ನಾಗ್ಪುರ: ಕೋವಿಡ್-19 ಸೋಂಕು ಹರಡುವುದನ್ನು ತಡೆಯಲು 21 ದಿನಗಳ ಲಾಕ್ ಡೌನ್ ಗೆ ಆದೇಶಿಸಲಾಗಿದೆ. ಸೋಂಕು ಹರಡದಂತೆ ಸಾಮಾಜಿಕ ಅಂತರ ಕಾಪಾಡುವಂತೆ ಮನವಿ ಮಾಡಲಾಗಿದೆ. ಆದರೆ ಹಲವಡೆ ಜನರು ಮಾತ್ರ ಸಾಮಾಜಿಕ ಅಂತರ ಕಾಪಾಡಲು ಮನಸ್ಸು ಮಾಡುತ್ತಿಲ್ಲ.
ಜನರು ರಸ್ತೆಗೆ ಬರಬಾರದು, ದಿನಸಿ ಅಂಗಡಿಗಳ ಮುಂದೆ ಸಾಮಾಜಿಕ ಅಂತರ ಕಾಪಾಡಬೇಕು ಎಂದು ಪೊಲೀಸರು, ಸರಕಾರಗಳು ತರಹಾವೇರಿಯಾಗಿ ಹೇಳುತ್ತಿದೆ. ರಸ್ತೆಯಲ್ಲಿ ಬೇಕಾಬಿಟ್ಟಿ ಓಡಾಡುವವರಿಗೆ ಮೊದಲು ಲಾಠಿ ರುಚಿ ತೋರಿಸಿದ ಪೊಲೀಸರು ನಂತರ ಬಸ್ಕಿ, ಯೋಗ ಮುಂತಾದ ಬೇರೆ ಬೇರೆ ರೀತಿಯ ಶಿಕ್ಷೆಗಳನ್ನು ನೀಡಿದ್ದಾರೆ.
ಸದ್ಯ ಒಂದು ಹೆಜ್ಜೆ ಮುಂದೆ ಹೋಗಿರುವ ನಾಗ್ಪುರ ಪೊಲೀಸರು ತಮ್ಮ ಟ್ವೀಟರ್ ಖಾತೆಯಲ್ಲಿ ಚೆನ್ನೈ ಎಕ್ಸ್ ಪ್ರೆಸ್ ಚಿತ್ರದ ಸನ್ನಿವೇಶದೊಂದಿಗೆ ಸಾಮಾಜಿಕ ಅಂತರ ಕಾಪಾಡುವಂತೆ ಮನವಿ ಮಾಡಿದ್ದಾರೆ.
ಶಾರುಖ್ ಖಾನ್ ಮತ್ತು ದೀಪಿಕಾ ಪಡುಕೋಣೆ ನಟಿಸಿದ್ದ ಚೆನ್ನೈ ಎಕ್ಸ್ ಪ್ರೆಸ್ ಚಿತ್ರವನ್ನು ರೋಹಿತ್ ಶೆಟ್ಟಿ ನಿರ್ದೇಶಿಸಿದ್ದರು. ಈ ಚಿತ್ರದ ‘ಡೋಂಟ್ ಅಂಡರ್ ಎಸ್ಟಿಮೇಟ್ ದಿ ಪವರ್ ಆಫ್ ಕಾಮನ್ ಮ್ಯಾನ್ ( ಸಾಮಾನ್ಯ ಜನರ ಶಕ್ತಿಯನ್ನು ಕಡೆಗಣಿಸಬೇಡಿ) ಎಂಬ ಸಂಭಾಷಣೆ ಭಾರಿ ಮೆಚ್ಚುಗೆಗೆ ಪಾತ್ರವಾಗಿತ್ತು.
ಈಗ ಇದನ್ನೇ ಉಪಯೋಗಿಸಿರುವ ನಾಗ್ಪುರ ಪೊಲೀಸರು ಸಾಮಾಜಿಕ ಅಂತರದ ಶಕ್ತಿಯನ್ನು ಕಡೆಗಣಿಸದಿರಿ ಎಂದು ಟ್ವಿಟ್ಟರ್ ನಲ್ಲಿ ಪೋಸ್ಟ್ ಹಾಕಿದ್ದಾರೆ. ನಾಗ್ಪುರ ಪೊಲೀಸರ ಈ ಪೋಸ್ಟ್ ಭಾರಿ ಪ್ರಶಂಸೆಗೆ ಪಾತ್ರವಾಗಿದೆ.