ರಾಯಚೂರು: ಈಚೆಗೆ ನಿಧನರಾದ ರಾಜ್ಯಸಭಾ ಸದಸ್ಯ ಅಶೋಕ ಗಸ್ತಿ ಅವರ ನಗರದ ನಿವಾಸಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಭೇಟಿ ನೀಡಿ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದರು.
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಶೋಕ ಗಸ್ತಿ ಹಲವಾರು ವರ್ಷ ಪಕ್ಷಕ್ಕಾಗಿ ಶ್ರಮಿಸಿದ್ದಾರೆ. ಜಿಲ್ಲೆಯಲ್ಲಿ ಪಕ್ಷ ಕಟ್ಟಿ ಬೆಳೆಸಿದ್ದಾರೆ. ಅವರ ಕುಟುಂಬದೊಂದಿಗೆ ಪಕ್ಷವಿದೆ ಎಂದರು.
ಭೂಸುಧಾರಣೆ ಹಾಗೂ ಎಪಿಎಂಸಿ ಕಾಯ್ದೆಗಳು ರೈತರ ಪರವಾಗಿವೆ. ನಾನು ಕೂಡ ರೈತನ ಮಗನೇ. ರೈತನಿಗೆ ಅನುಕೂಲವಾಗುವ ಕಾಯ್ದೆಗಳನ್ನೆ ಬಿಜೆಪಿ ಜಾರಿಗೆ ತಂದಿದೆ. ಆದರೆ, ಇಂದು ರಾಜ್ಯದಲ್ಲಿ ನಡೆಯುತ್ತಿರುವುದು ಕಾಂಗ್ರೆಸ್ ಹಾಗೂ ಇನ್ನಿತರ ಸಂಘಟನೆಗಳ ದುರುದ್ದೇಶ ಪೂರಿತ ಹೋರಾಟವಾಗಿದೆ ಎಂದು ಟೀಕಿಸಿದರು.
ಇದನ್ನೂ ಓದಿ :ರೈತರಿಗೆ ಅನ್ಯಾಯವಾದರೆ ಅಧಿಕಾರಕ್ಕೆ ಅಂಟಿಕೊಂಡು ಕೂರಲ್ಲ: ಬಿ ಎಸ್ ಯಡಿಯೂರಪ್ಪ
ರೈತರಿಗೆ ಮುಕ್ತ ಮಾರುಕಟ್ಟೆ ವ್ಯವಸ್ಥೆ ಸಿಗಬೇಕು. ಮಧ್ಯವರ್ತಿಗಳ ಹಾವಳಿ ತಪ್ಪಿಸಬೇಕು. ರೈತರ ಬೆಳೆಗೆ ಉತ್ತಮ ಬೆಲೆ ಕಲ್ಪಿಸಬೇಕು ಎಂಬುದು ಮಸೂದೆಗಳ ಉದ್ದೇಶವಾಗಿದೆ. ಆದರೆ, ಈಗ ರೈತರ ಹೆಸರಿನಲ್ಲಿ ಕಾಂಗ್ರೆಸ್ ಪ್ರತಿಭಟನೆ ಮಾಡುತ್ತಿದೆ. ಮೋದಿ ಹಾಗೂ ಯಡಿಯೂರಪ್ಪನವರು ರೈತರ ಪರವಾಗಿ ಕೆಲಸ ಮಾಡುತ್ತಿದ್ದಾರೆ ಎಂದರು.