Advertisement

Inspiration: ಕೂಲಿ ಕೆಲಸ ಮಾಡಿಕೊಂಡಿದ್ದರೂ ತಮಗಿದ್ದ ಜಾಗವನ್ನೇ ಶಾಲೆಗೆ ನೀಡಿದ ಮಹಾದಾನಿ

01:44 PM Aug 11, 2023 | Team Udayavani |

ನಂಜನಗೂಡು: ಎಷ್ಟು ಆಸ್ತಿ ಮಾಡಿದರೂ ಸಾಲದು, ಮತ್ತಷ್ಟು ಬೇಕು, ಸರ್ಕಾರದ ಸವಲತ್ತು ಪಡೆಯಲು ನಾ ಮುಂದು ತಾ ಮುಂದು ಎನ್ನುತ್ತಿರುವ ಕಾಲದಲ್ಲಿ ಇಲ್ಲೋರ್ವ ವೃದ್ಧೆ ತನಗಿದ್ದ ಒಂದು ದೊಡ್ಡ ನಿವೇಶನವನ್ನು ಶಾಲೆಗೆ ದಾನ ಮಾಡಿ ಔದಾರ್ಯ ಮೆರೆದಿದ್ದಾರೆ. ಹಾಗಂತ ಈ ಮಹಿಳೆಯೇನು ಶ್ರೀಮಂತ ಕುಟುಂಬದವರಲ್ಲ. ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಈ ಮಹಾದಾನಿಯ ಹೆಸರು ಚಿಕ್ಕರಂಗಮ್ಮ. 75 ವರ್ಷದ ಈಕೆಯ ಹೆಸರಿನಲ್ಲಿ “ಚಿಕ್ಕ’ ಎಂಬ ಪದವಿದ್ದರೂ ಊರಿಗೆ ಉಪಕಾರ ಆಗವಂತಹ “ದೊಡ್ಡ’ತನ ಮೆರೆದಿದ್ದಾರೆ.

Advertisement

ನಂಜನಗೂಡು ತಾಲೂಕಿನ ಆಲಂಬೂರು ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಗೆ ಗ್ರಾಮದ ಚಿಕ್ಕರಂಗಮ್ಮ ಅವರು ತಮ್ಮ ಹೆಸರಿನಲ್ಲಿದ್ದ 2.5 ಗುಂಟೆ ಜಾಗವನ್ನು ದಾನವಾಗಿ ನೀಡಿದ್ದಾರೆ. ಈಕೆಯ ಹೆಸರಿನಲ್ಲಿದ್ದ ಈ ಒಂದೇ ಜಾಗವನ್ನು ಶಾಲೆಯ ಹೆಸರಿಗೆ ಬರೆದುಕೊಟ್ಟಿದ್ದಾರೆ.

2 ಲಕ್ಷ ಮೌಲ್ಯದ ಭೂಮಿ: ಪ್ರಸ್ತುತ‌ ಗ್ರಾಮೀಣ ಪ್ರದೇಶಗಳಲ್ಲೂ ನಿವೇಶನಗಳ ಬೆಲೆ ಏರಿಕೆಯಾಗಿದ್ದು, ಗ್ರಾಮದ ಮಧ್ಯಭಾಗದಲ್ಲಿರುವ ನಿವೇಶನಕ್ಕೆ ಲಕ್ಷಾಂತರ ರೂ.ಬೆಲೆ ಇದೆ. ಇದೀಗ ಶಾಲೆಗೆ ಜಾಗ ನೀಡಿರುವ ಆಲಂಬೂರು ಗ್ರಾಮವು ನಂಜನಗೂಡು ತಾಲೂಕು ಕೇಂದ್ರದಿಂದ ಕೇವಲ 10 ಕಿ.ಮೀ. ದೂರದಲ್ಲಿದೆ. ದಾನವಾಗಿ ನೀಡಿರುವ 2.5 ಗುಂಟೆ ಜಾಗದಲ್ಲಿ ಎರಡು ವಿಶಾಲವಾದ ನಿವೇಶನಗಳು ಆಗುತ್ತವೆ. ಒಂದು ನಿವೇಶನಕ್ಕೆ ಕನಿಷ್ಠ ಒಂದು ಲಕ್ಷ ರೂ. ಎಂದು ಅಂದಾಜಿಸಿದರೂ 2 ನಿವೇಶನದಿಂದ ಎರಡು ಲಕ್ಷ ರೂ. ಆಗುತ್ತದೆ. ಈಕೆಯ ಜೀವನಾಧಾರಕ್ಕೆ ನಿರ್ದಿಷ್ಟ ಆದಾಯ, ಜಮೀನು ಇಲ್ಲದಿದ್ದರೂ ತಮ್ಮಲ್ಲಿದ್ದ 2.5 ಗುಂಟೆ ಜಾಗವನ್ನು ಸರ್ಕಾರಿ ಶಾಲೆಗೆ ದಾನವಾಗಿ ನೀಡಿರುವ ಈ ವೃದ್ಧೆಯ ಸೇವಾ ಮನೋಭಾವಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಶಾಲೆಗೆ ಹೊಂದಿಕೊಂಡ ನಿವೇಶನ: ಆಲಂಬೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಒಂದರಿಂದ ಏಳನೇ ತರಗತಿವರೆಗೆ 111 ವಿದ್ಯಾರ್ಥಿಗಳು ಓದುತ್ತಿದ್ದಾರೆ. ಇಷ್ಟು ಮಕ್ಕಳಿಗೆ ಹೆಚ್ಚುವರಿ ಶಾಲೆ ಕೊಠಡಿಗಳನ್ನು ನಿರ್ಮಿಸಬೇಕಾದ ಅವಶ್ಯಕತೆ ಇದೆ. ಜತೆಗೆ ಈ ಶಾಲೆಗೆ ಆಟದ ಮೈದಾನ ಕೂಡ ಇಲ್ಲ. ಇದೀಗ ಚಿಕ್ಕರಂಗಮ್ಮ ಅವರ ಕೊಡುಗೆಯಾಗಿ ನೀಡಿರುವ 2.5 ಗುಂಟೆ ಜಮೀನು ಶಾಲೆಗೆ ಹೊಂದಿಕೊಂಡಿದ್ದು, ಈ ಜಾಗದಲ್ಲಿ ಕೊಠಡಿ, ಶಾಲೆ ಮೇಲ್ದರ್ಜೆಗೇರಿಸಲು ಹಾಗೂ ಸುಸಜ್ಜಿತ ಮೈದಾನ ಮಾಡಿಕೊಳ್ಳಲು ಅನುಕೂಲ ಆಗಿದೆ.

