವೇ ಸಂಪರ್ಕ ಕಲ್ಪಿಸಬೇಕು, ಮಂಗಳೂರು-ಬೀದರ್, ಮಂಗಳೂರು-ತಿರುಪತಿ ಹೊಸದಾಗಿ ರೈಲು ಸಂಚಾರ ಆರಂಭಿಸಬೇಕು, ಮಂಗಳೂರಿನಿಂದ ರಾಮೇಶ್ವರಕ್ಕೆ ನೇರ ರೈಲು ಸಂಚಾರ, ಮಂಗಳೂರು-ವಿಜಯಪುರ ರೈಲು ಅನ್ನು ಖಾಯಂಗೊಳಿಸಬೇಕು, ಮಂಗಳೂರು-ಮಡಂಗಾವ್ ರೈಲನ್ನು ಸೂಪರ್‌ಫಾಸ್ಟ್ ರೈಲು ಆಗಿ ಪರಿವರ್ತಿಸಬೇಕು ಹಾಗೂ ಥಾಣೆ ಅಥವಾ ಸಿಎಸ್‌ಟಿಗೆ ವಿಸ್ತರಿಸಬೇಕು ಮುಂತಾದ ಬೇಡಿಕೆಗಳನ್ನು ಅವರು ರೈಲ್ವೇ ಸಚಿವರಲ್ಲಿ ಮಂಡಿಸಿದರು.