Advertisement

 ನಾಗ್ಪುರ ಟೆಸ್ಟ್‌: ಭಾರತದಿಂದ ತ್ರಿವಳಿ ಸ್ಪಿನ್‌ ದಾಳಿ?

11:53 PM Feb 07, 2023 | Team Udayavani |

ನಾಗ್ಪುರ: ಭಾರತ-ಆಸ್ಟ್ರೇಲಿಯ ನಡುವಿನ ನಾಗ್ಪುರ ಟೆಸ್ಟ್‌ ಸ್ಪಿನ್‌ ಟ್ರ್ಯಾಕ್‌ ಮೇಲೆ ನಡೆಯವ ಸಾಧ್ಯತೆ ಹೆಚ್ಚಿದೆ. ಭಾರತವಿಲ್ಲಿ ತ್ರಿವಳಿ ಸ್ಪಿನ್‌ ದಾಳಿಗೆ ಸಿದ್ಧತೆ ನಡೆಸುವ ಕುರಿತು ಮಾಹಿತಿ ಲಭಿಸಿದೆ.

Advertisement

ಈ ಪಿಚ್‌ ಹೇಗಿದೆ ಎಂಬ ಕುರಿತು ಕ್ಯುರೇಟರ್‌ ಯಾವುದೇ ಸ್ಪಷ್ಟ ಮಾಹಿತಿ ನೀಡಿಲ್ಲ. ಸೋಮವಾರ ಈ ಪಿಚ್‌ ಮೇಲೆ ಹಸಿರು ಹೊದಿಕೆ ಇತ್ತು. ಕಂದು ಬಣ್ಣದ ಪ್ಯಾಚ್‌ಗಳಿದ್ದವು. ಪಂದ್ಯ ಆರಂಭವಾಗುವ ವೇಳೆ ಹುಲ್ಲು ಸಂಪೂರ್ಣ ಬೋಳಾಗುವ ಸಾಧ್ಯತೆ ಇದೆ. ಹೀಗಾಗಿ ಮೊದಲ ದಿನವೇ ಪಿಚ್‌ ಸ್ಪಿನ್ನಿಗೆ ನೆರವಾದರೆ ಅಚ್ಚರಿ ಇಲ್ಲ ಎನ್ನುತ್ತದೆ ಒಂದು ವರದಿ. ಇನ್ನೊಂದು ವರದಿ ಪ್ರಕಾರ ಭಾರತ ನಾಲ್ವರು ಸ್ಪಿನ್ನರ್‌ಗಳನ್ನು ದಾಳಿಗೆ ಇಳಿಸುವ ಸಾಧ್ಯತೆಯೂ ಇಲ್ಲದಿಲ್ಲ!

ಆದರೆ ತಂಡದ ಉಪನಾಯಕ ರಾಹುಲ್‌ ಮಂಗಳ ವಾರ ಪತ್ರಿಕಾಗೋಷ್ಠಿಯಲ್ಲಿ ಮಾತಾಡಿದ್ದು, ತ್ರಿವಳಿ ಸ್ಪಿನ್‌ ಆಕ್ರಮಣದ ಕುರಿತು ಯಾವುದೇ ಸ್ಪಷ್ಟ ಮಾಹಿತಿ ನೀಡಿಲ್ಲ. “ಮೂವರು ಸ್ಪಿನ್ನರ್‌ಗಳನ್ನು ಆಡಿಸಲು ಭಾರತ ಕಾತರ
ಗೊಂಡಿದೆಯಾದರೂ ಟ್ರ್ಯಾಕ್‌ ಬಗ್ಗೆ ಇನ್ನೂ ನಿಖರವಾಗಿ ಅಂದಾಜಿಸಲು ಸಾಧ್ಯವಾಗಿಲ್ಲ’ ಎಂದರು.

“ನಾವು ಪಿಚ್‌ ನೋಡಿದ್ದೇವೆ. ಆದರೆ ಇಷ್ಟು ಬೇಗ ಇದರ ವರ್ತನೆ ಬಗ್ಗೆ ಏನೂ ಹೇಳಲಾಗದು. ಪಂದ್ಯದ ಮೊದಲ ದಿನವಷ್ಟೇ ನೋಡಿ ಮುಂದಿನ ನಿರ್ಧಾರ ತೆಗೆದುಕೊಳ್ಳಬೇಕಾಗುತ್ತದೆ. ಮೂವರು ಸ್ಪಿನ್ನರ್‌ಗಳನ್ನು ಆಡಿಸಬೇಕೆಂಬ ಕಾತರವೇನೋ ಇದೆ. ಏಕೆಂದರೆ ನಾವು ಆಡುವುದು ಭಾರತದಲ್ಲಿ ತಾನೆ?’ ಎಂದರು.

