Advertisement

ನಗುವಾಗ ನಕ್ಕು: ಎರಡು ಕಾಲಘಟ್ಟಗಳ ನಡುವಿನ ಸಂಘರ್ಷ, ಹಪಹಪಿ

05:10 PM Aug 18, 2018 | |

ನಾಟಕದ ವಸ್ತು, ಆವರಣ, ಶೈಲಿ, ವಿನ್ಯಾಸ ಯಾವುದೇ ಕಾಲವನ್ನು ಬಿಂಬಿಸುತ್ತಿರಲಿ, ಅದರಲ್ಲಿ ಸಮಕಾಲೀನ ಸವಾಲುಗಳು ಮತ್ತು ಸಂದರ್ಭಗಳು ತುಂಬಾ ಸೂಚ್ಯವಾಗಿ ಅಡಕಗೊಂಡಿರುತ್ತವೆ. ಹೀಗೆ ಅಡಕಗೊಂಡಾಗ ಒಂದು ಕಾಲಘಟ್ಟವೊಂದರಲ್ಲಿ ಮತ್ತೂಂದು ಕಾಲದ ಮಿಡಿತಗಳು ಧ್ವನಿತಗೊಳ್ಳುವ ಬಗೆಯನ್ನು ಗ್ರಹಿಸುವ ಸವಾಲು ನಮ್ಮದಾಗಿರುತ್ತದೆ. ಪಾತ್ರಗಳ ಒಳತೋಟಿಯಲ್ಲಿ ಚಲಿಸುವ ಭಾವಗಳು ಇಂದಿನ ವಸ್ತುಸ್ಥಿತಿಗಳಿಗೆ ಮುಖಾಮುಖೀಯಾಗುತ್ತಲೇ ಸುಳಿ ತಿರುಗುತ್ತಿರುತ್ತವೆ. ಇಂಥವನ್ನ ಬಿಂಬಿಸುವ ಕೃತಿಗಳ ಲೋಕ ಬೇರೆ ಬಗೆಯದು. ಸೂಚ್ಯವಾಗಿ ಹೇಳುವ ಸವಾಲನ್ನು ಅವು ಎದುರಿಸುತ್ತಿರುತ್ತವೆ. ಇವುಗಳೆಲ್ಲ ಪ್ರಯೋಗಗಳು.
  ಆದರೆ, ಇಂಥವನ್ನು ಹೊರತುಪಡಿಸಿದ ಮತ್ತೂಂದು ಜಾಡು ಇದೆ. ಇಲ್ಲಿ ಸೂಚ್ಯವಾಗಿಯೇನೂ ಹೇಳುವ ಅಗತ್ಯ ಇಲ್ಲ. ಬೇರೆ ಲೋಕದ ಕಥಾನಕದಲ್ಲಿ ಮತ್ತೂಂದರ ಛಾಯೆ ಕಾಣಿಸಬೇಕಾದ ಪ್ರಮೇಯವೂ ಇಲ್ಲ. ಬದಲಿಗೆ ಸಮಕಾಲೀನ ಸಂದರ್ಭದ ತುಣುಕನ್ನು ನೇರ ನಿಕಷಕ್ಕೆ ಗುರಿಪಡಿಸಬಹುದು.

