Advertisement

ನಾಗೋಡಿ ಘಾಟಿ ರಸ್ತೆಯಲ್ಲೂ ವಾಹನಗಳ ಒತ್ತಡ: ಕುಸಿಯುವ ಭೀತಿ; ಸಂಚಾರ ಸಂಕಷ್ಟ

01:36 AM Jul 20, 2022 | Team Udayavani |

ಕುಂದಾಪುರ: ಶಿರಾಡಿ, ಆಗುಂಬೆ ಘಾಟಿ ರಸ್ತೆಗಳಲ್ಲಿ ಸಂಚಾರ ಅಸ್ತವ್ಯಸ್ತ ಆಗಿರುವುದರಿಂದ ಇತರ ಘಾಟಿ ರಸ್ತೆಗಳ ಮೇಲೆ ವಾಹನಗಳ ಸಂಚಾರದ ಒತ್ತಡ ಹೆಚ್ಚುತ್ತಿದೆ. ಕೊಲ್ಲೂರು, ನಿಟ್ಟೂರು ಸಮೀಪದ ನಾಗೋಡಿ ಘಾಟಿಯಲ್ಲೂ ವಾಹನ ಗಳ ಸಂಚಾರ ಹೆಚ್ಚಾಗಿದ್ದು, ಅಲ್ಲಲ್ಲಿ ಕುಸಿಯುವ ಭೀತಿ ಆರಂಭವಾಗಿದೆ.

Advertisement

ಹಲವು ಮರಗಳು ರಸ್ತೆಗೆ ಬೀಳುವ ಅಪಾಯದಲ್ಲಿದ್ದರೆ, ಈಗಾಗಲೇ ರಸ್ತೆಗೆ ಬಿದ್ದ ಮರಗಳನ್ನು ತೆರವು ಮಾಡದಿರುವುದೂ ಕಂಡುಬರುತ್ತಿದೆ. ಪ್ರಮುಖ ಧಾರ್ಮಿಕ ಕೇಂದ್ರಗಳಾದ ಕೊಲ್ಲೂರು ಹಾಗೂ ಸಿಗಂದೂರನ್ನು ಸಂಪರ್ಕಿಸುವ ಪ್ರಮುಖ ಮಾರ್ಗ ಇದಾಗಿದ್ದು, ನಿತ್ಯ ಸಾವಿರಾರು ವಾಹನಗಳು ಸಂಚರಿಸುತ್ತಿವೆ.

ಕುಸಿಯುವ ಭೀತಿ
14 ಕಿ.ಮೀ. ವ್ಯಾಪ್ತಿ ಯಲ್ಲಿ ಘಾಟಿ ರಸ್ತೆಯಿದ್ದು 7 ಕಿ.ಮೀ. ಕಾಂಕ್ರೀಟ್‌, ಬಾಕಿ 7 ಕಿ.ಮೀ. ಡಾಮರು. ರಸ್ತೆ ಉತ್ತಮವಾಗಿದ್ದರೂ ನಿರಂತರ ಮಳೆಯಾಗುತ್ತಿರುವುದರಿಂದ ಘಾಟಿ ಭಾಗವು ಜರ್ಝರಿತವಾಗಿ ಅಲ್ಲಲ್ಲಿ ಗುಡ್ಡ ಕುಸಿಯುವ ಭೀತಿ ಎದುರಿಸುತ್ತಿದೆ. ಕಾಂಕ್ರೀಟ್‌ ರಸ್ತೆಯ ಎರಡೂ ಬದಿ ಜಾರುತ್ತಿದೆ. ರಸ್ತೆಗೆಬಾಗಿರುವ ಮರಗಳು ಅಪಾಯಕಾರಿ ಯಾಗಿದ್ದು ವಾಹನಗಳನ್ನು ಚಲಾಯಿಸುವುದು ಕಷ್ಟ ಎನಿಸುತ್ತಿದೆ. ರಾತ್ರಿಯಲ್ಲಂತೂ ಜೀವಭಯದಲ್ಲೇ ಸಂಚರಿಸುವಂತಾಗಿದೆ. ಘಾಟಿಯ ಮೇಲ್ಭಾಗದಲ್ಲಿ ನಾಗೋಡಿ ಹೊಳೆಗೆ 3.75 ಕೋ.ರೂ. ವೆಚ್ಚದಲ್ಲಿ 92 ಮೀ. ಉದ್ದ, 9ಮೀ. ಅಗಲ, 12 ಮೀ. ಎತ್ತರದ ತಡೆಗೋಡೆ ನಿರ್ಮಿಸುತ್ತಿದ್ದು ಅರ್ಧಂ ಬರ್ಧ ಕಾಮಗಾರಿಯಾಗಿದೆ. ತಡೆ ಗೋಡೆಯ ಒಂದು ಬದಿ ಕುಸಿದಿದೆ. ಜಿಲ್ಲಾಡಳಿತ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕಿದೆ.

ಪ್ರಮುಖ ಘಾಟಿ
ಇದು ಕೊಲ್ಲೂರು-ಸಿಗಂದೂರಿನ ಪ್ರಮುಖ ಸಂಪರ್ಕ ರಸ್ತೆ. ಶಿವಮೊಗ್ಗ ದಿಂದ ಕೊಲ್ಲೂರಿಗೂ ಇದೇ ಹತ್ತಿರದ ಮಾರ್ಗ. ಸಾಗರ ಮೂಲಕ ಬೆಂಗಳೂರಿ ನಿಂದಲೂ ಕುಂದಾಪುರ, ಕೊಲ್ಲೂರಿಗೆ ಬಸ್‌ಗಳು ಸಂಚರಿಸುತ್ತವೆ. ಹಿಂದೆ ಬೈಂದೂರು – ಹೊನ್ನಾಳಿ ರಾಜ್ಯ ಹೆದ್ದಾರಿಯಾಗಿದ್ದು, ಈಗ ರಾಣೆಬೆನ್ನೂರು – ಬೈಂದೂರು ರಾ. ಹೆದ್ದಾರಿಯಾಗಿ ಮೇಲ್ದರ್ಜೆಗೇರಿದೆ. ಶಿವಮೊಗ್ಗ, ಹೊಸ ನಗರ ಕಡೆಯಿಂದ ಉಡುಪಿ, ಕುಂದಾಪುರ, ಬೈಂದೂರು, ಭಟ್ಕಳಕ್ಕೆ ಇದು ಮಾರ್ಗ.ಕುಂದಾಪುರದಿಂದ ನಿತ್ಯ ಸಾಗರಕ್ಕೆ ಬಸ್‌ಗಳು ಸಂಚರಿಸುತ್ತವೆ.

ನಾಗೋಡಿ ಘಾಟಿಗೆ ಆಗಾಗ ಭೇಟಿ ನೀಡಿ ರಸ್ತೆಗೆ ಬೀಳಬಹುದಾದ ಮರಗಳನ್ನು ತೆರವುಗೊಳಿಸಲಾಗುತ್ತಿದೆ. ರಸ್ತೆಗೆ ಬಿದ್ದಿರುವ ಮರಗಳ ತೆರವಿಗೆ ಶೀಘ್ರ ಕ್ರಮ ಕೈಗೊಳ್ಳಲಾಗುವುದು.
– ರಾಜು ನಾಯ್ಕ , ಕೊಲ್ಲೂರು ಆರ್‌ಎಫ್‌ಒ

Advertisement

– ಪ್ರಶಾಂತ್‌ ಪಾದೆ

Advertisement

Udayavani is now on Telegram. Click here to join our channel and stay updated with the latest news.

Next