ಚಿಕ್ಕರಂಗಮ್ಮನ ದೊಡ್ಡ ಕುಟುಂಬ: ಆಲಂಬೂರು ಗ್ರಾಮದ ಚಿಕ್ಕರಂಗಮ್ಮನಿಗೆ ಐವರು ಗಂಡು ಮಕ್ಕಳು ಹಾಗೂ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಈ ಐವರು ಗಂಡು ಮಕ್ಕಳು ಕೂಲಿ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದಾರೆ. ಇಬ್ಬರು ಪುತ್ರಿಯರನ್ನು ಮದುವೆ ಮಾಡಿಕೊಡಲಾಗಿದೆ.

Advertisement

ಚಿಕ್ಕರಂಗಮ್ಮ ಅವರ ಪತಿ ಮಾದಶೆಟ್ಟಿ ಹಾಗೂ ಅವರ ತಂದೆ ಕರಿಮಾದಯ್ಯ ಗ್ರಾಮದಲ್ಲಿ ಒಂದಿಷ್ಟು ಆಸ್ತಿ ಮಾಡಿದ್ದರು. ಈ ಆಸ್ತಿಯನ್ನು ನಾಲ್ವರು ಗಂಡು ಮಕ್ಕಳಿಗೂ ಹಂಚಿದ ನಂತರ ಈಕೆಯ ಬಳಿ ಉಳಿದಿದ್ದು 2.5 ಗುಂಟೆ ಜಾಗ ಮಾತ್ರ. ಇದೀಗ ತಮ್ಮ ಕಿರಿಯ ಪುತ್ರ ಮಣಿಕಂಠನೊಂದಿಗೆ ಮೂಲ ಮನೆಯಲ್ಲಿ ಉಳಿದುಕೊಂಡಿರುವ ಚಿಕ್ಕರಂಗಮ್ಮ ದಿನ ದೂಡುತ್ತಿದ್ದಾರೆ. ಇದೀಗ “ತಮ್ಮ ಹೆಸರಿನಲ್ಲಿದ್ದ ಏಕೈಕ 2.5 ಗುಂಟೆ ಜಮೀನನ್ನು ತಮ್ಮೂರಿನ (ಆಲಂಬೂರು) ಸರ್ಕಾರಿ ಶಾಲೆಗೆ ದಾನವಾಗಿ ನೀಡುತ್ತಿದ್ದೇನೆ’ ಎಂದು ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗಳ ಹೆಸರಿಗೆ ನೋಂದಣಿ ಮಾಡಿಸಿಕೊಟ್ಟಿದ್ದಾರೆ.