ಹನ್ನೊಂದರ ಆಯ್ಕೆ ಜಟಿಲ
ಬೋರ್ಡರ್‌-ಗಾವಸ್ಕರ್‌ ಟ್ರೋಫಿ ಸರಣಿಯ ಆರಂಭಕ್ಕೆ 48 ಗಂಟೆಗೂ ಕಡಿಮೆ ಅವಧಿ ಇದ್ದರೂ ಕೆ.ಎಲ್‌. ರಾಹುಲ್‌ 3 ಪ್ರಮುಖ ಪ್ರಶ್ನೆಗಳಿಗೆ ಖಚಿತವಾದ ಉತ್ತರ ನೀಡಿಲ್ಲ. ಇದರಲ್ಲೊಂದು ತ್ರಿವಳಿ ಸ್ಪಿನ್‌ ಆಕ್ರಮಣ. ಉಳಿದಂತೆ ತಂಡದ ವಿಕೆಟ್‌ ಕೀಪರ್‌ ಹಾಗೂ 5ನೇ ಕ್ರಮಾಂಕದ ಬ್ಯಾಟರ್‌ ಯಾರಿರಬಹುದು ಎಂಬೆರಡೂ ಪ್ರಶ್ನೆಗಳೂ ಸೇರಿವೆ.

Advertisement

ಶುಭಮನ್‌ ಗಿಲ್‌ ಮಧ್ಯಮ ಕ್ರಮಾಂಕದಲ್ಲಿ ಆಡುವ ಸಾಧ್ಯತೆ ಇದೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ರಾಹುಲ್‌, “ನಾವಿನ್ನೂ ಆಡುವ ಬಳಗದ ಕುರಿತು ಅಂತಿಮ ನಿರ್ಧಾರಕ್ಕೆ ಬಂದಿಲ್ಲ. ಹನ್ನೊಂದರ ಆಯ್ಕೆ ನಿಜಕ್ಕೂ ಅತ್ಯಂತ ಜಟಿಲವಾಗಲಿದೆ. ಏಕೆಂದರೆ ತಂಡದ ಎಲ್ಲ 15 ಮಂದಿಯೂ ಉನ್ನತ ದರ್ಜೆಯವರೇ ಆಗಿದ್ದಾರೆ. ಈ ಕುರಿತು ಕೆಲವು ಚರ್ಚೆಗಳು ನಡೆಯಬೇಕಿವೆ. ಆಟಗಾರರೆಲ್ಲರೂ ಇಲ್ಲಿ ಅಭಿಪ್ರಾಯ ವ್ಯಕ್ತಪಡಿಸಲು ಅರ್ಹರು’ ಎಂದರು.

ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್‌ ನಡೆಸಲು ನೀವು ಸಿದ್ಧರಿದ್ದೀರಾ ಎಂಬ ಪ್ರಶ್ನೆ ಕೂಡ ರಾಹುಲ್‌ ಅವರತ್ತ ತೂರಿ ಬಂತು. “ತಂಡ ಏನು ಬಯಸುತ್ತದೋ ಅದಕ್ಕೆ ನಾನು ಸದಾ ಸಿದ್ಧ. ತಂಡಕ್ಕೆ ಉತ್ತಮ ಕೊಡುಗೆ ಸಲ್ಲಿಸುವುದೇ ನನ್ನ ಉದ್ದೇಶ’ ಎಂದರು.

ಆಸೀಸ್‌ ಅಪಾಯಕಾರಿ
ಈ ಸಂದರ್ಭದಲ್ಲಿ ಆಸ್ಟ್ರೇಲಿಯದ ಟಾಪ್‌ ಕ್ಲಾಸ್‌ ವೇಗದ ಬೌಲಿಂಗ್‌ ಬಗ್ಗೆಯೂ ರಾಹುಲ್‌ ಎಚ್ಚರಿಕೆಯ ಮಾತಾಡಿದರು. “ಇಂಥ ಟ್ರ್ಯಾಕ್‌ಗಳಲ್ಲಿ ರಿವರ್ಸ್‌ ಸ್ವಿಂಗ್‌ ಅತ್ಯಂತ ಅಪಾಯಕಾರಿಯಾಗಿ ಪರಿಣಮಿಸಲಿದೆ. ಆಸ್ಟ್ರೇಲಿಯನ್ನರ ಬಳಿ ಇಂಥ ಟಾಪ್‌ ಕ್ಲಾಸ್‌ ವೇಗಿಗಳಿದ್ದಾರೆ. ಕಳೆದ 10 ದಿನಗಳಿಂದಲೂ ನಾವು ರಿವರ್ಸ್‌ ಸ್ವಿಂಗ್‌ ಎದುರಿಸುವುದನ್ನು ಅಭ್ಯಾಸ ಮಾಡುತ್ತಿದ್ದೆವು’ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next