Advertisement

  ಈಚೆಗೆ ಮೌಂಟ್‌ ಕಾರ್ಮೆಲ್‌ ಕಾಲೇಜಿನ ಕನ್ನಡ ಸಂಘ ಹಾಗೂ ಸಂವಹನ ವಿಭಾಗ ಜಂಟಿಯಾಗಿ ಕಾಲೇಜಿನ ಸಭಾಂಗಣದಲ್ಲಿ ಆಯೋಜಿಸಿದ್ದ ನಗುವಾಗ ನಕ್ಕು ರಂಗಪ್ರಯೋಗ ಮೇಲಿನ ವಿಚಾರದ ಜೊತೆ ಮುಖಾಮುಖೀಯಾಗಿತ್ತು. ನಾಟಕ ರಚನಾಕಾರ ಹಾಗೂ ನಿರ್ದೇಶಕ ಶ್ರೀಕಾಂತ್‌ ರಾವ್‌ ಇಂದಿನ ಕಾರ್ಪೊರೇಟ್‌ ವಲಯದ ಹೆಣ್ಣೊಬ್ಬಳ ಭಾವನಾ ಲೋಕವನ್ನು ಅನಾವರಣಗೊಳಿಸಿದ್ದರು. ಗಂಡಿನ ರೂಢಿಗತ ಜಗತ್ತಿನ ವಿರುದ್ಧ ಬಂಡೇಳುವ ಹೆಣ್ಣು ಮಾತ್ರ ಫೆಮಿನಿಸ್ಟ್‌ ಆಗಬೇಕಿಲ್ಲ. ಹೆಣ್ಣಿನಲ್ಲೂ ಒಂದು ಗಂಡಿನ ರೂಢಿಗತ ಲೋಕವಿದ್ದಂತೆ, ಗಂಡಿನಲ್ಲೂ ಹೆಣ್ಣಿನ ಮನೋಲೋಕದ ಸೆಳೆತಗಳಿರುತ್ತವೆ ಎಂಬುದನ್ನು ಶ್ರೀಕಾಂತ್‌ ಇಲ್ಲಿ ಶೋಧಿಸಿದ್ದಾರೆ. ಅವರ ಶೋಧನೆಗಳ ವಿಸ್ತರಣೆಗಳ ಫ‌ಲಿತವೇ ನಾಟಕವಾಗಿ ರೂಪುತಳೆದಿದೆ.
  ಕಾಲದ ಹರಿವಿನಲ್ಲಿ ಒಂದು ಕಾಲದವರು ಸ್ಥಗಿತಗೊಳ್ಳಬಹುದು; ಆದರೆ, ಕಾಲದ ಹರಿವು ಮಾತ್ರ ನಿರಂತರ. ಪೋಷಾಕು ಮತ್ತು ಅದಕ್ಕೆ ತಕ್ಕಂಥ ಮನಃಸ್ಥಿತಿ ಬದಲಾಯಿಸಿಕೊಳ್ಳುವವರು ಬದಲಾಯಿಸಿಕೊಳ್ಳಬಹುದು. ಹಾಗೇ ಉಳಿಯುವವರು ಹಾಗೆಯೂ ಉಳಿದುಕೊಳ್ಳಬಹುದು.

  ಹಳೆಯ ಮತ್ತು ಹೊಸ ಬದುಕಿನ ಮುಖಾಮುಖೀಯಲ್ಲಿ ಒಂದಿಷ್ಟು ಹಾಸ್ಯ ಸು#ರಿಸುತ್ತದೆ. ಈ ನಾಟಕದಲ್ಲೂ ಹಾಸ್ಯದ ಇಂಥ ಝಲಕುಗಳಿವೆ. ಬದುಕು ಒಂದೇಯಾದರೂ ಬದುಕುವ ಬಗೆ ಮತ್ತು ನೋಟ ಬೇರೆ ಇರುತ್ತದೆ. ನಿಜವಾದ ಸಂಘರ್ಷಗಳಿರುವುದು ಇಲ್ಲಿ. ಒಂದು ಕಾಲದ ರೂಢಿಗತ ಬದುಕಿಗೇ ಒಗ್ಗಿರುವವರೂ ಜಾತಿ, ಕುಲ, ಗೋತ್ರ ದಾಟುವ ಹಂತಕ್ಕೆ ಬಂದಿರುತ್ತಾರೆ. ಆದರೆ, ಈ ಪ್ರಗತಿಪರತೆಗೂ ಮಿತಿ ಇದೆ. ಜಾತಿಯನ್ನೇ ದಾಟಲು ಮನಸ್ಸು ಮಾಡಿದವರಿಗೆ ಲಿವಿಂಗ್‌ ಟುಗೆದರ್‌ ರಿಲೇಷನ್‌ಶಿಪ್‌ ಆಘಾತಕಾರಿ ಅಂಶವಾಗುತ್ತದೆ.

  ಆದರೆ, ಇವತ್ತಿನ ಕಾರ್ಪೊರೇಟ್‌ ಹೆಣ್ಣಿಗೆ ಮದುವೆ ಒಂದು ಸಂಕೋಲೆ. ಲಿವಿಂಗ್‌ ಟುಗೆದರ್‌ ರಿಲೇಷನ್‌ಶಿಪ್‌ ಒಂದು ಜೀವನಕ್ರಮ. ಎರಡು ಕಾಲಘಟ್ಟಗಳನ್ನು ಬಿಂಬಿಸುವ ಪಾತ್ರಗಳ ಮನಸ್ಥಿತಿಗಳು ಪಲ್ಲಟಗೊಳ್ಳುವ ಬಗೆಯನ್ನು ನಾಟಕ ಕಟ್ಟಿಕೊಡುತ್ತದೆ. ಮದುವೆ ಬಂಧದಲ್ಲಿ ನಲುಗುವ ಹೆಣ್ಣು, ಶೋಷಣೆಗೆ ಒಳಗಾಗುವ ಹೆಣ್ಣು ಆತ್ಮಹತ್ಯೆಗೆ ಶರಣಾಗುವುದನ್ನು ಈ ನಾಟಕ ನಿರಾಕರಿಸುತ್ತದೆ. ಆದರೆ, ಇದನ್ನು ಶ್ರೀಕಾಂತ್‌ ಎಲ್ಲೂ ನೇರವಾಗಿ ಸಂದೇಶದ ಹಾಗೆ ಹೇಳಿಸದ ಕಾರಣ ಇದು ವಾಚ್ಯವಾಗಲಿಲ್ಲ.