ಸರ್ಕಾರ ಶಾಲೆಗೆ ಸುಸಜ್ಜಿತ ಕೊಠಡಿ, ಆಟದ ಮೈದಾನ ನಿರ್ಮಿಸಲಿ: ಚಿಕ್ಕರಂಗಮ್ಮ ಮನವಿ
ಶಾಲೆಗೆ ತಮ್ಮ ಭೂಮಿಯನ್ನು ದಾನವಾಗಿ ನೀಡಿರುವ ಚಿಕ್ಕರಂಗಮ್ಮ ಉದಯವಾಣಿಯೊಂದಿಗೆ ಮಾತನಾಡಿ, ತಾವಾಗಲಿ, ತಮ್ಮ ಮಕ್ಕಳಾಗಲಿ ಓದಿಲ್ಲ. ಗ್ರಾಮದ ಮಕ್ಕಳು ಚೆನ್ನಾಗಿ ಓದಿ ಬದುಕು ಕಟ್ಟಿಕೊಂಡರೆ ಸಂತೋಷವಾಗುತ್ತದೆ. ಶಾಲೆಗೆ ಜಾಗ ಅಗತ್ಯವಿದ್ದರಿಂದ ದಾನ ಮಾಡಿದ್ದೇನೆ. ನನಗೀಗ 75 ವರ್ಷ ದಾಟಿದ್ದು, ಬದುಕಿರುವಾಗಲೇ ಶಿಕ್ಷಣ ಇಲಾಖೆಗೆ 2.5 ಗುಂಟೆ ಜಾಗವನ್ನು ನೋಂದಣಿ ಮಾಡಿಸಿಕೊಟ್ಟಿದ್ದೇನೆ. ಇಲ್ಲಿ ಶಾಲಾ ಕೊಠಡಿ, ಆಟದ ಮೈದಾನ ನಿರ್ಮಿಸಿಕೊಂಡರೆ ತಾವು ಜಮೀನು ಕೊಟ್ಟಿದ್ದಕ್ಕೆ ಸಾರ್ಥಕವಾಗುತ್ತದೆ ಎಂದು ವಿನಮ್ರವಾಗಿ ನುಡಿದರು.

ನಮ್ಮ ಶಾಲೆ ಅಭಿವೃದ್ಧಿಗೆ ಯಾವುದೇ ಸ್ಥಳ ಆವಕಾಶ ಇಲ್ಲದಿರುವುದನ್ನು ಮನಗಂಡು ಶಾಲೆಗೆ ಹೊಂದಿಕೊಂಡಂತಿರುವ ಎರಡೂ ವರೆ ಗುಂಟೆ ಜಮೀನನನ್ನು ವಿದ್ಯಾರ್ಥಿಗಳ ಭವಿಷ್ಯಕ್ಕೆ ದಾನ ನೀಡುವಂತೆ ಚಿಕ್ಕರಂಗಮ್ಮ ಅವರಲ್ಲಿ ಕೇಳಿಕೊಂಡಾಗ ಆಕೆ ಹಾಗೂ ಆಕೆ ಐವರು ಮಕ್ಕಳು ಸಂತೋಷ ದಿಂದ ಜಾಗವನ್ನು ಶಿಕ್ಷಣ ಇಲಾಖೆಗೆ ನೋಂದಾ ಯಿಸಿಕೊಟ್ಟಿದ್ದಾರೆ. ಈ ಶಾಲೆಯಲ್ಲಿ ಓದುವ ಮಕ್ಕಳು ಚಿಕ್ಕರಂಗಮ್ಮಗೆ ಋಣಿಯಾಗಿರಬೇಕು.
– ಮೀನಾಕ್ಷಿ, ಮುಖ್ಯಶಿಕ್ಷಕಿ, ಆಲಂಬೂರು ಸರ್ಕಾರಿ ಶಾಲೆ

ಆಲಂಬೂರು ಸರ್ಕಾರಿ ಶಾಲೆಗೆ ಹೊಂದಿಕೊಂಡಿರುವ ಈ ಜಾಗದಲ್ಲಿ ಸರ್ಕಾರ ಕೊಠಡಿಗಳನ್ನು ನಿರ್ಮಿಸಲಿ ಎಂದು ಚಿಕ್ಕರಂಗಮ್ಮ ದಾನವಾಗಿ ನೀಡಿದ್ದಾರೆ. ಇಂತಹ ದಾನವನ್ನು ಶಾಶ್ವತ, ಮಾದರಿ ದಾನ ಎಂದು ದಾಖಲಿಸಬಹುದು. ಈಕೆಯನ್ನು ಶಿಕ್ಷಣ ಇಲಾಖೆ ಜೀವನಪರ್ಯಂತ ಸ್ಮರಿಸಬೇಕು.
– ಟಿ.ಶಿವಲಿಂಗಯ್ಯ, ಕ್ಷೇತ್ರ ಶಿಕ್ಷಣಾಧಿಕಾರಿ, ನಂಜನಗೂಡು

– ಶ್ರೀಧರ್‌ ಆರ್‌.ಭಟ್‌

ಇದನ್ನೂ ಓದಿ: Watch Video: ಇದೊಳ್ಳೆ ಉಪಾಯ…ಪರಿಸರ ಸ್ನೇಹಿ ಬಿದಿರಿನ ವಾಶ್‌ ಬೇಸಿನ್‌ ಹೇಗಿದೆ ನೋಡಿ…

Advertisement

Udayavani is now on Telegram. Click here to join our channel and stay updated with the latest news.

Next