ನವದೆಹಲಿ: ಜಮ್ಮು-ಕಾಶ್ಮೀರದ ನಗ್ರೋಟಾದಲ್ಲಿ ನಾಲ್ವರು ಜೈಶ್ ಉಗ್ರರನ್ನು ಭದ್ರತಾ ಪಡೆ ಗುರುವಾರ(ನ.19, 2020) ಹತ್ಯೆಗೈದಿತ್ತು. ಈ ಉಗ್ರರು 26/11 ದಾಳಿಯ ವರ್ಷಾಚರಣೆ ಹಿನ್ನೆಲೆಯಲ್ಲಿ ಭಾರೀ ದಾಳಿ ನಡೆಸುವ ಸಂಚು ರೂಪಿಸಿದ್ದರು ಎಂಬ ಗುಪ್ತಚರ ಇಲಾಖೆ ಮಾಹಿತಿ ಮೇರೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ (ನ.20, 2020) ಮಹತ್ವದ ಸಭೆ ನಡೆಸಿರುವುದಾಗಿ ವರದಿ ತಿಳಿಸಿದೆ.
ಪ್ರಧಾನಿ ಮೋದಿ ಅವರು ಗೃಹ ಸಚಿವ ಅಮಿತ್ ಶಾ, ರಾಷ್ಟ್ರೀಯ ಭದ್ರತಾ ಸಲಹೆಗಾರ(ಎನ್ ಎಸ್ ಎ) ಅಜಿತ್ ದೋವಲ್, ವಿದೇಶಾಂಗ ಕಾರ್ಯದರ್ಶಿ ಹರ್ಷವರ್ಧನ್ ಶ್ರೀಂಗಾಲಾ ಹಾಗೂ ಗುಪ್ತಚರ ಇಲಾಖೆಯ ಹಿರಿಯ ಅಧಿಕಾರಿಗಳ ಜತೆ ಭದ್ರತಾ ವ್ಯವಸ್ಥೆಯ ಪುನರ್ ಪರಿಶೀಲನಾ ಸಭೆ ನಡೆಸಿರುವುದಾಗಿ ವರದಿ ವಿವರಿಸಿದೆ.
ಜೈಶ್ ಎ ಮೊಹಮ್ಮದ್ ಉಗ್ರ ಸಂಘಟನೆಯ ನಾಲ್ವರನ್ನು ಹತ್ಯೆಗೈಯುವ ಮೂಲಕ ದಾಳಿ ನಡೆಸುವ ದೊಡ್ಡ ಸಂಚನ್ನು ವಿಫಲಗೊಳಿಸಿರುವ ಭದ್ರತಾ ಪಡೆಯ ಧೈರ್ಯವನ್ನು ಪ್ರಧಾನಿ ಮೋದಿ ಈ ಸಂದರ್ಭದಲ್ಲಿ ಶ್ಲಾಘಿಸಿದ್ದಾರೆ.
ಇದನ್ನೂ ಓದಿ:ಅಂತಾರಾಷ್ಟ್ರೀಯ ತೈಲ ಬೆಲೆಯಲ್ಲಿ ಮತ್ತೆ ಏರಿಕೆ: ಪೆಟ್ರೋಲ್, ಡಿಸೇಲ್ ದರ ಹೆಚ್ಚಳ
ಎಎನ್ ಐ ವರದಿ ಪ್ರಕಾರ, ಜೈಶ್ ಉಗ್ರರು 26/11 ದಾಳಿಯ ರೀತಿಯಲ್ಲಿಯೇ ಮತ್ತೊಂದು ದೊಡ್ಡ ಪ್ರಮಾಣದ ದಾಳಿ ನಡೆಸಲು ಸಂಚು ರೂಪಿಸಿದ್ದರು ಎಂದು ತಿಳಿಸಿದೆ. 2008ರ ನವೆಂಬರ್ 26ರಂದು ಹತ್ತು ಮಂದಿ ಲಷ್ಕರ್ ಉಗ್ರರು ಮುಂಬೈನಲ್ಲಿ ಸರಣಿ ಗುಂಡಿನ ಹಾಗೂ ಬಾಂಬ್ ದಾಳಿ ನಡೆಸಿದ್ದರು. ಈ ಘಟನೆಯಲ್ಲಿ 166 ಮಂದಿ ಸಾವನ್ನಪ್ಪಿದ್ದು, 300ಕ್ಕೂ ಅಧಿಕ ಜನರು ಗಾಯಗೊಂಡಿದ್ದರು.