   ಇದು ಸರಿ ಹೌದು; ವಾಚ್ಯಗೊಳಿಸದೆ ಎಲ್ಲವನ್ನೂ ಅಡಕವಾಗಿಯೇ ಹೇಳಬೇಕೆನ್ನುವ ಉಮೇದು ಇಲ್ಲಿ ಕೆಲವು ಚಿತ್ರಗಳನ್ನು ತುಂಬಾ ಕಾವ್ಯಾತ್ಮಕವಾಗಿ ಕಟ್ಟಲು ಪ್ರೇರೇಪಿಸಿದೆ. ಈ ಕಾವ್ಯಾತ್ಮಕತೆಗೆ ಆಧುನಿಕ ನೃತ್ಯ ಪ್ರಕಾರದ ಹೆಜ್ಜೆಗತಿಗಳನ್ನ ಅಳವಡಿಸಿಕೊಂಡಿದ್ದಾರೆ. ಇದು ಆಯಾ ಸಂದರ್ಭಕ್ಕೆ ತಕ್ಕುದಾದ ಸಂಗೀತ ಬಳಸಿಕೊಂಡದ್ದು ಸಮ್ಮೊàಹನಗೊಳಿಸಿತೇನೋ ನಿಜ.

Advertisement

  ಈ ತಂತ್ರಗಾರಿಕೆ ಹೆಣ್ಣೊಬ್ಬಳು ಬರೆಯುವ ಪದ್ಯದ ಗತಿಯನ್ನು ಮತ್ತು ಅದರಲ್ಲಿ ಅಡಕಗೊಂಡಿರುವ ಅವಳ ಮನಃಸ್ಥಿತಿಯನ್ನು ಬಿಂಬಿಸಲಿಕ್ಕೆ ಸರಿಹೊಂದಿತು ಸರಿ; ಆದರೆ, ಇದೇ ಸ್ಫೂರ್ತಿ ಮತ್ತೂ ಮುಂದುವರಿದು ಸಾವಿನ ಕಥಾನಕಕ್ಕೂ ಕಲಾತ್ಮಕ ನೃತ್ಯದ ಭಂಗಿ ಅಳವಡಿಸಿಕೊಂಡದ್ದು ಸಾವಿನ ತೀವ್ರತೆಯನ್ನು ಕುಗ್ಗಿಸಿತು. ಅಲ್ಲಿ ಕಲೆಗಾರಿಕೆ ವಿಜೃಂಭಿಸಿತು. ಭಾವ ಮುಕ್ಕಾದಂತೆ ಅನಿಸಿತು. 

  ಇಷ್ಟುಬಿಟ್ಟರೆ ಶ್ರೀಕಾಂತ್‌ರ ಸಮಕಾಲೀನ ಕಥನದಲ್ಲಿ ಬಿಗಿ ಇದೆ. ಕಾವ್ಯವೂ ಇದೆ. ಈ ಕಾವ್ಯವೇ ಕೆಲವೊಮ್ಮೆ ಸಂದರ್ಭದ ಗತಿಯನ್ನು ಗ್ರಹಿಸಲು ತೊಡಕುಮಾಡಿದ್ದೂ ಇದೆ. ವಿನ್ಯಾಸ ಸರಳವಾಗಿಯೇ ಇತ್ತು. ಹೆಚ್ಚು ಕಸರತ್ತುಗಳಿರಲಿಲ್ಲ. ರಂಗತಂತ್ರಗಾರಿಕೆಯಲ್ಲಿ ಪ್ರೌಢಿಮೆ ಇತ್ತು. ನೆರಳು ಬೆಳಕು ಅಚ್ಚುಕಟ್ಟು. ಲಕ್ಷೀಚಂದ್ರಶೇಖರ್‌ರ ಅಭಿನಯದಲ್ಲಿ ಸಹಜತೆ ಮತ್ತು ತೀವ್ರತೆ ಇದ್ದಂತೆಯೇ ಉಳಿದವರಲ್ಲಿ ತನ್ಮಯತೆ ಇತ್ತು.

– ಎನ್‌.ಸಿ. ಮಹೇಶ್‌

Advertisement

Udayavani is now on Telegram. Click here to join our channel and stay updated with the latest news.

Next